ಮಂಗಳವಾರ, ನವೆಂಬರ್ 19, 2019
26 °C

'ವಿಧಿ ರೇಪ್‌ನಂತೆ; ನಿಮ್ಮಿಂದ ತಡೆಯಲಾಗದಿದ್ದರೆ ಆಸ್ವಾದಿಸಿ': ಕೇರಳ ಸಂಸದನ ಪತ್ನಿ

Published:
Updated:
Facebook Post

ಕೊಚ್ಚಿ:  ಕೇರಳ ಸಂಸದ ಹೈಬಿ ಈಡನ್ ಅವರ ಪತ್ನಿ ಅನ್ನಾ ಲಿಂಡಾ ಈಡನ್ ಫೇಸ್‌ಬುಕ್‌ನಲ್ಲಿ ಬರೆದ ಪೋಸ್ಟ್ ವಿವಾದಕ್ಕೀಡಾಗಿದೆ.

ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು ಮನೆಯೊಳಗೆ ನೀರು ನುಗ್ಗಿರುವ ಬಗ್ಗೆ ಸೋಮವಾರ ಅನ್ನಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.  ಮಳೆ ನೀರು ನುಗ್ಗಿದಾಗ ಈ ನೀರಲ್ಲಿ ಆಟವಾಡುತ್ತಿರುವ ಮತ್ತು ತಿಂಡಿ ತಿನ್ನುತ್ತಿರುವ ವಿಡಿಯೊವೊಂದನ್ನು ಪೋಸ್ಟಿಸಿದ್ದ ಅನ್ನಾ,  'ವಿಧಿ ಅತ್ಯಾಚಾರದಂತೆ. ನಿಮ್ಮಿಂದ ತಡೆಯಲಾಗದಿದ್ದರೆ ಆಸ್ವಾದಿಸಿ' ಎಂಬ ಶೀರ್ಷಿಕೆ ನೀಡಿದ್ದರು.

ಎರ್ನಾಕುಳಂನ ಕಾಂಗ್ರೆಸ್ ಪಕ್ಷದ ನಾಯಕ ಹೈಬಿ ಈಡನ್‌ರ ಪತ್ನಿ ಈ ರೀತಿ ಮಹಿಳಾ ವಿರೋಧಿ ಪೋಸ್ಟ್ ಹಾಕಿರುವುದರ ಬಗ್ಗೆ ಆಕ್ಷೇಪಗಳು ಕೇಳಿ ಬಂದಿದ್ದು, ಪೋಸ್ಟ್ ವೈರಲ್ ಆಗಿತ್ತು.  ಪೋಸ್ಟ್ ಬಗ್ಗೆ ಟೀಕಾ ಪ್ರಹಾರವಾಗುತ್ತಿದ್ದಂತೆ ಅನ್ನಾ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

 ಇದಾದ ನಂತರ ಕ್ಷಮೆಯಾಚಿಸಿ ಮಂಗಳವಾರ ಬೆಳಗ್ಗೆ ಬೇರೊಂದು ಬರಹ ಪ್ರಕಟಿಸಿದ್ದಾರೆ. ಅನ್ನಾ ಅವರ ಬರಹದ ಅನುವಾದ ಇಲ್ಲಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ನಾನು  ಬಳಸಿದ ಪದಗಳ ಬಗ್ಗೆ ನನ್ನ ಯೋಚನೆಗಿಂತ ಅತೀತವಾಗಿ ಚರ್ಚೆಯಾಗಿದೆ.  ಜೀವನದಲ್ಲಿ ಆ ಪರಿಸ್ಥಿತಿ ಅನುಭವಿಸಿದವರ ಮನಸ್ಸಿಗೆ ಇದು ನೋವುಂಟು ಮಾಡಿದೆ ಎಂದು ನನಗರ್ಥವಾಗುತ್ತದೆ.
ಕಳೆದ ಒಂದು  ವಾರದಿಂದ ನನ್ನ ಅಪ್ಪನ ಆರೋಗ್ಯ ಕಂಗೆಟ್ಟಿದ್ದು  ಅಮೃತಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ಮತ್ತು ಮನೆ ನಡುವಿನ ಓಡಾಟದ ಹೊತ್ತಲ್ಲೇ ಈವರೆಗೆ ಕಾಣದಷ್ಟು ನೀರು ಮನೆಯೊಳಗೆ ನುಗ್ಗಿ ನಾಶ ನಷ್ಟವುಂಟಾಗಿದ್ದು. ಅಮ್ಮ ಮತ್ತು ಮಕ್ಕಳನ್ನು ಕರೆದುಕೊಂಡು ತುಂಬಾ ಕಷ್ಟದಿಂದಲೇ ಮನೆಯ ಕೆಲವು ವಸ್ತುಗಳನ್ನು ಹಿಡಿದು ನಾವು ಮನೆಯಿಂದ ಹೊರಗೆ ಕಾಲಿಟ್ಟಿದ್ದು. ಹೈಬಿ ಚುನಾವಣಾ ಕಾರ್ಯದಲ್ಲಿ ಬ್ಯುಸಿಯಾಗಿದ್ದರು.

ಅಪ್ಪನ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ವೆಂಟಿಲೇಟರ್ ಸಹಾಯವೂ ಅವರಿಗೆ ನೀಡಲು ಆಗುತ್ತಿಲ್ಲ. ಕೆಲವೊಮ್ಮೆ ನಮ್ಮ ಜೀವನದಲ್ಲಿ ಈ ರೀತಿಯ ಪರಿಸ್ಥಿತಿ ಎದುರಾಗುತ್ತದೆ. ಎಲ್ಲ ದಿಶೆಗಳಿಂದಲೂ ಅಸಹಾಯಕತೆ ಅನುಭವಿಸುವ ಕ್ಷಣಗಳು. ಜೀವನದಲ್ಲಿನ ಇಂತಾ ಕ್ಷಣಗಳನ್ನು ನಗುತ್ತಾ ಎದುರಿಸಲು ನಾನು ಕಲಿತಿದ್ದೇನೆ. ಹೊಡೆತಗಳನ್ನು ಸಂಭ್ರಮಗಳನ್ನಾಗಿ ಮಾಡಿ ಅದರಿಂದ ಬಚಾವಾಗಲು ಇರುವ ಒಂದು ಪ್ರಯತ್ನ.

ಶಾಲೆಯಲ್ಲಿ ಕಲಿಯುತ್ತಿದ್ದ ಕಾಲ ಅದು. ಅಮಿತಾಬ್  ಬಚ್ಚನ್ ಎಬಿಸಿಎಲ್ ಎಂಬ ಕಾರ್ಯಕ್ರಮ ನಡೆಸಿ ಎಲ್ಲ ಕಳೆದುಕೊಂಡಿದ್ದ ಹೊತ್ತಲ್ಲಿ ಅವರು ಹೇಳಿದ ಹೇಳಿಕೆಯನ್ನೇ ನಾನಿಲ್ಲಿ ಹೇಳಿದ್ದು. ಆ ಕಾಲದಿಂದಲೇ ಈ ವಾಕ್ಯ ನನ್ನ ಮೇಲೆ ಪ್ರಭಾವ ಬೀರಿತ್ತು. ಹಾಗಾಗಿ ಈ ಪರಿಸ್ಥಿತಿಯಲ್ಲಿ ನಾನು ಆ ವಾಕ್ಯವನ್ನು ಬಳಸಿದೆ.
ಹಲವಾರು ಮಹಿಳೆಯರು ಅನುಭವಿಸಬೇಕಾಗಿ ಬಂದ ನೋವನ್ನು ಉದಾಹರಣೆಯಾಗಿ  ನೀಡಿ ಅವರನ್ನು ಅಮಾನಿಸುವ ಉದ್ದೇಶ ನನಗಿರಲಿಲ್ಲ.
ಓರ್ವ ಜನಪ್ರತಿನಿಧಿಯ ಪತ್ನಿಯಾಗಿರುವ ನಾನು ಜನರ ಕಷ್ಟ, ನೋವುಗಳನ್ನು ಅರ್ಥ ಮಾಡಿಕೊಂಡು ಅವರೊಂದಿಗೆ ನಿಲ್ಲಲು ಸದಾ ಪ್ರಯತ್ನಿಸಿದ್ದೇನೆ. ನನ್ನ ಪೋಸ್ಟ್‌ನ್ನು  ತಪ್ಪಾಗಿ ಅರ್ಥೈಸಿಕೊಂಡದ್ದಕ್ಕೆ ಬೇಸರವಿದೆ. ನಾನು ಅದಕ್ಕಾಗಿ ಕ್ಷಮೆ ಯಾಚಿಸುತ್ತಿದ್ದೇನೆ.

ಪ್ರತಿಕ್ರಿಯಿಸಿ (+)