ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಶುದ್ಧೀಕರಣಕ್ಕಾಗಿ ಮದ್ಯತಯಾರಕ ಯೀಸ್ಟ್!

ಮದ್ಯಗಳ ತಯಾರಿಕೆಯಲ್ಲಿ ಬಳಸುವ ಯೀಸ್ಟ್ ಈಗ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆಯಂತೆ.
Published 21 ಮೇ 2024, 23:33 IST
Last Updated 21 ಮೇ 2024, 23:33 IST
ಅಕ್ಷರ ಗಾತ್ರ
ಮದ್ಯಗಳನ್ನು ತಯಾರಿಸಲು ಬಳಸುವ ಯೀಸ್ಟ್ ನೀರನ್ನು ಶುದ್ಧೀಕರಿಸುತ್ತದೆಯಂತೆ. ನೀರಲ್ಲಿರುವ ಭಾರಧಾತು ಸೀಸವನ್ನು ಹೊರತೆಗೆಯಬಲ್ಲದಂತೆ! ಹಾಗೆಂದು ಎಂಐಟಿಯ ಸಂಶೋಧಕರು ಮೊನ್ನೆ ‘ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ’ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ.

ಯೀಸ್ಟ್ ನಿಮಗೆಲ್ಲಾ ಪರಿಚಯವಿರಬೇಕು. ಇದೊಂದು ಶಿಲೀಂಧ್ರ. ಆಹಾರ ಪದಾರ್ಥಗಳನ್ನು ಹುದುಗಿಸುತ್ತದೆ. ಬೇಕರಿಯ ತಿಂಡಿಗಳು, ಎಣ್ಣೆ–ಸಾರಾಯಿಗಳನ್ನು ತಯಾರಿಸುವಾಗ, ಹಿಟ್ಟು–ಹಣ್ಣಿನ ರಸವನ್ನು ಹುದುಗಿಸಲು ಈ ಯೀಸ್ಟನ್ನು ಬಳಸುತ್ತಾರೆ. ಅದರಲ್ಲಿಯೂ ಬೇಕರಿಗಾಗಿ ಬಳಸುವ ಯೀಸ್ಟ್ ಬೇರೆ. ಮದ್ಯಗಳ ತಯಾರಿಕೆಯಲ್ಲಿ ಬಳಸುವ ಯೀಸ್ಟ್ ಬೇರೆ. ಹೊಸ ವಿಷಯವೇನೆಂದರೆ ಮದ್ಯಗಳನ್ನು ತಯಾರಿಸಲು ಬಳಸುವ ಯೀಸ್ಟ್ ನೀರನ್ನು ಶುದ್ಧೀಕರಿಸುತ್ತದೆಯಂತೆ; ನೀರಲ್ಲಿರುವ ಭಾರಧಾತು ಸೀಸವನ್ನು ಹೊರತೆಗೆಯಬಲ್ಲದಂತೆ! ಹಾಗೆಂದು ಎಂಐಟಿಯ ಸಂಶೋಧಕರು ಮೊನ್ನೆ ‘ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ’ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ. ಅಂತೂ ಎಣ್ಣೆಗಂಟಿರುವ ಕುಖ್ಯಾತಿ ಈಗ ಪ್ರಖ್ಯಾತಿಯಾಯಿತೆನ್ನಬಹುದು!

ಕೈಗಾರೀಕರಣದಿಂದಾಗಿ ನೀರಿನಲ್ಲಿ ಭಾರಧಾತುಗಳು ಸೇರಿ ಜಲಮಾಲಿನ್ಯವಾಗುತ್ತಿರುವುದು ಹೊಸ ಸಮಸ್ಯೆಯೇನಲ್ಲ. ಸೀಸ, ಪಾದರಸ, ಆರ್ಸೆನಿಕ್ ಮುಂತಾದ ಧಾತುಗಳು ನೀರಿನಲ್ಲಿ ಸೇರಿದರೆ ಅವುಗಳನ್ನು ಶುದ್ಧೀಕರಿಸುವುದು ಕಷ್ಟ. ಅಪಾಯವೂ ಹೆಚ್ಚು. ಇದೊಂದು ಜಾಗತಿಕ ತೊಂದರೆ. ಸಾಂಪ್ರದಾಯಿಕ ವಿಧಾನಗಳು, ಮೆಂಬ್ರೇನ್ ಫಿಲ್ಟ್ರೇಷನ್ ತಂತ್ರಗಳಿಂದ ದಕ್ಷವಾಗಿ ನೀರನ್ನು ಶುದ್ಧೀಕರಿಸಲು ಆಗಿಲ್ಲ. ಸಾಧ್ಯವಾದರೂ ಅದಕ್ಕೆ ಬಳಕೆಯಾಗುವ ಸಂಪನ್ಮೂಲಗಳು ಹಾಗೂ ಸಮಯ ಹೆಚ್ಚು. ಆದರೆ ಯೀಸ್ಟ್, ಅಲ್ಲಲ್ಲ ಮದ್ಯವನ್ನು ತಯಾರಿಸಿದ ನಂತರ ದೊರೆಯುವ ಯೀಸ್ಟ್‌ನ ತ್ಯಾಜ್ಯ ಮಾತ್ರ ತಕ್ಷಣವೇ ಸೀಸವನ್ನು ನೀರಿನಿಂದ ಪ್ರತ್ಯೇಕಗೊಳಿಸುತ್ತದೆಯಂತೆ! ಅದುವೂ 1 ಪಾರ್ಟ್ ಪರ್ ಮಿಲಿಯನ್ (ಶೇ. 0.0001)ಅಷ್ಟು ಕಡಿಮೆ ಪ್ರಮಾಣದಲ್ಲಿದ್ದರೂ. ಇನ್ನು, ಒಂದೇ ಮದ್ಯತಯಾರಿಕಾ ಕಂಪೆನಿ ಇಡೀ ಒಂದು ನಗರ ಬಳಸುವ ನೀರನ್ನು ಶುದ್ದೀಕರಿಸಲು ಬೇಕಾಗುವಷ್ಟು ಯೀಸ್ಟ್ ತ್ಯಾಜ್ಯವನ್ನು ಉತ್ಪಾದಿಸುತ್ತದೆಯಂತೆ. ಅರ್ಥಾತ್ ಅಷ್ಟು ಸುಲಭ, ಅಗ್ಗ ಮತ್ತು ಖಚಿತವಾಗಿ ನೀರನ್ನು ಶುದ್ಧೀಕರಿಸುವ ಸಂವೇದನಾಶೀಲ ವಿಧಾನವಿದು.

ಇದಕ್ಕಾಗಿ ದೇವೇಶ್ ಗೋಖಲೆ ಮತ್ತು ತಂಡದವರು ಮೊದಲಿಗೆ ಅವಕೆಂಪುಕಿರಣಗಳೊಂದಿಗೆ ವೇಗವಾಗಿ ಪ್ರತಿಕ್ರಿಯಿಸುವ ಪಾಲಿ–ಇಥೈಲೀನ್ ಗ್ಲೈಕಾಲ್‌ನಿಂದ ಮಾಡಿದ ಪಾಲಿಮರುಗಳನ್ನು ತಯಾರಿಸಿಕೊಂಡಿದ್ದಾರೆ. ಮಲ್ಟಿವಿಟಮಿನ್ ಟ್ಯಾಬ್ಲೆಟ್‌ನ ಖಾಲಿ ಕ್ಯಾಪ್ಸೂಲುಗಳನ್ನು ತೆಗೆದುಕೊಂಡು ಅದರೊಳಗೆ ವಿಟಮಿನ್‌ಗಳನ್ನು ತುಂಬುವ ಬದಲು ಯೀಸ್ಟ್ ಅನ್ನು ತುಂಬಿಸಿದ್ದಾರೆ. ಯೀಸ್ಟ್ ಅನ್ನು ಮೊದಲಿಗೆ ಶೈತ್ಯಾಗಾರದಲ್ಲಿ ಹೆಪ್ಪುಗಟ್ಟಿಸಿ, ಅದನ್ನು ನಿರ್ವಾತದಲ್ಲಿಟ್ಟು ಒಣಗಿಸಿದ್ದಾರೆ. ಫ್ರೀಜ್ ಡ್ರೈ ಮಾಡಿದ ಯೀಸ್ಟನ್ನು ಕ್ಯಾಪ್ಸೂಲುಗಳೊಳಗೆ ತುಂಬಿಸಿ ಸ್ವಲ್ಪ ನೀರನ್ನು ಬೆರೆಸಿದ್ದಾರೆ. ಈಗ ಯೀಸ್ಟ್ ತುಂಬಿದ ಕ್ಯಾಪ್ಸೂಲನ್ನು ಪಾಲಿ–ಇಥೈಲೀನ್ ಗ್ಲೈಕಾಲಿನ ಪಾಲಿಮರಿನೊಳಗೆ ತುಂಬಿಸಿ ಅವಕೆಂಪು ಕಿರಣಗಳನ್ನು ಹಾಯಿಸಿದ್ದಾರೆ. ಕ್ಯಾಪ್ಸೂಲುಗಳು ರಂಧ್ರಗಳನ್ನೊಳಗೊಂಡಿದ್ದು, ನೀರು ಅದರೊಳಗೆ ಹೋದಾಗ ಯೀಸ್ಟ್ ಕೋಶಗಳು ಸೀಸವನ್ನು ತನ್ನೊಳಗೆ ಅಂಟಿಸಿಕೊಂಡುಬಿಡುತ್ತದೆ. ನೀರಿನೊಳಗೆ ಯೀಸ್ಟ್ ಮಿಶ್ರಣವಾಗುವುದಿಲ್ಲ. ಹಾಗಾಗಿ ಮತ್ತೊಮ್ಮೆ ಯೀಸ್ಟ್ ಅನ್ನು ನೀರಿನಿಂದ ತೆಗೆಯುವ ಒಂದು ಹಂತವೂ ಮುಗಿಯಿತು. ಕ್ಯಾಪ್ಸೂಲುಗಳನ್ನು ಹೊರತೆಗೆದರೆ ನೀರೂ ಶುದ್ಧವಾಯಿತು!

ಈ ಕ್ಯಾಪ್ಸೂಲುಗಳು ನಲ್ಲಿ–ಕೊಳಾಯಿಗಳಿಂದ ಬೀಳುವ ನೀರಿನ ಒತ್ತಡವನ್ನು ಸಹಿಸಿಕೊಳ್ಳುವಷ್ಟು ಪ್ರಬಲವಾಗಿರುವುದನ್ನು ಖಚಿತಪಡಿಸಿಕೊಂಡಿದ್ಧಾರೆ. ನಂತರ ಇಪಿಎ(ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ) ಗ್ರೇಡ್‌ನ ಬಯೋಫಿಲ್ಟರ್‌ಗಳನ್ನು ಬಳಸಿಕೊಂಡು ಹೈಡ್ರೋಜೆಲ್ ಯೀಸ್ಟ್ ಗ್ರ್ಯಾನ್ಯೂಲು(ಹರಳು)ಗಳನ್ನು ಸಿದ್ಧಪಡಿಸಿ ನೀರನ್ನು ಶುದ್ಧೀಕರಿಸಲು ಪ್ರಯತ್ನಿಸಿದ್ದಾರೆ. ಹನ್ನೆರೆಡು ದಿನಗಳವರೆಗೆ ಈ ಶುದ್ಧೀಕರಣವನ್ನು ಕ್ರಿಯೆಯನ್ನು ನಡೆಸಿ, ಮೆಂಬ್ರೇನ್ ಫಿಲ್ಟ್ರೇಷನ್ ವಿಧಾನಕ್ಕಿಂತಲೂ ಕಡಿಮೆ ಶಕ್ತಿ ಬೇಡುವ ದಕ್ಷ ಆಯ್ಕೆಯಿದು ಎಂದು ಸಾಬೀತುಪಡಿಸಿದ್ದಾರೆ, ಗೋಖಲೆ ಮತ್ತು ತಂಡ.

ಹಾಗಾಗಿ, ಜಲಮಾಲಿನ್ಯ ಮತ್ತು ಶುದ್ಧ ನೀರಿನ ಕೊರತೆಯನ್ನು ಎದುರಿಸುತ್ತಿರುವ ಕಡಿಮೆ ಆದಾಯದ, ಪ್ರತಿಕೂಲ ಪರಿಸ್ಥಿತಿಯಲ್ಲಿರುವ ಸಮುದಾಯಗಳಿಗೆ ಯೀಸ್ಟ್‌ನಿಂದ ನೀರನ್ನು ಶುದ್ಧೀಕರಿಸುವುದು ಒಂದು ಅಗ್ಗದ, ಸುಸ್ಥಿರವಾದ ನೀರು ಚಿಕಿತ್ಸಕಾ ವಿಧಾನ ಆಗಬಹುದು. ಜೊತೆಗೆ ಸೀಸವಷ್ಟೇ ಅಲ್ಲದೆ, ಸೂಕ್ಷ್ಮ ಪ್ಲಾಸ್ಟಿಕ್ಕುಗಳು ಹಾಗೂ ಸಾವಿರಾರು ವರ್ಷಗಳಾದರೂ ಭೂಮಿಯಲ್ಲೇ ಉಳಿದು ಹೋಗುವ ರಾಸಾಯನಿಕಗಳನ್ನೂ ಹೆಕ್ಕುವಂತಹ ಶೋಧಕಗಳನ್ನು ಮುಂದೆ ಪತ್ತೆ ಮಾಡಲಿದ್ದೇವೆ ಎನ್ನುತ್ತಾರೆ, ಸಂಶೋಧಕರು. ‘ಕಸದಿಂದ ರಸ’ ಎನ್ನಬಹುದಾದ ಈ ತಂತ್ರ ನಿಜಕ್ಕೂ ಅನುಕೂಲಿ ಮತ್ತು ಪ್ರಶಂಸನೀಯವಾದುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT