ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ನಿಂದ ಹಿಂದೆ ಸರಿದರೆ ಭಾರತದಲ್ಲಿ ಟೆಸ್ಲಾ ತಯಾರಿಸಿ; ಮಸ್ಕ್‌ಗೆ ಪೂನಾವಾಲಾ

Last Updated 8 ಮೇ 2022, 15:26 IST
ಅಕ್ಷರ ಗಾತ್ರ

ನವದೆಹಲಿ: ಅಕಸ್ಮಾತ್‌ ಟ್ವಿಟರ್‌ ಖರೀದಿಯಿಂದ ಹಿಂದೆ ಸರಿದರೆ, ಭಾರತದಲ್ಲಿ ಟೆಸ್ಲಾ ಕಾರು ತಯಾರಿಕೆಗೆ ಹೂಡಿಕೆ ಮಾಡುವಂತೆ ಇಲಾನ್‌ ಮಸ್ಕ್‌ ಅವರಿಗೆ ಸೀರಂ ಇನ್‌ಸ್ಟಿಟ್ಯೂಟ್‌ನ (ಎಸ್‌ಐಐ) ಸಿಇಒ ಆದಾರ್‌ ಪೂನಾವಾಲಾ ಪ್ರೇರೇಪಿಸಿದ್ದಾರೆ.

ಮಸ್ಕ್‌ ಅವರು ಸಾಮಾಜಿಕ ಮಾಧ್ಯಮ 'ಟ್ವಿಟರ್‌' ಕಂಪನಿಯನ್ನು 44 ಬಿಲಿಯನ್‌ ಡಾಲರ್‌ (ಸುಮಾರು ₹3.36 ಲಕ್ಷ ಕೋಟಿ) ಮೊತ್ತಕ್ಕೆ ಖರೀದಿಸಲು ಮುಂದಾಗಿದ್ದಾರೆ. ಅದಕ್ಕೆ ಅಗತ್ಯವಿರುವ ಹಣ ಸಂಗ್ರಹಿಸಲು ಟೆಸ್ಲಾ ಕಂಪನಿಯ 52.3 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಹಿಂದೆ ಮಸ್ಕ್‌ ಭಾರತದಲ್ಲಿ ಟೆಸ್ಲಾ ಕಂಪನಿಯ ವಿದ್ಯುತ್‌ ಚಾಲಿತ ಕಾರುಗಳನ್ನು ಮಾರಾಟ ಮಾಡಲು ಆಮದು ಸುಂಕ ಇಳಿಕೆ ಮಾಡುವಂತೆ ಕೋರಿದ್ದರು. ಆದರೆ, ದೇಶದಲ್ಲಿಯೇ ಕಾರು ತಯಾರಿಸುವಂತೆ ಭಾರತ ಸರ್ಕಾರವು ತಿಳಿಸಿತ್ತು.

ಕೋವಿಡ್‌ ಲಸಿಕೆ ತಯಾರಿಸುತ್ತಿರುವ ಸೀರಂ ಇನ್‌ಸ್ಟಿಟ್ಯೂಟ್‌ನ ಆದಾರ್‌ ಪೂನಾವಾಲಾ ಭಾರತದಲ್ಲಿ ಹೂಡಿಕೆ ಮಾಡುವಂತೆ ಮಸ್ಕ್‌ ಅವರನ್ನು ಪ್ರೇರೇಪಿಸಿ ಟ್ವೀಟಿಸಿದ್ದಾರೆ. ಇಲಾನ್‌ ಮಸ್ಕ್‌ ಅವರನ್ನು ಟ್ಯಾಗ್‌ ಮಾಡಿ 'ನೀವೇನಾದರು ಟ್ವಿಟರ್‌ ಖರೀದಿಸದೇ ಇದ್ದರೆ, ಭಾರತದಲ್ಲಿ ಅತ್ಯುತ್ತಮ ಗುಣಮಟ್ಟದ ಟೆಸ್ಲಾ ಕಾರುಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲು ಅಗತ್ಯವಿರುವ ಹೂಡಿಕೆ ಮಾಡುವತ್ತ ಗಮನಿಸಿ..' ಎಂದು ಪ್ರಕಟಿಸಿದ್ದಾರೆ.

'ಇದು ನಿಮ್ಮ ಈವರೆಗಿನ ಅತ್ಯುತ್ತಮ ಹೂಡಿಕೆಯಾಗಲಿದೆ ಎಂಬುದಂತೂ ಖಾತ್ರಿ' ಎಂದಿದ್ದಾರೆ.

ಭಾರತದಲ್ಲೇ ಟೆಸ್ಲಾ ಎಲೆಕ್ಟ್ರಿಕ್‌ ಕಾರುಗಳನ್ನು ತಯಾರಿಸಲು 'ಯಾವುದೇ ಸಮಸ್ಯೆ ಇಲ್ಲ' ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಕಳೆದ ತಿಂಗಳು ಹೇಳಿದ್ದರು. ಆದರೆ, ಕಂಪನಿಯು ಚೀನಾದಿಂದ ಕಾರುಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಉಲ್ಲೇಖಿಸಿದ್ದರು.

ಆಮದು ಆಗುವ ವಾಹನಗಳು ಭಾರತದಲ್ಲಿ ಯಶಸ್ಸು ಕಂಡರೆ, ಪ್ರಾದೇಶಿಕವಾಗಿ ಎಲೆಕ್ಟ್ರಿಕ್‌ ಕಾರು ತಯಾರಿಕೆಗೆ ಟೆಸ್ಲಾ ಘಟಕ ಸ್ಥಾಪಿಸಲಾಗುವುದು ಎಂದು ಮಸ್ಕ್‌ ಕಳೆದ ವರ್ಷ ಆಗಸ್ಟ್‌ನಲ್ಲಿ ಹೇಳಿದ್ದರು.

ಕಾರಿನ ಬೆಲೆ, ವಿಮೆ ಹಾಗೂ ಸಾಗಣೆ ವೆಚ್ಚ(ಸಿಐಎಫ್‌) ಸೇರಿ ಕಾರಿನ ಮೌಲ್ಯವು 40,000 ಅಮೆರಿಕನ್‌ ಡಾಲರ್‌(ಸುಮಾರು ₹30.78 ಲಕ್ಷ) ಮೀರಿದರೆ, ಭಾರತದಲ್ಲಿ ಶೇಕಡ 100ರಷ್ಟು ಆಮದು ಸುಂಕವನ್ನು ವಿಧಿಸಲಾಗುತ್ತಿದೆ. ಅದಕ್ಕಿಂತ ಕಡಿಮೆ ಮೌಲ್ಯದ ಕಾರುಗಳಿಗೆ ಶೇಕಡ 60ರಷ್ಟು ಸುಂಕ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT