ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಾಭಾಯಿ ಶತಕ

ಜನ್ಮ ಶತಮಾನೋತ್ಸವ
Last Updated 12 ಆಗಸ್ಟ್ 2019, 7:00 IST
ಅಕ್ಷರ ಗಾತ್ರ

ಅದು 1947ನೇ ಇಸವಿ. ಭಾರತ ಆಗತಾನೆ ಸ್ವತಂತ್ರವಾಗಿತ್ತು. ಹಿಂದುಳಿತ ರಾಷ್ಟ್ರವೆಂಬ ಹಣೆಪಟ್ಟಿ ದೊಡ್ಡದಾಗಿತ್ತು. ವಿಶ್ವದ ಭೂಪಟದಲ್ಲಿ ತಾನೂ ಒಂದು ಪ್ರಭಾವಿ ರಾಷ್ಟ್ರ ಎಂದು ನಿರೂಪಿಸಲು ಹಲವು ಸವಾಲುಗಳಿದ್ದವು. ಅದೇ ಸಂದರ್ಭದಲ್ಲಿ 28ರ ಯುವಕನೊಬ್ಬ ಕೇಂಬ್ರಿಜ್‌ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ಮುಗಿಸಿ ತಾಯ್ನಾಡಿಗೆ ಮರಳಿದ್ದ. ವಿಜ್ಞಾನವೆಂದರೆ ಅತಿಯಾದ ಒಲವು. ಮುಂದೆ ಅಂತರಿಕ್ಷ ಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿದ ಆ ಯುವಕ ಬೇರೆ ಯಾರೂ ಅಲ್ಲ; ಬಾಹ್ಯಾಕಾಶ ಯಾನದ ಪಿತಾಮಹ ಡಾ.ವಿಕ್ರಂ ಸಾರಾಭಾಯಿ.

ಸಾರಾಭಾಯಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾತ್ರವಲ್ಲ; ಔಷದೋದ್ಯಮ, ಪರಮಾಣು ಶಕ್ತಿ, ಜವಳಿ ಉದ್ಯಮ, ಆಡಳಿತ ನಿರ್ವಹಣೆ, ಲಲಿತಕಲೆ ಇತ್ಯಾದಿ ಕ್ಷೇತ್ರಗಳಲ್ಲೂ ಕೈಯಾಡಿಸಿದ ಸಾಹಸಿ. ಅವರೀಗ ನಮ್ಮೊಡನೆ ಇದ್ದಿದ್ದರೆ ಆಗಸ್ಟ್ 12ರಂದು ಅವರು ನೂರು ವಸಂತಗಳನ್ನು ಪೂರೈಸುತ್ತಿದ್ದರು.

ಭಾರತದಲ್ಲಿ ಭೌತವಿಜ್ಞಾನದ ಹರಿಕಾರ ಎನಿಸಿದ ಸರ್ ಸಿ.ವಿ. ರಾಮನ್ ಅವರ ಸಲಹೆಯಂತೆ ಅಧ್ಯಯನ ಪೂರೈಸಿ ಬಂದ ಸಾರಾಭಾಯಿ ಅವರಿಗೆ ಸಿಕ್ಕಿದ್ದು ಪರಮಾಣು ವಿಜ್ಞಾನದ ಪಿತಾಮಹ ಡಾ.ಹೋಮಿ ಜಹಾಂಗಿರ್ ಭಾಭಾ ಅವರ ಸಾಥ್. ತಿರುವನಂತರಪುರದಲ್ಲಿರುವ ರಾಕೆಟ್ ಉಡ್ಡಯನ ಕೇಂದ್ರ ಈ ಪ್ರೋತ್ಸಾಹದ ಫಲ. ನಿಜ ಅರ್ಥದಲ್ಲಿ ಸಾರಾಭಾಯಿ ಅವರ ಅಂತರಿಕ್ಷದ ಕನಸುಗಳಿಗೆ ಗರಿಮೂಡಿಸಿದ್ದು 1957ರ ನಡೆದ ರಷ್ಯಾದ ಸ್ಪುಟ್ನಿಕ್-1 ಉಪಗ್ರಹದ ಉಡ್ಡಯನ. ಭಾರತದ ಬಾಹ್ಯಾಕಾಶ ವಿಜ್ಞಾನಕ್ಕೆ ಇದೇ ಮುನ್ನಡಿ ಬರಹವಾಗಿದ್ದು ಈಗ ಇತಿಹಾಸ.

ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಭಾರತಕ್ಕೆ ಇರುವ ಅಪರಿಮಿತ ಅವಕಾಶಗಳನ್ನು ಗುರುತಿಸಿದ ಸಾರಾಭಾಯಿ ಅವರು ಈ ನಿಟ್ಟಿನಲ್ಲಿ ನೀಡಿದ ಅತ್ಯಮೂಲ್ಯ ಕೊಡುಗೆಯೆಂದರೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೊ). ಭಾರತ ಜಾಗತಿಕ ಭೂಪಟದಲ್ಲಿ ತನ್ನದೊಂದು ಜಾಗವನ್ನು ಗುರುತಿಸಿಕೊಂಡಿದೆ ಎಂದರೆ ಅದಕ್ಕೆ ಈ ಸಂಸ್ಥೆ ಮತ್ತು ಅಲ್ಲಿ ನಡೆಯುತ್ತಿರುವ ಸಂಶೋಧನಾ ಚಟುವಟಿಕೆಗಳ ಕೊಡುಗೆ ದೊಡ್ಡದಾಗಿದೆ.

ವಿದೇಶದಿಂದ ಹಿಂತಿರುಗಿದ ಕೂಡಲೇ ಸಾರಾಭಾಯಿ ಮಾಡಿದ ಕೆಲಸ ಎಂದರೆ ತಮ್ಮ ಕುಟುಂಬ ನಡೆಸುತ್ತಿರುವ ದತ್ತಿ ಸಂಸ್ಥೆಗೆ ಸಂಶೋಧನಾ ಕೇಂದ್ರವೊಂದನ್ನು ಆರಂಭಿಸುವಂತೆ ಮನವೊಲಿಸಿದ್ದು. ಇದರ ಫಲವಾಗಿ 1947ರಲ್ಲಿ ಅಹಮದಾಬಾದ್‍ನಲ್ಲಿ ಭೌತ ವಿಜ್ಞಾನ ಸಂಶೋಧನಾ ಪ್ರಯೋಗಾಲಯ ಶುರುವಾಯಿತು.

ಸೈಟ್ ಯೋಜನೆಯ ನಿರ್ಮಾತೃ

ಸಾರಾಭಾಯಿ ಅವರ ಕನಸಿನ ಯೋಜನೆಯಾಗಿ ಕಾರ್ಯರೂಪಕ್ಕೆ ಬಂದಿದ್ದು 1975ರ ಸೈಟ್ ಯೋಜನೆ. ಉಪಗ್ರಹ ಆಧಾರಿತ ಟೆಲಿವಿಷನ್ ಕಾರ್ಯಕ್ರಮಗಳನ್ನು ಸಮುದಾಯ ಅಭಿವೃದ್ಧಿ ಕಾರ್ಯಕ್ಕೆ ಬಳಸಬಹುದು ಎನ್ನುವುದನ್ನು ಪರೀಕ್ಷಿಸುವ ಜತೆಗೆ ಭಾರತೀಯರಿಗೆ ಈ ತಂತ್ರಜ್ಞಾನ ಬಳಸುವ ಕುರಿತು ತರಬೇತಿ ನೀಡುವ ಉದ್ದೇಶದೊಂದಿಗೆ ಈ ಯೋಜನೆ ಕಾರ್ಯರೂಪಕ್ಕೆ ಬಂತು. ಸಾರಾಭಾಯಿ ಅವರ ನಾಸಾದ ಜೊತೆಗಿನ ನಿರಂತರ ಸಂಪರ್ಕದ ಫಲವಾಗಿ ಈ ಯೋಜನೆ ಭಾರತದ ಆರು ರಾಜ್ಯಗಳಲ್ಲಿ ಅನುಷ್ಠಾನಗೊಂಡಿತು.

ಸಾರಾಭಾಯಿ ಅವರ ಇನ್ನೊಂದು ಮಹತ್ತರ ಕೊಡುಗೆಯನ್ನು ಇಲ್ಲಿ ಮರೆಯುವಂತಿಲ್ಲ. ಅಂತರಿಕ್ಷದಲ್ಲಿ ಭಾರತಕ್ಕೆ ತನ್ನದೇ ಆದ ಸಂವಹನ ಉಪಗ್ರಹ ಇರಬೇಕು ಎನ್ನುವುದು ಅವರ ಬಹುದಿನದ ಕನಸಾಗಿತ್ತು. ಇದು ಸಾಕಾರವಾದದ್ದು ಸಂವಹನ ಉಪಗ್ರಹ ಆರ್ಯಭಟದ ಉಡ್ಡಯನದಿಂದ. 1975ರಲ್ಲಿ ರಷ್ಯಾದ ಉಡ್ಡಾಯನ ಕೇಂದ್ರದಿಂದ ಚಿಮ್ಮಿದ ಈ ಉಪಗ್ರಹ ಭಾರತದ ಅಂತರಿಕ್ಷ ಯಾನದ ಮಹತ್ತರ ಮೈಲಿಗಲ್ಲು.

ಇಸ್ರೊ ಮಾತ್ರವಲ್ಲದೆ ಹಲವು ಸಂಸ್ಥೆಗಳ ಸ್ಥಾಪನೆಯ ಬೆನ್ನೆಲುಬಾಗಿ ನಿಂತವರು ಸಾರಾಭಾಯಿ. ಅಹಮದಾಬಾದ್‍ನಲ್ಲಿರುವ ಜವಳಿ ಸಂಶೋಧನಾ ಸಂಸ್ಥೆ (ಎಟಿಐಆರ್‍ಎ) ಅವುಗಳಲ್ಲಿ ಮೊದಲನೆಯದು. ವಿಜ್ಞಾನಿ ಎಂದ ಕೂಡಲೇ ಯಾವುದೋ ಒಂದು ಕ್ಷೇತ್ರಕ್ಕೆ ಇವರ ಪರಿಣತಿ ಸೀಮಿತವಾಗಿರಲಿಲ್ಲ. ಔಷಧ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿ ಆಗಬೇಕೆಂಬುದು ಅವರ ಅದಮ್ಯ ಕನಸು. ಕೌಟುಂಬಿಕ ಉದ್ಯಮವನ್ನು ಅಭಿವೃದ್ಧಿಪಡಿಸುವುದಷ್ಟೇ ಅವರ ಗುರಿಯಾಗಿರಲಿಲ್ಲ. ಭಾರತದಲ್ಲಿ ಕೆಲವೊಂದು ಔಷಧಗಳು ಹಾಗೂ ವೈದ್ಯಕೀಯ ಉಪಕರಣಗಳಲ್ಲಿ ಸ್ವಾಲಂಬನೆ ಸ್ಥಾಪಿಸಬೇಕೆಂಬುದು ಅವರ ಹಂಬಲವಾಗಿತ್ತು. ಎಷ್ಟೇ ಸವಾಲುಗಳಿರಲಿ ತಯಾರಿಸಿದ ಔಷಧ ಹಾಗೂ ಉಪಕರಣಗಳ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು ಎಂಬುದು ಅವರ ನಂಬಿಕೆಯಾಗಿತ್ತು. ಔಷದೋದ್ಯಮದಲ್ಲಿ ಹೊಸ ಅಲೆಯನ್ನು ಸೃಷ್ಟಿಸುವಲ್ಲಿ ಸಫಲರಾದರು.

ಆಡಳಿತ ನಿರ್ವಹಣೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಇವರ ಮತ್ತೊಂದು ಗುರಿ. ಅಹಮದಾಬಾದ್‍ನಲ್ಲಿರುವ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ ಇವರ ಸಾರಥ್ಯದಲ್ಲೇ ಸ್ಥಾಪನೆಯಾದುದು. ವಿಜ್ಞಾನ ಹಾಗೂ ವಿಜ್ಞಾನಿಗಳು ಸಮಾಜದಿಂದ, ಸಮುದಾಯ ಸಮಸ್ಯೆಗಳಿಂದ ದೂರವಾಗಬಾರದು ಎನ್ನುವುದು ಅವರ ಮನದಿಚ್ಛೆಯಾಗಿತ್ತು. ಮನುಷ್ಯನ ಸಮಸ್ಯೆಗಳಿಗೆ ಪರಿಹಾರ ನೀಡದ ವಿಜ್ಞಾನ ಮಾನವಕುಲಕ್ಕೆ ಪ್ರಯೋಜನಕಾರಿಯಲ್ಲ ಎನ್ನುವುದು ಅವರ ನಿಲುವಾಗಿತ್ತು. ಈ ಉದ್ದೇಶದಿಂದ ಅಹಮದಾಬಾದ್‍ನಲ್ಲಿ 1966ರಲ್ಲಿ ಸಮುದಾಯ ವಿಜ್ಞಾನ ಕೇಂದ್ರವೊಂದನ್ನು ಸ್ಥಾಪಿಸಲಾಯಿತು. ಹೋಮಿ ಜೆ. ಭಾಭಾ ಅವರ ಮರಣಾನಂತರ ಭಾರತೀಯ ಅಣುಶಕ್ತಿ ಆಯೋಗದ ಮುಖ್ಯಸ್ಥರಾಗಿಯೂ ಅವರು ಹೊಣೆ ನಿಭಾಯಿಸಿದರು.

ಸಾರಾಭಾಯಿ ಅಪ್ರತಿಮ ಕಲಾರಾಧಕರಾಗಿಯೂ ನೆನಪಿನಲ್ಲಿ ಉಳಿಯುತ್ತಾರೆ. ಮಡದಿ ಮೃಣಾಲಿನಿಯವರು ಭಾರತದ ಪ್ರಸಿದ್ಧ ಶಾಸ್ತ್ರೀಯ ನೃತ್ಯಗಾರ್ತಿಯಾಗಿದ್ದರು. ಅವರ ಆಸಕ್ತಿಯ ಫಲವಾಗಿ ಹುಟ್ಟಿದ್ದೇ ದರ್ಪಣ ಲಲಿತಕಲಾ ಅಕಾಡೆಮಿ. ಭಾರತದ ಶಾಸ್ತ್ರೀಯ ಕಲಾಪ್ರಕಾರವೊಂದನ್ನು ಸಮುದಾಯ ಅಭಿವೃದ್ಧಿಗೆ ಉಪಯೋಗಿಸಬಹುದು ಎಂಬುದನ್ನು ದರ್ಪಣ ಅಕಾಡೆಮಿ ತನ್ನ ಪ್ರತಿಯೊಂದು ಚಟುವಟಿಕೆಗಳಲ್ಲೂ ಸಾಕ್ಷೀಕರಿಸುತ್ತಾ ಬಂತು. ಸಮುದಾಯ ಆರೋಗ್ಯ, ಮಾನವ ಹಕ್ಕು, ಧಾರ್ಮಿಕ ಸಂಘರ್ಷ ಹಾಗೂ ಅಸಹಿಷ್ಣುತೆ, ಭ್ರಷ್ಟಾಚಾರ ಮೊದಲಾದ ಸಮಾಜದ ಜ್ವಲಂತ ವಿಷಯಗಳನ್ನು ಕಲಾಪ್ರದರ್ಶನ ವಸ್ತುವಾಗಿಸಿಕೊಂಡು ಜನಸಮುದಾಯವನ್ನು ತಲುಪಿದ ಹೆಗ್ಗಳಿಕೆ ಆ ಸಂಸ್ಥೆಯದು.

ಈ ಅಕಾಡೆಮಿ ಪ್ರತಿವರ್ಷ ನಡೆಸುತ್ತಿರುವ ಸಾರಾಭಾಯಿ ಅಂತರರಾಷ್ಟ್ರೀಯ ಕಲಾ ಉತ್ಸವ ಭಾರತದ ಅತ್ಯಂತ ವಿಜೃಂಭಣೆಯಿಂದ ನಡೆಯುವ ಉತ್ಸವಗಳಲ್ಲೊಂದು.ತಮ್ಮನ್ನು ಭೇಟಿಯಾಗಲು ಬರುತ್ತಿದ್ದ ಜನಸಾಮಾನ್ಯರನ್ನೂ ಅತ್ಯಂತ ಆತ್ಮೀಯತೆಯಿಂದ, ಅಂತಃಕರಣದಿಂದ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿದ್ದರು ಸಾರಾಭಾಯಿ. ಅವರ ಜೊತೆ ಒಂದು ಸಲ ಸಂಭಾಷಿಸಿದ ವ್ಯಕ್ತಿ ಅವರ ಮಹಾನ್ ವ್ಯಕ್ತಿತ್ವಕ್ಕೆ, ಅಂತಃಕರಣದ ನಡೆಗೆ ಮರುಳಾಗದೇ ಇರುತ್ತಿರಲಿಲ್ಲ ಎನ್ನುವುದು ಅವರ ಸಹೋದ್ಯೋಗಿಗಳ ಅಭಿಮತ. ಅವರು 1971ರ ಡಿಸೆಂಬರ್ 30ರಂದು ತಮ್ಮ 52ನೇ ವಯಸ್ಸಿನಲ್ಲಿ ಕೇರಳದ ತಿರುವನಂತಪುರದಲ್ಲಿ ಕೊನೆಯುಸಿರು ಎಳೆದರು (ಮರಣದ ಕಾರಣಗಳಲ್ಲಿ ಇನ್ನೂ ಸ್ಪಷ್ಟತೆಯಿಲ್ಲ ಎನ್ನುವುದು ಗಮನಿಸಬೇಕು). ಇವರ ಸ್ಮರಣಾರ್ಥವಾಗಿ ತಿರುವನಂತಪುರದ ಉಪಗ್ರಹ ಉಡ್ಡಯನ ಕೇಂದ್ರಕ್ಕೆ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರವಾಗಿ ಮರು ನಾಮಕರಣ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT