ಗುರುವಾರ , ಆಗಸ್ಟ್ 18, 2022
23 °C

ನಿಯಮ ಒಪ್ಪಿದರಷ್ಟೆ ವಾಟ್ಸ್‌ಆ್ಯಪ್‌

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

ವಾಟ್ಸ್‌ಆ್ಯಪ್‌ನ ಹೊಸ ಖಾಸಗಿ ನೀತಿಯ ಕುರಿತು ಜಗತ್ತಿನೆಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಕಂಪನಿಯು ಅದನ್ನು ಒಪ್ಪಿಕೊಳ್ಳಲು ನೀಡಿದ್ದ ಮೇ 15ರ ಗಡುವನ್ನು ಕೈಬಿಟ್ಟಿದೆ. ಮೇ 15ರ ಬಳಿಕವೂ ವಾಟ್ಸ್ಆ್ಯಪ್‌ ಕಾರ್ಯನಿರ್ವಹಿಸಲಿದೆ, ಯಾವುದೇ ಖಾತೆ ಡಿಲೀಟ್‌ ಆಗುವುದಿಲ್ಲ ಎಂದು ಘೋಷಿಸಿದೆ. ಹಾಗಿದ್ದರೆ ಇದುವರೆಗೆ ನಡೆಸಿದ ಕಸರತ್ತು, ಪದೇ ಪದೇ ನೀಡಿದ ಸ್ಪಷ್ಟನೆ, ಭರವಸೆ... ಇವೆಲ್ಲದರ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದರೆ. ಇವೆಲ್ಲವೂ ಒಂದು ರೀತಿಯ ಮಾರುಕಟ್ಟೆ ತಂತ್ರ ಎಂದೇ ಹೇಳಬಹುದು.

ಖಾಸಗಿತನಕ್ಕೆ ಸಂಬಂಧಿಸಿದ ತನ್ನ ಹೊಸ ನೀತಿಯನ್ನು ಒಪ್ಪಿಕೊಳ್ಳದೇ ಇದ್ದರೆ ಫೆಬ್ರುವರಿ 8ರ ಬಳಿಕ ವಾಟ್ಸ್‌ಆ್ಯಪ್ ಬಳಸಲೇ ಆಗುವುದಿಲ್ಲ ಎಂದು ಖಡಾಖಂಡಿತವಾಗಿ ಘೋಷಿಸಿತ್ತು. ಇದಕ್ಕೆ ಜಾಗತಿಕವಾಗಿ ಬಹಳಷ್ಟು ಟೀಕೆ, ವಿರೋಧಗಳು ವ್ಯಕ್ತವಾದವು. ಬಹಳಷ್ಟು ವಾಟ್ಸ್‌ಆ್ಯಪ್ ಬಳಕೆದಾರರು  ಸಿಗ್ನಲ್‌ ಮತ್ತು ಟೆಲಿಗ್ರಾಂ ಆ್ಯಪ್‌ಗಳತ್ತ ಮುಖಮಾಡಿದರು. ತಕ್ಷಣವೇ ಎಚ್ಚೆತ್ತುಕೊಂಡ ವಾಟ್ಸ್‌ಆ್ಯಪ್‌, ಗಡುವನ್ನು ಮೇ 15ಕ್ಕೆ ವಿಸ್ತರಿಸಿತು. ತಪ್ಪು ಮಾಹಿತಿ ಹರಡುತ್ತಿರುವುದರಿಂದ ಗಡುವನ್ನು ವಿಸ್ತರಣೆ ಮಾಡಿರುವುದಾಗಿ ಘೋಷಿಸಿತು. ಈ ನಡುವೆ, ಬಳಕೆದಾರರ ಮನವೊಲಿಸಲು ಹಲವು ಸ್ಪಷ್ಟನೆಗಳನ್ನು ನೀಡುತ್ತಲೇ ಬಂದಿತು. ಬಳಕೆದಾರರ ಖಾಸಗಿತನ ರಕ್ಷಣೆಗೆ ಬದ್ಧ. ಎಂಡು–ಟು–ಎಂಡ್‌ ಎನ್‌ಕ್ರಿಪ್ಷನ್‌ ವ್ಯವಸ್ಥೆ ಹೊಂದಿರುವುದರಿಂದ ಹೆಚ್ಚಿನ ಸುರಕ್ಷತೆ ಇದೆ ಎಂದು ಹೇಳಿಕೆಗಳನ್ನು ನೀಡಿತು.

ತನಿಖೆಗೆ ಆದೇಶಿಸಿದ ಸ್ಪರ್ಧಾ ಆಯೋಗ: ವಾಟ್ಸ್‌ಆ್ಯಪ್‌ನ ಪರಿಷ್ಕೃತ ಖಾಸಗಿತನ ನೀತಿ ಹಾಗೂ ಸೇವಾ ನಿಯಮಗಳ ಬಗ್ಗೆ ತನಿಖೆ ನಡೆಸುವಂತೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ತನ್ನ ತನಿಖಾ ವಿಭಾಗಕ್ಕೆ ಆದೇಶಿಸಿದೆ. ವಾಟ್ಸ್‌ಆ್ಯಪ್‌ನ ಪರಿಷ್ಕೃತ ನಿಯಮಗಳ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಗಮನಿಸಿ ಸಿಸಿಐ ಸ್ವಯಂಪ್ರೇರಿತವಾಗಿ ಈ ಕ್ರಮ ಕೈಗೊಂಡಿದೆ. ಈ ನೀತಿ ಹಾಗೂ ಸೇವಾ ನಿಯಮಗಳು ಸ್ಪರ್ಧಾ ಕಾನೂನುಗಳ ಉಲ್ಲಂಘನೆಯಂತೆ ಮೇಲ್ನೋಟಕ್ಕೆ ಕಾಣಿಸುತ್ತಿವೆ ಎಂದು ಅದು ಹೇಳಿದೆ. ಬಳಕೆದಾರರಿಗೆ ಇಷ್ಟವಿಲ್ಲದಿದ್ದರೂ ತಮ್ಮ ಕೆಲವು ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ವಾಟ್ಸ್‌ಆ್ಯಪ್‌ಗೆ ಒಪ್ಪಿಗೆ ನೀಡಬೇಕಿರುವುದರ ಪೂರ್ಣ ಪರಿಣಾಮಗಳ ಕುರಿತು ವಿಸ್ತೃತ ತನಿಖೆ ಆಗಬೇಕಿದೆ ಎಂದು ಸಿಸಿಐ ಹೇಳಿದೆ. 

ಮಾಹಿತಿ ಹಂಚಿಕೆಗೆ ಸಂಬಂಧಿಸಿದಂತೆ ನಿರ್ದಿಷ್ಟ ನಿಯಮಗಳನ್ನು ಒಪ್ಪಿಕೊಳ್ಳದಿರುವ ಅಥವಾ ಅದಕ್ಕೆ ವಿರೋಧ ವ್ಯಕ್ತಪಡಿಸುವ ಆಯ್ಕೆಯನ್ನು ಬಳಕೆದಾರರಿಗೆ ನೀಡಿಲ್ಲ. ಇದು ವಾಟ್ಸ್‌ಆ್ಯಪ್‌ ಬಳಕೆದಾರರ ಪಾಲಿಗೆ ನ್ಯಾಯಸಮ್ಮತವಾಗಿರುವಂತೆ ಮೇಲ್ನೋಟಕ್ಕೆ ಕಾಣುತ್ತಿಲ್ಲ ಎಂದು ಆಯೋಗ ಅಭಿಪ್ರಾಯ ವ್ಯಕ್ತಪಡಿಸಿದೆ.

ಗಡುವು ಇಲ್ಲ: ಖಾಸಗಿತನ ಕುರಿತ ಪರಿಷ್ಕೃತ ನೀತಿಗೆ ಬಳಕೆದಾರರು ಒಪ್ಪಲು ನೀಡಿದ್ದ ಮೇ 15ರ ಗಡುವನ್ನು ವಾಟ್ಸ್‌ಆ್ಯಪ್‌ ಕೈಬಿಟ್ಟಿದೆ. ಸಮ್ಮತಿ ಸೂಚಿಸದೇ ಇದ್ದರೂ ಭಾರತದ ಬಳಕೆದಾರರ ಖಾತೆ ರದ್ದು ಆಗುವುದಿಲ್ಲ ಎಂದು ಹೇಳಿದೆ. ಪರಿಷ್ಕೃತ ನೀತಿಗೆ ಒಪ್ಪಿಗೆ ಸೂಚಿಸದೇ ಇದ್ದರೂ ಯಾವುದೇ ಬಳಕೆದಾರರ ಖಾತೆಯೂ ರದ್ದಾಗುವುದಿಲ್ಲ. ಆದರೆ, ಪರಿಷ್ಕೃತ ನೀತಿ ಕುರಿತಂತೆ ಮುಂದಿನ ಕೆಲವು ವಾರ ಬಳಕೆದಾರರಿಗೆ ಆಗಾಗ್ಗೆ ನೆನಪಿನ ಸಂದೇಶಗಳು ರವಾನೆ ಆಗಲಿವೆ ಎನ್ನುವುದು ವಾಟ್ಸ್‌ಆ್ಯಪ್‌ನ ವಕ್ತಾರರೊಬ್ಬರ ಹೇಳಿಕೆ. 

ಹಾಗಾದರೆ, ಬಳಕೆದಾರರ ವಿರೋಧಕ್ಕೆ ವಾಟ್ಸ್‌ಆ್ಯಪ್‌ ಮಣಿಯಿತೇ ಎಂದು ಕೇಳಿದರೆ, ಖಂಡಿತವಾಗಿಯೂ ಇಲ್ಲ. ಹೊಸ ನಿಯಮ ಒಪ್ಪದೇ ಇದ್ದರೆ ವಾಟ್ಸ್‌ಆ್ಯಪ್‌ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದೇ ಇಲ್ಲ. ವಾಟ್ಸ್ಆ್ಯಪ್‌ ಜಾಲತಾಣದಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. 

ಒಪ್ಪದೇ ಇದ್ದರೆ ಏನಾಗಲಿದೆ?

ಹೊಸ ನಿಯಮಕ್ಕೆ ಒಪ್ಪಿಗೆ ನೀಡುವವರೆಗೂ ವಾಟ್ಸ್‌ಆ್ಯಪ್‌ ಸೀಮಿತವಾಗಿ ಕಾರ್ಯಾಚರಿಸಲಿದೆ. ಒಪ್ಪದೇ ಇರುವ ಎಲ್ಲಾ ಬಳಕೆದಾರರಿಗೂ ಏಕಕಾಲಕ್ಕೇ ಹೀಗಾಗುವುದಿಲ್ಲ. 

ಚಾಟ್‌ ಲಿಸ್ಟ್‌ ಅಕ್ಸೆಸ್‌ ಮಾಡಲು ಸಾಧ್ಯವಾಗುವುದಿಲ್ಲ. ಹೀಗಿದ್ದರೂ ಇನ್‌ಕಮಿಂಗ್‌ ಫೋನ್‌ ಮತ್ತು ವಿಡಿಯೊ ಕಾಲ್‌ಗಳಿಗೆ ಪ್ರತಿಕ್ರಿಯಿಸಬಹುದು. ಮೆಸೇಜ್‌ನ ನೋಟಿಫಿಕೇಷನ್‌ ಎನೇಬಲ್ ಮಾಡಿದ್ದರೆ, ಬರುವ ಮೆಸೇಜ್‌ ಓದಲು ಅಥವಾ ಅದಕ್ಕೆ ಉತ್ತರಿಸಲು ಸಾಧ್ಯ. ಅದೇ ರೀತಿ ಮಿಸ್ಡ್‌ ಫೋನ್ ಅಥವಾ ವಿಡಿಯೊ ಕಾಲ್‌ ಆಗಿರುವ ನಂಬರ್‌ಗೆ ಮತ್ತೆ ಕಾಲ್ ಮಾಡಬಹುದು.

ಈ ರೀತಿ ಸೀಮಿತ ಕಾರ್ಯವಿಧಾನ ಮುಂದುವರಿದ ಕೆಲವೇ ವಾರಗಳ ಬಳಿಕ, ಇನ್‌ಕಮಿಂಗ್‌ ಕಾಲ್‌ ಅಥವಾ ನೋಟಿಫಿಕೇಶನ್‌ಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನಿಮ್ಮ ಮೊಬೈಲ್‌ಗೆ ಮೆಸೇಜ್‌ ಮತ್ತು ಕಾಲ್‌ ಕಳುಹಿಸುವುದನ್ನು ವಾಟ್ಸ್‌ಆ್ಯಪ್‌ ನಿಲ್ಲಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು