ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್ ಬುಕ್ಕೆಂಬ ಖಾಸಗೀ ಸಂದೂಕ

Last Updated 23 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಹಸ್ತದಗಲದ ಫೋನಿನಲ್ಲಿ ಅದೆಂಥಾ ಜಗತ್ತು ಅಡಗಿದೆ? ಸುತ್ತಲಿನ ವಾಸ್ತವವನ್ನೂ ಮರೆಮಾಚುವಷ್ಟು! ಈಗೀಗ ರೈಲಿನಲ್ಲಿ ಯಾರೂ ಹೆಚ್ಚು ಮಾತನಾಡುವುದೂ ಇಲ್ಲ. ಮೊದಲಾದರೆ ಮೈಸೂರು ಬಿಟ್ಟು ಶ್ರೀರಂಗಪಟ್ಟಣ ಬರುವುದರೊಳಗೆ ಊರು, ಕುಲ, ಕಸುಬು, ಸಂಬಂಧಿಕರು, ಮನೆ ಅಡ್ರೆಸ್ಸು, ಊರಿನ ಒಳ್ಳೆಯ ಹೋಟೆಲ್ಲುಗಳು, ಸಂಬಂಧಿಗಳಲ್ಲಿ ವರ/ವಧು ಹುಡುಕುತ್ತಿರುವವರು ಇತ್ಯಾದಿಗಳನ್ನು ತಿಳಿದುಬಿಡುತ್ತಿದ್ದರು. ಆ ಸ್ಪೀಡಿನ ಡೇಟಾ ಟ್ರಾನ್ಸ್‌ಫರ್ರು ಇನ್ನೂ ತಂತ್ರಜ್ಞಾನಕ್ಕೆ ಸಾಧ್ಯವಾಗಿಲ್ಲ ಅಂದುಕೊಳ್ತೀನಿ.

ನಾನು ಫೇಸ್‌ಬುಕ್ಕಿಗೆ ಕಾಲಿಟ್ಟಾಗ ಅದರ ಬಳಕೆ, ತೊಂದರೆ ಏನೂ ಗೊತ್ತಿರಲಿಲ್ಲ. ಹನ್ನೊಂದು ವರ್ಷಗಳ ಹಿಂದೆ ಬಹು ಮುಗ್ಧವಾಗಿ ಒಂದು ಅಕೌಂಟ್ ಕ್ರಿಯೇಟ್ ಮಾಡಿ ಮರೆತುಬಿಟ್ಟೆ. ಹೊಸ ತಂತ್ರಜ್ಞಾನವನ್ನೂ ನಾವು ಬಳಸುವುದು ನಮ್ಮಲ್ಲಿನ ಯಾವುದೋ ಒಂದು ಅನುಭೂತಿಯನ್ನು ಉದ್ದೀಪನಗೊಳಿಸಿಕೊಳ್ಳುವ ಭರದಲ್ಲಿ ಹಾಗೂ ದೂರದಲ್ಲಿರುವ ಏನೋ ಒಂದು ಅನುಭವ ಎಟುಕುತ್ತದೆ ಅಂತಲೇ.
ಆದರೆ ಬಹಳ ಸಾರಿ ಇಂಥಾ ಅನುಭವಗಳು ಕಿರಿಕಿರಿ ಕೂಡ ಉಂಟು ಮಾಡುತ್ತವೆ. ಮನಸ್ಸಿಗೆ ಒಂದು ಬಗೆಯ ಮಂಕು ಕವಿಸಿಬಿಟ್ಟು ಇಡೀ ದಿನವನ್ನು ಕಾರ್ಮೋಡಗಳ ಕೈಗೆ ಕೊಟ್ಟು ಮಜಾ ನೋಡುತ್ತವೆ.

ಕೆಲ ಜಾಣರು ಫೇಕ್ ಐಡಿಗಳನ್ನು ಸೃಷ್ಟಿ ಮಾಡಿ ಮಜಾ ತಗೊಂಡರೆ ಇನ್ನು ಕೆಲವರು ತಮ್ಮದೇ ಫೋಟೋ ಹಾಗೂ ಹೆಸರು ಹಾಕಿದ ಕೂಡಲೆ ಖಾಲೀ ಕೂತ ಜೇಮ್ಸ್ ಬಾಂಡುಗಳಿಗೆ ಉದ್ಯೋಗಾವಕಾಶ ಕಂಡಂತೆ ಭಾಸವಾಗುತ್ತದೆ. ಹೇಗೂ ಪುಕ್ಕಟೆ ಇಂಟರ್ನೆಟ್ಟನ್ನು ಈ ದೇಶ ಕೆಲವರಿಗೆ ದಯಪಾಲಿಸಿದೆ. ನಂತರ ಖಾಲೀ ಅಂತೂ ಕೂತೇ ಇದ್ದೇವೆ. ಉಳಿದವರೂ ಹೀಗೇ ಅಂತ ಅನ್ನಿಸುತ್ತೋ ಏನೋ.
ಇದು ನನ್ನೊಬ್ಬಳ ಆನುಭವ ಮಾತ್ರ ಅಲ್ಲ ಸಾಕಷ್ಟು ಜನ ಹೆಣ್ಣು ಮಕ್ಕಳು ಇಂತಹ ಕಿರಿಕಿರಿಯನ್ನು ಅನುಭವಿಸುತ್ತಿರುತ್ತಾರೆ. ಹೆಂಗಸರಿಗೆ ಗಂಡಸರಿಂದ ಕಾಟ ವಿಪರೀತ ಅನ್ನಿಸಿದರೆ, ಗಂಡಸರಿಗೆ ಹೆಂಗಸರೂ ಕಾಟ ಕೊಡುತ್ತಾರೆ ಎನ್ನುವುದೂ ನಿಜವೇ ಇರಬೇಕು. ಹಾಗೆ ಅದು ನಿಜವೇ ಇದ್ದಲ್ಲಿ ತಂತ್ರಜ್ಞಾನದಿಂದಲಾದರೂ ಎರಡೂ ಲಿಂಗಗಳೂ ಸಮನಾಗಿ ಹಿಂಸೆ ಅನುಭವಿಸುವಂತಾಯ್ತಲ್ಲ!

ಕೆಲವರು ವರ್ಷಾನುಗಟ್ಟಲೆ ‘ಗುಡ್ ಮಾರ್ನಿಂಗ್’ ಹೇಳುತ್ತಲೇ ಇರುತ್ತಾರೆ. ಅವರಿಗೆ ಇದು ದೇವರ ಮೇಲೆ ಅರ್ಪಿಸುವ ಹೂವಿನಂತೆ ಅಂತ ಕಾಣುತ್ತೆ. ಅದು ಪೂಜೆ ಹೌದೋ ಅಲ್ಲವೋ ಅಂತೂ ’ಗುಡ್ ಮಾರ್ನಿಂಗ್ ಸಮರ್ಪಯಾಮಿ’ ಮಾಡುತ್ತಲೇ ಸಾರ್ಥಕ್ಯ ಕಾಣುತ್ತಾರೆ. ಅವರಿಗೆ ಉತ್ತರ ಮುಖ್ಯವಲ್ಲ...ಬೆಳಿಗ್ಗೆ ಮಾರ್ನಿಂಗ್ ವಾಕ್‌ಗೆಂದು ಹೋದವರು ಅಲ್ಲಲ್ಲಿ ಕೂತು ಚಂದ ಚಿತ್ತಾರದ ಹೂವು/ಸೂರ್ಯ/ಹಣ್ಣು/ನಾಯಿ/ಬೆಕ್ಕು/ಪುಟ್ಟ ಮಕ್ಕಳು/ಸೂರ್ಯಾಸ್ತ/ಸೂರ್ಯೋದಯ/ಸಮುದ್ರ ಇತ್ಯಾದಿ ಸಂಕೇತಗಳುಳ್ಳ ತಮಗೂ ಯಾರೋ ಯಾವಾಗಲೋ ಕಳಿಸಿದ ಕಾರ್ಡೊಂದನ್ನು ಫಾರ್ವರ್ಡ್ ಮಾಡಿ ಗುಡ್ ಮಾರ್ನಿಂಗ್ ಹೇಳಿ ಕರ್ತವ್ಯ ಪಾಲನೆ ಮಾಡುತ್ತಾರೆ.

ಹೆಣ್ಣು ಮಕ್ಕಳಿಗೆ ಇನ್ ಬಾಕ್ಸು ಎಂದರೆ ಒಂದು ಥರಾ ಆರಾಮದ ಫೀಲಿಂಗು. ಆರಾಮಾಗಿ ಜಗುಲಿ ಕಟ್ಟೆಗೆ ಕೂತು ಹಳೆ ಒಡವೆಗಳ ವೈಭವವನ್ನೂ, ಹೊಸ ಸಂಸಾರದ ಸಮಸ್ಯೆಗಳನ್ನೂ ಏಕಕಾಲದಲ್ಲಿ ಹೇಳಿಕೊಳ್ಳಲು ಸಾಧ್ಯವಾಗುವ ಹಾಗೆ ಗೋಡೆಯ ಮೇಲೆ ಒಂದು ಬರೆದು, ಅಲ್ಲಿ ಬರೆಯಲಾಗದ್ದನ್ನು ಇಲ್ಲಿ ಬರೆದುಕೊಂಡು ಏನೋ ಸಮಾಧಾನ ಕಂಡುಕೊಳ್ತೀವಿ. ಎಲ್ಲವನ್ನೂ ಬಹಿರಂಗದಲ್ಲಿ ಮಾತನಾಡಲಾಗುವುದಿಲ್ಲವಲ್ಲ ಎನ್ನುವ ಕಷ್ಟ! ಅಲ್ಲದೆ ಮಾತನಾಡಿದರೆ ಸುಮ್ಮನೆ ಮತ್ತೆ ಇನ್ಯಾರೋ ಅದಕ್ಕೆ ಪ್ರತಿಕ್ರಿಯಿಸಿ ಮಾತು ಬೆಳೆದು ಇನ್ನೇನೋ ಚಿತ್ರಣ ಮೂಡುತ್ತೆ ಎನ್ನುವ ಕಾಳಜಿ ಕೂಡ.

ಕೆಲವರ ಪ್ರತಿಕ್ರಿಯೆ ತುಂಬಾ ಆಸಕ್ತಿಕರವಾಗಿರುತ್ತೆ. ನಮ್ಮ ಯಾವುದೋ ಚರ್ಚೆಯಲ್ಲಿ ಭಾಗವಹಿಸುವ ಹಾಗೆ ಮಾಡಿ ನಂತರ ಹಿಂದಿನಿಂದ ಅವರಿವರ ವಿಷಯದ ಗಾಸಿಪ್ಪನ್ನು ನಮ್ಮ ಕಿವಿಗೆ ತುಂಬಿಸಿಯೇ ಮುಂದಕ್ಕೆ ಹೋಗುವವರು.

ಇನ್ನೊಂದು ಅತಿ ಮುಖ್ಯ ಕ್ಯಾಟಗರಿ ಹೇಳಲೇಬೇಕು. ಅವರಿವರ ಮಾತು ಬಿಡಿ. ಹೆಣ್ಣು ಮಕ್ಕಳ, ಅದೂ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳ ಫೋಟೋ ಹಾಕಿಕೊಂಡು ಪ್ರೊಫೈಲ್ ಕ್ರಿಯೇಟ್ ಮಾಡಿ ಸೂಕ್ತ ಮಿಕಗಳನ್ನು ಹುಡುಕಿ ಸಂಭಾಷಣೆ ಶುರು ಮಾಡಿ ಸ್ವಲ್ಪ ದಿನ ಚಾಟ್ ಮಾಡಿ ನಂತರ ಸಾಲ ಕೇಳುವುದು. ಅದು ಹೇಗೆ ಇಂಥವಕ್ಕೆಲ್ಲಾ ಜನ ಬೇಸ್ತು ಬೀಳುತ್ತಾರೋ ಇನ್ನೂ ಅರ್ಥವಾಗಿಲ್ಲ. ಹೀಗೆ ಸಾವಿರಾರು ರೂಪಾಯಿಗಳನ್ನು ಕಳೆದುಕೊಂಡು ಇತ್ತ ಹೇಳಲೂ ಆಗದೆ ಇತ್ತ ಬಿಡಲೂ ಆಗದೆ ಯಾವಾಗಲೋ ಬಾಯಿ ಬಿಟ್ಟು ಸ್ನೇಹಿತರಿಂದ ಮಂಗಳಾರತಿ ಎತ್ತಿಸಿಕೊಂಡವರಿದ್ದಾರೆ. ಇದನ್ನು ಮುಗ್ಧತೆ ಎನ್ನಬೇಕೋ ಅಥವಾ ಮೂರ್ಖತನ ಎನ್ನಬೇಕೋ ತಿಳಿಯದು.

ಹಾಗಂತ ಎಲ್ಲರೂ ಹುಚ್ಚರೇ ಇರುವುದಿಲ್ಲ. ಫೇಸ್‌ಬುಕ್ಕಿನಿಂದಾಗಿ ಎಷ್ಟೆಷ್ಟೋ ಸ್ನೇಹಿತರನ್ನ ಪಡೆದುಕೊಂಡಿದ್ದೀವಿ. ಕೆಲವರು ಉನ್ನತವಾಗಿ, ಉದಾತ್ತವಾಗಿ ಸಾಕಷ್ಟು ಹದವರಿತು ಸತ್ಯಗಳ ಆಧಾರದಿಂದ ಅನುಭವದ ಮಾತುಗಳನ್ನಿಲ್ಲಿ ಹಂಚಿಕೊಳ್ಳುತ್ತಿದ್ದರೆ ಜ್ಞಾನದ ನೆಲೆಯ ಮೇಲೆ ವಾದ ಕಟ್ಟುವ ಮಾತುಗಳು ಮನಸ್ಸಿನ ಒಳಗೆ ಹೊಸತೊಂದು ಬಾಗಿಲು ತೆರೆಯುತ್ತವೆ. ಹೌದಲ್ಲ! ಎನ್ನುವ ಯುರೇಕಾ ಕ್ಷಣಗಳು ಕಂಡಾಗ ಮಗುವಿನ ಮುಖ ನೋಡಿ ಹೆರಿಗೆ ನೋವು ಮರೆತು ಹೋಗುವಂತೆ ಮೆಸೆಂಜರಿನ ಮೂಢರು ಮಸುಕಾಗುತ್ತಾರೆ.

ಇನ್ನು ತುಂಬಾ ಮಂದಿಗೆ ಇರುವ ಸಮಸ್ಯೆ ಎಂದರೆ ಫೇಸ್‌ಬುಕ್ಕಿನಲ್ಲಿ ಇರುವ ಹೆಣ್ಣು ಮಕ್ಕಳನ್ನು, ಅದೂ ರಾಜಕೀಯ ಚರ್ಚೆ ಮಾಡುವವರನ್ನು ಹೇಗಾದರೂ ಮಾಡಿ ಹೀಗಳೆದು ಅವರ ಆತ್ಮವಿಶ್ವಾಸವನ್ನು ಕೊಚ್ಚಿ ಹಾಕಬೇಕೆನ್ನುವುದು. ಇವರಿಂದಾಗಿ ಇಂದು ಬಹಳ ಜನ ಹೆಣ್ಣು ಮಕ್ಕಳು ರಾಜಕೀಯಕ್ಕೆ ಸಂಬಂಧಪಟ್ಟ ಹಾಗೆ ಚರ್ಚೆಗಳನ್ನು ಮಾಡುತ್ತಿದ್ದಾರೆ ಎನ್ನುವುದು ಹಟಕ್ಕೆ ಸಂದ ಜಯ.
ಹೆಚ್ಚಿನ ಪ್ರತಿಕ್ರಿಯೆ ಬರುವುದು ಎರಡು ವಿಷಯಗಳಿಗೆ. ಒಂದು ಆರೋಗ್ಯದ ಸಮಸ್ಯೆ, ಇನ್ನೊಂದು ಅಡುಗೆ ರೆಸಿಪಿ. ಎರಡಕ್ಕೂ ಹೇರಳ ಪರಿಹಾರಗಳು ಬರುತ್ತವೆ. ಒಮ್ಮೊಮ್ಮೆ ಜೀವನ ಹೀಗೇ ಸಹ್ಯ ಅಂತ ಕೂಡ ಅನ್ನಿಸಿಬಿಡುತ್ತದೆ.

ಒಂದೊಮ್ಮೆ ಒಬ್ಬರು ಕೇಳಿದ್ದರು. ಗಂಡಸರು ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ.
‘ಮೇಡಮ್...ಯಾವಾಗ ನೋಡಿದ್ರೂ ಲೇಖನಗಳನ್ನು ಹಾಕ್ತೀರಿ’
‘ಹೌದು...ಬರೆದಿದ್ದನ್ನ ಅಥವಾ ಆಸಕ್ತಿ ಹುಟ್ಟಿದ್ದನ್ನ ಹಂಚಿಕೊಳ್ತೀನಿ’
‘ಅದು ಬಿಟ್ಟರೆ ರಾಜಕೀಯ ಮಾತಾಡ್ತೀರಿ...’
‘ಹೌದು...ಅದು ನನಗೆ ಆಸಕ್ತಿಕರ ಕ್ಷೇತ್ರ...ಸಾಕಷ್ಟು ಫಾಲೋ ಮಾಡಿದ್ದೀನಿ...’
‘ನೀವು ಮನೇಲಿ ಕೆಲಸದೋರನ್ನ ಇಟ್ಟುಕೊಂಡಿದೀರ?’
‘ಯಾವ ಕೆಲಸಕ್ಕೆ?’
‘ಅಡುಗೆ ಮಾಡಕ್ಕೆ’
‘ಇಲ್ಲ...ಬೇರೆ ಕೆಲಸಕ್ಕೆ ಬಂದು ಹೋಗ್ತಾರೆ...ಅಡುಗೆ ಎಲ್ಲಾ ನಾನೇ ಮಾಡೋದು...’
‘ಹಾ!!’ (ಕುಮಟಿ ಬಿದ್ದರು ಅಂತ ಅನ್ನಿಸಿತು)
‘ಯಾಕೆ ಸರ್?’
‘ಮತ್ತೆ ಅಡುಗೆ ಬಗ್ಗೆ ಪೋಸ್ಟ್ ಹಾಕಲ್ಲ?’
‘ಹೌದು ಹಾಕಲ್ಲ...ಎಲ್ಲದನ್ನೂ ಹಾಕ್ತಾ ಕೂತರೆ ಯಾರಿಗೂ ಮಾಡಕ್ಕೆ ಕೆಲಸ ಇರಲ್ಲವೇನ್ರೀ?’
‘ನಿಮ್ಮನ್ನ ನೋಡಿದರೆ ಅಡುಗೆ ಮಾಡೋ ಹಂಗೆ ಕಾಣಲ್ಲ ಮೇಡಂ’
‘ಸರ್...ತಪ್ಪು ತಿಳೀಬೇಡಿ...ಏನಂದರೆ”
‘ಹೇಳಿ’
‘ನಿಮ್ಮನ್ನ ನೋಡಿದರೆ ಬುದ್ಧಿ ಇರೋರ ಥರ ಕಾಣಲ್ಲ...ಆದರೂ ದೇವರ ಮೇಲಿನ ನಂಬಿಕೆಯಿಂದ ನಿಮ್ಮಂಥವರನ್ನ ಸಹಿಸಿಕೊಳ್ತೀನಿ ಬಿಡಿ...’
‘...’
‘ಹೋಗಿ ಬನ್ನಿ, ಒಳ್ಳೆಯದಾಗಲಿ...’
ಬ್ಲಾಕ್ ಮಾಡಲಾಯಿತು ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೆ?

ಇದೊಂದು ಸಾರ್ವತ್ರಿಕ ಹುಚ್ಚು ನಂಬಿಕೆ. ಬರೆಯುವ ಹೆಣ್ಣುಮಕ್ಕಳಿಗೆ, ಸ್ವಲ್ಪ ಆಧುನಿಕ ವಿಚಾರವುಳ್ಳ ಹೆಣ್ಣು ಮಕ್ಕಳಿಗೆ ಮನೆಯಲ್ಲಿ ಕೈಗೆ ಕಾಲಿಗೆ ಕೆಲಸ ಮಾಡಿಕೊಡುವ ಜನ ಇರುತ್ತಾರೆ, ಗಂಡ ರೆಡ್ಡಿಗಳ ಸಾಮ್ರಾಜ್ಯದಂತೆ ಮನೆ ತುಂಬಾ ದುಡ್ಡು ಚಿನ್ನ ತುಂಬಿಸಿಟ್ಟಿರುತ್ತಾನೆ, ಮಕ್ಕಳ ಕಾಳಜಿ ಇಲ್ಲದೆ ಫೇಸ್ ಬುಕ್ಕಿನಲ್ಲಿ ಕಾಲ ಕಳೆಯುತ್ತಾರೆ ಎನ್ನುವುದು. ನನ್ನ ಅನುಭವಕ್ಕೆ ಬಂದಿರುವ ಹಾಗೆ ರಾಜಕೀಯ/ಸುದ್ದಿ ಮಾಧ್ಯಮದ ಹಿನ್ನೆಲೆ ಇದ್ದರಂತೂ ಅಂತಹ ಹೆಣ್ಣ್‌ ಮಕ್ಕಳ ಬಗ್ಗೆ ಹುಟ್ಟುವ ಭ್ರಮೆಗಳಿಗೆ ಕೊನೆಯೇ ಇಲ್ಲ.

ರಾಜಕೀಯ ಪ್ರಜ್ಞೆ ಈವತ್ತಿಗೂ ನೋಡಿ, ಗಂಡಸರು ಮಾತ್ರ ಮಾತಾಡುವಂಥದ್ದು ಅಂತ ಒಂದು ಕುರುಡು ಕಟ್ಟಳೆ ತಾನೇ ತಾನಾಗಿ ಜನ್ಮ ತಳೆದುಬಿಟ್ಟಿದೆ. ಅದಕ್ಕೆ ಹೆಣ್ಣು ಮಕ್ಕಳ ಸಂಕೋಚ ಅಥವಾ ರಾಜಕೀಯ ಮಾತಾಡಲು ಆತ್ಮವಿಶ್ವಾಸದ ಕೊರತೆ ಇದ್ದರೂ ಇರಬಹುದು.
‘ಇದರ ಬಗ್ಗೆ ಬರೆದಿರಿ...ಅದರ ಬಗ್ಗೆ ಯಾಕೆ ಬರೆಯಲಿಲ್ಲ...ಆ ಘಟನೆ ಆದಾಗ ನೀವು ಮಾತಾಡಲಿಲ್ಲ...ನೀವ್ಯಾಕೆ ಏನೂ ಹೇಳಲ್ಲ...ಬರೀ ಇವರನ್ನು ಮಾತ್ರ ಸಪೋರ್ಟ್ ಮಾಡ್ತೀರಿ...’

ಅಥವಾ ಮೆಸೆಂಜರ್ ಮೇಲೆ ಫೋನ್ ಮಾಡುವ ಪ್ರಯತ್ನ ಮಾಡುವುದು...ಒಂಥರಾ ವೈಯಕ್ತಿಕ ಸ್ಪೇಸ್ ಅನ್ನು ಎಷ್ಟೆಷ್ಟೂ ಗೌರವಿಸದೆ ಎಲ್ಲೆಲ್ಲೂ ತಮ್ಮ ಮೂರ್ಖತನ ಪ್ರದರ್ಶನಕ್ಕೆ ನಿಲ್ಲುವುದು. ಒಟ್ಟಿನಲ್ಲಿ ಏನೆಂದರೆ ನೀವು ಅಲ್ಲಿ ಮಾತಾಡುವುದಾದರೆ ನಮ್ಮ ಹತ್ತಿರವೂ ಮಾತಾಡಲೇಬೇಕು ಎನ್ನುವ ದರಿದ್ರ ಡಿಮಾಂಡು ಬೇರೆ.
‘ಆಯಿತು ನೀವು ಹೇಳಿದ್ದಕ್ಕೆಲ್ಲಾ ಒಂದೊಂದು ಪೋಸ್ಟ್ ಹಾಕ್ತೀನಿ... ಆದರೆ ಅದಕ್ಕೆ ಸಮಯ ಹಿಡಿಯುತ್ತಲ್ಲ?’
‘ಬರೀರಿ...ಏನಾಗುತ್ತೆ’
‘ಟೈಮ್ ಈಸ್ ಮನಿ. ನನಗೆ ಅನ್ನಿಸಿದ್ದರ ಬಗ್ಗೆ ಬರಿಯೋದಕ್ಕೆ ನಾನು ಸ್ವತಂತ್ರಳು. ನಿಮಗೆ ಅನ್ನಿಸಿದ್ದರ ಬಗ್ಗೆ ಬರೀಬೇಕು ಅಂತ ಡಿಮಾಂಡ್ ಮಾಡಿದರೆ ಅದು ಕೆಲಸ ಅನ್ನಿಸಿಕೊಳ್ಳುತ್ತೆ...’
‘ಸೋ?’
‘ಚಾರ್ಜ್ ಆಗುತ್ತೆ...ಆಗ ಒಂದು ರೈಟ್ ಅಪ್ ಬರೆದು ನಿಮ್ಮ ಖಾಸಗೀ ಮೇಲ್‌ಗೆ ಕಳಿಸ್ತೀನಿ...ಅದಕ್ಕೆ ಇಷ್ಟು ಚಾರ್ಜ್ ಮಾಡ್ತೀನಿ. ಅದನ್ನು ಮುಂಗಡವಾಗಿ ಕಳಿಸಿದರೆ ಸಾಕು’
‘ಹಂಗಾರೆ ಅವರಿವರ ಬಗ್ಗೆ ಬರೀತೀರಲ್ಲ ಅದಕ್ಕೂ ದುಡ್ಡು ಇಸ್ಕೋತೀರಾ?’ (ಅಯ್ಯೋ ಸ್ವಾಮೀ ನಿಮ್ಮ ಆಟ ನಮಗೆ ತಿಳಿಯದೇ?)
‘ನೋಡಿ ನಾನು ಕೊಂಡ ಕಾರು ನಾನೇ ಓಡಿಸಿದ್ರೆ ವೈಯಕ್ತಿಕ. ಗುರುತು ಪರಿಚಯ ಇಲ್ಲದ ನೀವು ಎಲ್ಲಿಗೋ ತಗೊಂಡು ಹೋಗ್ತೀನಿ ಅಂದರೆ ಟ್ಯಾಕ್ಸಿ ಲೆಕ್ಕ ಆಗುತ್ತೆ ಅಲ್ವಾ?’
ಮತ್ತೇನೋ ಮಾತಾಡಿದರೂ ಕ್ಯಾರೆ ಅನ್ನುವಷ್ಟು ಸಮಯ ಇರಲಿಲ್ಲ. ಹಾಗಾಗಿ ಮ್ಯೂಟ್ ಮಾಡಿ ಹೋದೆ.
‘ನಿಮ್ಮ ಫೋನ್ ನಂಬರ್ ಕೊಡಿ’
‘ಯಾಕೆ?’
‘ಏನೋ ಚರ್ಚೆ ಮಾಡಬೇಕಿತ್ತು’
‘ಈ ಮೈಲ್ ಮಾಡಿ...ಆಮೇಲೆ ಚರ್ಚಿಸಬೇಕು ಅಂತ ನನಗೆ ಅನ್ನಿಸಿದರೆ ಹೇಳ್ತೀನಿ’
‘ಏನ್ ಮೇಡಂ ಫೇಸ್ಬುಕ್ಕಲ್ಲಿ ಢಂ ಢಂ ಅಂತ ಮಾತಾಡ್ತೀರಿ...ಫೋನ್ ನಂಬರ್ ಕೊಡಕ್ಕೆ ಹೆದರ್ತೀರಲ್ಲ!’
‘ಹೆದರಿಕೆ ಏನಿಲ್ಲ. ಬರೀ ಮಾತಿನಲ್ಲಿ ಕಳೆಯುವಷ್ಟು ಸಮಯ-ಆಸಕ್ತಿ ಇಲ್ಲ ಅಷ್ಟೇ.’
‘ಇರಲಿ ಕೊಡಿ ನಿಮ್ಮ ಅನುಕೂಲ ನೋಡಿಕೊಂಡೇ ಫೋನ್ ಮಾಡ್ತೀನಿ’
‘ಒಂದು ಕೆಲಸ ಮಾಡಿ. ನಿಮ್ಮ ಹೆಂಡತಿ ನಂಬರ್ ಕೊಡಿ...ಅವರಿಗೆ ನನ್ನ ಎಲ್ಲಾ ಆಲೋಚನೆ ವಿಚಾರಗಳನ್ನೂ ಹೇಳ್ತೀನಿ...ಅವರು ನಿಮಗೆ ಹೇಳ್ತಾರೆ...’
ಮತ್ತೆ ಸಿಕ್ಕುಸಿಕ್ಕಾಗಿ ಮಾತಾಡಿದರು. ಸ್ಕ್ರೀನ್ ಶಾಟ್ ಇವೆ ಸ್ವಾಮೀ... ಇನ್ನೂ ಮುಂದುವರೆದರೆ ಕಷ್ಟ ಅಂತೆಲ್ಲಾ ಚುಟುಕಾಗಿ ಹೇಳಿದ ಮೇಲೆ...
‘ಆಯ್ತು ಬಿಡಿ...ನಮ್ಮ ಊರಿಗೆ ಬಂದಾಗ ಮಾತಾಡೋಣ...’
ಎಂದು ಸಹೃದಯತೆಯಿಂದ ಅರ್ಥೈಸಿಕೊಂಡು ಬಿಜಯಂಗೈದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT