ಭಾನುವಾರ, ಸೆಪ್ಟೆಂಬರ್ 19, 2021
29 °C
ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ಸಾಧನೆ: ‘ಕ್ಯಾನ್ಸರ್‌ ರಿಪೋರ್ಟ್‌’ನಲ್ಲಿ ಪ್ರಕಟ

ಚರ್ಮದ ಕ್ಯಾನ್ಸರ್‌ ಚಿಕಿತ್ಸೆಗೆ ‘ಅಯಸ್ಕಾಂತೀಯ ಬ್ಯಾಂಡೇಜ್’‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Skin cancer

ಬೆಂಗಳೂರು: ಚರ್ಮದ ಕ್ಯಾನ್ಸರ್‌ಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಅಯಸ್ಕಾಂತೀಯ ನ್ಯಾನೋ ಎಳೆಗಳನ್ನು ಒಳಗೊಂಡ(ಮ್ಯಾಗ್ನೆಟಿಕ್‌ ನ್ಯಾನೊಫೈಬರ್) ಬ್ಯಾಂಡೇಜ್‌ ಅನ್ನು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಚರ್ಮ ಕ್ಯಾನ್ಸರ್‌ನ ಗಡ್ಡೆಯ ಕೋಶಗಳಿಗೆ ಈ ಬ್ಯಾಂಡೇಜ್‌ನಲ್ಲಿರುವ ಅಯಸ್ಕಾಂತೀಯ ನ್ಯಾನೊ ಎಳೆಗಳು ಶಾಖವನ್ನು ನೀಡಿ ಕೊಲ್ಲುವ ಕೆಲಸ ಮಾಡುತ್ತವೆ. ಈ ಚಿಕಿತ್ಸೆಯ ಕುರಿತ ಸಂಶೋಧನಾ ಲೇಖನವು ಅಂತರರಾಷ್ಟ್ರೀಯ ಜರ್ನಲ್‌ ‘ಕ್ಯಾನ್ಸರ್‌ ರಿಪೋರ್ಟ್‌’ನಲ್ಲಿ ಪ್ರಕಟವಾಗಿದೆ.

ಚರ್ಮದ ಕ್ಯಾನ್ಸರ್‌ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನಿಸಿದೆ. ಮುಖ್ಯವಾಗಿ ಸೂರ್ಯನ ನೇರಳೆ ವರ್ಣದ ಕಿರಣಗಳಿಗೆ ಮೈಯ್ಯನ್ನು ಒಡ್ಡಿಕೊಂಡಾಗ, ಈ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಸದ್ಯಕ್ಕೆ ಚರ್ಮ ಕ್ಯಾನ್ಸರ್‌ಗೆ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ ಮತ್ತು ಕಿಮೋಥೆರಪಿ ನೀಡಲಾಗುತ್ತಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ‘ಸೆಂಟರ್‌ಫಾರ್‌ ಬಯೊ ಸಿಸ್ಟಮ್ ಅಂಡ್‌ ಎಂಜಿನಿಯರಿಂಗ್‌ ಮಾಲೆಕ್ಯುಲಾರ್‌ ರಿಪ್ರೊಡಕ್ಷನ್‌‌, ಡೆವಲಪ್‌ಮೆಂಟ್‌ ಅಂಡ್‌ ಜೆನಿಟಿಕ್ಸ್‌’ ವಿಭಾಗದ ಕೌಶಿಕ್‌ ಸುನೀತ್‌ ಮತ್ತು ಶಿಲ್ಪಿ‌ ಜೈನ್‌ ನೇತೃತ್ವದ ತಂಡ ಈ ವಿಶಿಷ್ಟ ಬ್ಯಾಂಡೇಜ್‌ ಅನ್ನು ಅಭಿವೃದ್ಧಿಪಡಿಸಿದೆ.

‘ಎಲೆಕ್ಟ್ರೋಸ್ಪಿನ್ನಿಂಗ್‌’ ವಿಧಾನವನ್ನು ಅನುಸರಿಸಿ,  ಬ್ಯಾಂಡೇಜ್‌ ಅಭಿವೃದ್ಧಿಪಡಿಸಲಾಗಿದೆ. ಕಬ್ಬಿಣದ ಆಕ್ಸೈಡ್‌ನಿಂದ ತಯಾರಿಸಿದ ನ್ಯಾನೋ ಕಣಗಳನ್ನು ಇದಕ್ಕೆ ಬಳಸಲಾಗಿದೆ. ಜೈವಿಕವಾಗಿ ಕರಗಬಲ್ಲ ಪಾಲಿಮರ್‌ ಪಾಲಿಕಾಪ್ರೊಲಾಕ್ಟೊನ್‌ ಅನ್ನು ಸರ್ಜಿಕಲ್‌ ಟೇಪ್‌ ಮೇಲೆ ಲೇಪಿಸಲಾಗುತ್ತದೆ. ಕಾಂತೀಯ ಕ್ಷೇತ್ರದ ಮೇಲೆ ಪ್ರಬಲವಾಗಿ ಆರ್ತನಗೊಂಡಾಗ ಶಾಖ ಉತ್ಪತ್ತಿಯಾಗುತ್ತದೆ.

ಅಯಸ್ಕಾಂತೀಯ ಬ್ಯಾಂಡೇಜ್‌ನಿಂದ ಸೃಷ್ಟಿಯಾಗುವ ಶಾಖವು ಕ್ಯಾನ್ಸರ್‌ ಕೋಶಗಳನ್ನು ನಿಜಕ್ಕೂ ನಾಶಪಡಿಸುತ್ತವೆಯೇ ಎಂಬುದನ್ನು ಪತ್ತೆ ಮಾಡಲು ವಿಜ್ಞಾನಿಗಳ ತಂಡವು ಎರಡು ಬಾರಿ ಪ್ರಯೋಗ ನಡೆಸಿತು. ಮೊದಲನೆ ಪರೀಕ್ಷೆಯನ್ನು ಮಾನವನ ಕ್ಯಾನ್ಸರ್‌ ಕೋಶಗಳ ಮೇಲೂ, ಎರಡನೇ ಪ್ರಯೋಗ ಇಲಿಯ ಚರ್ಮ ಕ್ಯಾನ್ಸರ್‌ ಕೋಶಗಳ ಮೇಲೆ ನಡೆಸಲಾಯಿತು. ಎರಡರಲ್ಲೂ ಕೃತಕವಾಗಿ ಚರ್ಮದ ಕ್ಯಾನ್ಸರ್‌ ಸೃಷ್ಟಿಸಿ ಪ್ರಯೋಗಕ್ಕೆ ಒಳಪಡಿಸಲಾಯಿತು. ಎರಡೂ ಪ್ರಯೋಗಗಳಲ್ಲೂ ಕ್ಯಾನ್ಸರ್‌ ಕೋಶಗಳನ್ನು ನಾಶಪಡಿಸುವಲ್ಲಿ ಅಯಸ್ಕಾಂತೀಯ ಬ್ಯಾಂಡೇಜ್‌ ಯಶಸ್ವಿಯಾಯಿತು.

‘ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಆರೋಗ್ಯಪೂರ್ಣವಾದ ಕೋಶಗಳಿಗೆ ಯಾವುದೇ ರೀತಿಯಲ್ಲೂ ಘಾಸಿ ಆಗಿರಲಿಲ್ಲ. ಶಾಖದಿಂದ ಸುಟ್ಟ ಅಥವಾ ಪೆಡುಸಾದ ಲಕ್ಷಣಗಳು ಕಂಡುಬರಲಿಲ್ಲ’ ಎಂದು ಸುನೀತ್‌ ಹೇಳಿದರು.

‘ಶಾಖ ಹೆಚ್ಚಾದ ಸಂದರ್ಭದಲ್ಲಿ ಕ್ಯಾನ್ಸರ್‌ ಕೋಶದೊಳಗಷ್ಟೇ ಶಾಖವು ತೂರಿಕೊಂಡು ಕ್ಯಾನ್ಸರ್‌ ಗಡ್ಡೆಯನ್ನು ನಾಶಪಡಿಸಿತು. ಆರೋಗ್ಯವಂತ ಕೋಶಗಳಲ್ಲಿ ಉಷ್ಣಾಂಶ ಸಾಮಾನ್ಯವಾಗಿ ಉಳಿದಿತ್ತು. ಹೀಗಾಗಿ ಅವುಗಳಿಗೆ ಯಾವುದೇ ಹಾನಿ ಉಂಟಾಗಲಿಲ್ಲ. ಆರೋಗ್ಯಪೂರ್ಣ ಕೋಶಗಳ ಬಂಧ ಹಾಗೆಯೇ ಉಳಿದಿತ್ತು’ ಎಂದು ಜೈನ್‌ ತಿಳಿಸಿದರು.

‘ಪ್ರಯೋಗಾಲಯದಲ್ಲಿ ನಡೆಸಿದ ಪ್ರಯೋಗಗಳಿಂದ ಚರ್ಮದ ಕ್ಯಾನ್ಸರ್‌ಗೆ ಇದು ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಎಂಬುದು ನಿರೂಪಿತವಾಗಿದೆ. ಈ ಪ್ರಯೋಗ ಇನ್ನು ಪ್ರಾಥಮಿಕ ಹಂತದ್ದಾಗಿದ್ದು, ಮುಂದಿನ ದಿನಗಳಲ್ಲಿ ಕ್ಲಿನಿಕಲ್‌ ಪ್ರಯೋಗಗಳಿಗೆ ಒಳಪಡಿಸಬೇಕಾಗಿದೆ. ಆ ಬಳಿಕವೇ ಚಿಕಿತ್ಸೆಗೆ ಬಳಸಬಹುದಾಗಿದೆ’ ಎಂದು ಕೌಶಿಕ್‌ ಮತ್ತು ಶಿಲ್ಪಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು