ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕ್ ರೇಡಾರ್‌ಗಳಿಂದ ತಪ್ಪಿಸಿಕೊಳ್ಳಲು ಮೋಡದ ನೆರವು: ಟ್ರೋಲ್ ಆಯ್ತು ಮೋದಿ ಹೇಳಿಕೆ

ಬಾಲಾಕೋಟ್ ದಾಳಿ
Published : 12 ಮೇ 2019, 8:38 IST
ಫಾಲೋ ಮಾಡಿ
Comments

ನವದೆಹಲಿ:ಬಾಲಾಕೋಟ್‌ ವಾಯುದಾಳಿ ವೇಳೆ ಮೋಡ ಮತ್ತು ಮಳೆ ಇದ್ದುದು ಪಾಕಿಸ್ತಾನದ ರೇಡಾರ್‌ಗಳು ಭಾರತೀಯ ಯುದ್ಧವಿಮಾನಗಳನ್ನು ಪತ್ತೆ ಮಾಡದಂತೆ ತಡೆಯಲು ನೆರವಾಗಿದೆ ಎಂಬ ಅರ್ಥ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಟ್ವಿಟರ್‌ನಲ್ಲಿ ವ್ಯಾಪಕ ಟೀಕೆ, ವ್ಯಂಗ್ಯಭರಿತ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಮೋದಿ ಹೇಳಿದ್ದೇನು?:ನ್ಯೂಸ್ ನೇಷನ್ಸುದ್ದಿವಾಹಿನಿಗೆ ಶನಿವಾರ ಸಂದರ್ಶನ ನೀಡಿದ್ದ ಮೋದಿ ಹೀಗೆ ಹೇಳಿದ್ದಾರೆ:

‘ವಾತಾವರಣ ಹಠಾತ್ ಆಗಿ ಪ್ರತಿಕೂಲವಾಯಿತು. ಮೋಡಗಳಿದ್ದವು... ಭಾರಿ ಮಳೆಯಾಗುತ್ತಿತ್ತು. ಮೋಡಗಳಿರುವಾಗ ನಾವು ಮುನ್ನುಗ್ಗಬಹುದೇ ಎಂಬ ಅನುಮಾನ ಇತ್ತು. ಪರಾಮರ್ಶೆ ವೇಳೆ (ಬಾಲಾಕೋಟ್ ದಾಳಿಗೆ ಸಂಬಂಧಿಸಿದ), ದಿನಾಂಕವನ್ನು ಬದಲಿಸುವುದೇ ಸೂಕ್ತ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಯಿತು. ಆಗ ನನ್ನ ಮನದಲ್ಲಿ ಇದ್ದ ವಿಚಾರಗಳು ಕೇವಲ ಎರಡು; ಮೊದಲನೆಯದ್ದು ರಹಸ್ಯ ಕಾಪಾಡುವುದು ಮತ್ತು ಎರಡನೆಯದ್ದು ವಿಜ್ಞಾನದ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲದಿರುವುದು. ವಿಜ್ಞಾನದ ಬಗ್ಗೆ ಹೆಚ್ಚು ಗೊತ್ತಿರುವವ ನಾನಲ್ಲ. ಹೆಚ್ಚು ಮೋಡ ಮತ್ತು ಮಳೆಯಾಗುತ್ತಿದೆ. ಇದರಿಂದ ಲಾಭವಿದೆ. ನನಗೆ ತಿಳಿದ ಮಟ್ಟಿಗೆ ಮೋಡದಿಂದ ನಮಗೂ ನೆರವಾಗಬಹುದು. ನಮ್ಮ ಯುದ್ಧವಿಮಾನರೇಡಾರ್‌ನಿಂದ ತಪ್ಪಿಸಿಕೊಳ್ಳಬಹುದು ಎಂದು ಹೇಳಿದೆ. ಎಲ್ಲರೂ ಗೊಂದಲ್ಲಕ್ಕೊಳಗಾದರು. ಮೋಡಗಳಿವೆ, ಮುಂದುವರಿಯೋಣ ಎಂದುಕೊನೆಯದಾಗಿ ಹೇಳಿದೆ’.

ಇದನ್ನು ಬಿಜೆಪಿಯ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಶೇರ್ ಮಾಡಲಾಗಿತ್ತು. ಸದ್ಯ ಟ್ವೀಟ್‌ ಅನ್ನು ಅಳಿಸಲಾಗಿದೆ. ಮೋದಿ ಅವರು ವಾಯು ದಾಳಿ ಕುರಿತು ಸಂದರ್ಶನದಲ್ಲಿ ಮಾತನಾಡಿದ ವಿಡಿಯೊವನ್ನೂಟ್ವೀಟ್ ಮಾಡಲಾಗಿದೆ.

‘ಮೋದಿ ಅವರ ಮಾತುಗಳು ನಿಜಕ್ಕೂ ನಾಚಿಕೆಗೇಡು. ಮುಖ್ಯವಾಗಿ ಅವರು ನಮ್ಮ ವಾಯುಪಡೆಯನ್ನು ವೃತ್ತಿಪರತೆಯಿಲ್ಲದ್ದು ಮತ್ತು ಅಜ್ಞಾನದಿಂದ ಕೂಡಿದವರು ಎಂದು ಅವಮಾನಿಸಿದ್ದಾರೆ. ಅವರು ಆಡಿರುವ ಮಾತುಗಳು ದೇಶ ವಿರೋಧಿಯಾಗಿವೆ; ಯಾವೊಬ್ಬ ದೇಶಭಕ್ತ ಕೂಡ ಇದನ್ನು ಮಾಡಲಾರ’ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಟ್ವೀಟ್ ಮಾಡಿದ್ದಾರೆ.

‘ರಾಷ್ಟ್ರೀಯ ಭದ್ರತೆಯು ಅಷ್ಟೇನೂ ಪ್ರತಿಕೂಲವಾಗಿಲ್ಲ. ಮೋದಿ ಅವರ ಬೇಜವಾಬ್ದಾರಿ ಹೇಳಿಕೆಯಿಂದ ನಿಜಕ್ಕೂ ಹಾನಿಯಾಗಿದೆ. ಈ ರೀತಿ ಹೇಳಿಕೆ ನೀಡುವವರು ಭಾರತದ ಪ್ರಧಾನಿಯಾಗಿ ಉಳಿಯಬಾರದು’ ಎಂದೂ ಯೆಚೂರಿ ಟ್ವೀಟ್ ಮಾಡಿದ್ದಾರೆ.

‘ರೇಡಾರ್ ದೂರದರ್ಶಕಗಳಂತಲ್ಲ ಎಂದು ಯಾರಾದರೂ ಅವರಿಗೆ (ಮೋದಿ) ಹೇಳಿ.ದೂರದರ್ಶಕ ಅಥವಾ ಮೈಕ್ರೊಸ್ಕೋಪ್ ಮೂಲಕ ನೋಡಿದರೂ ಮೇ 23ರ ನಂತರ ಮೋದಿ ಅವರಿಗೆ ಬಹುಮತ ಕಾಣಿಸದು. ಆಗ ದೆಹಲಿಯಿಂದ ಓಡಿ ಹೋಗಲು ಮಾರ್ಗ ಕಂಡುಕೊಳ್ಳಲು ಅವರಿಗೆ ರೇಡಾರ್ ಬೇಕಾಗಬಹುದು’ ಎಂದು ಎಂ.ಡಿ. ಸಲೀಮ್ ಎಂಬುವವರು ವ್ಯಂಗ್ಯವಾಡಿದ್ದಾರೆ.

’ರೇಡಾರ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಪ್ರಧಾನಿಯವರಿಗೆ ಯಾರೂ ಸ್ಪಷ್ಟಪಡಿಸಿದಂತಿಲ್ಲ. ಇದು ನಿಜವಾಗಿದ್ದರೆ ಖಂಡಿತಾ ತಮಾಷೆಯ ವಿಷಯವಲ್ಲ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಚಾರ’ ಎಂದು ಸಲ್ಮಾನ್ ಅನೀಸ್ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಪಾಕಿಸ್ತಾನದ ರೇಡಾರ್‌ಗಳು ಮೋಡಗಳನ್ನು ಭೇದಿಸುವುದಿಲ್ಲ. ಮುಂದಿನ ಬಾರಿ ವಾಯುದಾಳಿಗಳನ್ನು ನಡೆಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಮುಖ್ಯ ವಿಚಾರವಿದು’ ಎಂದುನ್ಯಾಷನಲ್‌ ಕಾನ್ಫರೆನ್ಸ್‌ನ ಮುಖ್ಯಸ್ಥ ಒಮರ್‌ ಅಬ್ದುಲ್ಲಾ ವ್ಯಂಗ್ಯಭರಿತ ಟ್ವೀಟ್ ಮಾಡಿದ್ದಾರೆ.

ಬಿಜೆಪಿಯು ಟ್ವೀಟ್‌ ಅನ್ನು ಅಳಿಸಿರುವುದರ ಬಗ್ಗೆಯೂ ಅವರು ಕುಹಕವಾಡಿದ್ದಾರೆ. ‘ಟ್ವೀಟ್ ಮೋಡದಲ್ಲಿ ಮರೆಯಾಗಿರುವಂತೆ ಕಾಣುತ್ತದೆ. ಅದೃಷ್ಟವಶಾತ್, ಕೆಲವು ಸ್ಕ್ರೀನ್‌ಶಾಟ್‌ಗಳು ಲಭ್ಯವಿವೆ’ ಎಂದೂ ಅವರು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT