ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಯಿಭಾಷೆಗೂ ಕೃತಕ ಬುದ್ಧಿಮತ್ತೆ!

Published 19 ಜೂನ್ 2024, 0:30 IST
Last Updated 19 ಜೂನ್ 2024, 0:30 IST
ಅಕ್ಷರ ಗಾತ್ರ
ಸಾಕುನಾಯಿಗಳನ್ನು ಪ್ರಾಣಿಗಳೆಂದು ನೋಡದೆ ಮನೆಯ ಸದಸ್ಯರೆಂದೇ ಪರಿಗಣಿಸಲಾಗುತ್ತದೆ. ನಾಯಿಗಳ ಸಹಜವಾದ ಪ್ರೀತಿ, ನಿಷ್ಠೆ ಇವೆಲ್ಲವೂ ಮಾನವ–ಶ್ವಾನಸಂಬಂಧವನ್ನು ಸಹಸ್ರಾರು ವರ್ಷಗಳಿಂದ ಗಟ್ಟಿಗೊಳಿಸಿವೆ. ಆದರೂ, ನಾಯಿಗಳ ಭಾಷೆಯೇ ಬೇರೆ, ಮಾನವನ ಭಾಷೆಯೇ ಬೇರೆ. ಭಾಷೆಯ ಅಗತ್ಯವೇ ಇಲ್ಲದೇ ಪರಸ್ವರ ಸಂಬಂಧ ಸಾಧ್ಯವಿದ್ದರೂ ನಾಯಿಗಳು ಏನೆಲ್ಲಾ ಮಾತನಾಡುತ್ತವೆ ಎಂದು ತಿಳಿದುಕೊಳ್ಳುವ ಕುತೂಹಲವಂತೂ ಇದ್ದೇ ಇರುತ್ತದೆ. ಬಹುಶಃ ಸಾಕಿದ ನಾಯಿ ಏನು ಮಾತನಾಡುತ್ತದೆ ಎಂದು ಅರಿಯುವ ಕಾಲ ತೀರಾ ದೂರವೇನೂ ಉಳಿದಿಲ್ಲ!

ಹೌದು, ನಾಯಿಯ ಮಾತನ್ನು ಅರ್ಥ ಮಾಡಿಕೊಂಡು, ಮಾನವಭಾಷೆಗೆ ಭಾಷಾಂತರ ಮಾಡುವ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಪ್ರಾಯೋಗಿಕವಾಗಿ ಸಿದ್ಧವಾಗಿದೆ. ಮೆಕ್ಸಿಕೋದ ರಾಷ್ಟ್ರೀಯ ಬಾಹ್ಯಾಕಾಶಭೌತ ವಿಜ್ಞಾನ ಸಂಸ್ಥೆ ಹಾಗೂ ಪ್ಯೂಬ್ಲಾದಲ್ಲಿರುವ ಎಲೆಕ್ಟ್ರಾನಿಕ್ಸ್‌ ಮತ್ತು ಆಪ್ಟಿಕ್ಸ್‌ ಸಂಸ್ಥೆಗಳು ಜಂಟಿಯಾಗಿ ಈ ಪ್ರಯೋಗವನ್ನು ಮಾಡಿವೆ. ಕೃತಕ ಬುದ್ಧಿಮತ್ತೆಗೆ ಮಾನವ ಹಾಗೂ ಶ್ವಾನಭಾಷಾ ಸಂವಹನ ವಿಧಾನಗಳನ್ನು ಪರಿಚಯಿಸಿ ಶ್ವಾನವೊಂದು ಏನು ಹೇಳುತ್ತಿರಬಹುದು ಎಂಬುದನ್ನು ಭಾಷಾಂತರ ಮಾಡಲು ಯಶಸ್ವಿಯಾಗಿದ್ದಾರೆ.

ಭಾಷೆಯೆಂದರೆ ಅದು ಭಾವನೆಗಳ ಮಿಶ್ರಣ. ಅದರಲ್ಲಿ ಕೋಪ, ಪ್ರೀತಿ, ಬೇಸರ, ಆತಂಕ, ಸಮಾಧಾನ ಇತ್ಯಾದಿ ಭಾವನೆಗಳು ಅಥವಾ ಮನಃಸ್ಥಿತಿಗಳು ಅಡಕವಾಗಿರುತ್ತವೆ. ಈ ಭಾವನೆಗಳನ್ನು ಅರ್ಥ ಮಾಡಿಕೊಂಡರೆ ಯಾವುದೇ ಭಾಷೆಯನ್ನೂ ಅಸ್ಪಷ್ಟವಾಗಿಯಾಗಿಯಾದರೂ ಅರ್ಥಮಾಡಿಕೊಳ್ಳಬಹುದು. ಈಗಲೂ ನಾಯಿಯ ಭಾಷೆ ನೇರವಾಗಿ ಅರ್ಥವಾಗದೇ ಇದ್ದರೂ, ಅದು ಏನು ಹೇಳುತ್ತಿದೆ ಎಂಬುದನ್ನು ಅದರ ವರ್ತನೆ, ಭಾವನೆಗಳ ಮೂಲಕ ಅರ್ಥ ಮಾಡಿಕೊಳ್ಳುವುದು ಸಾಧ್ಯವಿದೆಯಲ್ಲವೇ? ಇತರ ಭಾಷಿಗರು ಮಾತನಾಡುವುದನ್ನೂ ಇದೇ ರೀತಿ ಅಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವುದು ಸಾಧ್ಯವಿದೆ. ಇದೇ ತರ್ಕವನ್ನು ಕೃತಕ ಬುದ್ಧಿಮತ್ತೆಗೆ ಅನ್ವಯಿಸಿ ನಾಯಿಗಳ ಭಾಷೆಯನ್ನು ಅಭ್ಯಸಿಸುವ ಪ್ರಯತ್ನವನ್ನು ಮಾಡಲಾಗಿದೆ ಎಂದು ಕಂಪ್ಯೂಟರ್ ವಿಜ್ಞಾನ ಹಾಗೂ ಎಂಜಿನಿಯರಿಂಗ್ ವಿಜ್ಞಾನಿಗಳಾದ ರಾಡಾ ಮಿಕಾಲಿಯಾ ಹಾಗೂ ಜಾನಿಸ್ ಎಂ. ಜೆನ್‌ಕಿನ್ಸ್ ಹೇಳಿದ್ದಾರೆ.

ಮಾನವರು ಬಳಸುವ ವಿವಿಧ ಭಾಷೆಗಳ ದತ್ತಾಂಶ ಈಗಾಗಲೇ ಕೃತಕ ಬುದ್ಧಿಮತ್ತೆಯ ಬಳಿ ಇವೆ. ಯಾವುದೇ ಭಾಷೆಯನ್ನು ಯಾವ ಭಾಷೆಗಾದರೂ ಅನುವಾದ ಮಾಡಬಲ್ಲ ಸಾಮರ್ಥ್ಯ ಕೃತಕ ಬುದ್ಧಿಮತ್ತೆಗೆ ಲಭಿಸಿದೆ. ಅದರ ನೈಪುಣ್ಯದ ಮಟ್ಟ ಇನ್ನೂ ಸುಧಾರಿಸಿಲ್ಲದಿರಬಹುದು ಅಷ್ಟೇ. ಆದರೆ, ಕೃತಕ ಬುದ್ಧಿಮತ್ತೆ ನಿತ್ಯ ವಿಕಸನ ಹೊಂದುವ ಸಾಮರ್ಥ್ಯ ಇರುವ ವಿಜ್ಞಾನವಾಗಿರುವ ಕಾರಣ ಅದು ನಿಖರತೆಯನ್ನು ಹೊಂದುವ ಕಾಲ ದೂರವಿಲ್ಲ. ಮಾನವನ ಭಾಷೆಯ ವಿವಿಧ ಭಾವನೆಗಳನ್ನು ಕೃತಕ ಬುದ್ಧಿಮತ್ತೆಗೆ ಪರಿಚಯಿಸಲಾಗಿದೆ. ಯಾವ ಪದ ಯಾವ ಭಾವನೆಯಲ್ಲಿ ಹೇಗೆ ಮೂಡಿಬರುತ್ತದೆ, ಆಗ ಮುಖದ ಭಾವನೆಗಳು ಹೇಗಿರುತ್ತವೆ ಇತ್ಯಾದಿ ಧ್ವನಿ ಹಾಗೂ ಭೌತಿಕ ದತ್ತಾಂಶಗಳನ್ನು ಒದಗಿಸಲಾಗಿದೆ. ಜೊತೆಗೆ, ನಾಯಿಗಳು ವಿವಿಧ ಭಾವನೆಗಳಲ್ಲಿ ಬಳಸುವ ವಿವಿಧ ಶಬ್ದಗಳು, ಅವುಗಳ ಮುಖಚರ್ಯೆ, ವರ್ತನೆಯ ವಿಡಿಯೊಗಳನ್ನೂ ಕೃತಕ ಬುದ್ಧಿಮತ್ತೆಗೆ ಒದಗಿಸಲಾಗಿದೆ. ಈ ಎರಡು ವಿವಿಧ ಪ್ರಬೇಧಗಳ ಭಾಷೆ, ವರ್ತನೆ, ಭಾವನೆಗಳನ್ನು ಪರಸ್ಪರ ಹೋಲಿಸಿ ಸಾಮ್ಯತೆಯನ್ನು ಗುರುತಿಸುವಂತೆ ಕೃತಕ ಬುದ್ಧಿಮತ್ತೆಗೆ ಸೂಚಿಸಲಾಗಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಬಹು ಕುತೂಹಲಕಾರಿ ಉತ್ತರಗಳು ವಿಜ್ಞಾನಿಗಳಿಗೆ ಸಿಕ್ಕಿವೆ. ಮಾನವನ ಭಾಷೆ, ವರ್ತನೆ ಹಾಗೂ ಭಾವನೆಗಳಿಗೂ ಶ್ವಾನಗಳ ಭಾಷೆ, ವರ್ತನೆ ಹಾಗೂ ಭಾವನೆಗಳಿಗೂ ಜೈವಿಕವಾಗಿ ಸಾಕಷ್ಟು ಸಾಮ್ಯಗಳಿರುವುದು ಬೆಳಕಿಗೆ ಬಂದಿದೆ. ಈ ದತ್ತಾಂಶದ ಆಧಾರದ ಮೇಲೆ ಕೃತಕ ಬುದ್ಧಿಮತ್ತೆಯು ನಾಯಿಗಳು ಮಾತನಾಡುವಾಗ ಅವನ್ನು ಮಾನವ ಪದಗಳಿಗೆ ಭಾಷಾಂತರಿಸಿ ಸ್ಥಳದಲ್ಲೇ ಶಬ್ದ ಹಾಗೂ ಅಕ್ಷರಗಳಾಗಿ ಅನುವಾದಿಸಿ ಕೊಡುವಲ್ಲಿ ಯಶಸ್ವಿಯಾಗಿದೆ.

ಇದು ಇನ್ನೂ ತೀರಾ ಆರಂಭದ ಹಂತದಲ್ಲಿದೆ. ಕೆಲವೇ ಕೆಲವು ಪದಗಳನ್ನು ಅನುವಾದಿಸಿ ಅವುಗಳ ಅರ್ಥವು ನಿಜವೇ ಇಲ್ಲವೇ ಎಂಬುದನ್ನು ತಾಳೆ ಹಾಕಿ ನೋಡಲಾಗಿದೆ. ಈ ರೀತಿಯ ಅರ್ಥವನ್ನು ನಾವು ಕೃತಕ ಬುದ್ಧಿಮತ್ತೆ ಇಲ್ಲದಿದ್ದರೂ ತಿಳಿದುಕೊಳ್ಳಬಹುದು. ಆದರೆ, ಈ ಸಣ್ಣ ಹೆಜ್ಜೆ ನಾಳೆ ಬೆಳದು ದೊಡ್ಡದಾಗುವುದರ‌ಲ್ಲಿ ಸಂದೇಹ ಬೇಡ. ನಾಯಿ ಅಥವಾ ಇತರ ಪ್ರಾಣಿಗಳ ಬುದ್ಧಿಮತ್ತೆ ಮನುಷ‌್ಯನ ಬುದ್ಧಿಮತ್ತೆಯಷ್ಟು ಸುಧಾರಿತವಾಗಿ ಇಲ್ಲದೇ ಇದ್ದರೂ, ಬುದ್ಧಿವಂತ ಪ್ರಾಣಿಗಳ ಚಿಂತನಾಕ್ರಮ, ಪ್ರಾಕೃತಿಕ ಕೊಡುಗೆಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಈ ಸಂಶೋಧನೆ ಸಹಕಾರಿಯಾಗಲಿದೆ ಎಂದು ವಿಜ್ಞಾನಿ ರಾಡಾ ಮಿಕಾಲಿಯಾ ಅಭಿಪ್ರಾಯಪಟ್ಟಿದ್ದಾರೆ.

ಪ್ರಾಣಿಗಳನ್ನು ಬಳಸಿಕೊಂಡು ಈಗಾಗಲೇ ವಿವಿಧ ವೈಜ್ಞಾನಿಕ ಪ್ರಯೋಗ, ಸೈನ್ಯದಂತಹ ಕ್ಷೇತ್ರಗಳಲ್ಲಿ ಬಳಕೆ ಇದ್ದೇ ಇದೆ. ಪ್ರಾಣಿಗಳ ಭಾಷೆ ಅರ್ಥ ಮಾಡಿಕೊಂಡರೆ ಪರಸ್ಪರ ಸಂವಹನ ಹೆಚ್ಚು ಪರಿಣಾಮಕಾರಿ ಆಗಬಲ್ಲ ಸಾಧ್ಯತೆ ಇರುವುದರಿಂದ ಅದರ ಅನುಕೂಲಗಳು ಹೆಚ್ಚು ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT