ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ವೈರಸ್ಸನ್ನು ಚುಚ್ಚಿಸಿಕೊಂಡವರು!

Published 28 ಜೂನ್ 2023, 0:53 IST
Last Updated 28 ಜೂನ್ 2023, 0:53 IST
ಅಕ್ಷರ ಗಾತ್ರ

ಭಯಾನಕವಾದ ರೋಗವನ್ನುಂಟುಮಾಡುವ ವೈರಸ್ಸನ್ನು ಸ್ವ ಪ್ರೇರಣೆಯಿಂದ ವಿಜ್ಞಾನಿಗಳ ಮೇಲೆ ನಂಬಿಕೆ ಇಟ್ಟು ಚುಚ್ಚಿಸಿಕೊಂಡವರ ಧೈರ್ಯ ಎಂಥದ್ದಿರಬಹುದು...

ಹೌದು. ಬೇಕೆಂದೇ ಕೋವಿಡ್‌ ವೈರಸ್ಸನ್ನು ಚುಚ್ಚಿಸಿಕೊಂಡವರ ಕಥೆ ಈಗ ಸುದ್ದಿ ಮಾಡುತ್ತಿದೆ. ಮೊದಲಿಗೆ ಇದು ಸರಿಯೋ ತಪ್ಪೋ ಎನ್ನುವ ಕಾರಣಕ್ಕೆ. ಎರಡನೆಯದಾಗಿ, ಇದರಿಂದ ಕೋವಿಡ್‌ ಸೋಂಕಿನ ಬಗ್ಗೆ ತಿಳಿದ ಕೆಲವು ಹೊಸ ವಿಷಯಗಳಿಂದಾಗಿ ಸುದ್ದಿ ಆಗಿದೆ. ಇಂಗ್ಲೆಂಡಿನ ಇಂಪೀರಿಯಲ್‌ ಕಾಲೇಜಿನ ವೈದ್ಯ ವಿಜ್ಞಾನಿ ವೆಂಡಿ ಬಾರ್ಕಲೇ ಮತ್ತು ಸಂಗಡಿಗರು ಮೂವತ್ತನಾಲ್ಕು ಜನರಿಗೆ ಉದ್ದೇಶಪೂರ್ವಕವಾಗಿ, ‘ಇಂತಿಷ್ಟು ವೈರಸ್ಸು’ ಎಂದು ಸೋಂಕಿಸಿದ್ದಾರೆ. ವೈರಸ್‌ ತುಂಬಿದ ದ್ರವವನ್ನು ಅವರ ಮೂಗಿನೊಳಗೆ ಸುರಿದಿದ್ದಾರೆ. ಇವರೆಲ್ಲ ಲಸಿಕೆ ಪಡೆಯದ, ಹಿಂದೆ ಎಂದೂ ಕೋವಿಡ್‌ ಸೋಂಕದ ಯುವಕ, ಯುವತಿಯರು ಎನ್ನುವುದು ವಿಶೇಷ.

ಹೀಗೆಂದು, ವೆಂಡಿ ತಂಡಕ್ಕೆ ಈ ಯುವಕ, ಯುವತಿಯರ ಮೇಲೆ ವೈರವೇನೂ ಇರಲಿಲ್ಲ. ಇದ್ದುದೆಲ್ಲ, ‘ಅವರಲ್ಲಿ ಎಷ್ಟು ಜನರಿಗೆ ಕಾಯಿಲೆ ಕಾಣಿಸುತ್ತದೆ? ರೋಗಲಕ್ಷಣಗಳು ಯಾವಾಗ ಕಾಣುತ್ತದೆ?. ಅದು ಕಾಣಿಸುವಾಗ ಅವರ ಮೂಗಿನಿಂದ ಬರುವ ಉಸಿರಿನಲ್ಲಿ ಎಷ್ಟು ವೈರಸ್ಸು ಇರುತ್ತದೆ? ಇದು ಹೆಚ್ಚಾಗುತ್ತದೆಯೋ ಕಡಿಮೆ ಆಗುತ್ತದೆಯೋ? ಇನ್ನೊಬ್ಬರಿಗೆ ಕಾಯಿಲೆ ತರುವಷ್ಟು ವೈರಸ್ಸನ್ನು ಎಲ್ಲರೂ ಉಸಿರಿನಿಂದ ಹೊರ ಬಿಡುತ್ತಾರೆಯೋ?‘ – ಎಂಬ ಸಂದೇಹಗಳು. ಈ ಸಂದೇಹಗಳಿಗೆ ಇದುವರೆವಿಗೂ ಇದಮಿತ್ಥಂ ಎನ್ನುವ ಉತ್ತರವಿರಲಿಲ್ಲವೆನ್ನಿ.

ಸಾಮಾನ್ಯವಾಗಿ ವೈರಸ್ಸಿನಿಂದ ಕಾಯಿಲೆ ಬಂದಾಗ, ಒಬ್ಬೊಬ್ಬರಿಗೂ ಸೋಂಕಿದ ವೈರಸ್ಸಿನ ಪ್ರಮಾಣ ವಿಭಿನ್ನವಾಗಿರಬಹುದು. ಅಥವಾ ತಳಿಯೇ ಬೇರೆ, ಬೇರೆ ಆಗಿರಬಹುದು. ಇದರಿಂದಾಗಿ ಎಲ್ಲರಲ್ಲಿಯೂ ಕಾಯಿಲೆ ಕಾಣಿಸುವುದಿಲ್ಲ. ಇದು ವೈರಸ್ಸಿನ ಪ್ರಮಾಣದಿಂದಲೋ, ಅಥವಾ ವ್ಯಕ್ತಿಗಳಲ್ಲಿರುವ ರೋಗನಿರೋಧಕತೆಯಿಂದಲೋ ಎನ್ನುವ ಸಂದೇಹ ಇದ್ದೇ ಇರುತ್ತದೆ. ಪರಿಹಾರ: ಎಲ್ಲರಿಗೂ ಒಂದೇ ಪ್ರಮಾಣದ ವೈರಸ್ಸನ್ನು ಚುಚ್ಚಿ ನೋಡಿದರೆ, ಎಷ್ಟು ಜನರಲ್ಲಿ ಕಾಯಿಲೆ ಕಾಣಿಸಿತು ಎನ್ನುವುದರಿಂದ, ಯಾರ್ಯಾರಿಗೆ ವೈರಸ್ಸಿನ ದಾಳಿಯನ್ನು ತಡೆಯುವ ಶಕ್ತಿ ಇದೆ ಎನ್ನುವುದೂ ಗೊತ್ತಾಗುತ್ತದೆ. ಮೂವತ್ತನಾಲಕ್ಕೂ ಜನರಿಗೆ ಒಂದೇ ಪ್ರಮಾಣದಲ್ಲಿ ವೈರಸ್ಸನ್ನು ಚುಚ್ಚಿದ್ದರೂ, ಕೇವಲ ಹದಿನೆಂಟು ಜನರಲ್ಲಿಯಷ್ಟೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವು. ಕೇವಲ ಹದಿನೆಂಟು ಮಂದಿಗಷ್ಟೆ ಮೂಗು ಸೋರಿ, ಜ್ವರ ಬಂದು ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡವಂತೆ. ಇವರಲ್ಲಿ ಹನ್ನೆರಡು ಮಂದಿಯ ಗಂಟಲಿನ ದ್ರವದಲ್ಲಿ ಬಹಳಷ್ಟು ವೈರಸ್ಸು ಇತ್ತು.

ಇನ್ನೊಂದು ಬಗೆಹರಿಯದ ಸಂದೇಹ, ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು ಉಸಿರಿನಲ್ಲಿರುವ ವೈರಸ್ಸೋ, ಸಿಂಬಳದಲ್ಲಿರುವ ವೈರಸ್ಸೋ – ಎನ್ನುವುದು. ಕೋವಿಡ್‌ ಬಂದಾಗ ಹುಚ್ಚು ಹಿಡಿದ ಹಾಗೆ ಕೈ ತೊಳೆಯುತ್ತಿದ್ದುದು, ಸ್ಯಾನಿಟೈಸರು ಬಳಸುತ್ತಿದ್ದುದು ನೆನಪಿದೆಯಷ್ಟೆ. ಉಸಿರಿನಲ್ಲಿ ಎಷ್ಟು ವೈರಸ್ಸು ಇದೆ, ವಸ್ತುಗಳಿಗೆ ಅಂಟಿಕೊಂಡ ಸಿಂಬಳದಲ್ಲಿ ಎಷ್ಟಿದೆ ಎಂದು ಗೊತ್ತಾದರೆ, ಒಬ್ಬರಿಂದ ಇನ್ನೊಬ್ಬರಿಗೆ ರೋಗ ಯಾವುದರಿಂದ ಹರಡುತ್ತದೆ ಎನ್ನುವುದನ್ನು ತಿಳಿಯಬಹುದಷ್ಟೆ. ಕೇವಲ ಹನ್ನೆರಡು ಮಂದಿಯ ಉಸಿರಿನಲ್ಲಿಯಷ್ಟೆ ಇನ್ನೊಬ್ಬರಿಗೆ ಸೋಂಕಿಸಬಹುದಾದಷ್ಟು ವೈರಸ್ಸು ಇತ್ತಂತೆ. ವಿಚಿತ್ರ ಎಂದರೆ, ಯಾವುದೇ ರೋಗಲಕ್ಷಣಗಳೂ ಇಲ್ಲದ ಇಬ್ಬರ ಉಸಿರಿನಲ್ಲಿ ಸೋಂಕುಂಟು ಮಾಡುವುದಕ್ಕೆ ಬೇಕಾದ ಪ್ರಮಾಣದ ಶೇ. 80ರಷ್ಟು ಇತ್ತು. ಅಂದರೆ ಲಕ್ಷಣಗಳು ಇಲ್ಲದವರೂ ಸೋಂಕನ್ನು ಹರಡಬಲ್ಲರು. ಉಸಿರಿನಿಂದ ಸುರಿದ ವೈರಸ್ಸುಗಳು ಸೋಂಕು ತಗುಲಿಸಿದ ಮೂರು ದಿನಗಳ ನಂತರ ಬಹಳ ಹೆಚ್ಚಿದ್ದುವು. ಅನಂತರ ಕ್ಷೀಣಿಸಿದುವು. ಇವರು ಧರಿಸಿದ ಮಾಸ್ಕಿನಲ್ಲಿನ ವೈರಸ್ಸುಗಳ ಪ್ರಮಾಣವೂ ಹೀಗೆಯೇ ಏರಿಳಿದಿತ್ತು.

ವೈರಸ್ಸು ದೇಹವನ್ನು ಸೇರಿದ ಎಷ್ಟು ದಿನದ ಮೇಲೆ ಪಾಸಿಟಿವ್‌ ಎಂದು ತಿಳಿಯುತ್ತದೆ ಎನ್ನುವುದು ಇನ್ನೊಂದು ಪ್ರಶ್ನೆ. ಪಾಸಿಟಿವ್‌ ಎಂದರೆ ದೇಹದಲ್ಲಿ ವೈರಸ್ಸುಗಳು ಬೆಳೆಯುತ್ತಿವೆ ಎಂದರ್ಥ. ಇದನ್ನು ಹಲವು ತಂತ್ರಗಳಿಂದ ಪತ್ತೆ ಮಾಡುತ್ತಾರೆ. ಆಸ್ಪತ್ರೆಗಳಲ್ಲಿ ಪಿಸಿಆರ್‌ ತಂತ್ರಗಳಿವೆ. ಮನೆಯಲ್ಲಿಯೂ ಪತ್ತೆ ಮಾಡುವ ಉಪಾಯಗಳಿವೆ. ಆದರೆ ಇವು ನಿಜಕ್ಕೂ ಸೋಂಕಿಸುವ ಸಾಮರ್ಥ್ಯ ಇರುವಂಥವರನ್ನು ತೋರಿಸಿಕೊಡುತ್ತವೆಯೋ? ಅಥವಾ ಅಂಥಹವರನ್ನು ಸುಮ್ಮನೆ ಕ್ವಾರಂಟೈನಿಗೆ ಹಾಕುತ್ತಿದ್ದೇವೆಯೋ ಎನ್ನುವ ಪ್ರಶ್ನೆಯೂ ಇತ್ತು. ಈ ಸೋಂಕು ಹತ್ತಿಸಿಕೊಂಡವರನ್ನು ಪ್ರತಿದಿನವೂ ಇಂತಹ ತಂತ್ರಗಳಿಂದ ಪರೀಕ್ಷಿಸಿಯೂ ನೋಡಿದ್ದಾರೆ. ಬಹುತೇಕ ಎಲ್ಲರಲ್ಲಿಯೂ ಮೂರು ದಿನಗಳ ನಂತರ ಪಾಸಿಟಿವ್‌ ಕಾಣಿಸಿತ್ತು. ರೋಗಲಕ್ಷಣಗಳು ಕಂಡವರೆಲ್ಲರೂ ಪಾಸಿಟಿವ್‌ ಆಗಿದ್ದರು. ಇದೇ ಸಂದರ್ಭದಲ್ಲಿ ಅವರ ಉಸಿರಿನಲ್ಲಿ ಅತಿ ಹೆಚ್ಚು ವೈರಸ್ಸು ಇತ್ತು ಎಂಬುದು ಕಾಕತಾಳೀಯವಿರಲಿಕ್ಕಿಲ್ಲ.

ಅಂದರೆ ಅರ್ಥ ಇಷ್ಟೆ. ಮನೆಯಲ್ಲಿಯೇ ಪಾಸಿಟಿವಿಟಿ ಪರೀಕ್ಷಿಸುವ ಸಾಧನ ಹಾಗೂ ತಂತ್ರಗಳು ‘ಆರ್‌ಟಿಪಿಸಿಆರ್‌’ನಷ್ಟು ನಿಖರವಲ್ಲದಿರಬಹುದು; ಆದರೆ ಈ ಸಾಧನಗಳು ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ನೆರವಾಗುತ್ತವೆ ಎನ್ನುವುದು ವೆಂಡಿ ಬಾರ್ಕಲೇ ತಂಡದ ಅನಿಸಿಕೆ. ಮೂಗೇ ಸೋಂಕು ಹರಡುವುದರ ಮೂಲ ಎನ್ನುವುದು ಇವರ ತೀರ್ಮಾನ.

ಅಬ್ಬಾ! ಹೀಗೂ ಉಂಟೇ! ಇಷ್ಟೊಂದು ಭಯಾನಕವಾದ ರೋಗವನ್ನುಂಟುಮಾಡುವ ವೈರಸ್ಸನ್ನು ಬೇಕೆಂದೇ ಚುಚ್ಚಿಸಿಕೊಂಡವರು ಎಂಥವರು ಎಂದಿರಾ? ಅವರೂ ನಮ್ಮ ನಿಮ್ಮಂಥವರೇ? ಆದರೆ ವಿಜ್ಞಾನದಲ್ಲಿ, ವೈದ್ಯರ ಮೇಲೆ ನಂಬಿಕೆ ವಿಶ್ವಾಸ ಇಟ್ಟು ಸ್ವಯಂಪ್ರೇರಣೆಯಿಂದ ಪ್ರಯೋಗಕ್ಕೆ ಒಳಗಾದವರು. ಇವರನ್ನು ಹದಿನಾಲ್ಕು ದಿನಗಳ ಕಾಲ ಪ್ರತ್ಯೇಕವಾಗಿಟ್ಟು, ನಿತ್ಯವೂ ರಕ್ತ, ಉಸಿರು, ಗಂಟಲು ಮೊದಲಾದವನ್ನು ಪರೀಕ್ಷಿಸಿದ್ದರು. ಕಾಯಿಲೆ ತೀವ್ರವಾಗದಂತೆ ಎಚ್ಚರ ವಹಿಸಿದ್ದರಂತೆ.


ಆದರೂ ಇದು ಅಪಾಯಕಾರಿ ಪ್ರಯೋಗ. ಇಂತಹ ಪ್ರಯೋಗವನ್ನು ಮಾಡಬಾರದಿತ್ತು ಎನ್ನುವ ಮಾತುಗಳು ಕೇಳಿ ಬಂದಿವೆ. ನೀವೇನಂತೀರಿ? ಈ ಸಾಹಸ ಪ್ರಯೋಗದ ವರದಿ ಇತ್ತೀಚಿನ ‘ಲ್ಯಾನ್ಸೆಟ್‌ ಮೈಕ್ರೋಬ್‌’ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT