ಬುಧವಾರ, ಮೇ 18, 2022
23 °C

ಎಂ.ಪಿ. ಕುಮಾರಸ್ವಾಮಿ ಧಮ್ಕಿ ಪ್ರಕರಣಕ್ಕೆ ಜಾತಿ ಲೇಪನ: ಫೇಸ್‌ಬುಕ್‌ನಲ್ಲಿ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಶಾಸಕ ಎಂ.ಪಿ. ಕುಮಾರಸ್ವಾಮಿ ಪಿಎಸ್‌ಐಗೆ ಬೆದರಿಕೆ ಹಾಕಿರುವ ಫೋನ್‌ ಸಂಭಾಷಣೆ ಆಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಈ ವಿಚಾರವು ಜಾತಿ ಲೇಪನ ಪಡೆದು ಫೇಸ್‌ಬುಕ್‌ನಲ್ಲಿ ಜಟಾಪಟಿಗೆ ಎಡೆಮಾಡಿದೆ.

ವಿಷಯಕ್ಕೆ ಸಂಬಂಧಿಸಿದಂತೆ ಖಂಡನೆ, ಸಮರ್ಥನೆ ಪರ್ವ ಶುರುವಾಗಿದೆ. ಮುಖಂಡರೊಬ್ಬರ ಫೇಸ್‌ಬುಕ್‌ ಖಾತೆಯ ಪೋಸ್ಟ್‌ನ ಸಾರಾಂಶ ಇಂತಿದೆ.

‘ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಮಲ್ಲಂದೂರು ಪೊಲೀಸ್ ಠಾಣೆ ಪಿಎಸ್‌ಐ ಆಗಿ ಚಾರ್ಜ್ ತೆಗೆದುಕೊಂಡಿದ್ದ ರವೀಶ್ ಎಂಬ ಅಧಿಕಾರಿಯನ್ನು ಬಾಯಿಗೆ ಬಂದಂತೆ ಬೈದಿರುವುದು ಖಂಡನೀಯ. ವಿಶೇಷವಾಗಿ ನಾವೆಲ್ಲರೂ ಗಮನಿಸಬೇಕಾದ ಸಂಗತಿಯೆಂದರೆ, ಈ ಅಧಿಕಾರಿಯೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಶಾಸಕರ ಈ ಹೇಳಿಕೆಯನ್ನು ಖಂಡಿಸುವ ಧೈರ್ಯ ಎಲ್ಲಿ ಹೋಯಿತು ಒಕ್ಕಲಿಗ ಸಮುದಾಯದರಿಗೆ.

ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಯಿಂದ ಪಿಎಸ್‌ಐಗೆ ಧಮ್ಕಿ: ಆಡಿಯೊ ವೈರಲ್‌

ಒಕ್ಕಲಿಗ ಬಂಧುಗಳೇ, ನಾವೆಲ್ಲರೂ ಎಲ್ಲಾ ಸಮುದಾಯದವರನ್ನು ಒಟ್ಟಾಗಿ ತೆಗೆದುಕೊಂಡು ಸಹಬಾಳ್ವೆಯಿಂದ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಯೋಚಿಸುವಂತವರಾಗಬೇಕು. ಜನರ ರಕ್ಷಣೆ ಮಾಡುವ ಪೊಲೀಸ್ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸುವ ಇಂಥ ಶಾಸಕರು ರಾಜೀನಾಮೆ ನೀಡಲಿ. ಪರಿವರ್ತನೆ ನಿಯಮ ಪಾಲಿಸಿದರೆ ಜನರಿಗೆ ಒಳಿತು.

ಶಾಸಕ ಕುಮಾರಸ್ವಾಮಿ ಪೋಸ್ಟ್‌:

ಮಲ್ಲಂದೂರು ಪಿಎಸ್ಐ ಜತೆಗಿನ ಮಾತುಕತೆ ಆಡಿಯೊ ವಿರೋಧಿಗಳು ಮಾಡಿಸಿರುವ ಕುತಂತ್ರ. ಈ ಹಿಂದೆ ಈ ಪಿಎಸ್ಐ ನನ್ನ ಬಳಿ ಬಂದಿದ್ದರು.

ನಿಮ್ಮ ಊರು ಮಂಡ್ಯ, ನೀವು ಕರ್ತವ್ಯಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದು, ಅನುಭವದ ಕೊರತೆ ಇದೆ. ಭಾಷೆಯ ವ್ಯತ್ಯಾಸ ಇರುವುದರಿಂದ ಇಲ್ಲಿನ ಜನರನ್ನು ಸಂಭಾಳಿಸುವುದು ಕಷ್ಟ ಎಂದು ತಿಳಿಹೇಳಿ ಕಳಿಸಿದ್ದೆ. ಜಾತಿ ಅಥವಾ ಬೇರೆ ವಿಚಾರ ಕೇಳಿರಲಿಲ್ಲ.

ಇದೀಗ ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನನ್ನ ಗಮನಕ್ಕೆ ಬಾರದೆ ಕೆಲಸಕ್ಕೆ ಹಾಜರಾಗಿದ್ದಾರೆ. ನಮ್ಮ ಕಾರ್ಯಕರ್ತರು, ಮತದಾರರು ನನ್ನ ಮೇಲೆ ಒತ್ತಡ ಹಾಕಿರುವುದರಿಂದ ಶಾಸಕನಾಗಿ ನಾನೇ ಮಾತನಾಡಬೇಕಿದೆ. ಪೊಲೀಸ್ ಠಾಣೆ ವಿಚಾರವಾಗಿ ಪ್ರತಿದಿನ ಹತ್ತಾರು ಕರೆಗಳು ನನಗೆ ಬರುತ್ತವೆ, ನಾನೇ ಖುದ್ದು ನಿವಾರಣೆ ಮಾಡಬೇಕಾದ ಹೊಣೆಗಾರಿಕೆ ಇದೆ.

ಪಿಎಸ್‌ಐಗೆ ಧಮ್ಕಿ: ವಿರೋಧಿಗಳ ಕುತಂತ್ರ ಎಂದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ

ಈಗ ನನ್ನ ವಿರುದ್ಧ ಒಕ್ಕಲಿಗರ ವಿರೋಧಿ ಎಂದು ಕುತಂತ್ರ ಹೆಣೆಯಲಾಗುತ್ತಿದೆ. ನಾನು ಒಕ್ಕಲಿಗರ ವಿರೋಧಿ ಎಂಬುದು ಸತ್ಯಕ್ಕೆ ದೂರವಾದ ಮಾತು. ನನ್ನ ಜೊತೆಗಾರರಲ್ಲಿ ಬಹುತೇಕರು ಒಕ್ಕಲಿಗ ನಾಯಕರು ಇದ್ದಾರೆ. ನಮ್ಮ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯಲ್ಲಿ ಒಕ್ಕಲಿಗರ ನಿರ್ದೇಶನದಂತೆ ಬಹುತೇಕ ಮಾಡಲಾಗುತ್ತಿದೆ. ನನ್ನ ವಿರೋಧಿಗಳು ಹೆಣೆದಿರುವ ಈ ಕುತಂತ್ರವನ್ನು ದಯವಿಟ್ಟು ಯಾರೂ ನಂಬಬಾರದು....

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು