ಮಂಗಳವಾರ, ಸೆಪ್ಟೆಂಬರ್ 27, 2022
27 °C

ಪತ್ರಕರ್ತರ ಟ್ವೀಟ್ ತೆರವಿಗೆ ಮನವಿ ಮಾಡಿರುವ ದೇಶಗಳ ಪೈಕಿ ಅಗ್ರ ಸ್ಥಾನದಲ್ಲಿ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪತ್ರಕರ್ತರ ಮತ್ತು ಸುದ್ದಿ ಮಾಧ್ಯಮಗಳ ಬ್ಲೂ ಟಿಕ್ ಹೊಂದಿರುವ ಅಕೌಂಟ್‌ಗಳಲ್ಲಿ ಮಾಡಲಾದ ಟ್ವೀಟ್‌ಗಳ ತೆರವಿಗೆ ಕಾನೂನುಬದ್ಧವಾಗಿ ಮನವಿ ಮಾಡಿರುವ ದೇಶಗಳ ಸಾಲಿನಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ ಎಂದು ಟ್ವಿಟರ್ ಹೇಳಿದೆ. 2021ರ ಜುಲೈಯಿಂದ ಡಿಸೆಂಬರ್ ಅವಧಿಯ ಅಂಕಿಅಂಶ ಉಲ್ಲೇಖಿಸಿ ಟ್ವಿಟರ್ ಈ ಮಾಹಿತಿ ನೀಡಿದೆ.

ಟ್ವಿಟರ್ ಖಾತೆಯ ಮಾಹಿತಿ ಪಡೆಯುವಲ್ಲಿ ಭಾರತವು ಅಮೆರಿಕದ ನಂತರದ ಸ್ಥಾನದಲ್ಲಿದೆ. ಜಾಗತಿಕವಾಗಿ ಟ್ವಿಟರ್‌ ಖಾತೆಗಳ ಮಾಹಿತಿ ಕೋರಿ ಬಂದ ಅರ್ಜಿಗಳಲ್ಲಿ ಭಾರತದ ಪಾಲು ಶೇ 19ರಷ್ಟಿದೆ ಎಂದು ಕಂಪನಿ ತಿಳಿಸಿದೆ.

ಬ್ಲೂಟಿಕ್ ಹೊರತುಪಡಿಸಿದಂತೆ ಇತರ ಬಳಕೆದಾರರ ಕಂಟೆಂಟ್‌ಗಳನ್ನು ಬ್ಲಾಕ್ ಮಾಡುವಂತೆ ಮನವಿ ಮಾಡಿದ ದೇಶಗಳ ಪೈಕಿ ಭಾರತ ಐದನೇ ಸ್ಥಾನದಲ್ಲಿದೆ ಎಂದು ಟ್ವಿಟರ್ ಹೇಳಿದೆ. ಇದು 2021ರ ಜುಲೈಯಿಂದ ಡಿಸೆಂಬರ್ ಅವಧಿಗೆ ಸಂಬಂಧಿಸಿದ್ದಾಗಿದೆ.ವಿಶ್ವದಾದ್ಯಂತ ಬ್ಲೂ ಟಿಕ್ ಹೊಂದಿರುವ ಪತ್ರಕರ್ತರು ಮತ್ತು ಸುದ್ದಿ ಮಾಧ್ಯಮಗಳ ಖಾತೆಗಳ ಟ್ವೀಟ್‌ ತೆರವಿಗೆ 326 ಮನವಿ ಸಲ್ಲಿಕೆಯಾಗಿತ್ತು. ಇದು 2020ರ ಜನವರಿ – ಜೂನ್ ಅವಧಿಗೆ ಹೋಲಿಸಿದರೆ ಶೇ 103ರಷ್ಟು ಹೆಚ್ಚು ಎಂದು ಟ್ವಿಟರ್ ಹೇಳಿದೆ.

ಭಾರತದಿಂದ 114, ಟರ್ಕಿಯಿಂದ 78, ರಷ್ಯಾದಿಂದ 55 ಹಾಗೂ ಪಾಕಿಸ್ತಾನದಿಂದ 48 ಕಾನೂನಾತ್ಮಕ ಮನವಿ ಸಲ್ಲಿಕೆಯಾಗಿದ್ದವು ಎಂದು ಕಂಪನಿ ತಿಳಿಸಿದೆ.

ಟ್ವೀಟ್‌ ತೆರವಿಗೆ ಮನವಿ ಸಲ್ಲಿಸಿರುವ ವಿಷಯದಲ್ಲಿ 2021ರ ಜನವರಿ–ಜೂನ್ ಅವಧಿಯಲ್ಲಿ ಕೂಡ ಭಾರತವೇ ಅಗ್ರ ಸ್ಥಾನದಲ್ಲಿತ್ತು. ಈ ಅವಧಿಯಲ್ಲಿ ಭಾರತವು 89 ಮನವಿಗಳನ್ನು ಸಲ್ಲಿಸಿತ್ತು. ಜಾಗತಿಕವಾಗಿ ಒಟ್ಟು 231 ಮನವಿಗಳು ಸಲ್ಲಿಕೆಯಾಗಿದ್ದವು ಎಂದು ಮೈಕ್ರೊಬ್ಲಾಗಿಂಗ್ ಕಂಪನಿ ಮಾಹಿತಿ ನೀಡಿದೆ.

‘ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ-2000ದ ಕಲಂ 69ಎ ಗೆ ವಿರುದ್ಧವಾಗಿರುವ 1,400ಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಬೇಕು’ ಎಂಬ ನೋಟಿಸ್‌ಗಳನ್ನು ಪ್ರಶ್ನಿಸಿ ‘ಟ್ವಿಟರ್’ ಕಂಪನಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ನೋಟಿಸ್‌ ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್‌ ಜುಲೈ 27ರಂದು ಆದೇಶಿಸಿತ್ತು. ನಂತರ ವಿಚಾರಣೆಯನ್ನು ಆಗಸ್ಟ್‌ 25ಕ್ಕೆ ಮುಂದೂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು