ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮ ತಂದೆಯ ಮಗಳ ಕಣ್ಣೀರಿಗೆ ಯಾವ ಪ್ರಶಸ್ತಿ ಕೊಡ್ತೀರಾ?

ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮೂವರು ಫೋಟೊ ಜರ್ನಲಿಸ್ಟ್‌ಗಳಿಗೆ ಪ್ರತಿಷ್ಠಿತ ಪುಲಿಟ್ಜರ್-2020 ಪ್ರಶಸ್ತಿ ಲಭಿಸಿದೆ. ಸಂವಿಧಾನದ ವಿಧಿ 371 ರದ್ದತಿ ನಂತರ ಕಣಿವೆ ರಾಜ್ಯದಲ್ಲಿ ನಿರ್ಬಂಧಗಳನ್ನು ಹೇರಲಾಗಿದ್ದ ಸಂದರ್ಭದ ಚಿತ್ರಣ ಕಟ್ಟಿಕೊಡುವ ಚಿತ್ರಗಳಾಗಿದ್ದು,ಭದ್ರತಾ ಪಡೆಗಳು ಮೈಲುಗೈ ಸಾಧಿಸಿವೆ ಎಂದು ಬಿಂಬಿಸಲಾಗಿದೆ.

ಈ ಚಿತ್ರಗಳಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಜಮ್ಮು –ಕಾಶ್ಮೀರದ ಹಿರಿಯ ಪೊಲೀಸ್‌ ಅಧಿಕಾರಿ ಇಮ್ತಿಯಾಜ್‌ ಹುಸೇನ್ ಅವರು, ಜಮ್ಮುವಿನಲ್ಲಿ ಭಯೋತ್ಪಾದಕರ ದಾಳಿ ವೇಳೆ ಹುತಾತ್ಮರಾದ ಪೊಲೀಸ್‌ ಅಧಿಕಾರಿಯೊಬ್ಬರ ಮಗಳು ತಂದೆಯ ಸಾವಿನ ಸಂದರ್ಭ ದುಃಖಿಸುತ್ತಿರುವಚಿತ್ರವೊಂದನ್ನು ಟ್ವೀಟ್‌ ಮಾಡಿದ್ದಾರೆ.

ಆ ಚಿತ್ರದ ಜೊತೆಗೆ, ‘ಈ ಚಿತ್ರವು ಮಾನವೀಯತೆಯ ಆತ್ಮಸಾಕ್ಷಿಯನ್ನು ಮುಂದಿನ ದಿನಗಳಲ್ಲಿ ಕಾಡುವಂತಾಗಬೇಕು. ಅಸಹನೀಯ ದುಃಖದಲ್ಲಿರುವ ಈಕೆ ಕಾಶ್ಮೀರದಲ್ಲಿ 2017 ರಲ್ಲಿ ಹುತಾತ್ಮರಾದ ಪೊಲೀಸ್‌ ಅಧಿಕಾರಿಯ ಮಗಳು. ಈ ಚಿತ್ರಕ್ಕೆ ಯಾವುದಾದರೂ ಪ್ರಶಸ್ತಿಗಳಿವೆಯೇ? ಎಂದು ಬರೆದುಕೊಂಡಿದ್ದಾರೆ.

ಹುಸೇನ್‌ ಮಾಡಿರುವ ಟ್ವೀಟ್‌ ಬುಧವಾರಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು,ಪರ–ವಿರೋಧದ ಚರ್ಚೆಗೆ ಗ್ರಾಸವಾಗಿದೆ.

‘ಯಾವ ರಾಷ್ಟ್ರೀಯವಾದಿ ಭಾವನೆಗಳಿಂದ ಪುಲಿಟ್ಜರ್‌ ಪ್ರಶಸ್ತಿ ಸಿಗುವುದಿಲ್ಲ’ ಎಂದು ಜಿತೀನ್‌ ಎಂಬುವರು ತಿಳಿಸಿದ್ದಾರೆ.

‘ಈ ರೀತಿಯ ಚಿತ್ರಗಳು ಪುಲಿಟ್ಜರ್ ಪ್ರಶಸ್ತಿ ಸಮಿತಿಯ ಮಾನದಂಡಗಳಿಗೆ ಸರಿಹೊಂದುವುದಿಲ್ಲ, ಅದು ಸಂಪೂರ್ಣವಾಗಿ ಪಕ್ಷಪಾತ ಮತ್ತುಏಕಪಕ್ಷೀಯವಾದದ್ದು’ ಎಂದು ಬೃಂದಾವನ್‌ ಪಟ್ನಾಯಕ್‌ ಹೇಳಿದ್ದಾರೆ.

‘ಕೆಲವು ಅಂತರರಾಷ್ಟ್ರೀಯ ಚಾನೆಲ್‌ಗಳು, ಮಾಧ್ಯಮಗಳು ಭಾರತ ವಿರೋಧಿ ಪಕ್ಷಪಾತವನ್ನು ಹೊಂದಿವೆ, ಅವುಗಳುಕೆಲವು ಗುಂಪುಗಳಿಂದ ಬೆಂಬಲ ಪಡೆದಿರಬಹುದು’ ಎಂದು ಗಿರೀಶ್‌ ಅರೋರಾ ಟ್ವೀಟ್‌ ಮಾಡಿದ್ದಾರೆ.

ಜಮ್ಮುವಿನಲ್ಲಿ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಆಗಿದ್ದ ಅಬ್ದುಲ್‌ ರಶೀದ್‌ ಅವರು 2017ರಲ್ಲಿ ಪಾಕ್‌ ಪ್ರಾಯೋಜಿತ ಉಗ್ರರ ದಾಳಿ ವೇಳೆ ಮೃತಪಟ್ಟಿದ್ದರು. ಇಮ್ತಿಯಾಜ್‌ ಹುಸೇನ್ ಹಂಚಿಕೊಂಡಿರುವ ಚಿತ್ರ, ರಶೀದ್‌ ಮಗಳಾದ ಜೋಹ್ರಾ ಅವರದ್ದು. ರಶೀದ್‌ ಅವರು ಹುತಾತ್ಮರಾದ ವಿಚಾರ ಗೊತ್ತಾದ ನಂತರ, ಜೋಹ್ರಾ ಅತೀವವಾಗಿ ದುಃಖಿಸುತ್ತಿರುವುದು ಚಿತ್ರದಲ್ಲಿದೆ. ಆಗ ಜೋಹ್ರಾಗೆ ಕೇವಲ 5 ವರ್ಷ ವಯಸ್ಸಾಗಿತ್ತು. ಆ ಸಂದರ್ಭದಲ್ಲಿ ಜೋಹ್ರಾ ಚಿತ್ರಗಳು ಎಲ್ಲೆಡೆ ವೈರಲ್‌ ಆಗಿದ್ದವು. ಆದಾಗ್ಯೂ, ಈ ಚಿತ್ರಕ್ಕೆ ಯಾವುದೇ ಅರ್ಹ ಪ್ರಶಸ್ತಿ ಲಭಿಸಿಲ್ಲ ಎಂಬ ಬೇಸರವನ್ನು ಇಮ್ತಿಯಾಜ್‌ ಹುಸೇನ್‌ ಈ ಟ್ವೀಟ್‌ ಮೂಲಕ ವ್ಯಕ್ತಪಡಿಸಿದ್ದಾರೆ.

ಹುಸೇನ್ ಅವರು ಟ್ವೀಟ್ ಮಾಡಿದ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆಯಾದರೂ, ಪಾಕ್‌ ಪ್ರಾಯೋಜಿತ ಭಯೋತ್ಪಾದನೆಯನ್ನು ಸಾಮಾನ್ಯೀಕರಿಸಲು ಮತ್ತು ಸಶಸ್ತ್ರ ಪಡೆಗಳ ವಿರುದ್ಧ ಆರೋಪಗಳನ್ನು ಮಾಡುವಲ್ಲಿ ಎಡಪಂಥೀಯರು ನಿರತವಾಗಿರುವುದು ದುರದೃಷ್ಟದ ಸಂಗತಿಯಾಗಿದೆ.

‘ಭಯೋತ್ಪಾದನೆವೈಭವೀಕರಣಕ್ಕೆ ಪುಲಿಟ್ಜರ್ ಪ್ರಶಸ್ತಿ’
ಪ್ರತಿಷ್ಠಿತ ಪುಲಿಟ್ಜೆರ್ ಪ್ರಶಸ್ತಿ ಗಳಿಸಿರುವ ಚಿತ್ರಗಳು ಕಾಶ್ಮೀರ ಕಣಿವೆಯಲ್ಲಿ ಪಾಕ್‌ ಪ್ರಾಯೋಜಿತ ಭಯೋತ್ಪಾದನೆಯನ್ನು ಅತ್ಯುತ್ತಮ ರೀತಿಯಲ್ಲಿ ವೈಭವೀಕರಿಸಿವೆ. ಈ ಚಿತ್ರಗಳು ‘ಭಾರತ ಆಕ್ರಮಿತ ಕಾಶ್ಮೀರ’ ನಂತಹ ಸಮಸ್ಯಾತ್ಮಕ ಪ್ರದೇಶದ ಘನತೆಗೆ ದಕ್ಕೆ ತಂದಿವೆ. ವ್ಯಕ್ತಿಯೊಬ್ಬರು ‘ನಾವು ಸ್ವತಂತ್ರ ಕಾಶ್ಮೀರದ ಕನಸು ಕಾಣುತ್ತೇವೆ’ ಎಂಬ ಫಲಕ ಹಿಡಿದಿರುವ ಚಿತ್ರವೊಂದಕ್ಕೆ ಪುಲಿಟ್ಜರ್‌ ಲಭಿಸಿದೆ, ಈ ಚಿತ್ರವು ದೇಶದ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಕಾಶ್ಮೀರವು ‘ಭಾರತ ನಿಯಂತ್ರಣ ಕಾಶ್ಮೀರ’ ಎಂದು ಬಿಂಬಿಸುವ ಮೂಲಕ ಪಾಕ್‌ ಪರ ನಿಲುವನ್ನು ಪ್ರತಿಪಾದಿಸುವಂತಿದೆ. ಇಮ್ತಿಯಾಜ್‌ ಹುಸೇನ್‌ ಟ್ವೀಟ್‌ಗೆ ಹಲವರು ಪ್ರತಿಕ್ರಿಯಿಸಿದ್ದು, ಪರ–ವಿರೋಧ ಚರ್ಚೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT