ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬ್ದಕ್ಕಿಂತ 6 ಪಟ್ಟು ವೇಗದ ರಾಕೆಟ್‌ ಪರೀಕ್ಷೆ ಯಶಸ್ವಿ: ಪ್ರತಿಷ್ಠಿತ ಗುಂಪಿಗೆ ದೇಶ

ನಾಲ್ಕು ರಾಷ್ಟ್ರಗಳ ಪ್ರತಿಷ್ಠಿತ ಗುಂಪು ಸೇರಿದ ಭಾರತ
Last Updated 7 ಸೆಪ್ಟೆಂಬರ್ 2020, 18:37 IST
ಅಕ್ಷರ ಗಾತ್ರ

ನವದೆಹಲಿ: ಶಬ್ದದ ವೇಗಕ್ಕಿಂತ 6 ‍ಪಟ್ಟು (ಮ್ಯಾಕ್‌ 6) ಹೆಚ್ಚು ವೇಗದಲ್ಲಿ ಹಾರುವ ಸಾಮರ್ಥ್ಯವಿರುವ ಉಡ್ಡಯನ ವಾಹನದ(ಎಚ್‌ಎಸ್‌ಟಿಡಿವಿ) ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ನಡೆಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ದೇಶೀಯವಾಗಿ ಇದನ್ನು ಅಭಿವೃದ್ಧಿ
ಪಡಿಸಿದೆ.

ಅತ್ಯಾಧುನಿಕ, ದೀರ್ಘ ವ್ಯಾಪ್ತಿಯ, ಹೆಚ್ಚು ನಿಯಂತ್ರಣ ಅವಕಾಶಗಳಿರುವ ಕ್ಷಿಪಣಿಗಳ ಅಭಿವೃದ್ಧಿ ಮತ್ತು ಉಪಗ್ರಹಗಳ ಉಡ್ಡಯನಕ್ಕೆ ಮರುಬಳಕೆಯ ವಾಹನ ಬಳಕೆಯ ಹೊಸ ಸಾಧ್ಯತೆಗಳನ್ನು ಈ ಯಶಸ್ವೀ ಪರೀಕ್ಷೆಯು ತೆರೆದಿಟ್ಟಿದೆ. ಮರುಬಳಕೆ ವಾಹನ ಅಭಿವೃದ್ಧಿಯಾದರೆ ಉಪಗ್ರಹ ಉಡ್ಡಯನ ವೆಚ್ಚ ಗಣನೀಯವಾಗಿ ತಗ್ಗಲಿದೆ.

ಎಚ್‌ಎಸ್‌ಟಿಡಿವಿ ತಂತ್ರಜ್ಞಾನವುಕ್ಷಿಪಣಿಗಳಿಗೆ ಅಗಾಧ ವೇಗವನ್ನು ಒದಗಿಸಲಿದೆ (ಸೆಕೆಂಡ್‌ಗೆ 2 ಕಿಲೋಮೀಟರ್). ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಈವರೆಗೆ ಈ ತಂತ್ರಜ್ಞಾನವನ್ನು ಹೊಂದಿದ್ದವು.

ಮ್ಯಾಕ್ 3ರವರೆಗಿನ ವೇಗದ ಸೂಪರ್‌ಸಾನಿಕ್‌ ವಾಹಕದಲ್ಲಿ ರ್‍ಯಾಮ್‌ಜೆಟ್ ಎಂಜಿನ್‌ಗಳು ಕಾರ್ಯನಿರ್ವಹಿಸುತ್ತವೆ. ಆದರೆ, ಎಚ್‌ ಎಸ್‌ಟಿಡಿವಿಯ ವೇಗ ಮ್ಯಾಕ್ 6 ಆಗಿರುವುದರಿಂದ, ಇಲ್ಲಿ ಸ್ಕ್ರ್ಯಾಮ್‌ಜೆಟ್ ಎಂಜಿನ್‌ ಬಳಕೆ ಮಾಡಲಾಗಿದೆ.

ಒಡಿಶಾದ ವೀಲರ್ ದ್ವೀಪದಲ್ಲಿರುವ ಎಪಿಜೆ ಅಬ್ದುಲ್ ಕಲಾಂ ಉಡ್ಡಯನ ಕೇಂದ್ರದಿಂದ ಸೋಮವಾರ ಬೆಳಗ್ಗೆ 11 ಗಂಟೆಗೆ ಪರೀಕ್ಷೆ ನಡೆಯಿತು. ಕಳೆದ ವರ್ಷ ನಡೆಸಿದ ಪರೀಕ್ಷೆ ನಿರೀಕ್ಷಿತ ಯಶಸ್ಸು ನೀಡಿರಲಿಲ್ಲ.

ವಿಜ್ಞಾನಿಗಳ ಈ ಸಾಧನೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ. ಇದೊಂದು ಮೈಲಿಗಲ್ಲು ಎಂದು ಬಣ್ಣಿಸಿರುವ ಅವರು, ಪ್ರಧಾನಿ
ನರೇಂದ್ರ ಮೋದಿ ಅವರ ಆತ್ಮನಿರ್ಭರ ಅಭಿಯಾನ ಸಾಕಾರಗೊಳಿಸುವಲ್ಲಿ ಇದು ಮಹತ್ವದ ಹೆಜ್ಜೆ ಎಂದಿದ್ದಾರೆ.

ಪರೀಕ್ಷೆ ಏಕೆ ಮುಖ್ಯ?

lಭಾರತವು ಹೆಚ್ಚು ಸಂಕೀರ್ಣ ತಂತ್ರಜ್ಞಾನದ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಮ್ಯಾಕ್‌ 6ಕ್ಕಿಂತ ಹೆಚ್ಚು ವೇಗದ ವಾಹನಗಳ ತಯಾರಿಕೆಗೆ ಇದು ಅಡಿಪಾಯವಾಗಲಿದೆ

lದೀರ್ಘಶ್ರೇಣಿಯ ಕ್ರೂಸ್ ಕ್ಷಿಪಣಿಗಳು ಮತ್ತು ಮರುಬಳಕೆಯ ಬಾಹ್ಯಾಕಾಶ ವಾಹನಗಳ ಅಭಿವೃದ್ಧಿಗೆ ಈ ತಂತ್ರಜ್ಞಾನ ಅಡಿಪಾಯವಾಗಿರುತ್ತದೆ

lಈಗ ಲಭ್ಯ ಇರುವ ಎಲ್ಲ ರೀತಿಯ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಭೇದಿಸಿ ಸಾಗುವ ಸಾಮರ್ಥ್ಯವು ಹೈಪರ್‌ಸಾನಿಕ್‌ ವಾಹಕಕ್ಕೆ ಇದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT