ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸೋಯಾ

Last Updated 14 ಮಾರ್ಚ್ 2023, 21:00 IST
ಅಕ್ಷರ ಗಾತ್ರ

ಪಾರಂಪರಿಕ ಆಹಾರವೊಂದು ಹೊಟ್ಟೆಗೆ ಬಾಧೆ ತರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಲ್ಲುದಂತೆ; ಹುರುಳಿಬೀಜಗಳ ಕುಲಕ್ಕೆ ಸೇರಿದ ಸೋಯಾ ಅವರೆಯು ಹುಳಿ ಬಂದಾಗ ಬಲು ಉಪಯುಕ್ತವಂತೆ. ಸಾಮಾನ್ಯವಾಗಿಯೇ ಕಹಿಯಾಗಿರುವ ಸೋಯಾ ಅವರೆಯನ್ನು ಎಣ್ಣೆ, ದೇಹದಾರ್ಢ್ಯವನ್ನು ಹೆಚ್ಚಿಸಲೆಂದು ಶುದ್ಧ ಪ್ರೊಟೀನು ಹಾಗೂ ಪನೀರಿನಂತಹ ಪ್ರೊಟೀನು ವಸ್ತುವನ್ನು ತಯಾರಿಸಲು ಬಳಸುತ್ತಾರಷ್ಟೆ. ಇದೀಗ ಈ ಕಾಳನ್ನು ಹುದುಗಿಸಿ ಬಳಸಿದರೆ ಹೊಟ್ಟೆ ಕೆಡಿಸುವ ಬ್ಯಾಕ್ಟೀರಿಯಾಗಳನ್ನೂ ಅದು ನಾಶ ಮಾಡಬಲ್ಲುದು ಎಂದು ಅಸ್ಸಾಮಿನ ಜೋರ್ಹಾತಿನಲ್ಲಿರುವ ‘ನಾರ್ತ್‌ ಈಸ್ಟ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ ಸಂಸ್ಥೆ’ಯ ರಿಂಕು ವೈಶ್ಯ ಮತ್ತು ಸಂಗಡಿಗರು ವರದಿ ಮಾಡಿದ್ದಾರೆ.

ಹುಳಿಕಾಳುಗಳು ಈಶಾನ್ಯ ಭಾರತದಲ್ಲಿ ಬಹಳ ಪ್ರಸಿದ್ಧವಾದ ಪಾರಂಪರಿಕ ಅಹಾರಗಳು. ಬೇಯಿಸಿದ ಕಾಳುಗಳನ್ನು ಒದ್ದೆಯಾಗಿರುವಂತೆಯೇ ಬಟ್ಟೆಯಲ್ಲಿ ಸುತ್ತಿಟ್ಟು, ಸ್ವಲ್ಪ ಬೆಚ್ಚಗಿನ ಜಾಗದಲ್ಲಿ ಎರಡು ಮೂರು ದಿನ ಇಟ್ಟು ಹುದುಗಿಸುತ್ತಾರೆ. ಕಾಳು ಹುಳಿಯಾಗಿ ಮೆತ್ತಗಾಗಿ, ಮುದ್ದೆಯಾಗುತ್ತದೆ. ಇದನ್ನು ‘ಅಖುನಿ’ ಎಂದು ಕರೆಯುತ್ತಾರೆ. ಇದೇ ಮುದ್ದೆಯನ್ನು ಬಾಳೆಯ ಎಲೆಯಲ್ಲಿಯೋ ಅಥವಾ ಅಲ್ಲಿಯೇ ದೊರಕುವ ಕಾಡಿನ ಎಲೆಯಲ್ಲಿಯೋ ಸುತ್ತಿಟ್ಟು ಒಲೆಯ ಪಕ್ಕದಲ್ಲಿಟ್ಟು ಒಣಗಿಸಿದರೆ, ಅದು ಪುಡಿಯಾಗುತ್ತದೆ. ಅಖುನಿ ಹಾಗೂ ಅದರ ಹುಡಿ ಈಶಾನ್ಯ ಭಾರತದ ನಾಗಾ ಲ್ಯಾಂಡಿನಲ್ಲಿರುವ ಹಲವು ಬುಡಕಟ್ಟು ಜನಾಂಗದ ಪಾರಂಪರಿಕ ಆಹಾರ. ಇದೇ ಬಗೆಯ ಹುದುಗಿದ ಸೋಯಾ ಪದಾರ್ಥವನ್ನು ಕೊರಿಯಾ, ಥೈಲ್ಯಾಂಡ್‌, ಮಯನ್ಮಾರ್‌, ಕಾಂಬೋಡಿಯ ಹಾಗೂ ಜಪಾನಿನಲ್ಲಿಯೂ ಪಾರಂಪರಿಕ ಆಹಾರವಾಗಿ ಬಳಕೆಯಾಗುತ್ತಿವೆ.


ಹಲವು ಬೇಳೆಗಳನ್ನು ಈ ರೀತಿ ಹುದುಗಿಸಿ ಬಳಸುವುದು ಸಾಮಾನ್ಯ. ಹುದುಗಿಸಿದ ಬೇಳೆ, ಹುದುಗಿಸಿದ ತರಕಾರಿಗಳು ಹಾಗೂ ಹಳಸಲು ಅನ್ನದಲ್ಲಿ ಹಲವು ಬಗೆಯ ಉಪಯುಕ್ತ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ ಎನ್ನುವುದು ನಂಬಿಕೆ. ಈ ಬ್ಯಾಕ್ಟೀರಿಯಾಗಳು ಬೇಳೆ, ಧಾನ್ಯ, ತರಕಾರಿಯಲ್ಲಿರುವ ಆಹಾರಾಂಶಗಳನ್ನು ಬಳಸಿಕೊಂಡು ನಮ್ಮ ದೇಹ ತಕ್ಷಣಕ್ಕೆ ತಯಾರಿಸಿಕೊಳ್ಳಲಾಗದಂತಹ ಜೀವಸತ್ವಗಳನ್ನು ಒದಗಿಸುತ್ತವೆಯಾದ್ದರಿಂದ ಇವನ್ನು ‘ಪ್ರೊಬಯಾಟಿಕ್‌ ಪದಾರ್ಥಗಳು’ ಎಂದು ಹೆಸರಿಸಿದ್ದಾರೆ. ಅಖುನಿಯನ್ನೂ ಅಂತಹುದೊಂದು ಪ್ರೊಬಯಾಟಿಕ್‌ ಇರಬೇಕು ಎಂದು ಪರಿಗಣಿಸಲಾಗಿತ್ತು. ವಿಶ್ವದಾದ್ಯಂತ ಈ ಪದಾರ್ಥದ ಆರೋಗ್ಯ ಫಲಗಳ ಬಗ್ಗೆ ಹಲವಾರು ಸಂಶೋಧನೆಗಳು ನಡೆದಿವೆ. ಜಪಾನ್‌ ಮತ್ತು ಕೊರಿಯಾದಲ್ಲಿ ಹುದುಗಿದ ಕಾಳುಗಳ ಮೇಲೆ ನಡೆದ ಅಧ್ಯಯನಗಳು ಇವುಗಳ ರಸಗಳು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯಬಲ್ಲುವು ಎಂದು ಪತ್ತೆಯಾಗಿತ್ತು.

ಭಾರತೀಯ ಆಹಾರವಾದ ಅಖುನಿಗೂ ಈ ಗುಣವಿರಬಹುದೇ ಎನ್ನುವುದು ಸಿದ್ಧವಾಗಿರಲಿಲ್ಲ. ಕಾರಣವಿಷ್ಟೆ. ವಿವಿಧ ಪ್ರದೇಶಗಳಲ್ಲಿನ ಆಹಾರಗಳೆಲ್ಲವೂ ಹುದುಗಿದ ಪದಾರ್ಥಗಳೇ ಆದರೂ, ಪ್ರತಿಯೊಂದರ ಸ್ವಾದ, ಪರಿಮಳ ವಿಶಿಷ್ಟವಾಗಿರುತ್ತದೆ. ಇದಕ್ಕೆ ಕಾರಣ ಅವುಗಳನ್ನು ಹುದುಗಿಸುವ ಬ್ಯಾಕ್ಟೀರಿಯಾಗಳು. ಪ್ರತಿಯೊಂದು ಹುದುಗಿದ ಆಹಾರದಲ್ಲಿಯೂ ಇರುವ ಬ್ಯಾಕ್ಟೀರಿಯಾ ಬಗೆಗಳು ಹಾಗೂ ಗುಣಗಳು ವಿಭಿನ್ನ. ಉದಾಹರಣೆಗೆ, ನಾಗಾಲ್ಯಾಂಡಿನ ವಿವಿಧ ಬುಡಕಟ್ಟುಗಳು ತಯಾರಿಸುವ ಅಖುನಿಗಳಲ್ಲಿ ಇರುವ ಬ್ಯಾಕ್ಟೀರಿಯಾ ಬಗೆಗಳು ಒಂದೆ ತೆರನವಲ್ಲ ಎಂದು ಹತ್ತು ವರ್ಷಗಳ ಹಿಂದೆಯೇ ಇಟಾನಗರದಲ್ಲಿರುವ ಭಾರತೀಯ ಪಶುವೈದ್ಯ ಸಂಶೋಧನಾಲಯದ ವಿಜ್ಞಾನಿಗಳು ವರದಿ ಮಾಡಿದ್ದರು.

ಹಾಗಿದ್ದರೆ ನಾಗಾಲ್ಯಾಂಡಿಗೆ ವಿಶಿಷ್ಟವಾದ ಅಖುನಿಯಲ್ಲಿಯೂ ವಿಶಿಷ್ಟ ಗುಣಗಳಿರಬಹುದೋ? ಇದನ್ನು ಪರಿಶೀಲಿಸಲು ವೈಶ್ಯರ ತಂಡ ಅಖುನಿ ಹಾಗೂ ಅದರ ಹುಡಿಯ ಸಾರವನ್ನು ವಿವಿಧ ದ್ರಾವಣಗಳಲ್ಲಿ ಹಿಂಡಿ ತೆಗೆದು, ಮನುಷ್ಯರಲ್ಲಿ ಹೊಟ್ಟೆನೋವು, ಬೇಧಿ ಮೊದಲಾದ ಕರುಳಿನ ಸಂಕಟಕ್ಕೆ ಕಾರಣವಾಗುವ ‘ಎಶ್ಚೆರಿಶಿಯಾ ಕೋಲಿ’ ಹಾಗೂ ‘ಸ್ಟಫೈಲೊಕಾಕಸ್‌ ಆರಿ’ ಎನ್ನುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯ ಮೇಲೆ ಅವುಗಳ ಪರಿಣಾಮವನ್ನು ಪರೀಕ್ಷಿಸಿದೆ. ಇವುಗಳ ಪರಿಣಾಮವನ್ನು ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಗಟ್ಟಲು ಬಳಸುವ ನಿಯೋಮೈಸಿನ್‌ ಔಷಧದ ಜೊತೆಗೆ ಹೋಲಿಸಿದೆ.

ಪ್ರಯೋಗಾಲಯದಲ್ಲಿ ಕೃಷಿ ಮಾಡಿದ ಕೋಲಿ ಹಾಗೂ ಆರಿ ಬ್ಯಾಕ್ಟೀರಿಯಾಗಳ ತಟ್ಟೆಗೆ ಈಥೈಲ್‌ ಅಸಿಟೇಟ್‌ ಎನ್ನುವ ದ್ರಾವಕದೊಟ್ಟಿಗೆ ತೆಗೆದ ಅಖುನಿಯ ಸಾರವನ್ನು ಸುರಿದಾಗ, ಅದರ ಬೆಳೆವಣಿಗೆ ನಿಯೋಮೈಸಿನ್‌ ಹಾಕಿದ್ದಾಗಿನದ್ದಕ್ಕಿಂತ ಕಡಿಮೆ ಇತ್ತು ಎನ್ನುತ್ತಾರೆ. ಬ್ಯಾಕ್ಟೀರಿಯಾಗಳು ಬೆಳೆದಾಗ ತಟ್ಟೆಯ ತುಂಬ ಹರಡಿಕೊಳ್ಳುತ್ತವೆ. ಆದರೆ ಎಲ್ಲಿ ಸಾರದ ಹನಿಯನ್ನು ಸಿಂಪರಿಸಿರುತ್ತದೋ, ಅಲ್ಲಿ ಅವು ಬೆಳೆದಿರುವುದಿಲ್ಲ. ಆ ಜಾಗ ನಿಚ್ಚಳವಾಗಿರುತ್ತದೆ. ಈ ಹನಿಯ ಸುತ್ತಲೂ ಎಷ್ಟು ಜಾಗ ನಿಚ್ಚಳವಾಗಿದೆ ಎನ್ನುವುದು ಅದರ ಬೆಳವಣಿಗೆ ಎಷ್ಟು ಕುಂಠಿತವಾಗಿದೆ ಎಂದು ಸೂಚಿಸುತ್ತದೆ. ಈ ರೀತಿಯಲ್ಲಿ ಪರೀಕ್ಷಿಸಿದಾಗ ಇಕೋಲಿ ಬ್ಯಾಕ್ಟೀರಿಯಾ ತಟ್ಟೆಯಲ್ಲಿ ಅಖುನಿಯ ಸಾರ ಬಿದ್ದೆಡೆ ಸುಮಾರು ಮೂವತ್ತನಾಲ್ಕರಿಂದ ಮೂವತ್ತೈದು ಮಿಮೀ ದೂರದವರೆಗೂ ಬ್ಯಾಕ್ಟೀರಿಯಾಗಳು ಬೆಳೆದಿರಲಿಲ್ಲ. ಅದೇ ನಿಯೋಮೈಸಿನ್‌ ಬಿದ್ದೆಡೆ ಅತಿ ಹೆಚ್ಚು ಎಂದರೆ ಹದಿನೇಳು ಮಿಮೀ ದೂರವಷ್ಟೆ ಬ್ಯಾಕ್ಟೀರಿಯಾರಹಿತವಾಗಿತ್ತು. ಅಂದರೆ ಈ ಸಾರ ಬ್ಯಾಕ್ಟೀರಿಯಾ ಬೆಳೆಯದಂತೆ ತಡೆದಿತ್ತು ಎಂದಷ್ಟೆ ಅರ್ಥ.

ಇದು ಆಕಸ್ಮಿಕವೋ ಅಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳಲು, ಸಾರದೊಟ್ಟಿಗೆ ಕೃಷಿ ಮಾಡಿದ ಬ್ಯಾಕ್ಟೀರಿಯಾಗಳ ರಚನೆಯನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ಪರೀಕ್ಷಿಸಿದ್ದಾರೆ. ಸಾಮಾನ್ಯವಾಗಿ ದುಂಡಗೆ ಗೋಲಿಗಳನ್ನು ಜೋಡಿಸಿದಂತೆ ಬೆಳೆಯುವ ಆರಿ ಬ್ಯಾಕ್ಟೀರಿಯಾಗಳು ಒಂದಕ್ಕೊಂದು ಅಂಟಿಕೊಂಡು ಗುಪ್ಪೆಯಾಗಿದ್ದುವು. ಇಕೋಲಿ ಬ್ಯಾಕ್ಟೀರಿಯಾಗಳ ಮೇಲ್ಮೈ ಸಾಮಾನ್ಯದಂತೆ ನಯವಾಗಿರದೆ, ಒರಟೊರಟಾಗಿ, ಅಷ್ಟಾವಕ್ರವಾಗಿತ್ತು. ಅರ್ಥಾತ್‌, ಅಖುನಿಯ ಸಾರ ಈ ಬ್ಯಾಕ್ಟೀರಿಯಾಗಳ ಹೊರಮೈಗೆ ಏನೋ ಮಾಡಿತ್ತು.

ಇದುವೂ ಆಕಸ್ಮಿಕವಲ್ಲ! ವೈಶ್ಯ ಅವರ ತಂಡ ಸಾರ ಹಾಕಿ ಬೆಳೆಸಿದ ಇಕೋಲಿ ಹಾಗೂ ಆರಿ ಬ್ಯಾಕ್ಟೀರಿಯಾಗಳ ತಟ್ಟೆಗಳಲ್ಲಿ, ನಿಚ್ಚಳವಾದ ಜಾಗಗಳಲ್ಲಿ ಬ್ಯಾಕ್ಟೀರಿಯಾಗಳೊಳಗೆ ಇರುವಂತಹ ಪ್ರೊಟೀನು ಇದೆಯೇ ಎಂದು ರೋಹಿತದರ್ಶಕದ ಮೂಲಕ ಪರೀಕ್ಷಿಸಿದ್ದಾರೆ. ಆ ಪ್ರೊಟೀನುಗಳಷ್ಟೆ ಹೀರುವ ಬೆಳಕು ಎಷ್ಟಿದೆ ಎಂಬುದನ್ನು ಗಮನಿಸಿದ್ದಾರೆ. ಅಂತಹ ಜಾಗದಲ್ಲಿ ಬೆಳಕಿನ ಪ್ರಮಾಣ ಕುಗ್ಗಿತ್ತು. ಬ್ಯಾಕ್ಟೀರಿಯಾಗಳ ಮೇಲ್ಮೈ ಹರಿದು, ಪ್ರೊಟೀನು ಹೊರಸುರಿದದ್ದರಿಂದ ಆಗಿದ್ದು ಎನ್ನುವುದು
ಇವರ ತರ್ಕ.

ಹೀಗೆ ಪಾರಂಪರಿಕ ಪದಾರ್ಥವಾದ ಅಖುನಿ ಹೊಟ್ಟೆಯ ನೋವಿಗೆ ಕಾರಣವಾಗಬಲ್ಲ ಬ್ಯಾಕ್ಟೀರಿಯಾಗಳನ್ನು ತಡೆಗಟ್ಟಬಲ್ಲುದು ಎನ್ನುವುದು ಇವರ ಉದ್ದೇಶ. ಅಖುನಿ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ನಾಗಾಜನರ ನಂಬಿಕೆಗೆ ಇದು ಒತ್ತು ಕೊಟ್ಟಿದೆಯಷ್ಟೆ. ಆದರೆ ಸೋಂಕು ಇದ್ದವರಿಗೆ ಈ ಆಹಾರ ತಿನ್ನಿಸಿದರೆ ಸೋಂಕು ನೀಗಬಹುದೇ ಎನ್ನುವುದು ಇನ್ನು ಮೇಲೆ ಸಿದ್ಧವಾಗಬೇಕಷ್ಟೆ.

ಈ ಶೋಧದ ವಿವರಗಳನ್ನು ‘ಫುಡ್‌ ಕೆಮಿಸ್ಟ್ರಿ ಅಡ್ವಾನ್ಸಸ್‌ ಪತ್ರಿಕೆ’ ಮೊನ್ನೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT