ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಯುಮಾಲಿನ್ಯ: ಕೀಟಗಳನ್ನು ಉಳಿಸಿ!

Published : 29 ಆಗಸ್ಟ್ 2023, 23:30 IST
Last Updated : 29 ಆಗಸ್ಟ್ 2023, 23:30 IST
ಫಾಲೋ ಮಾಡಿ
Comments

ಹತ್ತು ನಿಮಿಷ ಮೊಬೈಲ್ ಕಾಣದಿದ್ದರೆ ನಮ್ಮ ಕಳವಳ, ಚಡಪಡಿಕೆ ಹೇಳತೀರದು. ಕುಟುಂಬಸ್ಥರು, ಗೆಳೆಯರು, ಸಹೋದ್ಯೋಗಿಗಳು ಕಳೆದೆ ಹೋಗಿರುತ್ತಾರೆ! ವ್ಯಾಪಾರ, ವಹಿವಾಟೂ ಸ್ಥಗಿತವಾಗಿರುತ್ತದೆ. ಸಂಪರ್ಕ, ಸಂವಹನ ಅಷ್ಟು ಮಹತ್ವದ್ದು. ಖಗ, ಮೃಗಗಳ ಜಗತ್ತಿನಲ್ಲೂ ಸಂವಹನ ಎನ್ನುವುದಿದೆ. ಅದಕ್ಕೆ ಕಿಂಚಿತ್ತು ಅಡಚಣೆಯಾದರೂ ಜೀವಿಗಳ ಜಂಘಾಬಲವೇ ಉಡುಗಿರುತ್ತದೆ. ಹೌದು, ಈ ಸಮಸ್ಯೆಗೆ ಕಾರಣವಾಗುವುದು ಯಾವುದು ಗೊತ್ತೇ? ವಾಯುಮಾಲಿನ್ಯ.

ವಾಯುಮಾಲಿನ್ಯದಿಂದ ತೀವ್ರವಾಗಿ ಪರಿತಪಿಸುವ ಜೀವಿಗಳೆಂದರೆ ಕೀಟಗಳು. ಕೀಟಗಳಿಗೆ ಮುಂಚಾಚಿರುವ ಜೋಡಿ ಮೀಸೆಗಳೇ ಸ್ಪರ್ಶಾಂಗ (antenna). ಈ ‘ಕುಡಿಮೀಸೆ’ಯಿಂದಲೇ ಅವುಗಳ ಆಹಾರ ಅನ್ವೇಷಣೆ, ಸಂಗಾತಿಯ ಹುಡುಕಾಟ. ಕೈಗಾರಿಕೆ, ಸಾರಿಗೆ, ಕಾಡ್ಗಿಚ್ಚಿನ ದುರ್ದೆಸೆಯಿಂದ ವಾಯು ಮಲಿನಗೊಂಡರೆ ದೂಳಿನ ಕಣಗಳು ‘ಕುಡಿಮೀಸೆ’ಯನ್ನು ಆವರಿಸುತ್ತವೆ. ಹಾಗಾಗಿ ಕೀಟಗಳು ನಿಸ್ತೇಜಗೊಂಡು ದಿಕ್ಕೆಡುತ್ತವೆ. ಆವಾಸವಿರಲಿ, ಮೊಟ್ಟೆಗಳನ್ನು ಇಡಲೂ ಸುರಕ್ಷಿತ ಸ್ಥಳ ಲಭಿಸದೆ ಅವು ಪರದಾಡುತ್ತವೆ.

ಬೀಜಿಂಗ್‍ನಲ್ಲಿ ವಿಜ್ಞಾನಿಗಳು ನಡೆಸಿದ ಪ್ರಯೋಗವೊಂದು ಸ್ವಾರಸ್ಯವಾಗಿದೆ. ಒಂದು ವಿಶಾಲ ವರಾಂಡಾಗೆ ಕಲ್ಲಿದ್ದಲು, ಪೆಟ್ರೋಲು, ಕಟ್ಟಿಗೆ ಉರಿಸಿದ ಹೊಗೆಯನ್ನು ಬಿಡಲಾಯಿತು. ಅಲ್ಲಿ ಸಿಹಿ ಮತ್ತು ಖಾರದ ಖಾದ್ಯಗಳನ್ನು ತೆರೆದ ಬೋಗುಣಿಗಳಲ್ಲಿ ಇರಿಸಲಾಯಿತು. ಅರ್ಧ ತಾಸಿನ ನಂತರ ಗಮನಿಸಿದ್ದೇನು? ತಿಂಡಿ, ತಿನಿಸಿಗೆ ನೊಣಗಳೂ ಕೂಡ ಮುತ್ತಿರಲಿಲ್ಲ. ‘ಸಿಹಿ ಸುದ್ದಿ’ಗೆ ಗ್ರಹಣ ಹಿಡಿಸಿದ್ದು ಸ್ವತಃ ನಿಷ್ಕ್ರಿಯವಾದ ಅವುಗಳ ಕುಡಿಮೀಸೆ. ನೊಣದ ಮಿದುಳನ್ನು ಸಂಪರ್ಕಿಸುವ ವಾಸನೆಗ್ರಹಣ ಸಂಬಂಧಿ ವಿದ್ಯುತ್ ಸಂಕೇತಗಳ ಸಾಮರ್ಥ್ಯ ಕುಸಿದಿದ್ದರಿಂದ ಈ ಅಂಧಕಾರ! ಕೀಟಗಳ ಪಾಲಿಗೆ ನೈಟ್ರೊಜನ್ ಆಕ್ಸೈಡ್, ಓಜೋನ್‍ಗೆ ತೆರೆದುಕೊಳ್ಳುವುದಕ್ಕಿಂತಲೂ ದೂಳು, ಧೂಮ ಅಪಾಯಕರ. ಶೇ. 40ರಷ್ಟು ಭೂಪ್ರದೇಶಕ್ಕೆ ವಾಯುಮಾಲಿನ್ಯದ ಶಾಪ ತಟ್ಟಿದೆ. ಮಾಲಿನ್ಯಕಾರಕಗಳನ್ನು ಗಾಳಿ ಸಾವಿರಾರು ಕಿ. ಮೀ. ದೂರಕ್ಕೆ ಒಯ್ಯಬಲ್ಲದು. ಹಾಗಾಗಿ ಗಾಳಿಯ ಗುಣಮಟ್ಟ ಕುಸಿಯಲು ದೇಶ, ಪ್ರಾಂತ್ಯ, ಗಡಿ ಎಂಬ ಭೇದವಿಲ್ಲ.

ಶೇ. 13ರಷ್ಟು ಕೀಟಗಳು ಅಳಿವಿನಂಚಿನಲ್ಲಿವೆ. ಕೀಟಗಳ ಸಂತತಿ ಕ್ಷೀಣಿಸಿದರೆ ಅವನ್ನು ಆಹಾರವಾಗಿಸಿಕೊಂಡಿರುವ ಪಕ್ಷಿಗಳು, ಸರೀಸೃಪಗಳು, ಉಭಯಚರಜೀವಿಗಳೂ ಇನ್ನಿಲ್ಲವಾದಾವು. ಭೂಗ್ರಹ ಸಜೀವವಾಗಿರುವುದೂ ಕೀಟಗಳಿಂದಲೇ. ನಮ್ಮ ಪರಿಸರ ವ್ಯವಸ್ಥೆಯಲ್ಲಿ ಕೀಟಗಳು ನಿರ್ಣಾಯಕ ಮತ್ತು ಬಹು ಮಹತ್ವದ ಪಾತ್ರ ವಹಿಸುತ್ತವೆ. ಅವು ಸಾಂಕ್ರಾಮಿಕ ರೋಗಗಳನ್ನು ಉಂಟುಮಾಡುವ ಕ್ರಿಮಿಗಳನ್ನು ನಿಯಂತ್ರಿಸುತ್ತವೆ; ತ್ಯಾಜ್ಯಗಳನ್ನು ಛಿದ್ರಗೊಳಿಸುತ್ತವೆ; ಬೀಜಗಳನ್ನು ಪ್ರಸರಿಸುತ್ತವೆ. ಪರಾಗಸ್ಪರ್ಶ ಮತ್ತು ಪರಿಸರ ಮರುಬಳಕೆಯನ್ನು ನಿರ್ವಹಿಸುವುದು ಕೀಟಗಳೇ. ಶೇ. 70ರಷ್ಟು ಬೆಳೆಗಳು ಕೀಟಗಳ ಪರಾಗಸ್ಪರ್ಶ ಕ್ರಿಯೆಯನ್ನು ಅವಲಂಬಿಸಿದೆ. ಕೀಟಗಳ ಕಾರ್ಯದಕ್ಷತೆ ಅವು ರಾಸಾಯನಿಕ ಸಂಕೇತಗಳನ್ನು ಎಷ್ಟು ಸಮರ್ಥವಾಗಿ ನಿಭಾಯಿಸುತ್ತವೆ ಎನ್ನುವುದನ್ನೆ ಅವಲಂಬಿಸಿದೆ. ವಾಯುಮಾಲಿನ್ಯದ ಕಾರಣ ಕೀಟಗಳು ಅವನತಿ ಹೊಂದುತ್ತಿವೆ. 

ಮಲ್ಲಿಗೆ, ಸಂಪಿಗೆ, ಜಾಜಿ, ಗುಲಾಬಿ, ಸೌಗಂಧರಾಜ – ಎಷ್ಟು ಹೂವುಗಳೋ ಅಷ್ಟು ಪರಿಮಳ. ಆ ಸುವಾಸನೆಯ ಹಿಂದೆ ಕೀಟಗಳ ಅಮೋಘ, ಅಸದೃಶ ಕೈಂಕರ್ಯವಿದೆ. ವಾಯುಮಾಲಿನ್ಯ ಎಂಥಹ ದುಃಸ್ಥಿತಿ ತಂದಿದೆಯೆಂದರೆ ಕೀಟಗಳನ್ನು ಆಕರ್ಷಿಸಲು ಸಸ್ಯಗಳು ತಯಾರಿಸುವ ಹೂವಿನ ದಳಗಳ ಬಣ್ಣ ಹಾಗೂ ಸುಗಂಧದ್ರವ್ಯಗಳ ಪ್ರಮಾಣವೂ ಕಡಿಮೆಯಾಗತೊಡಗಿವೆ. ಅತ್ತ ಕೀಟಗಳು ಲೈಂಗಿಕಾಸಕ್ತಿಯನ್ನು ಪರಸ್ಪರ ಸೂಚಿಸಲು ಸ್ರವಿಸುವ ದ್ರವದ ಉತ್ಪಾದನೆಗೂ ಕಂಟಕ. ಕೀಟಗಳ ಶ್ವಾಸಾಂಗ ವ್ಯವಸ್ಥೆ ಬಹು ಸಂಕೀರ್ಣ, ನೇರವಾಗಿ ಶರೀರದ ಎಲ್ಲ ಅಂಗಾಂಗಳಿಗೂ ತ್ವರಿತವಾಗಿ ಶ್ವಾಸ ತಲುಪುತ್ತದೆ. ಹಾಗಾಗಿ ಶುದ್ಧಗಾಳಿ ಅವಕ್ಕೆ ಅತ್ಯಗತ್ಯ. ದುಂಬಿ, ಜೇನ್ನೊಣಗಳಂತು ಹೂಗಳ ಹುಡುಕಾಟಕ್ಕೆ ವಿಪರೀತ ಶ್ರಮಪಡುತ್ತವೆ. ಕ್ರಿಮಿನಾಶಕಗಳ ಸಿಂಪಡನೆಯಿಂದ ಗಮನಾರ್ಹ ಪ್ರಮಾಣದಲ್ಲಿ ಕೀಟಗಳು ಸಾಯುತ್ತವೆ. ಜನಸಾಮಾನ್ಯರು ಕೀಟಗಳ ಸಂರಕ್ಷಣೆಗೆ ಮೂರು ದಿಟ್ಟ ಕ್ರಮಗಳನ್ನು ಕೈಗೊಳ್ಳಬಹುದು.  ಬೈಸಿಕಲ್ ಬಳಸಿ ಗಾಳಿ ಮಲಿನವಾಗುವುದನ್ನು ತಪ್ಪಿಸಿ. ಸಾರ್ವಜನಿಕ ಸಾರಿಗೆ ವಾಹನಗಳಲ್ಲೇ ಪ್ರಯಾಣಿಸಿ. ನಿಮ್ಮ ಮನೆಯ ಮುಂದೆ ಅಥವಾ ಹಿಂದೆ ಅಷ್ಟು ಹುಲ್ಲಗಾವಲಿದ್ದರೆ ಅದನ್ನು ಪುಟ್ಟ ಹೂತೋಟವಾಗಿ ಬೆಳಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT