ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನ್ಯೂಟ್ರಾಸ್ಯುಟಿಕಲ್: ಔಷಧವೂ ಹೌದು, ಆಹಾರವೂ

Published 20 ಜೂನ್ 2023, 22:54 IST
Last Updated 20 ಜೂನ್ 2023, 22:54 IST
ಅಕ್ಷರ ಗಾತ್ರ
ಆಹಾರ ಪದಾರ್ಥಗಳಿಂದ ಪ್ರತ್ಯೇಕಿಸಿ, ಶುದ್ಧೀಕರಿಸಿದ, ಪೋಷಕಾಂಶಗಳೆಂದು ಗುರುತಿಸಿಕೊಳ್ಳದ, ಆದರೆ ದೇಹಕ್ಕೆ ಆರೋಗ್ಯಲಾಭಗಳನ್ನು ನೀಡುವ ಸಾರಾಂಶಗಳನ್ನೇ ನ್ಯೂಟ್ರಾಸ್ಯುಟಿಕಲ್‌ ಎಂದು ಕರೆಯಲಾಗುತ್ತದೆ.

ಆರ್ಥಿಕತೆ ಹಾಗೂ ಜೀವನಶೈಲಿಯ ವಿಷಯಕ್ಕೆ ಬಂದಾಗ ನಾವು ಈಗ ಸಾಧಿಸಿರುವುದು ಮಹತ್ತರವಾದದ್ದು. ಹಣದ ಹರಿವು ಹೆಚ್ಚಾದಂತೆಯೇ, ಜೀವನದ ಗುಣಮಟ್ಟ ಸಾಕಷ್ಟು ಸುಧಾರಿಸಿದೆ. ಆದರೆ ಈ ಭೋಗಜೀವನ ಅನೇಕ ಜೀವನಶೈಲಿ ಸಂಬಂಧಿತ ರೋಗಗಳನ್ನೂ ತಂದೊಡ್ಡಿದೆ. ಇಂದಿನ ಬದಲಾಯಿಸಿದ ಜೀವನಶೈಲಿಯ ಹೆಚ್ಚಿನ ಪರಿಣಾಮ ಬೀರಿರುವುದು ನಮ್ಮ ಆಹಾರಶೈಲಿ, ಅರ್ಥಾತ್‌ ಆರೋಗ್ಯದ ಮೇಲೆಯೇ ಎಂದರೆ ತಪ್ಪಾಗಲಾರದು. ಮಕ್ಕಳಿಂದ ದೊಡ್ಡವರತನಕ ಜಂಕ್‌ ಫುಡ್‌ ತಿಂದಾಗ ತೃಪ್ತರಾಗುವಷ್ಟು ಮನೆಯಲ್ಲಿ ಮಾಡಿದ ಊಟ ಅಥವಾ ಹಣ್ಣು-ತರಕಾರಿ ಸೇವಿಸಿದಾಗ ಆಗುವುದಿಲ್ಲ.

ಹೊಟ್ಟೆಬಿರಿಯುವಷ್ಟು ಜಂಕ್‌ ಫುಡ್‌ ತಿನ್ನುವುದರಿಂದ ದೇಹಕ್ಕೆ ಅವಶ್ಯವಾಗಿ ದೊರೆಯಬೇಕಾದ ಪೋಷಕಾಂಶ ಲಭಿಸದೆ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಫಲವಾಗಿ ಆರೋಗ್ಯಸಮಸ್ಯೆಗಳೂ ಸಾಲುಗಟ್ಟಿ ನಿಲ್ಲುತ್ತಿವೆ. ‘ನಿಮ್ಮ ಆಹಾರವೇ ಔಷಧವಾಗಲಿ ಹಾಗೂ ಆ ಔಷಧವೇ ನಿಮ್ಮ ಆಹಾರವಾಗಿರಲಿ’ ಎಂದು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಹಿಪೋಕ್ರೇಟಸ್‌ ಹೇಳಿದ್ದ. ನ್ಯೂಟ್ರಾಸ್ಯುಟಿಕಲ್‌ ಎನ್ನುವ ಹೊಸ ಆಹಾರವರ್ಗವು ಈ ಹೇಳಿಕೆಯನ್ನು ಅದ್ಭುತವಾಗಿ ಸಮರ್ಥಿಸಿಕೊಳ್ಳಬಲ್ಲದು. ಆಹಾರ ಮತ್ತು ಔಷಧ – ಇವೆರೆಡರ ನಡುವಿನ ಗೆರೆಯನ್ನು ಮಂಕಾಗಿಸುವ ಉತ್ತಮ ಖಾದ್ಯೌಷದ ಎನಿಸಿಕೊಳ್ಳಬಲ್ಲವು, ಈ ನ್ಯೂಟ್ರಾಸ್ಯುಟಿಕಲ್‌ಗಳು.

ಹಾಗಾದರೆ ನ್ಯೂಟ್ರಾಸ್ಯುಟಿಕಲ್‌ ಎಂದರೆ ಏನು? ಆಹಾರಪದಾರ್ಥಗಳಿಂದ ಪ್ರತ್ಯೇಕಿಸಿ, ಶುದ್ಧೀಕರಿಸಿದ, ಪೋಷಕಾಂಶಗಳೆಂದು ಗುರತಿಸಿಕೊಳ್ಳದ, ಆದರೆ ದೇಹಕ್ಕೆ ಆರೋಗ್ಯಲಾಭಗಳನ್ನು ನೀಡುವ ಸಾರಾಂಶಗಳನ್ನೇ ನ್ಯೂಟ್ರಾಸ್ಯುಟಿಕಲ್‌ ಎನ್ನಲಾಗುತ್ತದೆ. ಫಾರ್ಮಸ್ಯುಟಿಕಲ್‌ ಮತ್ತು ನ್ಯೂಟ್ರಿಷನ್‌ ಪದಗಳಿಂದ ಹುಟ್ಟಿದ್ದೇ ಈ ನ್ಯೂಟ್ರಾಸ್ಯುಟಿಕಲ್.‌ ಆಹಾರಪದಾರ್ಥಗಳಿಂದ ಬೇರ್ಪಡಿಸಿದ ಒಮೆಗಾ-3 ಕೊಬ್ಬಿನಾಮ್ಲಗಳು, ಕರ್ಕ್ಯುಮಿನ್‌, ಹೈಡ್ರಾಕ್ಸಿ ಸಿಟ್ರಿಕ್‌ ಆಮ್ಲ, ಮುಂತಾದುವು ಹಾಗೂ ಪ್ರೀಬಯಾಟಿಕ್‌ ಹಾಗೂ ಪ್ರೋಬಯಾಟಿಕ್‌ನಂತಹ ವಿಶೇಷ ಪೂರಕ ಆಹಾರಗಳು, ಆ್ಯಂಟಿಆಕ್ಸಿಡೆಂಟುಗಳು, ಸಾರವರ್ಧಿತ ಆಹಾರಪದಾರ್ಥಗಳು ಮತ್ತು ಹರ್ಬಲ್‌ ಉತ್ಪನ್ನಗಳೆಲ್ಲವೂ ನ್ಯೂಟ್ರಾಸ್ಯುಟಿಕಲ್‌ನ ಹಲವು ಬಗೆಗಳು. ಈ ಪೋಷಣಖಾದ್ಯಗಳು ದೀರ್ಘಕಾಲದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸುಧಾರಿಸುವಲ್ಲಿಯೂ ಬಹಳ ಅನುಕೂಲಿ.

‘ಫಂಕ್ಷನಲ್‌ ಫುಡ್‌’ ಎಂದು ಕರೆಯುವ ಸಾರವರ್ಧಿತ ಆಹಾರ ಪದಾರ್ಥಗಳೂ ಇದೇ ಕಾರ್ಯವನ್ನೇ ಮಾಡುತ್ತವೆ. ಅಂದರೆ ನಿರ್ದಿಷ್ಟ ಆಹಾರದಲ್ಲಿರುವ ನಿರ್ದಿಷ್ಟ ಪೋಷಕಾಂಶವನ್ನು ಇನ್ನಷ್ಟು ಸೇರಿಸಿ ಅಥವಾ ಮತ್ತೊಂದು ಪೋಷಕಾಂಶವನ್ನು ಸೇರಿಸಿ, ಸಂಸ್ಕರಿಸಿದ ಆಹಾರವೇ ಫಂಕ್ಷನಲ್‌ ಫುಡ್. ಉದಾಹರಣೆಗೆ, ‘ಗೋಲ್ಡನ್‌ ರೈಸ್‌’ ಎನ್ನುವುದು ತಳಿಸಂವರ್ಧನೆಯ ತಂತ್ರಜ್ಞಾನದಿಂದ ಬೀಟಾ-ಕೆರೋಟೀನು ಉತ್ಪಾದಿಸುವ ಜೀನನ್ನು ಭತ್ತದ ಒಂದು ತಳಿಗೆ ತೂರಿಸಿ ಪಡೆದ ಅಕ್ಕಿ. ಜೀವಸತ್ವ-ಎ ಕೊರತೆಯಿರುವವರಿಗೆ ಹಾಗೂ ಎ-ಜೀವಸತ್ವವುಳ್ಳ ಆಹಾರಗಳನ್ನು ತಿನ್ನದವರಿಗೆ ಅದನ್ನು ಭರಿಸಿಕೊಡುವ ಪ್ರಯತ್ನವೇ ಇದು. ಹೀಗೆ ಫಂಕ್ಷನಲ್‌ ಫುಡ್ ನಮ್ಮ ದೇಹಕ್ಕೆ ಆರೋಗ್ಯವಾಗಿರಲು ಅವಶ್ಯಕವಾದ‌ ಜೀವಸತ್ವ, ಕೊಬ್ಬು, ಪ್ರೊಟೀನು, ಕಾರ್ಬೋಹೈಡ್ರೇಟುಗಳನ್ನು ಭರಿಸಿಕೊಟ್ಟು, ಪೋಷಕಾಂಶಗಳ ಕೊರತೆಯಿಂದುಂಟಾಗುವ ಸಮಸ್ಯೆಗಳನ್ನು ಪರಿಹರಿಸಿದರೆ ಅವನ್ನೇ ನ್ಯೂಟ್ರಾಸ್ಯುಟಿಕಲ್‌ ಎನ್ನುತ್ತೇವೆ.

Prevention is better than cure – ‘ರೋಗದ ಚಿಕಿತ್ಸೆಗಿಂತಲೂ ಅದರ ತಡೆಗಟ್ಟುವಿಕೆಯೇ ಉತ್ತಮ’ – ಎನ್ನುವ ಮಾತನ್ನು ಕೇಳಿದ್ದೀರಲ್ಲವೇ? ಈ ನ್ಯೂಟ್ರಾಸ್ಯುಟಿಕಲ್‌ ಎನ್ನುವ ಪೋಷಕಾಂಶಗಳು ನಮ್ಮ ದಿನನಿತ್ಯದ ಆಹಾರದಲ್ಲಿರಬೇಕಾದ ಪೋಷಕಾಂಶದ ಪ್ರಮಾಣವನ್ನು ಒದಗಿಸಿ, ದೀರ್ಘಕಾಲ ಆರೋಗ್ಯದಿಂದಿರಲು ಸಹಕಾರಿಯಾಗಿರುತ್ತದೆ; ಜೊತೆಗೆ ವೈದ್ಯಕೀಯವಾಗಿ ಮುಂದೆ ಆಗಬಹುದಾದ ಅವ್ಯವಸ್ಥೆಯನ್ನೂ ಇವು ತಡೆಗಟ್ಟಬಲ್ಲವು. ರೋಗಬಂದಮೇಲೆ ಸೇವಿಸುವ ಔಷಧಗಳಿಗಿಂತ ನ್ಯುಟ್ರಾಸ್ಯುಟಿಕಲ್‌ಗಳು ಹೆಚ್ಚು ನೈಸರ್ಗಿಕ ಹಾಗೂ ಆರೋಗ್ಯಕರ. ವಿಶೇಷ ಕಾಳಜಿ ಅಥವಾ ಪೋಷಕಾಂಶದ ಅಗತ್ಯವಿರುವ ವಯಸ್ಸಾದವರಿಗೆ ಹೆಚ್ಚು ಸೂಕ್ತವೂ ಹೌದು. ವಯಸ್ಸಾದ ಮೇಲೆ ಕಾಡುವಂತಹ ಸಂಧಿವಾತ, ನಿದ್ರಾಸಮಸ್ಯೆ, ಜೀರ್ಣಸಮಸ್ಯೆ, ಮೂಳೆ ಸವೆತ, ರಕ್ತದೊತ್ತಡ, ಮನೋರೋಗದಂತಹ ಕಾಯಿಲೆಗಳನ್ನೂ ಗುಣಪಪಡಿಸುವ ಔಷಧಗಳಲ್ಲಿ ನ್ಯೂಟ್ರಾಸ್ಯುಟಿಕಲ್‌ಗಳದ್ದೇ ಹೆಚ್ಚಿನ ಕೊಡುಗೆಯಿದೆ. ಹಾಗಾಗಿಯೇ ಯುರೋಪಿಯನ್‌ ವೈದ್ಯಕೀಯ ಕಾನೂನಿನಲ್ಲಿ ನ್ಯೂಟ್ರಾಸ್ಯುಟಿಕಲ್‌ ಅನ್ನು ಔಷಧವರ್ಗಕ್ಕೇ ಸೇರಿಸಲಾಗಿದೆ. ಆದರೂ ಕೆಲವು ಸಂಸ್ಕರಣಾ ವಿಧಾನಗಳಿಂದಾಗಿ, ಅವನ್ನು ಸೇವಿಸಿದ ನಂತರದ ಅವುಗಳ ಜೈವಿಕ ಲಭ್ಯತೆ ಹಾಗೂ ಪರಿಣಾಮಕಾರಿತ್ವದ ಬಗ್ಗೆ ಸಂಶೋಧನೆಗಳು ನಡೆಯಬೇಕಿದೆ. ಹಾಗಾಗಿ ಔಷಧಗಳಂತೆ ಇವುಗಳಿಗೂ ಕಟ್ಟುನಿಟ್ಟಾದ ನಿಯಂತ್ರಣಗಳಿರಬೇಕಾದ್ದು ಅವಶ್ಯಕ.

ಸದ್ಯ ನ್ಯೂಟ್ರಾಸ್ಯುಟಿಕಲ್‌ಗಳು ಮಾತ್ರೆ, ಕ್ಯಾಪ್ಸ್ಯೂಲ್‌, ಟ್ಯಾಬ್ಲೆಟ್‌, ಪುಡಿ ಅಥವಾ ದ್ರವರೂಪದಲ್ಲಿ ಸೇವಿಸಲು ಲಭ್ಯವಿದೆ. ಇತ್ತೀಚೆಗೆ ಹೊಸದಾದ ‘ಗಮ್ಮೀ’ ಎನ್ನುವ ಮೃದು ಕ್ಯಾಂಡಿರೂಪದಲ್ಲಿ ನ್ಯೂಟ್ರಾಸ್ಯುಟಿಕಲ್‌ಗಳು ಮಾರುಕಟ್ಟೆಗೆ ಬಂದಿವೆ. ಬೇರೆಲ್ಲಾ ಬಗೆಗಿಂತ ಗಮ್ಮೀ ರೂಪದ ನ್ಯೂಟ್ರಾಸ್ಯುಟಿಕಲ್ ಹಿಪೋಕ್ರೇಟಸ್‌ನ ಹೇಳಿಕೆಗೆ ಹೇಳಿಮಾಡಿಸಿದ ಖಾದ್ಯವಾಗುತ್ತದೆ. ಇತ್ತ ಔಷಧವೂ ಅನ್ನಿಸದ, ಅತ್ತ ಸೇವಿಸಿದಾಗ ವಾಕರಿಸುವಂತಹ ಕಹಿಸ್ವಾದವೂ ಇಲ್ಲದ ರುಚಿಯಾದ, ಸ್ವಾದಭರಿತ ಗಮ್ಮೀ ನಮ್ಮ ಪೋಷಕಾಂಶದ ಅವಶ್ಯಕತೆಯನ್ನು ಪೂರೈಸುತ್ತದೆ ಹಾಗೂ ಆರೋಗ್ಯದ ಕಾಳಜಿಯನ್ನೂ ವಹಿಸುತ್ತದೆ. ಮಕ್ಕಳಂತೂ ಚಾಕೋಲೇಟು ತಿನ್ನುವಷ್ಟೆ ಸಲೀಸಾಗಿ, ಖುಷಿಯಾಗಿ ಔಷಧವನ್ನು ಸೇವಿಸಬಿಡಬಹುದು.

ಕೋವಿಡ್‌ ವೈರಸ್ಸಿನ ದಾಳಿಯ ನಂತರ ದೈಹಿಕ ಸದೃಢತೆ, ಆರೋಗ್ಯದ ಪ್ರಾಮುಖ್ಯದ ಬಗ್ಗೆ ಜನರು ಸಾಕಷ್ಟು ಅರಿತಿದ್ದಾರೆ. ವ್ಯಾಯಾಮ ಹಾಗೂ ಆರೋಗ್ಯಕರ ಜೀವನಶೈಲಿಯತ್ತ ಮತ್ತೆ ಪ್ರಾಶಸ್ತ್ಯ ನೀಡಲಾರಂಭಿಸಿದ್ದಾರೆ. ಆರೋಗ್ಯದಿಂದಿರಲು ವ್ಯಾಯಾಮದಷ್ಟೆ ಉತ್ತಮ ಆಹಾರ ಪದ್ದತಿಯೂ ಮುಖ್ಯ ಎಂದು ಕೋವಿಡ್‌ ಮನಗಾಣಿಸಿದೆ. ಕೋವಿಡ್‌ ನಂತರದ ಕಾಲವು ಆರೋಗ್ಯ ನಿರ್ವಹಣೆಗಾಗಿ ಪರ್ಯಾಯವನ್ನು ಹುಡುಕಲು ಕಲಿಸಿದೆ. ಫಲವಾಗಿ ನ್ಯೂಟ್ರಾಸ್ಯುಟಿಕಲ್‌ ಅಥವಾ ಪೋಷಣಖಾದ್ಯಭರಿತ ಆಹಾರಪದಾರ್ಥಗಳಿಗಾಗಿ ಬೇಡಿಕೆ ಈಗ ಹೆಚ್ಚಿದೆ. ಹಾಗಾಗಿ ಸಂಸ್ಕರಿಸಿದ ಆಹಾರ ಮತ್ತು ಜಂಕ್‌ ಫುಡ್‌ನಿಂದ ದೂರ ಸರಿದು ಆರೋಗ್ಯ ನೀಡುವ ನ್ಯೂಟ್ರಾಸ್ಯುಟಿಕಲ್‌ ಉತ್ಪನ್ನಗಳನ್ನು ಜನರು ಸೇವಿಸಲು ಆರಂಭಿಸಿದ್ದಾರೆ. ಹಸಿರುಕ್ರಾಂತಿ, ಕ್ಷೀರಕ್ರಾಂತಿ ಎನ್ನುವಂತೆ ಇದು ನ್ಯೂಟ್ರಾಸ್ಯುಟಿಕಲ್ ಕ್ರಾಂತಿಯ ಸಂದರ್ಭ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT