ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಡುಗನ ಹೆಸರಲ್ಲಿ ಐಡಿ ಸೃಷ್ಟಿಸಿದ ಹುಡುಗಿ: ಅತ್ಯಾಚಾರದ ಚರ್ಚೆಗೆ ಹೊಸ ತಿರುವು

Last Updated 11 ಮೇ 2020, 7:06 IST
ಅಕ್ಷರ ಗಾತ್ರ

ಹದಿಹರೆಯದ ಹುಡುಗರು ತಮ್ಮ ಸಹಪಾಠಿಯ ಮೇಲೆ ಅತ್ಯಾಚಾರ ಎಸಗುವ ವಿಚಾರ ಚರ್ಚಿಸಿದ್ದರು ಎಂಬ ಕಾರಣದಿಂದ ದೇಶವ್ಯಾಪಿ ಸುದ್ದಿಯಾಗಿದ್ದ ಇನ್‌ಸ್ಟಾಗ್ರಾಂನ ‘ಬಾಯ್ಸ್‌ ಲಾಕರ್‌ ರೂಂ’ಗ್ರೂಪ್‌ನ ಚರ್ಚೆಗೆ ಹೊಸ ತಿರುವು ಸಿಕ್ಕಿದೆ.

ಯುವತಿಯೊಬ್ಬಳು ಯುವಕನ ಹೆಸರಿನಲ್ಲಿ ನಕಲಿ ಅಕೌಂಟ್‌ ಸೃಷ್ಟಿಸಿ, ಅದರಿಂದ ತನ್ನ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸುವ ವಿಚಾರ ಚರ್ಚಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಸ್ನಾಪ್‌ಚಾಟ್‌ನಲ್ಲಿ ನಡೆದಿರುವ ಚರ್ಚೆ ಇನ್‌ಸ್ಟಾಗ್ರಾಂ ಗ್ರೂಪ್‌ಗೂ ಬಂದಿದೆ. ಅಲ್ಲಿ ಇದು ಮುಂದುವರಿದಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

‘ತನ್ನ ಗೆಳೆಯನ ವ್ಯಕ್ತಿತ್ವ ತಿಳಿಯಲೆಂದು ಆ ಹುಡುಗಿ ಸಿದ್ದಾರ್ಥ್ ಹೆಸರಿನಲ್ಲಿ ನಕಲಿ ಸ್ನಾಪ್‌ಚಾಟ್ ಅಕೌಂಟ್ ಕ್ರಿಯೇಟ್ ಮಾಡಿದ್ದಳು. ಯಾರಾದರೂ ಲೈಂಗಿಕ ವಿಚಾರ ಮಾತಾಡಿದರೆ ಆ ಹುಡುಗ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂದು ತಿಳಿಯುವುದು ಅವಳ ಉದ್ದೇಶವಾಗಿತ್ತು’ ಎಂದು ಸೈಬರ್ ಘಟಕದ ಪೊಲೀಸರು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ಬಾಯ್ಸ್‌ ಲಾಕರ್‌ ರೂಂ ಸಂಭಾಷಣೆಗಳು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದ್ದವು. ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು. ಅನಂತರವಷ್ಟೇ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ 18 ವರ್ಷದ ಯುವಕ ಮತ್ತು ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. 24 ಮಂದಿ ಸದಸ್ಯರಿದ್ದ ಗ್ರೂಪ್‌ನಲ್ಲಿ ಈವರೆಗೆ 16 ಮಂದಿಯನ್ನು ಗುರುತಿಸಲಾಗಿದೆ. ಅವರೆಲ್ಲರ ಮೊಬೈಲ್‌ ಫೋನ್‌ಗಳನ್ನು ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಗ್ರೂಪ್‌ನಲ್ಲಿದ್ದ ಬಹುತೇಕ ಹುಡುಗರು ದೆಹಲಿಯ ಪ್ರತಿಷ್ಠಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

‘ಸ್ನಾಪ್‌ಚಾಟ್‌ನಲ್ಲಿ ಆ ಹುಡುಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬದಲಿಗೆ ಅದರ ಸ್ಕ್ರೀನ್‌ಶಾಟ್‌ಗಳನ್ನು ತೆಗೆದಿಟ್ಟುಕೊಂಡು ಗೆಳೆಯರಿಗೆ ಮತ್ತು ಸಿದ್ದಾರ್ಥ ಹೆಸರಿನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿದ್ದ ಹುಡುಗಿಗೆ ತೋರಿಸಿದ. ಸತ್ಯ ಏನು ಎಂಬುದು ಗೊತ್ತಿದ್ದ ಕಾರಣ ಹುಡುಗಿಯು ಯಾರಿಗೂ ದೂರು ನೀಡಿರಲಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.

ತನ್ನ ಮೊಬೈಲ್‌ಗೆ ಬಂದಿದ್ದ ಅದೇ ಸ್ಕೀನ್‌ಶಾಟ್‌ ಅನ್ನು ಮತ್ತೊಬ್ಬ ಹುಡುಗ ಬಾಯ್ಸ್‌ ಲಾಕರ್ ರೂಂ ಗ್ರೂಪ್‌ಗೆ ಹಾಕಿದ್ದ. ಈ ಇನ್‌ಸ್ಟಾಗ್ರಾಂ ಗ್ರೂಪ್‌ನ ಇತರ ಚಾಟ್‌ಗಳು ವೈರಲ್ ಆದಾಗ ಈ ಸಂಭಾಷಣೆಯೂ ಅದರಲ್ಲಿ ಸೇರಿಕೊಂಡು ಗೊಂದಲ ಹುಟ್ಟುಹಾಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವಿವಾದಕ್ಕೆ ಕಾರಣಳಾದ ಹುಡುಗಿಯ ವಿರುದ್ಧ ಯಾವುದೇ ಕ್ರಮ ಜರುಗಿಸುವುದು ಅನುಮಾನ. ಯುವತಿಯರ ಫೋಟೊಗಳನ್ನು ಅಶ್ಲೀಲವಾಗಿ ತಿದ್ದುವ ಮತ್ತು ಕೆಟ್ಟದಾಗಿ ಕಾಮೆಂಟ್‌ ಮಾಡುವ ಬಾಯ್ಸ್‌ ಲಾಕರ್‌ ರೂಂ ಇನ್‌ಸ್ಟಾಗ್ರಾಂ ಗ್ರೂಪ್‌ನ ವಿವಾದಕ್ಕೂ, ಸ್ನಾಪ್‌ಚಾಟ್‌ ಸಂಭಾಷಣೆಗೂ ಯಾವುದೇ ಸಂಬಂಧವಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ತನಿಖಾಧಿಕಾರಿ ಪ್ರತಿಕ್ರಿಯಿಸಿದ್ದಾರೆ.

‘ಅತ್ಯಾಚಾರದ ವಿಷಯವನ್ನು ಪ್ರಸ್ತಾಪಿಸಿದ ಮತ್ತು ಅದಕ್ಕಾಗಿ ಯುವಕನ್ನು ಪ್ರೇರೇಪಿಸಲು ಯತ್ನಿಸಿದ ಯುವತಿಯ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಪೊಳ್ಳು ಮಹಿಳಾವಾದದ ಭ್ರಮೆಯಿಂದ ಸರ್ಕಾರ ಮತ್ತು ಪೊಲೀಸರು ಹೊರಗೆ ಬರಬೇಕು’ ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ ಹೊರಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT