ಶುಕ್ರವಾರ, ಮಾರ್ಚ್ 5, 2021
16 °C

ಶಕ್ತಿಕಾಂತ ದಾಸ್ ಶೈಕ್ಷಣಿಕ ಅರ್ಹತೆಯ 'ಇತಿಹಾಸ' ಕೆದಕಿ ಸಾಮಾಜಿಕ ತಾಣದಲ್ಲಿ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ)ನ ನೂತನ ಗವರ್ನರ್‌ ಆಗಿ ನೇಮಕವಾಗಿರುವ ಶಕ್ತಿಕಾಂತ ದಾಸ್ ಎರಡು ವರ್ಷಗಳ ಹಿಂದೆ ಸರ್ಕಾರದ ಸುದ್ದಿಗೋಷ್ಠಿಗಳಲ್ಲಿ ಆಗಾಗ ಕಾಣಿಸಿಕೊಂಡಿದ್ದು ಕೆಲವರಿಗಾದರೂ ನೆನಪಿರಬಹುದು. 2016ರಲ್ಲಿ ಮೋದಿ ಸರ್ಕಾರ  ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದಾಗ, ಸರ್ಕಾರದ ನೋಟು ರದ್ದತಿಯನ್ನು ಸಮರ್ಥಿಸಿಕೊಂಡು ಹಲವಾರು ಬಾರಿ ಸುದ್ದಿಗೋಷ್ಠಿ ನಡೆಸಿದ ವ್ಯಕ್ತಿಯಾಗಿದ್ದಾರೆ ಇವರು. ಆಗ ಶಕ್ತಿಕಾಂತ ದಾಸ್ ಆರ್ಥಿಕ ವ್ಯವಹಾರಗಳ ಮಾಜಿ ಕಾರ್ಯದರ್ಶಿಯಾಗಿದ್ದರು.

ಆರ್‌ಬಿಐನ 25ನೇ ಗವರ್ನರ್‌ ಆಗಿ ಅಧಿಕಾರ ವಹಿಸಿರುವ ಶಕ್ತಿಕಾಂತ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಶಶಿಕಾಂತ ದಾಸ್ ಅವರ ಶೈಕ್ಷಣಿಕ ಅರ್ಹತೆ MA histotry. ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವ್ಯಕ್ತಿಯೊಬ್ಬರನ್ನು ಆರ್‌ಬಿಐ ಗವರ್ನರ್ ಆಗಿ ನೇಮಕ ಮಾಡಿದ್ದು ಯಾಕೆ ಎಂದು ನೆಟಿಜನ್‍ಗಳು ಪ್ರಶ್ನಿಸುತ್ತಿದ್ದಾರೆ.
ಈ ಹಿಂದೆ ಆರ್‌ಬಿಐ ಗವರ್ನರ್ ಆಗಿದ್ದ ರಘುರಾಂ ರಾಜನ್ ಮತ್ತು ಉರ್ಜಿತ್ ಪಟೇಲ್ ಅವರು ಇಕಾನಮಿಕ್ಸ್ ನಲ್ಲಿ ಪಿಎಚ್‍ಡಿ ಪದವಿ ಹೊಂದಿದವರು. ಹೀಗಿರುವಾಗ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರನ್ನು ಗವರ್ನರ್ ಮಾಡಿದ್ದು modiconomics ಎಂದು ನೆಟಿಜನ್‍ಗಳು ಲೇವಡಿ ಮಾಡಿದ್ದಾರೆ. ಇನ್ನು ಕೆಲವರು ಚಹಾ ಮಾರುವವ ಪ್ರಧಾನಿಯಾಗುವುದಾದರೆ MA Hitory ಪಡೆದವರು ಆರ್‌ಬಿಐ ಗವರ್ನರ್ ಆಗಬಹುದು ಎಂದು ನಗೆಯಾಡಿದ್ದಾರೆ.
 
ಏತನ್ಮಧ್ಯೆ, ದಾಸ್ ಅವರು ನೋಟು ರದ್ದತಿ ವೇಳೆ ಮಾಡಿದ್ದ ಟ್ವೀಟ್‍ಗಳನ್ನು ಹುಡುಕಿ ತೆಗೆದು ಟ್ವೀಟಿಗರು ಟ್ರೋಲ್  ಮಾಡುತ್ತಿದ್ದಾರೆ. 

ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಉದ್ದನೆಯ ಸರತಿ ಸಾಲಿಗೆ ಕಾರಣ ಏನು ಎಂಬುದಕ್ಕೆ ಶಕ್ತಿಕಾಂತ್ ದಾಸ್ ನೀಡಿದ  ಹೇಳಿಕೆಯು ಈ ರೀತಿ ಟ್ರೋಲ್ ಆಗುತ್ತಿದೆ.

ಶಕ್ತಿಕಾಂತ ಅವರ ಶೈಕ್ಷಣಿಕ ಅರ್ಹತೆ?
ತಮಿಳುನಾಡು ಕೇಡರ್‌ ನಿವೃತ್ತ ಐಎಎಸ್‌ ಅಧಿಕಾರಿ ಶಕ್ತಿಕಾಂತ‌ ದಾಸ್‌ ತಮಿಳುನಾಡು ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಇವರು ದೆಹಲಿ ವಿಶ್ವ ವಿದ್ಯಾನಿಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆನಂತರ ಐಐಎಂ ಬೆಂಗಳೂರಿನಿಂದ ಫಿನಾನ್ಶಿಯಲ್ ಮ್ಯಾನೇಜ್‍ಮೆಂಟ್  ಕೋರ್ಸ್ ಮಾಡಿದ್ದಾರೆ. ಶಕ್ತಿಕಾಂತ ಅವರು ಕಂದಾಯ ಕಾರ್ಯದರ್ಶಿಯಾಗಿದ್ದರು. ಆನಂತರ  ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾದರು.

ಆರ್‌ಬಿಐ ಗವರ್ನರ್ ಹುದ್ದೆಗೆ ಅರ್ಹತೆ ಏನು?
ಯಾವುದೇ ವಿಷಯದಲ್ಲಿ ಪದವಿ/ಸ್ನಾತಕೋತ್ತರಪದವಿ/ ಸಿಎ ಆಗಿದ್ದವರು ಆರ್‌ಬಿಐ ಗವರ್ನರ್ ಆಗಬಹುದು. ಈ ಪದವಿಯೊಂದಿಗೆ ಈ ಕೆಳಗಿನ ಅರ್ಹತೆ ಕೂಡಾ ಬೇಕಿದೆ.

* ಬ್ಯಾಂಕ್‍ನ ಜನರಲ್ ಮ್ಯಾನೇಜರ್/ ಇಡಿ/ ಚೇರ್‌ಮೆನ್ ಆಗಿ ಕಾರ್ಯ ನಿರ್ವಹಿಸಿರಬೇಕು
* ಭಾರತ ಸರ್ಕಾರದ ಆರ್ಥಿಕ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿರಬೇಕು 
* IMF/World Bank ನಲ್ಲಿ ಕೆಲಸ ಮಾಡಿರಬೇಕು
* ಬ್ಯಾಂಕಿಂಗ್ ಮತ್ತು ಆರ್ಥಿಕ ಸಂಸ್ಥೆಗಳಲ್ಲಿ ದುಡಿದ ಅನುಭವ
*ಜಗತ್ತಿನ ಪ್ರತಿಷ್ಠಿತ ಆರ್ಥಿಕ ಸಂಸ್ಥೆ/ ಬ್ಯಾಂಕ್ ನಲ್ಲಿ ದುಡಿದಿರಬೇಕು

28 ವರ್ಷಗಳಲ್ಲಿ ಇದೇ ಮೊದಲ ಬಾರಿ ಇಕಾನಮಿಕ್ಸ್ ಪದವಿ ಹೊಂದಿರದ ವ್ಯಕ್ತಿಯೊಬ್ಬರು ಆರ್‌ಬಿಐ ಗವರ್ನರ್ ಆಗಿದ್ದಾರೆ. 1935ರಲ್ಲಿ ನೇಮಕವಾದ ರಿಸರ್ವ್ ಬ್ಯಾಂಕ್‍ನ ಮೊದಲ ಗವರ್ನರ್ ಓಸ್ಬರ್ನ್ ಸ್ಮಿತ್  ಬ್ಯಾಂಕಿಂಗ್ ಉದ್ಯೋಗಿಯಾಗಿದ್ದರು. ಇವರ ನಂತರ ಗವರ್ನರ್ ಆಗಿ ನೇಮಕವಾದವರೆಲ್ಲಾ ಐಸಿಎಸ್ (ಇಂಡಿಯನ್ ಸಿವಿಲ್ ಸರ್ವೀಸ್‍) ಅರ್ಹತೆ ಹೊಂದಿದವರು. 
1970ರಲ್ಲಿ ನೇಮಕವಾಗಿದ್ದ ಅದಾರ್ಕರ್ ಆರ್ಥಿಕ ತಜ್ಞರಾಗಿದ್ದರು. ಆದಾಗ್ಯೂ ಅವರು 42 ದಿನಗಳ ಕಾಲವಷ್ಟೇ ಈ ಹುದ್ದೆಯಲ್ಲಿದ್ದರು. 
1977ರಲ್ಲಿ ಕೇಡರ್ ಅಧಿಕಾರಿಯಾಗಿದ್ದ ಎಂ.ನರಸಿಂಹನ್ ಆರ್ ಬಿಐ ಗವರ್ನರ್ ಆದರು.ಆನಂತರ ಈ ಹುದ್ದೆಗೆ ನೇಮಕವಾದವರಲ್ಲಿ ವೆಂಕಿಟರಾಮನ್ ಹೊರತು ಪಡಿಸಿ ಇನ್ನುಳಿದವರೆಲ್ಲರೂ ಆರ್ಥಿಕ ತಜ್ಞರಾಗಿದ್ದರು. ಐಜಿ ಪಟೇಲ್, ಮನಮೋಹನ್ ಸಿಂಗ್, ಸಿ. ರಂಗರಾಜನ್ ಮೊದಲಾದವರು ಆರ್ಥಿಕ ತಜ್ಞರಾಗಿದ್ದರು.

ಗವರ್ನರ್ ಹುದ್ದೆಯಲ್ಲಿದ್ದವರಲ್ಲಿ ಆರ್‌.ಎನ್. ಮಲ್ಹೋತ್ರಾ, ವೆಂಕಿಟರಾಮನ್, ರೆಡ್ಡಿ ಮತ್ತು ಸುಬ್ಬರಾವ್ ಐಎಎಸ್ ಅಧಿಕಾರಿಗಳಾಗಿದ್ದರು.  ವೆಂಕಿಟರಾಮನ್ ಹೊರತು ಪಡಿಸಿ ಈ ಮೂವರು ಆರ್ಥಿಕ ತಜ್ಞರು ಕೂಡಾ ಆಗಿದ್ದರು.

ಶಕ್ತಿಕಾಂತ ದಾಸ್ ಬಗ್ಗೆ ಗೂಗಲ್‍ನಲ್ಲಿ ಹುಡುಕಿದರು
ಶಶಿಕಾಂತ ದಾಸ್ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ಗೂಗಲ್‍ನಲ್ಲಿ ಹುಡುಕಿದವರೇ ಜಾಸ್ತಿ. ಗೂಗಲ್ ಟ್ರೆಂಡ್ಸ್ ಪ್ರಕಾರ ಡಿ.12ರಂದು  ಹೆಚ್ಚು ಜನರು ಈ ಬಗ್ಗೆ ಗೂಗಲಿಸಿದ್ದಾರೆ.


 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು