ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಚಿಕಿತ್ಸೆಗೆ ಅತ್ಯಾಧುನಿಕ ಐಸೊಲೇಷನ್‌ ಸಾಧನ

Last Updated 19 ಮೇ 2020, 19:30 IST
ಅಕ್ಷರ ಗಾತ್ರ

ಕೋವಿಡ್‌ 19 ವೈರಸ್‌ ಹರಡುವಿಕೆಯನ್ನು ತಡೆಗಟ್ಟಲು ರೋಗಿಗಳನ್ನು ಐಸೊಲೇಷನ್ ವಾರ್ಡ್‌ಗಳಲ್ಲಿ ಇರಿಸಲಾಗುತ್ತದೆ.10 ಹಾಸಿಗೆ ಸಾಮರ್ಥ್ಯದ ಅತ್ಯಾಧುನಿಕ ಐಸೊಲೇಷನ್ ವಾರ್ಡ್‌ ಸ್ಥಾಪಿಸಲು ಸುಮಾರು ₹1 ಕೋಟಿ ವೆಚ್ಚವಾಗುತ್ತದೆಯಂತೆ. ಆದರೂ ಇಲ್ಲಿ ಆರೋಗ್ಯ ಸಿಬ್ಬಂದಿ, ವೈದ್ಯರಿಗೆ ಸೋಂಕಿನ ಭಯ ಇದ್ದೇ ಇರುತ್ತದೆ. ಚಂದಾಪುರ– ಆನೇಕಲ್‌ ಮುಖ್ಯರಸ್ತೆಯಲ್ಲಿನ ಅಲಾಯೆನ್ಸ್‌ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಕಡಿಮೆ ವೆಚ್ಚದಲ್ಲಿ ‘ಅಲ್ಟ್ರಾವೈಲೆಟ್‌ ಡಿಸ್‌ಇನ್‌ಫೆಕ್ಟ್‌ಪೋರ್ಟೇಬಲ್ ಐಸೊಲೇಷನ್ ವಾರ್ಡ್’ ಅಭಿವೃದ್ಧಿಪಡಿಸಿದೆ.

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಆರೋಗ್ಯ ಸಿಬ್ಬಂದಿ, ವೈದ್ಯರಿಗೆ ವೈರಸ್‌ ಸೋಂಕು ತಡೆಗಟ್ಟುವ ಉದ್ದೇಶದಿಂದ ಈ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ.ಐಐಟಿ ಖರಗ್‍ಪುರದ ಹಳೆ ವಿದ್ಯಾರ್ಥಿ, ಸದ್ಯ ಅಲಾಯೆನ್ಸ್‌ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ, ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದ ಸದಸ್ಯರಾಗಿರುವ ಡಾ. ಹರಿನಾಥ್ ಐ ರೆಡ್ಡಿ ಹಾಗೂ ಕಾಲೇಜಿನ ಇಂಟರಿಮ್‌ ಡೀನ್‌ ಡಾ. ರೀಬಾಕೊರ ನೇತೃತ್ವದ ಸಂಶೋಧನಾ ವಿದ್ಯಾರ್ಥಿಗಳ ತಂಡವು ಈ ಐಸೋಲೇಶನ್ ವಾರ್ಡ್‍ನ ವಿನ್ಯಾಸವನ್ನು ಅಭಿವೃದ್ಧಿಪಡಿಸಿದೆ. ಹತ್ತು ಹಾಸಿಗೆ ಸಾಮರ್ಥ್ಯದ ಈ ವಾರ್ಡ್‌ಗೆ ತಗುಲುವ ವೆಚ್ಚ ₹7 ಲಕ್ಷ ಎಂದು ತಂಡ ತಿಳಿಸಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ?

‘ಪೋರ್ಟೇಬಲ್ ಐಸೊಲೇಷನ್ ವಾರ್ಡ್’ನಲ್ಲಿ ಪ್ರತಿ ಬೆಡ್‌ಗೂ‘ಅಲ್ಟ್ರಾವೈಲೆಟ್‌ ಡಿಸ್‌ಇನ್‌ಫೆಕ್ಟ್‌ ನೆಗೆಟಿವ್ ಪ್ರೆಷರ್ ಐಸೊಲೇಷನ್ ಚೇಂಬರ್’ (ಯುಡಿಎನ್‍ಪಿಐಸಿ) ಸಾಧನ ಜೋಡಿಸಲಾಗುತ್ತದೆ. ಕೊರೊನಾ ಸೋಂಕಿತ ವ್ಯಕ್ತಿಯ ಮೇಲ್ಭಾಗಕ್ಕೆ ಈ ಸಾಧನವು ಪೂರ್ಣವಾಗಿ ಆವರಿಸುತ್ತದೆ. ಈ ಮೆಷಿನ್ಎರಡು ಚೇಂಬರ್‌ಗಳನ್ನು ಹೊಂದಿದ್ದು, ಒಂದರಲ್ಲಿ ರೋಗಿಗೆ ಹೊರಗಿನಿಂದ ಚಿಕಿತ್ಸೆ ನೀಡಲಾಗುತ್ತದೆ. ಇನ್ನೊಂದರಲ್ಲಿ ರೋಗಿಯು ಉಸಿರಾಡುವಾಗ, ಸೀನುವಾಗ ದೇಹದಿಂದ ಹೊರಬಂದ ಕೊರೊನಾ ವೈರಸ್‍ನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ನಡೆಯುತ್ತದೆ.

ಇಲ್ಲಿ ಆಳವಡಿಸಿರುವ ರೇಡಿಯೇಷನ್‌ ಎನರ್ಜಿ, ನೆರಳಾತೀತ ಕಿರಣಗಳು ಕೊರೊನಾ ವೈರಸ್‌ನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಹೊಂದಿದೆ.ಚೇಂಬರ್‌ನ ಒಳಗೆ ನೆಗೆಟಿವ್‌ ಪ್ರೆಷರ್‌ ಉಂಟುಮಾಡುವ ಮೂಲಕ ಸೋಂಕು‌ ಒಬ್ಬರಿಂದ ಮತ್ತೊಬ್ಬ ವ್ಯಕ್ತಿಗೆ ಹರಡುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಹಾಗೆಯೇ ಅತ್ಯಾಧುನಿಕ ಎಚ್‍ಇಪಿಎ ಫಿಲ್ಟರ್ ಐಸೊಲೇಷನ್‌ ಸಾಧನದ ಒಳಗಿನ ಗಾಳಿಯನ್ನು ಶುದ್ಧೀಕರಣ ಮಾಡಿ ಹೊರಗಿನ ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ’ ಎಂದು ವಿವರಣೆ ನೀಡಿದರು ಡಾ. ಹರಿನಾಥ ಐ ರೆಡ್ಡಿ.

‘ಅಲ್ಟ್ರಾವೈಲೆಟ್‌ ಡಿಸ್‌ಇನ್‌ಫೆಕ್ಟ್‌ ನೆಗೆಟಿವ್ ಪ್ರೆಷರ್ ಐಸೋಲೇಶನ್ ಚೇಂಬರ್’ ಸಾಧನಕ್ಕೆ ತಗುಲುವ ವೆಚ್ಚ ₹50ರಿಂದ 60 ಸಾವಿರ. ಹತ್ತು ಬೆಡ್‌ಗೆ ಈ ಸಾಧನ ಆಳವಡಿಸಲು ₹ 7 ಲಕ್ಷ ಖರ್ಚಾಗುತ್ತದೆ ಎಂದು ಮಾಹಿತಿ ಒದಗಿಸಿದರು.

ಈ ಸಂಶೋಧನಾ ತಂಡ, ಒಂದು ತಿಂಗಳು ಇದಕ್ಕಾಗಿ ಕೆಲಸ ಮಾಡಿದೆ. ಈಗ ಸರ್ಕಾರದ ಮಟ್ಟದಲ್ಲಿ ದೃಢೀಕರಣ ಪಡೆದು, ಆಸ್ಪತ್ರೆಗಳಲ್ಲಿ ಇದನ್ನು ಅಳವಡಿಸಲು ಸಜ್ಜಾಗಿದೆ. ಈ ತಂಡವು ದೊಡ್ಡ ಮಟ್ಟದಲ್ಲಿ ಈ ಸಾಧನ ಉತ್ಪಾದನೆಗೆ ಬೆಂಗಳೂರಿನ ಇಂಡಿಯನ್ ಹೈ ವಾಕ್ಯೂಮ್ ಪಂಪ್ಸ್ ಹಾಗೂ ಎಸಿಎಸ್ ಯುವಿ ಟೆಕ್ನಾಲಜೀಸ್ ಜತೆಗೆ ಕೈ ಜೋಡಿಸಿದ್ದಾರೆ. ಈ ಸಾಧನವು ಹಗುರವಾಗಿದ್ದು. ಒಂದು ಹಾಸಿಗೆಯಿಂದ ಮತ್ತೊಂದು ಹಾಸಿಗೆಗೆ ಸುಲಭವಾಗಿ ಕೊಂಡೊಯ್ಯಬಹುದು. ಬಳಸಲು ಸುಲಭ ಎಂದು ತಂಡ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT