ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶದಲ್ಲಿನ ವಿಸ್ಮಯ ನೋಡೋಣ ಬನ್ನಿ

Last Updated 1 ಮೇ 2022, 19:30 IST
ಅಕ್ಷರ ಗಾತ್ರ

ಬಾಹ್ಯಾಕಾಶ ಯಾವಾಗಲೂ ಆಶ್ಚರ್ಯದ ಆಗರ. ನಮಗೆ ಕಾಣುವ ಹಗಲಿನ ಆಕಾಶಕ್ಕೆ ಸೂರ್ಯನೊಬ್ಬನೇ ಅಧಿಪತಿ. ಇನ್ನು ರಾತ್ರಿ ವೇಳೆ ನಕ್ಷತ್ರಗಳು, ಗ್ರಹಗಳು, ಉಲ್ಕೆಗಳು, ಗೆಲಾಕ್ಸಿಗಳು, ನೆಬ್ಯುಲಾಗಳು, ಕೃತಕ ಉಪಗ್ರಹಗಳದ್ದೇ ಸಾಮ್ರಾಜ್ಯ. ಬರಿಗಣ್ಣಿಗೆ ಕಾಣುವ ನಕ್ಷತ್ರಗಳ ನೋಟವಂತೂ ಕಣ್ಣುಗಳು ಮತ್ತು ಮನಸ್ಸಿಗೆ ಮುದನೀಡುತ್ತವೆ.

ಒಮ್ಮೊಮ್ಮೆ ನಸುಕಿನ ವೇಳೆ ಆಕಾಶದಲ್ಲಿ ನಮ್ಮನ್ನು ಅಚ್ಚರಿಗೊಳಿಸುವ ವಿದ್ಯಮಾನಗಳು ನಡೆಯುತ್ತಿರುತ್ತವೆ. ಅಂಥ ಅಪರೂಪದ ಘಟನೆಯೊಂದು ಕಳೆದ ಒಂದು ವಾರದಿಂದ ನೀಲಾಕಾಶದಲ್ಲಿ ನಡೆಯುತ್ತಿದೆ.

ಬಹಳ ವರ್ಷಗಳ ನಂತರ ಸೌರವ್ಯೂಹದ 8 ಗ್ರಹಗಳಲ್ಲಿ (ಭೂಮಿಯನ್ನು ಬಿಟ್ಟು), ನಾಲ್ಕು ಗ್ರಹಗಳು ಬರಿಗಣ್ಣಿಗೆ ಕಾಣುತ್ತಿವೆ. ಮುಂಜಾನೆ 5 ಗಂಟೆಯ ಸುಮಾರಿಗೆ ದಿಗಂತದಿಂದ ಅತ್ಯಂತ ದೊಡ್ಡಗ್ರಹ ಗುರು, ನಂತರ ಶುಕ್ರಗ್ರಹ, ಪಕ್ಕದಲ್ಲಿ ಎಳೆಯ ಚಂದಿರ, ತುಸು ಮೇಲೆ ಕೆಂಬಣ್ಣದ ಮಂಗಳಗ್ರಹ ಹಾಗೂ ನಯನ ಮನೋಹರವಾದ ಶನಿ ಗ್ರಹಗಳು ಏಕರೇಖೆಯಲ್ಲಿ ಮೆರವಣಿಗೆ ಹೊರಟಂತೆ ಗೋಚರಿಸುತ್ತಿವೆ.ಇದೇ ಆ ವಿಶೇಷ ವಿದ್ಯಮಾನ.

ಏಪ್ರಿಲ್ 2ರಿಂದಲೇ ಈ ಗ್ರಹಗಳು ಬರಿಗಣ್ಣಿಗೆ ಕಾಣುತ್ತಿದ್ದವು. ಏಪ್ರಿಲ್ 24 ರಿಂದ 30ರವರೆಗೆ ಇನ್ನಷ್ಟು ಸ್ಪಷ್ಟವಾಗಿ ಕಾಣುತ್ತಿದ್ದವು. ದೃಷ್ಟಿ ಚುರುಕಾಗಿದ್ದವರಿಗೆ ಎತ್ತರದ ಪ್ರದೇಶದಿಂದ ಬುಧ ಗ್ರಹವನ್ನೂ ನೋಡುವ ಅವಕಾಶವಿತ್ತು. ಬೆಳಕು ಹೆಚ್ಚಾದಂತೆ ಈ ಗ್ರಹಗಳು ಕಾಣುತ್ತಿರಲಿಲ್ಲ. ಸೂರ್ಯನ ಪ್ರಕಾಶದಲ್ಲಿ ಶನಿಗ್ರಹ ಮತ್ತು ಮಂಗಳ ಗ್ರಹಗಳು ಮಸುಕಾಗುತ್ತವೆ.

ಮೇ 2 ರ ನಂತರವೂಈ ಗ್ರಹಗಳನ್ನು ಬರಿಗಣ್ಣಿನಲ್ಲಿ ನೋಡಬಹುದು. ರಾತ್ರಿ 2 ರಿಂದ ನಸುಕಿನ 4 ಗಂಟೆ ಸಮಯದಲ್ಲಿ ಈ ಗ್ರಹಗಳು ಕಾಣುತ್ತವೆ. ಬೈನಾಕ್ಯುಲರ್ ಇಲ್ಲವೇ ಅಧಿಕ ಸಾಮರ್ಥ್ಯದ ದೂರದರ್ಶಕವಿದ್ದರೆ (ಮೋಡಗಳಿಲ್ಲದ ವಾತಾವರಣವಿದ್ದರೆ) ಗುರುಗ್ರಹದ ನಾಲ್ಕು ಉಪ ಗ್ರಹಗಳಾದ ಐಯೋ, ಕ್ಯಾಲಿಸ್ಟೊ, ಯುರೋಪಾ ಮತ್ತು ಗ್ಯಾನಿಮೇಡ್‌ಗಳನ್ನೂನೋಡಿ ಆನಂದಿಸ ಬಹುದು. ಈ ರೀತಿಯ ಗ್ರಹಗಳ ಮೆರವಣಿಗೆ ಪ್ರತಿ 19 ವರ್ಷಗಳಿಗೊಮ್ಮೆ ನಡೆಯುತ್ತದೆ.

ರಾತ್ರಿಯ ಮತ್ತು ನಸುಕಿನ ಆಕಾಶವೀಕ್ಷಣೆ ನಿಜಕ್ಕೂ ಮನಸ್ಸಿಗೆ ಮುದನೀಡುತ್ತದೆ. ನೀವೂ ನೋಡಿ, ಮಕ್ಕಳಿಗೂ ತೋರಿಸುವ ಮೂಲಕ ವೈಜ್ಞಾನಿಕ ಪ್ರಜ್ಞೆ ರೂಪಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT