ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಪಿರಸ್ ಸುರುಳಿಯ ವೈದ್ಯಕೀಯ ಕಥನ

Last Updated 16 ಮೇ 2020, 19:30 IST
ಅಕ್ಷರ ಗಾತ್ರ

ಸುಮಾರು 3000 ವರ್ಷಗಳ ಕಾಲ ಈಜಿಪ್ಟ್‌ನ ಥೀಬ್ಸ್ ಸಮಾಧಿಯಲ್ಲಿ ಹುದುಗಿದ್ದ ಪ್ಯಾಪಿರಸ್ (ಪಪೈರಸ್ ಸಸ್ಯದಿಂದ ತಯಾರಿದ ಕಾಗದ) ಸುರುಳಿಯನ್ನು ಎಡ್ವಿನ್‍ ಸ್ಮಿತ್‍ಗೆ ಪ್ರಾಚೀನ ವಸ್ತುಗಳ ವ್ಯಾಪಾರಿಯೊಬ್ಬ 1862ರಲ್ಲಿ ಮಾರಾಟ ಮಾಡಿದ. ಅದನ್ನು ಖರೀದಿಸಿದ್ದ ಎಡ್ವಿನ್ ಸ್ಮಿತ್ (ಅಮೆರಿಕನ್ ಈಜಿಪ್ಟಾಲಜಿಸ್ಟ್)ಗೆ ಆ ಸುರುಳಿಯು ಅತ್ಯಮ್ಯೂಲವಾದುದು ಎನ್ನುವುದು ಗೊತ್ತಿತ್ತು. ಆದರೆ, ಅದನ್ನು ಓದುವುದು ಗೊತ್ತಿರಲಿಲ್ಲ.

ಸ್ಮಿತ್ ತೀರಿ ಹೋಗುವವರೆಗೂ (1906ರಲ್ಲಿ) ಆ ಸುರುಳಿಯನ್ನು ತಮ್ಮೊಂದಿಗೆಯೇ ಜೋಪಾನವಾಗಿ ಇಟ್ಟುಕೊಂಡಿದ್ದ. ನಂತರ ಅವರ ಮಗಳು ಆ ಪ್ಯಾಪಿರಸ್‍ನ ಸುರುಳಿಯನ್ನು ನ್ಯೂಯಾರ್ಕ್ ಹಿಸ್ಟಾರಿಕಲ್ ಸೊಸೈಟಿಗೆ ದಾನ ಮಾಡಿದರು. ಆ ಸಮಯದಲ್ಲಿಯೇ ‘ಎಡ್ವಿನ್ ಸ್ಮಿತ್ ಪ್ಯಾಪಿರಸ್’ ಎಂದು ಕರೆಯಲ್ಪಡುವ ಡಾಕ್ಯುಮೆಂಟ್ ಬೆಳಕಿಗೆ ಬಂದಿತು. ಅದರ ಪ್ರಾಮುಖ್ಯತೆಯನ್ನು ಮೊಟ್ಟಮೊದಲ ಬಾರಿಗೆ ಅರ್ಥಮಾಡಿಕೊಳ್ಳಲಾಯಿತು.

‘ಎಡ್ವಿನ್ ಸ್ಮಿತ್ ಪ್ಯಾಪಿರಸ್’ ಒಂದು ವೈದ್ಯಕೀಯ ದಾಖಲೆ. ಇದು ವಿಶ್ವದಲ್ಲಿಯೇ ಶಸ್ತ್ರಚಿಕಿತ್ಸೆಯ ಕುರಿತಾಗಿ ಇಂದಿಗೂ ಅಸ್ತಿತ್ವದಲ್ಲಿ ಇರುವ ಅತ್ಯಂತ ಹಳೆಯ ಪಠ್ಯಪುಸ್ತಕ. ಇದನ್ನು ಕ್ರಿಸ್ತಪೂರ್ವ 1600ರಲ್ಲಿ ರಚಿಸಲಾಗಿದೆ. ಆದರೆ, ಅದರಲ್ಲಿನ ಬರವಣಿಗೆಯನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ ಈ ದಾಖಲೆಯು ಕ್ರಿಸ್ತಪೂರ್ವ 3000-2500ರಲ್ಲಿ ಬರೆಯಲ್ಪಟ್ಟಿದೆ ಎಂದು ನಂಬಲಾಗಿರುವ ವೈದ್ಯಕೀಯ ಗ್ರಂಥದ ಪ್ರತಿ ಎಂದು ತಿಳಿದುಬಂದಿದೆ.

ಕ್ರಿಸ್ತಪೂರ್ವ 17ನೇ ಶತಮಾನದಲ್ಲಿ ಎಡ್ವಿನ್ ಸ್ಮಿತ್ ಪ್ಯಾಪಿರಸ್ ಅನ್ನು ಹಿಂದಿನ ದಾಖಲೆಯಿಂದ ನಕಲು ಮಾಡಿದ ಲೇಖಕ ಅನೇಕ ತಪ್ಪುಗಳನ್ನು ಮಾಡಿದ್ದ. ಅವುಗಳಲ್ಲಿ ಕೆಲವು ಅಂಚುಗಳನ್ನು ತಿದ್ದಿ ಸರಿಪಡಿಸಿದ. ಕೊನೆಗೆ ಡಾಕ್ಯುಮೆಂಟನ್ನು ಪಕ್ಕಕ್ಕೆ ಸರಿಸಿ ಅದನ್ನು ಪೂರ್ಣಗೊಳಿಸದೆ ಹಾಗೆಯೇ ಬಿಟ್ಟ. ಅವನು ಯಾವ ಕಾರಣಕ್ಕಾಗಿ ಆ ರೀತಿ ಮಾಡಿದನೆಂದು ತಿಳಿದುಬಂದಿಲ್ಲ. ಅಪೂರ್ಣವಾಗಿದ್ದರೂ ಎಡ್ವಿನ್ ಸ್ಮಿತ್ ಪ್ಯಾಪಿರಸ್ ಅತ್ಯಂತ ಪ್ರಮುಖವಾದ ದಾಖಲೆಯಾಗಿದೆ. ಯಾಕೆಂದರೆ ಪ್ರಾಚೀನ ಈಜಿಪ್ಟ್‌ನವರು ಮಾನವ ಅಂಗರಚನಾ ಶಾಸ್ತ್ರ (ಹ್ಯೂಮನ್ ಅನಾಟಮಿ)ಮತ್ತು ಔಷಧದ(ಮೆಡಿಸಿನ್) ಬಗ್ಗೆ ಈ ಮೊದಲು ಯೋಚಿಸಿದ್ದಕ್ಕಿಂತ ಹೆಚ್ಚಿನ ಜ್ಞಾನವನ್ನು ಹೊಂದಿದ್ದರೆಂದು ಇದು ಮೊದಲ ಬಾರಿಗೆ ತೋರಿಸಿದೆ. ಈಜಿಪ್ಟ್ ಭಾಷೆಯಲ್ಲಿದ್ದ ಈ ಚಿತ್ರಲಿಪಿ ಬರವಣಿಗೆಯನ್ನು 1822ರಲ್ಲಿ ಡಿಕೋಡ್ ಮಾಡಲಾಯಿತು.

ಎಡ್ವಿನ್ ಸ್ಮಿತ್ ಪ್ಯಾಪಿರಸ್ ಬಹುಶಃ ಮಿಲಿಟರಿ ಶಸ್ತ್ರಚಿಕಿತ್ಸೆಗೆ ಕೈಪಿಡಿಯಾಗಿರಬಹುದು. ಗಡ್ಡೆಗಳಂತಹ ರೋಗಗಳು, ಹುಣ್ಣುಗಳು, ಅಪಘಾತಕ್ಕೆ ಸಂಬಂಧಿಸಿದ್ದ ಮುರಿತ, ಉಳುಕು, ಕೀಲು ತಪ್ಪುವಿಕೆಯಂತಹ 48 ಪ್ರಕರಣ(ಕೇಸ್)ಗಳು ಇದರಲ್ಲಿವೆ. ಈ ಕೇಸ್‌ಗಳನ್ನು ಇಂದು ಆಧುನಿಕ ವೈದ್ಯರು ನೋಡುವುದಕ್ಕಿಂತ ಭಿನ್ನವಾದ ಸ್ವರೂಪದಲ್ಲಿ ಪ್ರಸ್ತುತಪಡಿಸಲಾಗಿದೆ. ಪ್ರತಿಯೊಂದು ಪ್ರಕರಣವೂ ವೈದ್ಯಕೀಯ ಇತಿಹಾಸ ಮತ್ತು ರೋಗಿಯ ದೈಹಿಕ ಪರೀಕ್ಷೆಯೊಂದಿಗೆ ಪ್ರಾರಂಭವಾಗುತ್ತದೆ. ನಾಡಿ ನೋಡುವುದು, ಉರಿಯೂತ ಗಾಯಗಳನ್ನು ಪರೀಕ್ಷಿಸುವುದು, ರೋಗಿಯ ಬಾಹ್ಯ ಚಹರೆ ಅಂದರೆ ಮುಖ ಹಾಗೂ ಕಣ್ಣುಗಳ ಬಣ್ಣವನ್ನು ನೋಡುವುದು, ಮೂಗಿನ ಸ್ರವಿಸುವಿಕೆಯ ಗುಣಮಟ್ಟ, ಕೈಕಾಲು ಮತ್ತು ಹೊಟ್ಟೆಯ ಬಿಗಿತ ಇತ್ಯಾದಿಗಳ ಪರೀಕ್ಷೆಯ ನಂತರ ರೋಗ ನಿರ್ಣಯ ಮತ್ತು ರೋಗವನ್ನು ಮುನ್ಸೂಚಿಸುವುದು(ಪ್ರಾಗ್ನಾಸಿಸ್)ಇತ್ಯಾದಿ.

ಎಡ್ವಿನ್ ಸ್ಮಿತ್ ಪ್ಯಾಪಿರಸ್, ತಲೆಬುರುಡೆಗೆ (ಕ್ರೇನಿಯಲ್) ಸಂಬಂಧಿಸಿದ ಹೊಲಿಗೆಗಳು, ಮೆದುಳು ಹಾಗೂ ಬೆನ್ನುಮೂಳೆಯನ್ನು ಆವರಿಸಿರುವ ಪೆರೆ (ಮೆನಿಂಜಸ್), ಮೆದುಳಿನ ಬಾಹ್ಯ ಮೇಲ್ಮೈ, ಸೆರೆಬ್ರೊಸ್ಪೈನಲ್ ದ್ರವ, ಇಂಟ್ರಾಕ್ರೇನಿಯಲ್ ಮಿಡಿತಗಳ ಮೊದಲ ವಿವರಣೆಯನ್ನೂ ಒಳಗೊಂಡಿದೆ. ಮೆದುಳಿನ ಕೆಲವು ಭಾಗಗಳಿಗೆ ಹಾನಿಯಾಗುವುದು, ದೇಹದ ಕಾರ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದಾದ ಪಾರ್ಶ್ವವಾಯು ಮುಂತಾದ ಪರಿಸ್ಠಿತಿಗಳಿಗೆ ಕಾರಣವಾಗಬಹುದು ಎಂದು ಈಜಿಪ್ಟ್‌ನವರಿಗೆ ಚೆನ್ನಾಗಿ ತಿಳಿದಿತ್ತು. ಕ್ರೇನಿಯಲ್ ಗಾಯದ ಜಾಗ ಮತ್ತು ದೇಹದ ಬದಿಯ ಸಂಬಂಧವನ್ನೂ ಡಾಕ್ಯುಮೆಂಟ್‍ನಲ್ಲಿ ದಾಖಲಿಸಲಾಗಿದೆ.

ಈಜಿಪ್ಟ್‌ನವರಿಗೆ ಮಾನವ ಅಂಗ ರಚನಾಶಾಸ್ತ್ರದ ಬಗ್ಗೆ ಪರಿಶುದ್ಧ ಜ್ಞಾನವಿತ್ತು ಎಂಬುದನ್ನು ಪ್ಯಾಪಿರಸ್ ತೋರಿಸುತ್ತದೆ. ವಿಲಿಯಂ ಹಾರ್ವೆ ರಕ್ತ ಪರಿಚಲನೆಯನ್ನು ಕಂಡು ಹಿಡಿಯುವ ನಾಲ್ಕು ಸಹಸ್ರಮಾನಗಳ ಮೊದಲೇ ರಕ್ತವು ನಾಳಗಳ ಮೂಲಕ ದೇಹದಲ್ಲಿ ಪ್ರವಹಿಸುತ್ತದೆ ಎಂದು ಅವರಿಗೆ ತಿಳಿದಿತ್ತು. ಆದರೆ, ಏಕೆ ಎನ್ನುವುದು ಗೊತ್ತಿರಲಿಲ್ಲ. ಹೆರೋಫಿಲಸ್, ಎರಾಸಿಸ್ಟ್ರಾಟಸ್ ಮತ್ತು ಹಿಫೋಕ್ರೆಟಿಸ್ ನಂತಹ ಪ್ರಾಚೀನ ವೈದ್ಯರ ಕೃತಿಗಳ ಮೂಲಕ ಮಾನವ ದೇಹದ ಬಗ್ಗೆ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಲು ಇನ್ನೂ ಸಾವಿರ ವರ್ಷಗಳು ಬೇಕಾಯಿತು. ಆದರೂ, ಪ್ಯಾಪಿರಸ್‌ನಲ್ಲಿ ವಿವರಿಸಿದ ಕೆಲವು ಕಾರ್ಯ ವಿಧಾನಗಳು ಹಿಫೊಕ್ರೆಟಿಸ್‌ಗಿಂತಲೂ ಮೀರಿದ ಔಷಧಿಗಳ ಬಗ್ಗೆ ಅವರಿಗಿದ್ದ ಅರಿವಿನ ಮಟ್ಟವನ್ನು ತೋರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT