ವಾಷಿಂಗ್ಟನ್: ಟೆಸ್ಲಾದ ಆಪ್ಟಿಮಸ್ (ಟೆಸ್ಲಾ ಬಾಟ್ ರೋಬೋ) ಮನುಷ್ಯರಂತೆ ಯೋಗ ಮಾಡುತ್ತಿರುವ ವಿಡಿಯೊವನ್ನು ಕಂಪನಿ ಹಂಚಿಕೊಂಡಿದ್ದು, ಯೋಗದ ವಿವಿಧ ಆಸನಗಳನ್ನು ನಿರರ್ಗಳವಾಗಿ ಮಾಡುವ ರೋಬೋ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಯೋಗವಷ್ಟೇ ಅಲ್ಲ ಮಾನವನ ಹಾಗೆ ಬಣ್ಣಗಳನ್ನು ಗುರುತಿಸುವ ಸಾಮರ್ಥ್ಯವನ್ನು ಈ ಟೆಸ್ಲಾ ಬಾಟ್ ರೋಬೋ ಹೊಂದಿದೆ. ಒಂದೇ ಬಣ್ಣದ ಬ್ಲಾಕ್‌ಗಳನ್ನು ಒಂದೆಡೆ ಜೋಡಿಸುವ ಟಾಸ್ಕ್‌ನಲ್ಲಿ ಭಾಗವಹಿಸಿದ್ದ ರೋಬೋ ನಿಖರವಾಗಿ ಬಣ್ಣಗಳನ್ನು ಗುರುತಿಸಿದೆ. ಟಾಸ್ಕ್‌ಅನ್ನು ಇನ್ನಷ್ಟು ಸಂಕೀರ್ಣಗೊಳಿಸಿದಾಗಲೂ ಅದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಪ್ರದರ್ಶಿಸಿದೆ.
ಯೋಗದ ವಿಷಯಕ್ಕೆ ಬಂದರೆ ಯೋಗದ ಆಸನಗಳನ್ನು ಮನುಷ್ಯರಂತೆ ನಿಖರವಾಗಿ ಮಾಡುವ ಸಾಮರ್ಥ್ಯವನ್ನು ಈ ರೋಬೋ ಪ್ರದರ್ಶಿಸಿದೆ. ಟೆಸ್ಲಾ ಬಾಟ್ ರೋಬೋವು ಕಾಲು ಮತ್ತು ಕೈಗಳನ್ನು ಸುಲಭವಾಗಿ ಚಾಚುವ ಸಾಮರ್ಥ್ಯವನ್ನು ಹೊಂದಿದ್ದು, ವಿಷನ್ ಮತ್ತು ಜಾಯಿಂಟ್ ಪೊಸಿಷೆನ್ ಎನ್‌ಕೋಡರ್ ಮೂಲಕ ಈ ಸಾಮರ್ಥ್ಯ ಪಡೆದಿದೆ ಎಂದು ಕಂಪನಿ ತಿಳಿಸಿದೆ.
ರೋಬೋ ಯೋಗ ಮಾಡುತ್ತಿರುವ ಮತ್ತು ಬಣ್ಣಗಳನ್ನು ಗುರುತಿಸುತ್ತಿರುವ ವಿಡಿಯೊವನ್ನು ‘ಟೆಸ್ಲಾ ಆಪ್ಟಿಮಸ್’ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೊ ವೀಕ್ಷಿಸಿದ ’ಎಕ್ಸ್‘ ಮಾಲೀಕ ಎಲಾನ್ ಮಸ್ಕ್, ‘ಪ್ರೊಗ್ರೆಸ್’ ಎಂದು ಒಂದು ಪದದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.