ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಪ್ಲೆಕ್ಸಿಟಿ ಸೈನ್ಸ್‌: ಸಂಕೀರ್ಣ ವ್ಯವಸ್ಥೆಗೆ ಸರಳ ಪರಿಹಾರ!

Last Updated 16 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಪಕ್ಷಿಗಳು ಹಾರುವಾಗ ಅವು ಹೇಗೆ ಒಂದು ಸಂಯೋಜಿತ ಗುಂಪಿನಲ್ಲಿ ಹಾರುವುದು ಎಂದು ಯೋಚಿಸಿದ್ದೀರಾ? ಇರುವೆಗಳು ಒಂದು ಸಾಲಿನಲ್ಲಿ ಒಂದರ ಹಿಂದೆ ಒಂದರಂತೆ ಹೇಗೆ ಹಿಂಬಾಲಿಸಿಕೊಂಡು ಸಾಗುವುದು ಎಂದು ಗಮನಿಸಿದ್ದೀರಾ? ಕುರಿಗಳು ಗುಂಪಿನಲ್ಲೇ ಹೇಗೆ ಸಾಗುವುದು ಎಂದು ನೋಡಿದ್ದೀರಾ?

ಇವುಗಳ ವಿಶೇಷವೆಂದರೆ ಇಂತಹ ನಡವಳಿಕೆಗಳ ಹಿಂದೆ ಯಾವುದೇ ನಿರ್ದಿಷ್ಟ ವ್ಯವಸ್ಥೆಯೇನೂ ಇರುವುದಿಲ್ಲ. ಇವು ಕೆಲವೊಂದು ಸರಳ ನಿಯಮಗಳನ್ನು ಪಾಲಿಸುವುದರಿಂದ ಇಂಥ ‘ವ್ಯವಸ್ಥೆ’ ತನ್ನಷ್ಟಕ್ಕೆ ತಾನೇ ರೂಪುಗೊಳ್ಳುತ್ತಿರುತ್ತವೆ. ಈಗ ವಿಜ್ಞಾನಿಗಳು ಇಂತಹ ಪರಿಣಾಮಗಳನ್ನು ಅನುಕರಿಸಲು ಮತ್ತು ಇಂತಹ ಸನ್ನಿವೇಶಗಳಲ್ಲಿ ಯಾವ ಯಾವ ನಿಯಮಗಳು ಅನ್ವಯಿಸುತ್ತವೆ ಎಂಬುದಕ್ಕೆ ಮಾಡೆಲ್‌ಗಳನ್ನು ರೂಪಿಸಲು ‘ಕಾಂಪ್ಲೆಕ್ಸಿಟಿ ಸೈನ್ಸ್‌’ ಎಂಬ ನವೀನ ಕ್ಷೇತ್ರದ ಮೊರೆ ಹೋಗಿದ್ದಾರೆ.

ಅಂದಹಾಗೆ, ಪಕ್ಷಿಗಳು ಈ ಬಗೆಯ ಗುಂಪಿನಲ್ಲಿ ಹಾರುವುದಕ್ಕೆ ‘ಫ್ಲಾಕಿಂಗ್’ ಎನ್ನುತ್ತಾರೆ.

ಲುಡ್ವಿಗ್ ವಾನ್ ಬರ್ಟಾಲನ್ಫಿ ಎಂಬ ಒಬ್ಬ ಜೀವಶಾಸ್ತ್ರಜ್ಞ 1950ರಲ್ಲಿ ಜನರಲ್ ‘ಸಿಸ್ಟಮ್ಸ್ ಥಿಯರಿ’ ಎಂಬ ಸಿದ್ಧಾಂತವನ್ನು ಮಂಡಿಸಿದ್ದರು. ಇದನ್ನು ಆಧರಿಸಿ ಸಾಮಾಜಿಕ ಮತ್ತು ಪರಿಸರ ವ್ಯವಸ್ಥೆಗಳನ್ನು ‘ಸಿಸ್ಟಮ್’ ಎಂದು ಪರಿಗಣಿಸಲು ಸಾಧ್ಯವಾಯಿತು. ಇದು ಇತರ ವಿಭಾಗಗಳಲ್ಲೂ ಮನ್ನಣೆ ಪಡೆಯಿತು. ಪ್ರಮುಖವಾಗಿ ಇದು ಯಾಂತ್ರಿಕ ಚೌಕಟ್ಟಿನಲ್ಲಿ ಮತ್ತು ಸೀಮಿತ ಊಹೆಗಳ ನೆಲೆಯಲ್ಲಿ ಪರಿಣಾಮಗಳು ಮತ್ತು ಗುಣಲಕ್ಷಣಗಳನ್ನು ಅಧ್ಯಯನ ಮಾಡುವ ಸಾಂಪ್ರದಾಯಿಕ ವೈಜ್ಞಾನಿಕ ವಿಧಾನಗಳ ಮಿತಿಗಳಿಗೆ ಪ್ರತಿಕ್ರಿಯೆಯಾಗಿ ತಲೆ ಎತ್ತಿದೆಯೆನ್ನಬಹುದು. ಸಿಸ್ಟಮ್ಸ್ ಸಿದ್ಧಾಂತವು ಈ ಸಾಂಪ್ರದಾಯಿಕ ಚೌಕಟ್ಟಿನಿಂದ ಆಚೆ ಅಧ್ಯಯನ ನಡೆಸಲು ಅವಕಾಶ ಮಾಡಿಕೊಟ್ಟಿತು.

ಜೇ ಫಾರೆಸ್ಟರ್ ಮತ್ತು ಡೊನೆಲ್ಲಾ ಮೆಡೋಸ್ ಇದನ್ನು ಸಾಮಾಜಿಕ ವ್ಯವಸ್ಥೆಗಳಿಗೆ ವ್ಯಾಪಕವಾಗಿ ಅಳವಡಿಸಿದರು. ಇದು ‘ಸಿಸ್ಟಮ್ ಡೈನಾಮಿಕ್ಸ್’ ಎಂದು ಹೆಸರಾಯಿತು.

ವ್ಯವಸ್ಥೆಯ ಭಾಗಗಳು ಹೇಗೆ ಒಂದರ ಜೊತೆ ಇನ್ನೊಂದು ಅವುಗಳ ಸ್ಥಳ ಮತ್ತು ಸಮಯದ ಸೀಮೆಯಲ್ಲಿ ಹೇಗೆ ಪರಸ್ಪರ ಸಂವಹನ ನಡೆಸುತ್ತವೆ ಎಂದು ಅರಿಯುವುದು ಪ್ರಮುಖವಾಗಿ ಸಿಸ್ಟಮ್ಸ್ ಸಿದ್ಧಾಂತ ವಿಧಾನ. ಈ ಭಾಗಗಳು ಜೀವಕೋಶಗಳು, ಅಣುಗಳು, ಜೀವಿಗಳು ಅಥವಾ ಜನರು ಆಗಬಹುದು. ಪರಸ್ಪರ ಸಂಪರ್ಕದಲ್ಲಿರುವ ಭಾಗಗಳ ನಡುವಿನ ಕ್ರಿಯಾತ್ಮಕ ಪರಸ್ಪರ ಕ್ರಿಯೆ–ಪ್ರಕ್ರಿಯೆಗಳಿಂದ ಕಾಲಾನಂತರದಲ್ಲಿ ಯಾವ ಬಗೆಯ ಪರಿಣಾಮಕಾರಿ ನಡವಳಿಕೆ ಹೊರಹೂಮ್ಮುವುದು ಎಂದು ತಿಳಿಯಲು ಸಾಧ್ಯವಾಗುತ್ತದೆ.

ಬಹು ಮುಖ್ಯವಾಗಿ, ಈ ಪರಸ್ಪರ ಕ್ರಿಯೆಗಳು ಎಲ್ಲ ಭಾಗಗಳ ಪ್ರತ್ಯೇಕ ಪರಿಣಾಮಗಳ ಮೊತ್ತಕ್ಕಿಂತ ದೊಡ್ಡದಾದ ಪರಿಣಾಮಗಳನ್ನು ಉಂಟುಮಾಡುತ್ತವೆ.

‘ಕಾಂಪ್ಲೆಕ್ಸಿಟಿ ಸೈನ್ಸ್‌‘ ಅಥವಾ ‘ಕಾಂಪ್ಲೆಕ್ಸಿಟಿ ಥಿಯರಿ’ – ‘ಕಾಂಪ್ಲೆಕ್ಸಿಟಿ ಸೈನ್ಸ್‌ ಸಿಸ್ಟಮ್ಸ್’ ಸಿದ್ಧಾಂತದಿಂದ ಮೂಡಿ ಬಂದಿದೆ. ಸ್ವಯಂಸಂಘಟನೆ, ಹೊಂದಾಣಿಕೆ, ಕ್ರಿಯಾತ್ಮಕತೆ ಮತ್ತು ಅಭಿವ್ಯಕ್ತಿಗಳಿರುವ ಯಾವುದೇ ವ್ಯವಸ್ಥೆಯನ್ನು ‘ಕಾಂಪ್ಲೆಕ್ಸ್ ಸಿಸ್ಟಮ್ಸ್’ ಎಂದು ಪರಿಗಣಿಸಬಹುದು. ಇದು ನಮ್ಮ ಸಾಮಾಜಿಕ ಮತ್ತು ಪರಿಸರ ವ್ಯವಸ್ಥೆಗಳನ್ನು ಅರ್ಥೈಸಿಕೊಳ್ಳಲು ಸಮರ್ಪಕವಾಗಿದೆ. ಅವುಗಳಲ್ಲಿ ಗಮನಾರ್ಹವಾದುದು – ಸ್ಟಾಕ್‌ಗಳು ಮತ್ತು ಫ್ಲೋ (ಸಿಸ್ಟಮ್ ಡೈನಾಮಿಕ್ಸ್‌ನಲ್ಲಿರುವಂತೆ) ಅಥವಾ ಏಜೆಂಟ್-ಆಧಾರಿತ ಮಾಡೆಲ್‌ಗಳು. ಏಜೆಂಟ್-ಆಧಾರಿತ ಮಾಡೆಲ್‌ಗಳ ಮೂಲವು ಕೃತಕ ಬುದ್ಧಿಮತ್ತೆಯಲ್ಲಿದೆ. ಇವುಗಳನ್ನು ಆಧರಿಸಿ ನೈಜವಾದ ವ್ಯವಸ್ಥೆಗಳನ್ನು ಅನುಕರಿಸುವ ಮಾಡೆಲ್‌ಗಳನ್ನು ನಿರ್ಮಿಸಲು ಸಂಶೋಧಕರಿಗೆ ಅವಕಾಶವಾಗಿದೆ.

ಸಾಮಾಜಿಕ ವ್ಯವಸ್ಥೆಗಳಲ್ಲಿ ಐತಿಹಾಸಿಕ ಪರಿಣಾಮದ ಅವಲಂಬನೆಯ ಒಂದು ಶ್ರೇಷ್ಠ ಉದಾಹರಣೆಯೆಂದರೆ, ನಾವೆಲ್ಲ ಬಳಸುವ ಟೈಪ್ ರೈಟರ್. ‘ಮೆಕ್ಯಾನಿಕಲ್’ ಟೈಪ್ ರೈಟರ್ ಆವಿಷ್ಕಾರವಾದಾಗ ಇಂಗ್ಲಿಷ್‌ನಲ್ಲಿ ಟೈಪ್ ಮಾಡುವಾಗ ಜಾಮ್ ಆಗದಂತೆ ಅಕ್ಷರಗಳು ಬೇರೆ ಬಗೆಯಲ್ಲಿ ಜೋಡಿಸಬೇಕಾಯಿತು. ಇದೇ ‘QWERTY ಕೀಬೋರ್ಡ್‘. ಆದರೆ ಕಳೆದ ಮೂರು ದಶಕಗಳಲ್ಲಿ ನಾವು ಅಂತಹ ಯಾವುದೇ ಯಾಂತ್ರಿಕ ನಿರ್ಬಂಧಗಳನ್ನು ಹೊಂದಿರದ ಎಲೆಕ್ಟ್ರಾನಿಕ್ ಕೀಬೋರ್ಡ್‌ಗಳನ್ನು ಹೊಂದಿದ್ದೇವೆ. ಆದರೂ ಇನ್ನೂ ನಾವು QWERTY ಕೀಬೋರ್ಡ್‌ನ ಬಳಕೆಯನ್ನೇ ಮುಂದುವರಿಸಿದ್ದೇವೆ. ಪೂರ್ವಜ್ಞಾನದ ಪ್ರಭುತ್ವವು ಈ ಹಿಮ್ಮುಖ ಸ್ಥಿತಿಗೆ ಕಾರಣವಾಗುತ್ತದೆ. ಇದನ್ನೇ ‘ಐತಿಹಾಸಿಕ ಪರಿಣಾಮದ ಅವಲಂಬನೆ’.

ಐತಿಹಾಸಿಕ ಪರಿಣಾಮದ ಅವಲಂಬನೆಗೆ ಇನ್ನೊಂದು ಉದಾಹರಣೆಯೆಂದರೆ, ಕೆಲವು ದೇಶಗಳಲ್ಲಿ ನಾವು ವಾಹನಗಳನ್ನು ಎಡ ಭಾಗದಲ್ಲಿ ಓಡಿಸುತ್ತೇವೆ. ಆದರೆ ಇನ್ನು ಕೆಲವು ದೇಶಗಳಲ್ಲಿ ಅವರು ಬಲಭಾಗದಲ್ಲಿ ಚಾಲನೆ ಮಾಡುತ್ತಾರೆ.

ಐತಿಹಾಸಿಕ ಪರಿಣಾಮದ ಅವಲಂಬನೆಯ ಅನೇಕ ಉದಾಹರಣೆಗಳನ್ನು ನಮ್ಮ ಸುತ್ತಲು ಕಾಣುತ್ತೇವೆ. ಜಾತಿಗಳ ವಿಕಾಸದ ಹಿಂದೆ ‘ಐತಿಹಾಸಿಕ ಪರಿಣಾಮ’ದ ಪ್ರಭಾವವನ್ನು ಸಂಶೋಧಕರು ಗುರುತಿಸುತ್ತಾರೆ. ಇದೀಗ ಸಂಶೋಧಕರು ಈ ಸಿದ್ಧಾಂತವನ್ನು ಬಳಸಿಕೊಂಡು ಪರಿಸರದ ರಕ್ಷಣೆ–ಬಳಕೆಗಳ ನಡುವೆ ಸಮನ್ವಯವನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಜಾಗತಿಕ ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಸಂದರ್ಭದಲ್ಲಿ, ವ್ಯವಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಲು ಕೂಡ ಈ ಸಿದ್ಧಾಂತ ನೆರವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT