ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷರಿಗೂ ಬರಲಿದೆ ಗರ್ಭನಿರೋಧಕ ಚುಚ್ಚುಮದ್ದು: ಜಗತ್ತಿನ ಮೊದಲ ಪ್ರಯೋಗ ಯಶಸ್ವಿ

Published 19 ಅಕ್ಟೋಬರ್ 2023, 13:42 IST
Last Updated 19 ಅಕ್ಟೋಬರ್ 2023, 13:42 IST
ಅಕ್ಷರ ಗಾತ್ರ

ನವದೆಹಲಿ: ‘ಪುರುಷರಿಗಾಗಿ ಸಿದ್ಧಪಡಿಸಿರುವ ಗರ್ಭನಿರೋಧಕ ಚುಚ್ಚುಮದ್ದಿನ ಪ್ರಾಯೋಗಿಕ ಪರೀಕ್ಷೆ ಜಗತ್ತಿನಲ್ಲೇ ಮೊದಲ ಬಾರಿಗೆ ನಡೆದಿದ್ದು, ಯಾವುದೇ ಅಡ್ಡ ಪರಿಣಾಮಗಳಿಲ್ಲದ ಇದು ಹೆಚ್ಚು ಪರಿಣಾಮಕಾರಿ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ಹೇಳಿದೆ.

ಚುಚ್ಚುಮದ್ದಿನ ಮೂರನೇ ಹಂತರ ಕ್ಲಿನಿಕಲ್ ಟ್ರಯಲ್‌ನಲ್ಲಿ 25ರಿಂದ 40ರ ವಯೋಮಾನದ 303 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಈ ಕುರಿತು ಸಂಶೋಧನಾ ವರದಿ ಆ್ಯಂಡ್ರಾಲಜಿ ಎಂಬ ಅಂತರರಾಷ್ಟ್ರೀಯ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿದೆ.

ಐಸಿಎಂಆರ್‌ ಸಹಯೋಗದಲ್ಲಿ ನವದೆಹಲಿ, ಉಧಮ್‌ಪುರ್, ಲುಧಿಯಾನ, ಜೈಪುರ ಹಾಗೂ ಖರಗ್‌ಪುರದ ಆಯ್ದ ಆಸ್ಪತ್ರೆಗಳಲ್ಲಿ ಈ ಮೂರನೇ ಹಂತದ ಪ್ರಯೋಗ ನಡೆಸಲಾಗಿದೆ. ಪ್ರಯೋಗ ನಡೆಸಲು ಭಾರತೀಯ ಔಷಧ ನಿಯಂತ್ರಕ ಜನರಲ್‌ (ಡಿಸಿಜಿಐ) ಅನುಮತಿಸಿತ್ತು.

ಪ್ರಸ್ತುತ ರೂಢಿಯಲ್ಲಿರುವ ವ್ಯಾಸೆಕ್ಟಮಿ, ಪರಿಣಾಮಕಾರಿಯಾದ ಗರ್ಭ ನಿರೋಧಕ ವಿಧಾನವಾಗಿದೆ. ಆದರೆ, ಈ ವಿಧಾನದಲ್ಲಿಯೂ ಹಲವು ಮಿತಿಗಳಿರುವುದರಿಂದ ಸುಧಾರಿತ ಗರ್ಭ ನಿರೋಧಕ ಔಷಧಿಯನ್ನು ಅಭಿವೃದ್ಧಿಪಡಿಸಬೇಕಾಯಿತು. ಒಂದು ಬಾರಿ ನೀಡಲಾಗುವ ಈ ಇಂಜೆಕ್ಷನ್‌ ದೀರ್ಘಕಾಲದ ವರೆಗೆ ಪರಿಣಾಮವನ್ನು ಹೊಂದಿರುತ್ತದೆ. ಜೊತೆಗೆ ನಿರ್ಲಕ್ಷಿಸಬಹುದಾದಷ್ಟು ಅಡ್ಡ ಪರಿಣಾಮಗಳು ಕಂಡುಬರುತ್ತವೆ ಎಂದೂ ಐಸಿಎಂಆರ್‌ ಹೇಳಿದೆ.

ಕುಟುಂಬ ಯೋಜನೆ ಕ್ಲಿನಿಕ್‌ಗಳಿಗೆ ಬಂದ ಹಾಗೂ ಪ್ರಯೋಗಕ್ಕೆ ಒಪ್ಪಿಗೆ ಸೂಚಿಸಿದ ಆರೋಗ್ಯವಂತ ದಂಪತಿ ಈ ಪರೀಕ್ಷೆಗೆ ಒಳಪಟ್ಟರು. ಪುರುಷರಿಗೆ 60 ಮಿಲಿ ಗ್ರಾಂ ಔಷಧವುಳ್ಳ ಚುಚ್ಚುಮದ್ದನ್ನು ನೀಡಲಾಯಿತು. ಇದು ವೀರ್ಯದ ಹಿಮ್ಮುಖ ಪ್ರತಿಬಂಧದ ಕಾರ್ಯ ಮಾಡಲಿದೆ. ಚುಚ್ಚುಮದ್ದು ಪಡೆದವರಲ್ಲಿ ಶೇ 99.02ರಷ್ಟು ಗರ್ಭ ನಿಯಂತ್ರಣ ಯಶಸ್ವಿಯಾಗಿದೆ ಎಂದು ಅಧ್ಯಯನ ಹೇಳಿದೆ.

‘ಗರ್ಭಧಾರಣೆ ತಡೆಯಲು ಪುರುಷರಿಗಾಗಿ ಚುಚ್ಚುಮದ್ದು ಸಿದ್ಧಪಡಿಸುವ ಗುರಿಯು ಸಾಕಾರಗೊಂಡಂತಾಗಿದೆ. ಇದು ಹಾರ್ಮೊನುಗಳ ಮೇಲೆ ಯಾವುದೇ ಪರಿಣಾಮ ಬೀರದು’ ಎಂದು ಅಧ್ಯಯನ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT