ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಪರಿವೀಕ್ಷಣಾ ಉಪಗ್ರಹ ಉಡ್ಡಯನ ಮಿಷನ್‌ಗೆ ಹಿನ್ನಡೆ: ಇಸ್ರೋ

Last Updated 12 ಆಗಸ್ಟ್ 2021, 4:24 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಭೂಮಿ ಪರಿವೀಕ್ಷಣಾ ಉಪಗ್ರಹ ಉಡ್ಡಯನಕ್ಕೆ ಹಿನ್ನಡೆಯಾಗಿದೆ. ರಾಕೆಟ್‌ನ ಕ್ರಯೋಜೆನಿಕ್ ಹಂತದಲ್ಲಿ ಕಾರ್ಯಕ್ಷಮತೆಯ ವೈಪರೀತ್ಯದಿಂದಾಗಿ ಈ ಕಾರ್ಯಾಚರಣೆಯನ್ನು ಪೂರ್ಣವಾಗಿ ಸಾಧಿಸಲಾಗಲಿಲ್ಲ ಎಂದು ಇಸ್ರೋ ಗುರುವಾರ ತಿಳಿಸಿದೆ.

51.70 ಮೀಟರ್ ಎತ್ತರದ ರಾಕೆಟ್ ಜಿಎಸ್‌ಎಲ್‌ವಿ-ಎಫ್ 10/ಇಒಎಸ್ -03 ಅನ್ನು, 26 ಗಂಟೆಯ ಕೌಂಟ್‌ಡೌನ್ ಮುಗಿದ ನಂತರ ಬೆಳಿಗ್ಗೆ 05.43ಕ್ಕೆ ಯೋಜಿಸಿದಂತೆ ಸತೀಶ್ ಧವನ್ ಉಡ್ಡಯನ ಕೇಂದ್ರದ ಎರಡನೇ ಲಾಂಚ್ ಪ್ಯಾಡ್‌ನಿಂದ ಯಶಸ್ವಿಯಾಗಿ ಉಡ್ಡಯನ ಮಾಡಲಾಯಿತು. ಮೊದಲ ಮತ್ತು ಎರಡನೇ ಹಂತಗಳಲ್ಲಿ ರಾಕೆಟ್‌ನ ಕಾರ್ಯಕ್ಷಮತೆ ಸಾಮಾನ್ಯವಾಗಿದೆ ಎಂದು ಮಿಷನ್ ನಿಯಂತ್ರಣ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದರು.

ಆದರೆ, ಕೆಲವು ನಿಮಿಷಗಳ ನಂತರ ವಿಜ್ಞಾನಿಗಳ ನಡುವೆ ಭಾರೀ ಚರ್ಚೆ ಆರಂಭವಾಯಿತು. ಅಂತಿಮವಾಗಿ, ‘ರಾಕೆಟ್‌ನ ಕಾರ್ಯಕ್ಷಮತೆಯ ವೈಪರೀತ್ಯದಿಂದಾಗಿ ಮಿಷನ್ ಅನ್ನು ಸಂಪೂರ್ಣವಾಗಿ ಸಾಧಿಸಲಾಗಲಿಲ್ಲ. ಕ್ರಯೋಜೆನಿಕ್ ಹಂತದಲ್ಲಿ ಕಾರ್ಯಕ್ಷಮತೆಯ ಅಸಮರ್ಪಕತೆಯನ್ನು ಗಮನಿಸಲಾಗಿದೆ’ ಎಂದು ಕಾರ್ಯಾಚರಣೆಯ ನಿರ್ದೇಶಕರು ಘೋಷಿಸಿದರು.

‘ಮಿಷನ್ ಅನ್ನು ಸಂಪೂರ್ಣವಾಗಿ ಸಾಧಿಸಲು ಸಾಧ್ಯವಾಗಲಿಲ್ಲ. ಮುಖ್ಯವಾಗಿ ಕ್ರಯೋಜೆನಿಕ್ ಹಂತದಲ್ಲಿ ತಾಂತ್ರಿಕ ಅಸಮರ್ಪಕತೆಯನ್ನು ಗಮನಿಸಲಾಗಿದೆ. ಇದನ್ನು ನಾನು ನನ್ನ ಎಲ್ಲ ಸ್ನೇಹಿತರಿಗೆ ಹೇಳಲು ಬಯಸುತ್ತೇನೆ’ ಎಂದು ಬಳಿಕ ಇಸ್ರೋ ಅಧ್ಯಕ್ಷ ಕೆ ಶಿವನ್ ಹೇಳಿದ್ದಾರೆ. ಕ್ಷಣಗಣನೆ ಆರಂಭವಾದ ನಂತರ, ವಿಜ್ಞಾನಿಗಳು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ನಾಲ್ಕು ಹಂತದ ರಾಕೆಟ್‌ಗಾಗಿ ಪ್ರೊಪೆಲ್ಲಂಟ್‌ಗಳನ್ನು ತುಂಬುವ ಕೆಲಸದಲ್ಲಿ ತೊಡಗಿದ್ದರು. ಆದರೆ, ಅವರಿಗೆ ನಿರೀಕ್ಷಿತ ಫಲ ಸಿಕ್ಕಿಲ್ಲ.

ಭೂಮಿಯ ಪ್ರಮುಖ ಪ್ರದೇಶಗಳ ನೈಜ-ಸಮಯದ ಚಿತ್ರಣವನ್ನು ರವಾನಿಸುವುದು, ಕೃಷಿ, ಅರಣ್ಯ, ಜಲಮೂಲಗಳು ಹಾಗೂ ವಿಪತ್ತು ಎಚ್ಚರಿಕೆ, ಚಂಡಮಾರುತ ಮುಂತಾದ ನೈಸರ್ಗಿಕ ವಿಕೋಪಗಳ ಅವಲೋಕನಕ್ಕೆ ನೆರವಾಗುವುದು ಈ ಉಪಗ್ರಹ ಉಡಾವಣೆಯ ಉದ್ದೇಶವಾಗಿತ್ತು.

ಇಂದಿನ ಉಡಾವಣೆಗೂ ಮುನ್ನ, ಇಸ್ರೋ ಈ ವರ್ಷದ ಫೆಬ್ರವರಿಯಲ್ಲಿ ಬ್ರೆಜಿಲ್‌ನ ಭೂಮಿಯ ಪರಿವೀಕ್ಷಣೆ ಉಪಗ್ರಹ ಅಮೆಜೋನಿಯಾ -1 ಮತ್ತು 18 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT