ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಂತ್ರಜ್ಞಾನ: ಮಂಡಿಮೂಳೆಯ ಕೂಡಿಕೆಗೊಂದು ‘ಉಂಡಿ’

Published : 13 ಆಗಸ್ಟ್ 2024, 22:04 IST
Last Updated : 13 ಆಗಸ್ಟ್ 2024, 22:04 IST
ಫಾಲೋ ಮಾಡಿ
Comments

ಮಂಡಿಗಳು ನಮ್ಮ ದೇಹವನ್ನು ಹೊರುವುದಕ್ಕೂ ಚಲನೆಗೂ ಬೇಕಾಗಿರುವ ಅತಿಮುಖ್ಯ ಅಂಗ. ಮಂಡಿಗಳು ಸುಲಭವಾಗಿ ಚಲಿಸಲು ಸಹಾಯವಾಗುವಂತೆ ಕಾರ್ಟಿಲೇಜು ಮೂಳೆಗಳಿರುತ್ತವೆ. ಇವು ನಮ್ಮ ದೇಹದ ಎಲ್ಲ ಸಂಧುಗಳಲ್ಲಿಯೂ ಇವೆ.

ಕಾರ್ಟಿಲೇಜು ಮೂಳೆಗಳಲ್ಲಿ ನೈಸರ್ಗಿಕ ಪಾಲಿಮರುಗಳಾದ ‘ಕೊಲಾಜೆನ್’ ಮತ್ತು ‘ಪ್ರೊಟಿಯೋಗ್ಲೈಕಾನ್‌’ಗಳು ಇರುತ್ತವೆ. ನೋವಿಲ್ಲದಂತೆ ನಮ್ಮ ಕೈಕಾಲುಗಳನ್ನು ಸುಲಭವಾಗಿ ಚಲಿಸಲು, ಅವುಗಳಿಂದ ಕೆಲಸ ಮಾಡಲು ಇದರಿಂದ ಸಹಾಯವಾಗುತ್ತದೆ. ನಮ್ಮ ಕಿವಿ ಹಾಗೂ ಮೂಗುಗಳು ಈ ಕಾರ್ಟಿಲೇಜು ಮೂಳೆಗಳಿಂದಲೇ ಮಾಡಲ್ಪಟ್ಟಿರುವುದು. ಈ ಸಂಧುಗಳಲ್ಲಿರುವ ಕಾರ್ಟಿಲೇಜು ಮೂಳೆಗಳು, ವಯಸ್ಸಾಗುತ್ತಿದ್ದಂತೆ ಅಥವಾ ಹೆಚ್ಚೆಚ್ಚು ಬಳಸುತ್ತಿದ್ದಂತೆ ಹರಿಯುವ ಸಾಧ್ಯತೆ ಹೆಚ್ಚು.

ಇವು ಎಷ್ಟು ದುರ್ಬಲವಾಗಿದೆ ಎನ್ನುವುದರ ಆಧಾರದ ಮೇಲೆ ಗುಣಮುಖವಾಗುವ ಸಮಯವೂ ವ್ಯತ್ಯಾಸವಾಗುತ್ತದೆ. ಆದರೆ ಮಂಡಿಯ ಕಾರ್ಟಿಲೇಜು ಮೂಳೆಯನ್ನು ವೇಗವಾಗಿ ಹಾಗೂ ಯಶಸ್ವಿಯಾಗಿ ಪುನಃಶ್ಚೇತನಗೊಳಿಸುವ ಹೊಸದಾದ ಜೈವಿಕಕ್ರಿಯಾಶೀಲ ವಸ್ತುವೊಂದನ್ನು ನಾರ್ತ್ ವೆಸ್ಟರ್ನ್ ಯೂನಿವರ್ಸಿಟಿಯ ವಿಜ್ಞಾನಿಗಳಾದ ಸ್ಯಾಮ್ಯುಯೆಲ್ ಐ ಸ್ಟುಪ್ ಮತ್ತು ಸಂಗಡಿಗರು ಅಭಿವೃದ್ಧಿ ಪಡಿಸಿದ್ದಾರೆ.

ಒಮ್ಮೆ ಈ ‘ಕಾರ್ಟಿಲೇಜು’ ಮೂಳೆಗಳು ದುರ್ಬಲವಾದರೆ ಅಥವಾ ಮುರಿದರೆ ಅದು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮವನ್ನು ಉಂಟುಮಾಡುತ್ತದೆ. ವಯಸ್ಕರಲ್ಲಿ ಇವು ಸಹಜವಾಗಿ ಪುನಃಶ್ಚೇತನಗೊಳ್ಳಲಾರವು. ಅಕಸ್ಮಾತ್‌ ನಮ್ಮ ಚರ್ಮ ಹರಿದರೆ ಅದು ಕೆಲವು ದಿನಗಳಲ್ಲಿಯೇ ಮರುಬೆಳವಣಿಗೆ ಆಗಿಬಿಡುತ್ತದೆ. ಈ ಕಾರ್ಟಿಲೇಜು ಮೂಳೆಗಳು ಮೃದುವಾಗಿದ್ದರೂ ಅವಕ್ಕೆ ಸ್ವಾಭಾವಿಕವಾಗಿ ಪುನಃಶ್ಚೇತನಗೊಳ್ಳುವ ಗುಣಗಳಿರುವುದಿಲ್ಲ. ಆದರೆ ಸ್ಯಾಮ್ಯುಯೆಲ್ ಅವರು ಅಭಿವೃದ್ದಿಪಡಿಸಿರುವ ಹೊಸ ಥೆರಪಿಯು ಕಾರ್ಟಿಲೇಜು ಮೂಳೆಗಳನ್ನು ಸ್ವಾಭಾವಿಕವಾಗಿ ಮರುಬೆಳವಣಿಗೆ ಆಗುವಂತೆ ಮಾಡುತ್ತದೆಯಂತೆ.

ಈ ಹೊಸ ವಸ್ತುವು ನೋಡಲು ರಬ್ಬರಿನಂತಿದ್ದು, ಆಣ್ವಿಕ ವಸ್ತುಗಳ ಸಂಕೀರ್ಣವಾದ ಜಾಲವ್ಯವಸ್ಥೆಯಂತಿದೆ. ಇವು ನಮ್ಮ ದೇಹದಲ್ಲಿರುವ ಕಾರ್ಟಿಲೇಜು ಮೂಳೆಗಳ ಲಕ್ಷಣಗಳನ್ನೇ ಹೊಂದಿದ್ದು, ಅವು ಮಾಡುವ ಕಾರ್ಯಗಳನ್ನು ಸುಲಭವಾಗಿ ಮಾಡುತ್ತವೆ. ವಿಜ್ಞಾನಿಗಳು ಈ ವಸ್ತುವನ್ನು ಕುರಿಯ ದುರ್ಬಲವಾಗಿರುವ ಮಂಡಿಮೂಳೆಯ ಜೊತೆ ಕೂಡಿಸಿ ಪರೀಕ್ಷಿಸಿದ್ದಾರೆ. ಆರು ತಿಂಗಳೊಳಗೇ ಈ ಮೂಳೆಗಳು ಗುಣವಾಗಿದ್ದು, ಪ್ರಾಣಿಯ ದೇಹದಲ್ಲಿನ ಕಾರ್ಟಿಲೇಜು ಮೂಳೆಯಲ್ಲಿಯೂ ಬೆಳೆವಣಿಗೆ ಕಂಡುಬಂದಿತ್ತಂತೆ. ಭವಿಷ್ಯದಲ್ಲಿ ಈ ವಸ್ತುವನ್ನು ಮಂಡಿಮೂಳೆಯನ್ನು ಬದಲಿಸುವಂತಹ ಸನ್ನಿವೇಶಗಳಲ್ಲಿ, ‘ಆಸ್ಟಿಯೋ ಆರ್ಥ್ರೈಟಿಸ್’ನಂತಹ ರೋಗಿಗಳಲ್ಲಿ ಮತ್ತು ಆಟಗಾರರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ‘ಆ್ಯಂಟಿರಿಯರ್ ಕ್ರೂಶಿಯೇಟ್ ಲಿಗಮೆಂಟ್ ಟೇರ್’ನಂತಹ ಸಮಸ್ಯೆಗಳನ್ನು ಗುಣಪಡಿಸಲು ಒಂದು ಸಮರ್ಥ ಸಾಧನವಾಗಿ ಬಳಸಬಹುದಂತೆ.

ಈ ಹಿಂದೆ ಕಾರ್ಟಿಲೇಜು ಮೂಳೆಗಳನ್ನು ಸಕ್ರಿಯಗೊಳಿಸಲು ‘ಡಾನ್ಸಿಂಗ್’ ಅಣುಗಳನ್ನು ಬಳಸಲಾಗುತ್ತಿತ್ತು. ಡಾನ್ಸಿಂಗ್ ಅಣುಗಳು ಅಂದರೆ ಇನ್ನೇನಲ್ಲ; ಹತ್ತರಿಂದ ಸಾವಿರಾರು ಅಣುಗಳಿರುವ, ಜೀವಕೋಶಗಳಿಗೆ ಸಂದೇಶಗಳನ್ನು ನೀಡಬಲ್ಲಂತಹ ‘ನ್ಯಾನೋಫೈಬರು’ಗಳು. ಇವು ಅಂಗಾಂಶಗಳನ್ನು ವೃದ್ಧಿಸುವ ಪ್ರೊಟೀನುಗಳ ಉತ್ಪಾದನೆಯನ್ನು ಸಕ್ರಿಯಗೊಳಿಸುತ್ತವೆ. ಆದರೆ ಸ್ಯಾಮ್ಯುಯೆಲ್ ಮತ್ತು ಸಂಗಡಿಗರು ಈ ಡ್ಯಾನ್ಸಿಂಗ್ ಅಣುಗಳ ಬದಲಿಗೆ, ಹೊಸದಾದ ಹೈಬ್ರಿಡ್ ಜೈವಿಕ ವಸ್ತುವೊಂದನ್ನು ರೂಪಿಸಿದ್ದಾರೆ. ಇದು ಎರಡು ಅಂಶಗಳನ್ನು ಒಳಗೊಂಡಿದೆ. ಒಂದು, ಬೆಳವಣಿಗೆಯನ್ನು ವೃದ್ದಿಸುವ ಹಾಗೂ ನಿರ್ವಹಿಸುವ ‘ಬೀಟಾ-1’ ಪ್ರೊಟೀನಿಗೆ ಬೆಸೆದುಕೊಳ್ಳಬಲ್ಲ ಜೈವಿಕ ಕ್ರಿಯಾಶೀಲ ‘ಪೆಪ್ಟೈಡ್‌’. ಮತ್ತೊಂದು, ರಾಸಾಯನಿಕವಾಗಿ ಮಾರ್ಪಡಿಸಿದ ‘ಹಯಲಾರಿನಿಕ್’ ಆಮ್ಲ. ಇದು ಸಂಧುಗಳಲ್ಲಿನ ಕೀಲೆಣ್ಣೆಯಲ್ಲಿರುವ ನೈಸರ್ಗಿಕ ‘ಪಾಲಿಸ್ಯಾಕರೈಡ್‌’ ಅಥವಾ ಸಕ್ಕರೆಯ ಅಂಶ. ಈ ಹಯಲರಾನಿಕ್ ಆಮ್ಲವನ್ನು ಚರ್ಮದ ರಕ್ಷಣಾ ಉತ್ಪನ್ನಗಳಲ್ಲಿ ಬಳಸುವುದರಿಂದ ಬಹಳಷ್ಟು ಜನರಿಗೆ ಇದರ ಪರಿಚಯವಿರುತ್ತದೆ. ಮಿದುಳು ಮತ್ತು ಕೀಲುಗಳು ಸೇರಿದಂತೆ ಮನುಷ್ಯನ ದೇಹದಾದ್ಯಂತ ಅನೇಕ ಅಂಗಗಳಲ್ಲಿ ಈ ಆಮ್ಲವು ಸ್ವಾಭಾವಿಕವಾಗಿಯೇ ಕಂಡುಬರುತ್ತದೆ. ಕಾರ್ಟಿಲೇಜುಗಳಲ್ಲಿ ಇರುವ ಸ್ವಾಭಾವಿಕ ಪಾಲಿಮರುಗಳನ್ನು ಈ ಆಮ್ಲವು ಹೋಲುವುದರಿಂದ ಇದನ್ನು ಕಾರ್ಟಿಲೇಜು ಮೂಳೆಗಳ ವೃದ್ಧಿಕಾರ್ಯಕ್ಕಾಗಿ ಬಳಸಿಕೊಳ್ಳಲಾಗಿದೆ.

ಜೈವಿಕ ಕ್ರಿಯಾಶೀಲ ಪೆಪ್ಟೈಡು ಹಾಗೂ ರಾಸಾಯನಿಕವಾಗಿ ಮಾರ್ಪಡಿಸಿದ ಹಯಲರಾನಿಕ್ ಆಮ್ಲಗಳು ಸೇರಿ, ನ್ಯಾನೋಫೈಬರುಗಳನ್ನು ತನ್ನಂತಾನೇ ಜಾಲದಂತೆ ಹೆಣೆದುಕೊಂಡು ನೈಸರ್ಗಿಕ ಕಾರ್ಟಿಲೇಜಿನಂತೆಯೇ ಇರುವ ರಚನೆಯನ್ನು ಮಾಡುತ್ತದೆ. ಇವು ದೇಹದೊಳಗೆ ಹೋದರೆ ಜೀವಕೋಶಗಳ ಮರುಬೆಳವಣಿಗೆಯನ್ನು ಪ್ರಚೋದಿಸುತ್ತವೆ. 

ಮೊಣಕಾಲಿನ ಕೀಲುಗಳಲ್ಲಿ ಸಮಸ್ಯೆಯಿರುವ ಕುರಿಯನ್ನು ವಿಜ್ಞಾನಿಗಳು ಪ್ರಯೋಗಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಕುರಿಯ ‘ಸ್ಟಿಫಲ್ ಕೀಲು’ (ಮೊಣಕಾಲು) ಮನುಷ್ಯರ ಮಂಡಿಯನ್ನೇ ಹೋಲುತ್ತದೆಯಂತೆ. ಸುಲಭವಾಗಿ ಮರುಬೆಳವಣಿಗೆಯಾಗದಂತಹ ಈ ಮಾದರಿಯನ್ನೇ ಸ್ಯಾಮ್ಯುಯೆಲ್ ಮತ್ತು ತಂಡ ತಾವು ಅಭಿವೃದ್ಧಿಪಡಿಸಿದ ಜೈವಿಕ ವಸ್ತುವನ್ನು ಪರೀಕ್ಷಿಸಲು ಆಯ್ದುಕೊಂಡರು. ದುರ್ಬಲವಾಗಿರುವ ಕಾರ್ಟಿಲೇಜು ಮೂಳೆಗಳಿರುವ ಕೀಲುಗಳಿಗೆ ಇಂಜೆಕ್ಷನ್ ಮೂಲಕ ಈ ವಸ್ತುವನ್ನು ಸೇರಿಸಿದ್ದಾರೆ. ಬಳಿಕ ಆರು ತಿಂಗಳು ಇದರ ಬೆಳವಣಿಗೆಯನ್ನು ಗಮನಿಸಿದ್ದಾರೆ. ಕಾರ್ಟಿಲೇಜು ಮೂಳೆ ಮರುಬೆಳವಣಿಗೆ ಆಗಿರುವುದಷ್ಟೇ ಅಲ್ಲದೆ, ಬಲಶಾಲಿಯಾಗಿರುವುದೂ ಕಂಡುಬಂದಿತ್ತಂತೆ.

ಪ್ರಸ್ತುತ ಮಂಡಿನೋವಿನ ಸಮಸ್ಯೆಗೆ ‘ಮೈಕ್ರೋಫ್ರ್ಯಾಕ್ಚರ್ ಸರ್ಜರಿ’ಯನ್ನು ಮಾಡಲಾಗುತ್ತದೆ. ಈ ವಿಧಾನದಲ್ಲಿ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರೇ ಸಣ್ಣದಾದ ಫ್ರ್ಯಾಕ್ಚರುಗಳನ್ನು ಮಾಡುತ್ತಾರಂತೆ. ಹೀಗೆ ಮಾಡುವುದರಿಂದ ಕಾರ್ಟಿಲೇಜು ಮೂಳೆಗಳ ಬೆಳವಣಿಗೆಗೆ ಅನುಕೂಲ ಆಗುವುದಂತೆ. ಕೆಲವೊಮ್ಮೆ ಕೀಲುಗಳಿಗೆ ಅವಶ್ಯವಾಗಿರುವಂತಹ ‘ಹ್ಯಾಲೈನ್ ಕಾರ್ಟಿಲೇಜು’ಗಳ ಬದಲು ‘ಫೈಬ್ರೋಕಾರ್ಟಿಲೇಜು’ಗಳು, ಅಂದರೆ ನಮ್ಮ ಕಿವಿಗಳಲ್ಲಿರುವ ಮೂಳೆಗಂತಹ ರಚನೆಗಳೂ ರೂಪುಗಳುತ್ತವಂತೆ. ಹ್ಯಾಲೈನ್ ಕಾರ್ಟಿಲೇಜುಗಳನ್ನು ಪುನಃಶ್ಚೇತನಗೊಳಿಸಿದರೆ, ಅದು ‘ವೇರ್ ಅಂಡ್ ಟೇರ್’ ಅನ್ನು ಸಹಿಸಿಕೊಂಡು, ಚಲನೆ ಮತ್ತು ಕೀಲುನೋವಿಗೆ ಸಂಬಂಧಿಸಿದ ಎಲ್ಲ ತೊಂದರೆಗಳನ್ನು ದೀರ್ಘಾವಧಿಯವೆರೆಗೆ ನಿಯಂತ್ರಿಸಬಲ್ಲದಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT