ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಪ್ರವೇಶಿಸುತ್ತಿದ್ದಂತೆ ಟ್ವೀಟ್‌ 'ಇತಿಹಾಸದ ಸರಪಳಿ' ಅಳಿಸಿ ಹಾಕಿದ ಶೋಭಾ

Last Updated 8 ಜುಲೈ 2021, 7:13 IST
ಅಕ್ಷರ ಗಾತ್ರ

ಬೆಂಗಳೂರು: 'ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು'- ಸಾಮಾಜಿಕ ಮಾಧ್ಯಮಗಳಲ್ಲಿನ ಆರ್ಭಟದ ಈ ಹೊತ್ತಿನಲ್ಲಿ ಈ ಗಾದೆ ಮಾತು ಅ'ಪ್ರಸ್ತುತ' ಎಂಬಂತೆ ತೋರುತ್ತಿದೆ. ಈಗಂತೂ ರಾಜಕಾರಣಿಗಳ ನೇರ ಹೇಳಿಕೆಗಳಿಗಿಂತ ಚುಟುಕು ಟ್ವೀಟ್‌ಗಳು, ಫೇಸ್‌ಬುಕ್ ಗೋಡೆ ಬರಹಗಳು ಬಹು ಚರ್ಚಿತ ಹಾಗೂ ಪ್ರಚೋದಕವಾಗುತ್ತಿವೆ. ಹಿಂದು–ಮುಂದು ಯೋಚಿಸದೆ ಮನಸ್ಸಿಗೆ ತೋರಿದ್ದನ್ನು ಟ್ವಿಟರ್‌ನಲ್ಲಿ ಇಳಿಸಿ, 'ಗಾಳಕ್ಕೆ ಸಿಕ್ಕ ಮೀನಿನಂತೆ' ಆಗುವ ಸ್ಥಿತಿ ಬಹುತೇಕರದು.

ಬಹುಶಃ ಇಂಥದ್ದೇ ಕಾರಣಗಳಿಂದ ಕೇಂದ್ರದ ನೂತನ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಟ್ವಿಟರ್‌ ಖಾತೆಯಲ್ಲಿನ 'ಇತಿಹಾಸವನ್ನು' ಅಳಿಸಿ ಹಾಕಿದ್ದಾರೆ. ನಿರಂತರ 11 ವರ್ಷಗಳಿಂದ ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಅವರ ಖಾತೆಯಲ್ಲಿ ಈಗ ಎರಡೇ ಟ್ವೀಟ್‌ಗಳು ಗೋಚರಿಸುತ್ತಿವೆ.

‘ನುಡಿದಡೆ ಮುತ್ತಿನ ಹಾರದಂತಿರಬೇಕು
ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು
....'

ಬಸವಣ್ಣನ ಈ ವಚನವು ನೆಟ್ಟಿಗರ ನುಡಿಗಳಿಗೂ ಅನ್ವಯಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆಯೇ? ಸಮಾಜಶಾಸ್ತ್ರ ಮತ್ತುಸಮಾಜ ಕಾರ್ಯ ಸ್ನಾತಕೋತ್ತರ ಪದವೀಧರೆಯಾಗಿರುವ ಶೋಭಾ ಅವರು ಹಗ್ಗ–ಜಗ್ಗಾಟಗಳು ಬೇಡ, ಇತಿಹಾಸದ ಉರುಳಲ್ಲಿ ಸಿಲುಕುವುದು ಬೇಡ ಎಂದು ನಿರ್ಧರಿಸಿ 'ಅಹುದಹುದು' ಎನ್ನುವಂತೆ ಮಾಡುವ ನುಡಿಗಳಿಗಷ್ಟೇ ಸೀಮಿತಗೊಳಿಸಲು ನಿರ್ಧರಿಸಿದ್ದಾರೆಯೇ ಎಂಬ ಸುಳಿವು ಸುಳಿಯದೇ ಇರದು.

ಎಲ್ಲಾ ಸಂದರ್ಭಗಳಲ್ಲೂ ಪಕ್ಷದ ಬೆನ್ನಿಗೆ ನಿಲ್ಲುವ ಪ್ರಮುಖ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಶೋಭಾ, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಶಾಂತಿ ಪತಾಕೆ ಹಾರಿಸಿದಂತಿದೆ. ಅವರಿವರ ಬಗೆಗಿನ ವಿರೋಧಗಳು, ಸರ್ಕಾರದ ಸಮರ್ಥನೆಗಳು, ಘಟನೆಗಳ ವಿಶ್ಲೇಷಣೆಗಳು, ಕೋಮು–ಸೌಹಾರ್ದದ ವಿವರಗಳು,...ಯಾವೊಂದರ ಹಳೆಯ ಟ್ವೀಟ್‌ಗಳು ಈಗ ಅವರ ಖಾತೆಯಲ್ಲಿ ಕಾಣುತ್ತಿಲ್ಲ.

ಟ್ವಿಟರ್‌ನಲ್ಲಿ ಶೋಭಾ ಅವರ ಖಾತೆಯನ್ನು ಪ್ರಸ್ತುತ 2.79 ಲಕ್ಷಕ್ಕೂ ಹೆಚ್ಚು ಜನರು ಹಿಂಬಾಲಿಸುತ್ತಿದ್ದಾರೆ. ಯಾವುದೇ ರಾಜಕಾರಣಿ ಪ್ರಕಟಿಸುವ ಪ್ರತಿ ಟ್ವೀಟ್‌ಗೆ 'ಉಘೇ... ಉಘೇ....' ಎನ್ನುಷ್ಟೇ ಸಂಖ್ಯೆಯಲ್ಲಿ ಕಾಲೆಳೆಯುವ ಪಡೆಯೂ ದೊಡ್ಡದೇ ಇರುತ್ತದೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ತೇಜಸ್ವಿ ಸೂರ್ಯ 'ಹಳೆಯ ಟ್ವೀಟ್‌ಗಳ' ಸಂಕಷ್ಟದಲ್ಲಿ ಸಿಲುಕಿದ್ದು, ಟೀಕಿಸಲು ಹೋಗಿ ಆಡಳಿತಾರೂಢ ಪಕ್ಷದ ಸದಸ್ಯರಿಂದ ತೀವ್ರ ಟ್ರೋಲ್‌ಗೆ ಗುರಿಯಾದ ರಾಹುಲ್‌ ಗಾಂಧಿ, ಫೇಕ್‌ನ್ಯೂಸ್‌ಗಳ ಚಕ್ರದೊಳೆಗೆ ಸಿಲುಕಿ ಪೇಚಿಗೆ ಸಿಲುಕಿರುವ ನಾಯಕರು,...ಇಂಥ ಹಲವು ಸಂಗತಿಗಳನ್ನು ನೆನೆಯಬಹುದು. ಸಾಮಾಜಿಕ ಮಾಧ್ಯಮಗಳ ಚೌಕಟ್ಟಿನಲ್ಲಿ ಇಂಥ ಯಾವುದೇ ಗೋಜುಗಳಿಲ್ಲದೆ, ಎಲ್ಲವನ್ನೂ ಹೊಸದಾಗಿ ಆರಂಭಿಸುವ ಯೋಚನೆಯನ್ನು ಶೋಭಾ ತೆಗೆದುಕೊಂಡಂತಿದೆ.

ರಾಜ್ಯದ ನಾಲ್ವರ ಪೈಕಿ ಉಡುಪಿ–ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೂ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಕೃಷಿ ಮತ್ತು ರೈತರ ಅಭಿವೃದ್ಧಿ ಖಾತೆ ರಾಜ್ಯ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅಕ್ಟೋಬರ್‌ 23, 1966ರಂದು ಜನಿಸಿದ ಶೋಭಾ ಕರಂದ್ಲಾಜೆ, ಚಿಕ್ಕಂದಿನಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರ್ಪಡೆಗೊಂಡು ಪೂರ್ಣಾವಧಿ ಸ್ವಯಂಸೇವಕರಾಗಿದ್ದರು. 2004ರಿಂದ 2008ರವರೆಗೆ ವಿಧಾನ ಪರಿಷತ್ ಸದಸ್ಯೆಯಾಗಿದ್ದ ಅವರು, 2008ರಲ್ಲಿ ಯಶವಂತಪುರ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಈ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ ಹಾಗೂ ಇಂಧನ ಸಚಿವೆಯಾಗಿಯೂ ಕಾರ್ಯ ನಿರ್ವಹಿಸಿದ್ದರು.

2014ರಲ್ಲಿ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಮೊದಲ ಪ್ರಯತ್ನದಲ್ಲಿಯೇ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವಿರುದ್ಧ ಗೆದ್ದಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ವಿರುದ್ಧ ಸ್ಪರ್ಧಿಸಿ, ಗೆಲುವು ಸಾಧಿಸಿದರು.

ಅವರ ಟ್ವಿಟರ್‌ ಖಾತೆಯಲ್ಲಿ ಹಳೆಯ ಟ್ವೀಟ್‌ಗಳು ಅಳಿಸುತ್ತಿದ್ದಂತೆ, ಹಲವು ಟ್ವೀಟಿಗರು ಟೀಕೆಗಳ ಸುರಿಮಳೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT