ಶುಕ್ರವಾರ, ಆಗಸ್ಟ್ 6, 2021
21 °C
ಕೋವಿಡ್ ತಡೆ, ಚಿಕಿತ್ಸೆಗೆ ಐಐಎಸ್‌ಸಿ– ನೂತನ್‌ ಲ್ಯಾಬ್ಸ್‌ ಆವಿಷ್ಕಾರ

ನ್ಯಾನೋ ಮಾರ್ಗದಲ್ಲಿ ಕೋವಿರಕ್ಷಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ಚಿಕಿತ್ಸೆ ಸಂಬಂಧಿಸಿ ಲಸಿಕೆ ಸಹಿತ ಹತ್ತಾರು ಆವಿಷ್ಕಾರಗಳು ನಡೆದಿವೆ, ನಡೆಯುತ್ತಲೇ ಇವೆ. ಈ ನಡುವೆ ಆಯುರ್ವೇದ ಮತ್ತು ನ್ಯಾನೋ ತಂತ್ರಜ್ಞಾನದ ಸಮ್ಮಿಲನದಲ್ಲಿ ‘ಕೋವಿರಕ್ಷಾ’ ಹೆಸರಿನ ತೈಲರೂಪದ ಪರಿಹಾರವೊಂದು ಬಂದಿದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ನೂತನ್‌ ಲ್ಯಾಬ್ಸ್‌ ಕಂಪನಿಯ ವಿಜ್ಞಾನಿಗಳ ತಂಡ ಈ ಉತ್ಪನ್ನವನ್ನು ರೂಪಿಸಿದೆ. ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

‘ಕೋವಿರಕ್ಷಾ’ದಲ್ಲಿ ಏನೇನಿದೆ?
‘ಶುದ್ಧ ತೆಂಗಿನೆಣ್ಣೆಗೆ ಬೆಳ್ಳಿಯ ಕಣಗಳನ್ನು ನ್ಯಾನೋ ತಂತ್ರಜ್ಞಾನದ ಮೂಲಕ ಬೆರೆಸಲಾಗಿದೆ. ಪಚ್ಚಕರ್ಪೂರ ಸೇರಿದಂತೆ ಸ್ಥಳೀಯವಾಗಿ ಸಿಗುವ ಔಷಧೀಯ ವಸ್ತುಗಳನ್ನು ಬೆರೆಸಿ ಸಿದ್ಧಪಡಿಸಲಾಗಿದೆ. ಬೆಳ್ಳಿಯ ವೈರಸ್‌ ಪ್ರತಿಬಂಧಕ ಗುಣ ಇಲ್ಲಿ ಕೆಲಸ ಮಾಡುತ್ತದೆ’ ಎನ್ನುತ್ತಾರೆ ನೂತನ್‌ ಲ್ಯಾಬ್ಸ್‌ನ ನಿರ್ದೇಶಕ, ವಿಜ್ಞಾನಿ ಎಚ್‌.ಎಸ್‌. ನೂತನ್‌.

ಹೇಗಿದೆ?
ಇದು ರೋಲ್‌ ಆನ್‌ ಮಾಡಬಹುದಾದ ಪುಟ್ಟ ಶೀಷೆ. 10 ಮಿಲಿ ಲೀಟರ್‌ ದ್ರಾವಣ ಇದೆ. ಅಂಗೈಗೆ ಅತ್ಯಲ್ಪ ಪ್ರಮಾಣದಲ್ಲಿ ಹಾಕಿ ಪೂರ್ಣ ಪ್ರಮಾಣದಲ್ಲಿ ಸವರಬೇಕು. ಮೂಗಿನ ಹೊಳ್ಳೆಗಳ ಹೊರಭಾಗ, ಹಣೆ, ಕತ್ತಿನ ಭಾಗ, ಮಾಸ್ಕ್‌ನ ಹೊರಭಾಗಕ್ಕೆ ಸ್ವಲ್ಪ ಲೇಪಿಸಿದರೆ ಸಾಕು. ಮುಂದಿನ ಮೂರು ಗಂಟೆಗಳ ಕಾಲ ಗಾಳಿಯ ಮೂಲಕ ನಿಮ್ಮ ದೇಹವನ್ನು ಸೇರಬಹುದಾದ ಯಾವುದೇ ವೈರಸ್ಸನ್ನು ‘ಕೋವಿರಕ್ಷಾ’ ಪ್ರತಿಬಂಧಿಸುತ್ತದೆ. ಮಾತ್ರವಲ್ಲ ಯಾವುದೇ ರೂಪಾಂತರಿತ ವೈರಸ್‌ ವಿರುದ್ಧವೂ ಕೆಲಸ ಮಾಡಬಲ್ಲುದು. ಒಂದು ಶೀಷೆಯ ದ್ರಾವಣವನ್ನು 200ಕ್ಕೂ ಹೆಚ್ಚು ಬಾರಿ ಬಳಸಬಹುದು’ ಎನ್ನುತ್ತಾರೆ ನೂತನ್‌.

ಚಿಕಿತ್ಸೆಗೂ ಬಳಕೆ: ಒಂದು ವೇಳೆ ಕೋವಿಡ್‌ ತಗುಲಿದ್ದಲ್ಲಿ ಚಿಕಿತ್ಸೆಗಾಗಿಯೂ ಬಳಸಬಹುದು. ಸಾಮಾನ್ಯ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ‘ಕೋವಿರಕ್ಷಾ’ವನ್ನು ಬಳಸಿದಲ್ಲಿ ಚೇತರಿಕೆ ಪ್ರಮಾಣ ತುಂಬಾ ವೇಗವಾಗಿದೆ. ಆರಂಭದಲ್ಲೇ ಬಳಸಿದರೆ ಆಮ್ಲಜನಕದ ವ್ಯತ್ಯಾಸ ಆಗುವ ಹಂತಕ್ಕೆ ಹೋಗುವ ಸಾಧ್ಯತೆಯೇ ಇಲ್ಲ. ಶ್ವಾಸಕೋಶವನ್ನು ಬಲಪಡಿಸುತ್ತದೆ. ಕೋವಿಡ್‌ ಹಾಗೂ ಅದರ ನಂತರದ ಎಲ್ಲ ಸಮಸ್ಯೆಗಳಿಗೂ ಇದು ರಕ್ಷಾ ಕವಚ’ ಎನ್ನುತ್ತಾರೆ ಅವರು.

ಆಯುಷ್‌ ಅನುಮತಿ: ಕರ್ನಾಟಕ ಸರ್ಕಾರದ ಆಯುಷ್‌ ಇಲಾಖೆಯೂ ಕೋವಿರಕ್ಷಾ ಉತ್ಪಾದನೆ ಮತ್ತು ಬಳಕೆಗೆ ಪರವಾನಗಿ ನೀಡಿದೆ. ಕೇಂದ್ರ ಸರ್ಕಾರದ ಪರವಾನಗಿಯೂ ಶೀಘ್ರ ಬರಲಿದೆ ಎಂದಿರುವ ನೂತನ್‌, ಇದಕ್ಕೂ ಮುನ್ನ ಸುಮಾರು 10 ಸಾವಿರ ಜನರಿಗೆ ಮಾದರಿ ಕೊಟ್ಟು ಪರೀಕ್ಷಿಸಲಾಗಿದೆ. 200ಕ್ಕೂ ಅಧಿಕ ಮಂದಿ ಕೋವಿಡ್‌ ಪಾಸಿಟಿವ್‌ ಆದವರಿಗೆ ಕೊಟ್ಟಿದ್ದೇವೆ. ಎಲ್ಲರೂ ಗುಣಮುಖರಾದ ದಾಖಲೆ ಇದೆ. ಈ ಉತ್ಪನ್ನ ಸಿದ್ಧಗೊಳ್ಳುವಲ್ಲಿ 14 ತಿಂಗಳ ಪರಿಶ್ರಮ ಇದೆ. ದೇಶದ ಪ್ರಮುಖ ಸಂಶೋಧನಾ ಸಂಸ್ಥೆಗಳ ಪರಿಣತರ ನೆರವನ್ನು ಪಡೆದಿದ್ದೇವೆ’ ಎಂದರು.

ಯಾವಾಗ ಲಭ್ಯ? ಎಷ್ಟು ಬೆಲೆ?
ಈಗಾಗಲೇ ಉತ್ಪಾದನೆ ಆರಂಭವಾಗಿದ್ದು, ಇನ್ನು ಮೂರು ತಿಂಗಳ ಒಳಗೆ ಗ್ರಾಹಕರ ಕೈಸೇರಲಿದೆ. ಇದರ ಬೆಲೆ ₹ 300. ಕೋವಿಡ್‌ ಅನ್ನು ಪರಿಣಾಮಕಾರಿಯಾಗಿ ಎದುರಿಸಲು ಕೋವಿರಕ್ಷಾ ಸಫಲವಾಗಲಿ ಎಂದು ಆಶಿಸೋಣ.

ಮಾಹಿತಿಗೆ ಮೊಬೈಲ್‌: 9731223630

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು