ಸೋಮವಾರ, ಆಗಸ್ಟ್ 2, 2021
23 °C

ಮನೆಯಿಂದ ಹೊರಬರಲು ಆಸೆ ಪಟ್ಟ ಸನ್ನಿಗೆ ಮುಂಬೈ ಪೊಲೀಸರು ಹೇಳಿದ್ದೇನು ಗೊತ್ತಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲು ಅಲ್ಲಿನ ಪೊಲೀಸರ ಕಾರ್ಯಕ್ಷಮತೆ ಪ್ರಮುಖ ಪಾತ್ರವಹಿಸಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಮುಂಬೈ ಪೊಲೀಸರು ರಸ್ತೆಗಿಳಿದು ನಡೆಸುವ ಕರ್ತವ್ಯಕ್ಕೆ ಮಾತ್ರವೇ ಸೀಮಿತರಾಗಿಲ್ಲ. ಕೋವಿಡ್‌ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂಬೈ ಪೊಲೀಸರ ಸೃಜನಾತ್ಮಕ ಮತ್ತು ಹಾಸ್ಯಭರಿತ ಟ್ವೀಟ್‌ಗಳೂ ಸಹ ಜನರ ಮೆಚ್ಚುಗೆಯನ್ನು ಗಳಿಸಿವೆ.

ಲಾಕ್‌ಡೌನ್‌ ಅಲ್ಲಿ ಮನೆಯಿಂದ ಹೊರಬರಲು ಇಚ್ಛಿಸಿದ್ದ ಸನ್ನಿಗೆ ಮುಂಬೈ ಪೊಲೀಸರು ನೀಡಿದ ಉತ್ತರವೀಗ ಟ್ವೀಟಿಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.

ಮೇ 23ರಂದು (ಭಾನುವಾರ) ಮನೆಯಿಂದ ಹೊರಬರದಂತೆ ಮುಂಬೈ ಪೊಲೀಸ್‌ ಆಯುಕ್ತರು ಟ್ವೀಟ್‌ ಮೂಲಕ ಜನರಿಗೆ ವಿನಂತಿಸಿದ್ದರು. 'ಈ ಭಾನುವಾರವು ಉರಿ ಬಿಸಿಲಿನಿಂದ ಕೂಡಿದೆ(It's a Hot Sunny Sunday). ನೀವು ಮನೆಯಲ್ಲಿಯೇ ಉಳಿಯಲು ಇವತ್ತಿನ ವಾತಾವರಣ ಸೂಕ್ತವಾಗಿದೆ,' ಎಂದು ಟ್ವೀಟಿಸಿದ್ದರು.

ಮುಂಬೈ ಪೊಲೀಸ್‌ ಆಯುಕ್ತರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ನೆಟ್ಟಿಗರೊಬ್ಬರು, 'ಸರ್, ನನ್ನ ಹೆಸರು ಸನ್ನಿ(Sir, my name is Sunny). ನಾನು ಹೊರಗೆ ಹೋಗಬಹುದೇ?' ಎಂದು ಕೇಳಿದ್ದರು.

ಸನ್ನಿಯವರ ಈ ಟ್ವೀಟ್‌ಗೆ ಮುಂಬೈ ಪೊಲೀಸ್‌ ಇಲಾಖೆಯ ಅಧಿಕೃತ ಖಾತೆಯಿಂದ ಹಾಸ್ಯಭರಿತವಾಗಿಯೇ ಪ್ರತಿಕ್ರಿಯಿಸಲಾಗಿದೆ. 'ಸರ್, ನೀವು ನಿಜವಾಗಿಯೂ ಸೌರಮಂಡಲದ ಮಧ್ಯಭಾಗದಲ್ಲಿರುವ ನಕ್ಷತ್ರವಾಗಿದ್ದೀರಿ(Sunny). ನಿಮ್ಮ ಸುತ್ತ ಭೂಮಿ ಸೇರಿದಂತೆ ಸೌರಮಂಡಲದ ಇತರ ಗ್ರಹಗಳೂ ಸುತ್ತುತ್ತಿವೆ. ನಿಮ್ಮ ಜವಾಬ್ದಾರಿಯನ್ನು ಅರಿತುಕೊಂಡಿದ್ದೀರಿ ಎಂದು ನಾವು ಭಾವಿಸಿದ್ದೇವೆ. ದಯವಿಟ್ಟು ನಿಮ್ಮನ್ನು ನೀವು ವೈರಸ್‌ಗೆ ಒಡ್ಡಿಕೊಳ್ಳುವ ಮೂಲಕ ರಾಜಿ ಮಾಡಿಕೊಳ್ಳಬೇಡಿ. ನೀವು ಸುರಕ್ಷತೆಯ ಬೆಳಕಾಗಿಯೇ ಇರಿ' ಎಂದು ಮುಂಬೈ ಪೊಲೀಸ್‌ ಇಲಾಖೆ ಟ್ವೀಟಿಸಿದೆ.

ಮುಂಬೈ ಪೊಲೀಸರ ಈ ಪ್ರತಿಕ್ರಿಯೆಗೆ ಟ್ವಿಟರ್‌ನಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಪೊಲೀಸರ ಹಾಸ್ಯಪ್ರಜ್ಞೆ ಮತ್ತು ಕಾಳಜಿಯನ್ನು ಜನರು ಕೊಂಡಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು