ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಲ್ದಿರಾಮ್​​ ಪೊಟ್ಟಣದ ಮೇಲೆ ಉರ್ದು ಯಾಕೆ: ವರದಿಗಾರ್ತಿ ಪ್ರಶ್ನೆ ಟ್ರೆಂಡಿಂಗ್

Last Updated 6 ಏಪ್ರಿಲ್ 2022, 12:26 IST
ಅಕ್ಷರ ಗಾತ್ರ

ನವದೆಹಲಿ: ಹಿಜಾಬ್, ಹಲಾಲ್‌ – ಜಟ್ಕಾ, ಅಜಾನ್ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಹಲ್ದಿರಾಮ್ ತಿಂಡಿ ಪೊಟ್ಟಣದ ಮೇಲೆ ಉರ್ದು ಭಾಷೆ ಬಳಕೆ ಕುರಿತಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಆರಂಭವಾಗಿದೆ.

ಹಲ್ದಿರಾಮ್ ಸ್ಟೋರ್ ಮ್ಯಾನೇಜರ್​​ನಲ್ಲಿ, ತಿಂಡಿ ಪೊಟ್ಟಣದಲ್ಲಿ ಉರ್ದು ಭಾಷೆಯಲ್ಲಿ ಏನು ಬರೆದಿದ್ದೀರಿ? ಈ ಪೊಟ್ಟಣದಲ್ಲಿ ಮಾತ್ರ ಯಾಕೆ ಉರ್ದು? ಇದರ ಹಿಂದಿನ ಉದ್ದೇಶ ಏನು ಎಂದು ಸುದರ್ಶನ್ ಟಿವಿ ವರದಿಗಾರ್ತಿ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಸ್ಟೋರ್ ಮ್ಯಾನೇಜರ್ ‘ನೀವು ಏನು ಬೇಕಾದರೂ ಮಾಡಬಹುದು ಮೇಡಮ್‌, ಹಲ್ದಿರಾಮ್ಸ್ ಅಂತಹ ತಂತ್ರಗಳನ್ನು ಪ್ರೋತ್ಸಾಹಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೂ ಪಟ್ಟು ಸಡಿಲಿಸದ ವರದಿಗಾರ್ತಿ ಉರ್ದುನಲ್ಲಿ ಬರೆದಿರುವುದೇನು? ನವರಾತ್ರಿಯಲ್ಲಿ ಉಪವಾಸ ಮಾಡುವ ಹಿಂದೂಗಳಿಗೆ ದ್ರೋಹ ಇದು ಎಂದು ಹೇಳಿದ್ದಾರೆ. ನಿಮಗೆ ಬೇಕಾದರೆ ತೆಗೆದುಕೊಳ್ಳಿ, ಇಲ್ಲಾಂದ್ರೆ ಬಿಡಿ. ಹಿಂದಿ, ಇಂಗ್ಲಿಷ್‌ನಲ್ಲಿ ಬರೆದಿರುವುದೂ ಇದೆ. ಅದು ಬಿಟ್ಟು ಉರ್ದುವಿನಲ್ಲಿ ಬರೆದಿರುವುದನ್ನೇ ಓದಬೇಕು ಎಂದು ಯಾಕೆ ಹೇಳುತ್ತೀರಿ ಎಂದು ಸ್ಟೋರ್ ಮ್ಯಾನೇಜರ್ ವರದಿಗಾರ್ತಿಗೆ ಉತ್ತರಿಸಿದ್ದಾರೆ.

ಸ್ಟೋರ್ ಮ್ಯಾನೇಜರ್ ಹಾಗೂ ವರದಿಗಾರ್ತಿ ಮಧ್ಯೆ ನಡೆದ ಸಂಭಾಷಣೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಪ್ಯಾಕೆಟ್‌ನಲ್ಲಿನ ಬರಹ ಉರ್ದು ಅಲ್ಲ ಅರೇಬಿಕ್ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಅದು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ರಫ್ತು ಮಾಡುವಂತದ್ದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಚರ್ಚೆ ಮುಂದುವರಿದಿದ್ದು, ಉರ್ದು ಪಠ್ಯವನ್ನು ಬಳಸಿಕೊಂಡಿರುವ ಭಾರತೀಯ ರೈಲ್ವೆ ಬೋರ್ಡ್‌ಗಳು, ಕರೆನ್ಸಿ ನೋಟುಗಳನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ.

ಭಾರತೀಯ ನಾಗರಿಕ ಸೇವೆಗೆ (ಐಎಎಸ್‌) ಮುಸ್ಲಿಮರು ನುಸುಳುತ್ತಿದ್ದಾರೆ ಎಂಬ ಅರ್ಥದ ಕಾರ್ಯಕ್ರಮ ಪ್ರಸಾರ ಮಾಡುವ ಮೂಲಕ ಕಾರ್ಯಕ್ರಮ ಸಂಹಿತೆಯನ್ನು ಉಲ್ಲಂಘಿಸಿದ ಬಗ್ಗೆ ‘ಸುದರ್ಶನ್‌ ನ್ಯೂಸ್‌’ ಸುದ್ದಿ ವಾಹಿನಿಗೆ ಕಾರಣ ಕೇಳಿ ನೋಟಿಸ್‌ ನೀಡಿರುವುದಾಗಿ ಕೇಂದ್ರ ಸರ್ಕಾರವು 2020ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ಈ ಕಾರ್ಯಕ್ರಮವು ಮುಸ್ಲಿಮರನ್ನು ಅಪಮಾನಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದ ಸುಪ್ರೀಂ ಕೋರ್ಟ್‌, ಕಾರ್ಯಕ್ರಮದ ಉಳಿದ ಭಾಗವನ್ನು ಪ್ರಸಾರ ಮಾಡದಂತೆ ಇದೇ 15ರಂದು ತಡೆ ಹೇರಿತ್ತು.

ಕೇಬಲ್‌ ಜಾಲ ಟಿ.ವಿ. ಕಾಯ್ದೆ 1995ರ ನಿಯಮಗಳನ್ನು ಉಲ್ಲಂಘಿಸಿರುವುದಕ್ಕೆ ಇದೇ 28ರೊಳಗೆ ಕಾರಣ ಕೊಡುವಂತೆ ವಾಹಿನಿಗೆ ನೋಟಿಸ್‌ ನೀಡಲಾಗಿದೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠಕ್ಕೆ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT