ಶನಿವಾರ, ಅಕ್ಟೋಬರ್ 16, 2021
29 °C

ಆನ್‌ಲೈನ್‌ಗೆ ಮರಳಿದ ಫೇಸ್‌ಬುಕ್, ವಾಟ್ಸ್‌ಆ್ಯಪ್: ಕ್ಷಮೆ ಕೋರಿದ ಸಂಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್ : ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆ್ಯಪ್ ಮತ್ತು ಮೆಸೆಂಜರ್ ಅಪ್ಲಿಕೇಶನ್‌ಗಳು ಆರು ಗಂಟೆಗಳ ಸ್ಥಗಿತದ ಬಳಿಕ ಸಕ್ರಿಯಗೊಂಡಿವೆ. 

ಫೇಸ್‌ಬುಕ್ ಒಡೆತನದ ಜಾಲತಾಣಗಳು ಸೋಮವಾರ ಸಂಜೆಯಿಂದ ಸ್ಥಗಿತಗೊಂಡಿದ್ದವು. ಜಾಲತಾಣಗಳನ್ನು ಬಳಕೆ ಮಾಡಲು ಬಳಕೆದಾರರಿಗೆ ಸಾಧ್ಯವಾಗಲಿಲ್ಲ. ಕಾರ್ಯಾಚರಣೆ ಸ್ಥಗಿತಗೊಂಡಿದ್ದರಿಂದ ವಿಶ್ವದಾದ್ಯಂತ ಲಕ್ಷಾಂತರ ಜನರು ಸಮಸ್ಯೆ ಎದುರಿಸಿದರು. ಕಾರ್ಯಾಚರಣೆ ಸ್ಥಗಿತಗೊಂಡಿದ್ದರೂ, ಬಳಕೆದಾರರ ದತ್ತಾಂಶಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.

‘ನಮ್ಮ ಸೇವೆಗಳು ಈಗ ಆನ್‌ಲೈನ್‌ಗೆ ಬಂದಿದ್ದು, ಅವುಗಳನ್ನು ಸಾಮಾನ್ಯ ಕಾರ್ಯಾಚರಣೆಗಳಿಗೆ ಸಂಪೂರ್ಣವಾಗಿ ಹಿಂದಿರುಗಿಸಲು ನಾವು ಸಕ್ರಿಯವಾಗಿ ಕೆಲಸ ಮಾಡಿದ್ದೇವೆ’ ಎಂದು ಫೇಸ್‌ಬುಕ್ ಉಪಾಧ್ಯಕ್ಷ ಸಂತೋಷ್ ಜನಾರ್ದನ್ ಅವರು ಸೋಮವಾರ ಹೇಳಿದ್ದಾರೆ.

‘ನಮ್ಮ ವೇದಿಕೆಗಳ ಮೇಲೆ ಅವಲಂಬಿತವಾಗಿರುವ ಪ್ರಪಂಚದಾದ್ಯಂತ ಇರುವ ಎಲ್ಲ ಬಳಕೆದಾರರಿಗೆ ಉಂಟಾದ ಅನನುಕೂಲಕ್ಕಾಗಿ ವಿಷಾದಿಸುತ್ತೇವೆ. ಕನಿಷ್ಠ ಸಮಯದಲ್ಲಿ ವ್ಯವಸ್ಥೆಯನ್ನು ಸರಿದಾರಿಗೆ ತಂದಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಐಫೋನ್ ಮತ್ತು ಆಂಡ್ರಾಯ್ಡ್ ಕಾರ್ಯಾಚರಣೆಗಳ ವೆಬ್ ಮತ್ತು ಮೊಬೈಲ್ ಆ್ಯಪ್‌ ಅವತರಣಿಕೆಗಳೆರಡರಲ್ಲೂ ಈ ಸಮಸ್ಯೆ ತಲೆದೋರಿತ್ತು. ಬಳಕೆದಾರರು ಧ್ವನಿ ಕರೆ ಅಥವಾ ವಿಡಿಯೊ ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಅಥವಾ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗಲಿಲ್ಲ. 

‘ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ನಾವು ನೆಟ್‌ವರ್ಕಿಂಗ್ ಸಮಸ್ಯೆಗಳನ್ನು ಅನುಭವಿಸುತ್ತಿದ್ದೇವೆ. ಸಾಧ್ಯವಾದಷ್ಟು ಬೇಗ ಕಾರ್ಯಾಚರಣೆ ಮರುಸ್ಥಾಪಿಸಲು ತಂಡಗಳು ವೇಗವಾಗಿ ಕೆಲಸ ಮಾಡುತ್ತಿವೆ’ ಎಂದು ಫೇಸ್‌ಬುಕ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಮೈಕ್ ಶ್ರೋಪರ್ ಟ್ವೀಟ್ ಮಾಡಿದ್ದರು.

ಆಗಿರುವ ಸಮಸ್ಯೆ ಬಗ್ಗೆ ಜನರಿಗೆ ಮಾಹಿತಿ ನೀಡಲು ಟ್ವಿಟರ್‌ ಜಾಲತಾಣವನ್ನು ಫೇಸ್‌ಬುಕ್ ಸಿಬ್ಬಂದಿ ಉಪಯೋಗಿಸಿದರು.

ಕ್ಷಮೆಯಾಚನೆ

ಸಮಸ್ಯೆ ಉಂಟಾಗಿದ್ದರಿಂದ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಬಳಕೆದಾರರ ಕ್ಷಮೆ ಕೋರಿದ್ದಾರೆ. ‘ಅಡಚಣೆಗಾಗಿ ಕ್ಷಮಿಸಿ. ನಿಮ್ಮ ಆಪ್ತರೊಂದಿಗೆ ಸಂಪರ್ಕದಲ್ಲಿರಲು ನಮ್ಮ ಸೇವೆಗಳ ಮೇಲೆ ನೀವು ಎಷ್ಟು ಅವಲಂಬಿತರಾಗಿದ್ದೀರಿ ಎಂಬುದು ನನಗೆ ತಿಳಿದಿದೆ’ ಎಂದು ಜುಕರ್‌ಬರ್ಗ್ ಹೇಳಿದ್ದಾರೆ. 

ವಿಶ್ವದಾದ್ಯಂತ ಸುಮಾರು 300 ಕೋಟಿ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್, ಭ್ರಷ್ಟಾಚಾರ ವಿರೋಧಿ ಹೋರಾಟಗಾರರ ಕಾರಣದಿಂದ ಕಳೆದ ಹದಿನೈದು ದಿನಗಳಿಂದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಫೇಸ್‌ಬುಕ್‌ನ ಮಾಜಿ ಎಂಜಿನಿಯರ್ ಫ್ರಾನ್ಸಿಸ್ ಹೌಗೆನ್ ಅವರು ಕಳೆದ ವಾರ ಹಲವಾರು ಆಂತರಿಕ ದಾಖಲೆಗಳನ್ನು ಸೋರಿಕೆ ಮಾಡಿದ್ದರು. ‘ಸಂಸ್ಥೆಯು ತನ್ನ ಬಳಕೆದಾರರ ಸುರಕ್ಷತೆಗಿಂತ ಹೆಚ್ಚಾಗಿ ಲಾಭವನ್ನು ಆಯ್ಕೆ ಮಾಡಿಕೊಳ್ಳುತ್ತಿದೆ’ ಎಂದು ಅವರು ಆರೋಪಿಸಿದ್ದರು. 

ಜುಕರ್‌ಬರ್ಗ್‌ಗೆ ಭಾರಿ ನಷ್ಟ

ಮಾರ್ಕ್ ಜುಕರ್‌ಬರ್ಗ್ ಅವರ ವೈಯಕ್ತಿಕ ಸಂಪತ್ತು ಕೆಲವೇ ಗಂಟೆಗಳಲ್ಲಿ ₹45 ಸಾವಿರ ಕೋಟಿಯಷ್ಟು (6 ಬಿಲಿಯನ್ ಡಾಲರ್‌) ಕುಸಿದಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಸಂಸ್ಥೆಯ ಷೇರುಗಳು ಸೋಮವಾರ ಶೇ 4.9ರಷ್ಟು ಕುಸಿತ ಕಂಡವು. ಸೆಪ್ಟೆಂಬರ್ ಮಧ್ಯಭಾಗದಿಂದ ಒಟ್ಟು ಶೇ 15ರಷ್ಟು ಇಳಿಕೆ ದಾಖಲಾಗಿದೆ. 

ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಿಂದ ಜುಕರ್‌ಬರ್ಗ್ ಕೆಳಿಗಿಳಿದಿದ್ದಾರೆ. ಕೆಲವೇ ವಾರಗಳಲ್ಲಿ ಅವರ ಸಂಪತ್ತಿನ ಮೌಲ್ಯ ₹9 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಅವರು ₹10.50 ಲಕ್ಷ ಕೋಟಿ ಸಂಪತ್ತು ಹೊಂದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು