ಗುರುವಾರ , ನವೆಂಬರ್ 21, 2019
23 °C

ಬಿಳಿ ಬಾವುಟ ಹಿಡಿದವರು ಯಾರು? ಸುಳ್ಳು ವಿಡಿಯೊ ವೈರಲ್ ಮಾಡಿದ ಪಾಕ್‌

Published:
Updated:

ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತಂಗಧಾರ್ ಸೆಕ್ಟಾರ್‌ನಲ್ಲಿ ಭಾರತ ಮತ್ತು ಪಾಕ್ ಸೇನೆಗಳು ಅ.19, 20ರಂದು ಗುಂಡಿನ ಚಕಮಕಿ ನಡೆಸಿದವು. ‘ಎದುರಾಳಿಗಳು ಕದನ ವಿರಾಮ ಉಲ್ಲಂಘಿಸಿ, ಅಪ್ರಚೋದಿತ ಗುಂಡಿನ ದಾಳಿ ಆರಂಭಿಸಿದ್ದರಿಂದ ಅನಿವಾರ್ಯವಾಗಿ ಪ್ರತಿದಾಳಿ ನಡೆಸಬೇಕಾಯಿತು’ ಎಂದು ಎರಡೂ ದೇಶಗಳು ಪರಸ್ಪರ ದೋಷಾರೋಪ ಮಾಡಿದವು.

ಭಾರತೀಯ ಸೇನೆಯ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್, ‘ನೀಲಂ ಕಣಿವೆಯ ಉಗ್ರಗಾಮಿ ಶಿಬಿರಗಳನ್ನು ಭಾರತೀಯ ಫಿರಂಗಿ ದಾಳಿ ಧ್ವಂಸ ಮಾಡಿದೆ’ ಎಂದು ಘೋಷಿಸಿದರು. ಅತ್ತ ಪಾಕ್ ಸೇನಾ ವಕ್ತಾರರು, ‘ಪಾಕ್ ಸೇನೆಯ ದಾಳಿಯಿಂದ ಭಾರತೀಯ ಸೇನೆಗೆ ನಷ್ವವಾಗಿದೆ’ ಎಂದು ಟ್ವೀಟ್ ಮಾಡಿದರು.

ಇದನ್ನೂ ಓದಿ: ನುಸುಳಿದರೆ ನುಗ್ಗಿ ಹೊಡೀತೀವಿ: ಪಾಕ್‌ಗೆ ಎಚ್ಚರಿಕೆಯ ಸಂದೇಶ ಕೊಟ್ಟ ಫಿರಂಗಿ ದಾಳಿ

ಇತ್ತ ಸರ್ಕಾರ ಮತ್ತು ಸೇನೆಯ ಮಟ್ಟದಲ್ಲಿ ಆರೋಪ–ಪ್ರತ್ಯಾರೋಪಗಳು ನಡೆಯುತ್ತಿದ್ದರೆ, ಅತ್ತ ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳಲ್ಲಿ ಹಳೆಯ ವಿಡಿಯೊ ತುಣುಕೊಂದು ವೈರಲ್‌ ಆಯಿತು.

‘ಪಾಕ್ ಸೇನೆಯ ದಾಳಿಯಿಂದ ಹತರಾದ ಯೋಧರ ದೇಹಗಳನ್ನು ವಾಪಸ್‌ ಪಡೆದುಕೊಳ್ಳಲು ಭಾರತದ ಸೈನಿಕರು ಬಿಳಿ ಬಾವುಟ ಹಿಡಿದು ಬಂದಿದ್ದಾರೆ’ ಎಂದು ಟ್ವಿಟರ್‌ ಬಳಕೆದಾರರು ಮಾಡಿದ ಟ್ವೀಟ್‌ ಥಟ್ ಅಂತ 70 ಸಾವಿರ ವ್ಯೂಸ್ ಮತ್ತು 1,200ಕ್ಕೂ ಹೆಚ್ಚು ರಿಟ್ವೀಟ್‌ ಪಡೆದುಕೊಂಡು ವೈರಲ್ ಆಯಿತು.

‘ಸತ್ತವರ ದೇಹ ಪಡೆದುಕೊಳ್ಳಲು ಪರದಾಡುತ್ತಿರುವ ಭಾರತೀಯ ಸೇನೆ ಬಿಳಿ ಬಾವುಟ ಹಿಡಿದಿದೆ’ ಎಂದು ಫೇಸ್‌ಬುಕ್‌ನಲ್ಲಿ ಓರ್ವ ಪಾಕಿಸ್ತಾನಿ ಪ್ರಜೆ ಬರೆದುಕೊಂಡರು. ‘ಶಾಂತಿ ಬೇಡುತ್ತಿರುವ ಭಾರತೀಯ ಸೇನೆ’ ಎಂದು ಮತ್ತೊಬ್ಬರು ಟ್ವಿಟರ್‌ನಲ್ಲಿ ಒಕ್ಕಣೆ ಬರೆದು ವಿಡಿಯೊ ಹಂಚಿಕೊಂಡರು. ರಿಜ್‌ ಖಾನ್ ಎಂಬಾತನಂತೂ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಮೃತಪಟ್ಟ ಭಾರತೀಯ ಸೈನಿಕರ ಹೆಸರುಗಳನ್ನೂ ಉರ್ದು ಭಾಷೆಯಲ್ಲಿ ಬರೆದುಬಿಟ್ಟರು.

ಸತ್ಯ ಏನು?

ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತೀಯ ಪಡೆಗಳು ಫಿರಂಗಿ ದಾಳಿ ನಡೆಸಿದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ #PakistanArmy ಎಂದು ಹುಡುಕಿದಾಗ ‘ಭಾರತೀಯ ಸೈನಿಕರು ಬಿಳಿ ಬಾವುಟ ತೋರಿಸಿದರು’ ಎಂಬ ಒಕ್ಕಣೆ ಇದ್ದ ವಿಡಿಯೊಗಳನ್ನು ಹಂಚಿಕೊಂಡಿದ್ದ ಹಲವು ಟ್ವಿಟರ್ ಖಾತೆಗಳು ‘ಪ್ರಜಾವಾಣಿ’ ಪ್ರತಿನಿಧಿಗೆ ಕಾಣಿಸಿದವು.

ಇದನ್ನೂ ಓದಿ: ‘ಉಳಿಯೋ ಭರವಸೆ ಇಲ್ಲ, ಬಂಕರ್ ರಿಪೇರಿ ಮಾಡಿಸಿ’ ಎಲ್‌ಒಸಿ ಗ್ರಾಮಸ್ಥರ ಒತ್ತಾಯ

White Flag Army ಎಂದು ಹುಡುಕಿದಾಗ ಹಿಂದೂಸ್ತಾನ್‌ ಟೈಮ್ಸ್‌ ದಿನಪತ್ರಿಕೆಯ ಟ್ವಿಟರ್‌ ಅಕೌಂಟ್‌ನಲ್ಲಿದ್ದ ಎಎನ್‌ಐ ಸುದ್ದಿಸಂಸ್ಥೆಯ ಮೂಲ ವಿಡಿಯೊ ಗೋಚರಿಸಿತು. ಸೆಪ್ಟೆಂಬರ್ 14ರ ಈ ವಿಡಿಯೊದ ಒಕ್ಕಣೆ ಹೀಗಿದೆ. ‘Pakistan Army shows white flag, retrieves bodies of soldiers killed in cross border firing’ (ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಹತರಾದ ಸೈನಿಕರ ದೇಹಗಳನ್ನು ಪಡೆದುಕೊಳ್ಳಲು ಬಿಳಿ ಬಾವುಟ ತೋರಿಸಿದ ಪಾಕ್ ಸೈನಿಕರು).

ಇದೇ ವಿಡಿಯೊ ತುಣುಕನ್ನು ‘ಔಟ್‌ಲುಕ್’ ವಾರಪತ್ರಿಕೆಯ ಯೂಟ್ಯೂಬ್‌ ಅಕೌಂಟ್‌ನಲ್ಲಿಯೂ ನೋಡಬಹುದಾಗಿದೆ. 

ಪಾಕಿಸ್ತಾನದ ನೆಟ್ಟಿಗರು ಯಾವ ಉದ್ದೇಶದಿಂದ ಈ ವಿಡಿಯೊ ವೈರಲ್ ಮಾಡಿದರೋ ಅದಕ್ಕೆ ತದ್ವಿರುದ್ಧ ಸಂದರ್ಭದ ವಿಡಿಯೊ ಅದಾಗಿತ್ತು ಎಂಬುದು ವಿಪರ್ಯಾಸ.

ಪ್ರತಿಕ್ರಿಯಿಸಿ (+)