ಸೋಮವಾರ, ಜೂನ್ 1, 2020
27 °C
ಕೊರೊನ ವಿರುದ್ಧ ಸದ್ದಿಲ್ಲದ ಹೋರಾಟ

ಕೊರೊನಾ ವಿರುದ್ಧದ ಹೋರಾಟಕ್ಕೆ ಭಾರತ್‌ ಸ್ಪಂದನ್‌, ಆನ್‌ಲೈನ್‌ ವಾರ್‌ರೂಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಾಕ್‌ಡೌನ್‌ ವೇಳೆ ಸ್ಪಂದಿಸಲು ಆನ್‌ಲೈನ್‌ ವಾರ್‌ ರೂಂ ಸದ್ದಿಲ್ಲದೆ ಕೆಲಸ ಮಾಡುತ್ತಿದೆ. ಅದೂ ಬೆಂಗಳೂರಿನಲ್ಲಿದ್ದುಕೊಂಡೇ.

ಕೊರೊನಾ ವಿರುದ್ಧ ಹೋರಾಡುವ ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸರು, ಅಧಿಕಾರಿಗಳು, ಅಗತ್ಯ ಸಾಮಗ್ರಿ ಪೂರೈಸುವವರು, ತುರ್ತು ಸೇವಾ ವ್ಯವಸ್ಥೆಯನ್ನು ಅಗತ್ಯವುಳ್ಳವರೊಂದಿಗೆ ಬೆಸೆಯುವ ಕಾರ್ಯವನ್ನು ಮಾಡುತ್ತಿದೆ. 

ಅದಕ್ಕೆ ಹೆಸರು ಭಾರತ್‌ ಸ್ಪಂದನ್‌. ರಾಷ್ಟ್ರಕಟ್ಟಲು ಸಾಮಾಜಿಕ ಜಾಲತಾಣ ಎಂಬ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದೆ. ಈ ತಂಡದಲ್ಲಿ ಇಂಥವರೇ ಇದ್ದಾರೆ ಎನ್ನಲಾಗದು. ಜಗತ್ತಿನ ಯಾವುದೇ ಮೂಲೆಯಲ್ಲಿರುವ, ಯಾವುದೇ ವ್ಯಕ್ತಿಯ ಪರಿಣತಿಯನ್ನು ಬಳಸಿಕೊಂಡು ತುರ್ತು ಸಂದರ್ಭದಲ್ಲಿ ನೆರವಾಗುತ್ತಿದೆ ಈ ತಂಡ. 

ಇದಕ್ಕೆ ಸಾಮಾಜಿಕ ಜಾಲ ತಾಣಗಳೇ ಪ್ರಮುಖ ವೇದಿಕೆಗಳು. ಫೇಸ್‌ಬುಕ್‌, ಟ್ವಿಟರ್‌ ಸೇರಿದಂತೆ ಯಾವುದೇ ಆನ್‌ಲೈನ್‌ ವೇದಿಕೆಯನ್ನು ಬಳಸಿಕೊಂಡು ಕ್ಷಣ ಮಾತ್ರದಲ್ಲಿ ಸ್ಪಂದಿಸುವ ಜಾಲ ವ್ಯವಸ್ಥೆ ಹೊಂದಿದೆ. 

ಎಚ್‌ಪಿ ಕಂಪನಿಯ ಹಿರಿಯ ಉದ್ಯೋಗಿ ಗಿರೀಶ್‌ ಆಳ್ವ ಇದರ ರೂವಾರಿ. ತಂಡದಲ್ಲಿ ನೂರಾರು ಜನರ ಸಹಭಾಗಿತ್ವ ಇದೆ. ನ್ಯೂಸ್‌ 13 ಸುದ್ದಿ ವಾಹಿನಿಯ ಸಹಭಾಗಿತ್ವವೂ ಈ ತಂಡದೊಂದಿಗಿದೆ. 

ಹೇಗೆ ಕೆಲಸ ಮಾಡುತ್ತಿದೆ?

ತಂಡದಲ್ಲಿ ಬೃಹತ್‌ ಮಾಹಿತಿ ಕೋಶ (ಡೇಟಾ ಬೇಸ್‌) ಇದೆ. ಭಾರತದ ಯಾವುದೇ ಮೂಲೆಯ ಯಾವುದೇ ಸೇವಾ ವ್ಯವಸ್ಥೆಯ ಪ್ರಮುಖರನ್ನು ಸಂಪರ್ಕಿಸಲು ಈ ಮಾಹಿತಿ ಕೋಶ ನೆರವಾಗುತ್ತದೆ. ಉದಾಹರಣೆಗೆ ನಾಗಾಲ್ಯಾಂಡ್‌ನ ಯಾವುದೋ ಪಟ್ಟಣದಲ್ಲಿ ಆರೋಗ್ಯ ಚಿಕಿತ್ಸೆಗೆ ನೆರವು ಬೇಕು ಎಂದಿಟ್ಟುಕೊಳ್ಳಿ. ಅಗತ್ಯವುಳ್ಳವರು ಅಥವಾ ಈ ಜಾಲದ ಸದಸ್ಯರು ಫೇಸ್‌ಬುಕ್‌ ಮತ್ತು ಟ್ವಿಟರ್‌ ಖಾತೆಯ #SOSCorona ಹ್ಯಾಷ್‌ ಟ್ಯಾಗ್‌ನೊಂದಿಗೆ ಸಂದೇಶ ಹರಿದುಬಿಡುತ್ತಾರೆ. ತಂಡದ ಇನ್ನೊಬ್ಬ ಸದಸ್ಯ ಸಂಬಂಧಪಟ್ಟವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ವ್ಯವಸ್ಥೆ ಮಾಡುತ್ತಾನೆ. 

ಕೂಲಿಕಾರ್ಮಿಕರೋ ಹಸಿದವರಿಗೋ ಆಹಾರ ಬೇಕು ಎಂಬ ಸಂದೇಶ ಬಂದರೆ ಸಾಕು. ಆಯಾ ಪ್ರದೇಶದಲ್ಲಿ ಆಹಾರ ಪೂರೈಸುವವರ ಸಂಪರ್ಕ ಸಂಖ್ಯೆ ಮಾಹಿತಿ ಕೋಶದಲ್ಲಿರುತ್ತದೆ. ತಂಡ ಸಮೀಪದ ಸೇವಾ ವ್ಯವಸ್ಥೆಯನ್ನು ಸಂಪರ್ಕಿಸಿ ಆಹಾರ ಒದಗಿಸಲು ನೆರವಾಗುತ್ತಾರೆ.

ಆಸ್ಪತ್ರೆಗಳಿಗೆ ವೈದ್ಯಕೀಯ ಪರಿಕರಗಳ ನೆರವು, ಔಷಧ ಪೂರೈಕೆ, ಚಿಕಿತ್ಸೆಗೆ ಬೇಕಾದ ತುರ್ತು ಹಣ, ವಾಹನ/ ಅಂಬುಲೆನ್ಸ್‌ ವ್ಯವಸ್ಥೆ ಹೀಗೆ ಯಾವುದೇ ತುರ್ತು ಸೇವೆಯಿದ್ದರೂ ಸರಿ ದೇಶದ ಯಾವುದೇ ಮೂಲೆಗೆ ಶೀಘ್ರವೇ ಒದಗಿಸಲು ತಂಡ ಶ್ರಮಿಸುತ್ತಿದೆ. ಹಾಗೆಯೇ ತಂಡದ ಸದಸ್ಯರೆಲ್ಲರೂ ಅಜ್ಞಾತವಾಗಿದ್ದುಕೊಂಡೇ ಕೆಲಸ ಮಾಡುತ್ತಿದ್ದಾರೆ. ಸೇವೆ ಅಗತ್ಯವುಳ್ಳವರು, ಪೂರೈಕೆದಾರ, ಸ್ಥಳೀಯ ಆಡಳಿತ ವ್ಯವಸ್ಥೆಗಷ್ಟೇ ಆ ವ್ಯಕ್ತಿಗಳು ಗೊತ್ತಿರುತ್ತಾರೆ. ಮಾತ್ರವಲ್ಲ ಸೇವೆ ಒದಗಿಸಿದ ಛಾಯಾಚಿತ್ರಗಳನ್ನೂ ಬಹಿರಂಗಪಡಿಸುವುದಿಲ್ಲ. 

‘ಇದೊಂದು ನಮ್ಮ ಕರ್ತವ್ಯ ಮತ್ತು ದೇಶ ಸೇವೆಗೆ ಇರುವ ಅವಕಾಶ ಎಂದು ಭಾವಿಸಿ ನಾವು ಕೆಲಸ ಮಾಡು‌ತ್ತಿದ್ದೇವೆ’ ಎಂದು ಒಂದೇ ಸಾಲಿನಲ್ಲಿ ಮಾತು ಮುಗಿಸಿದರು ಗಿರೀಶ್‌ ಆಳ್ವ. 

ಭಾರತ್‌ ಸ್ಪಂದನ್ ಹೀಗಿದೆ

ರಾಯ್‌ಪುರ, ಚಂಡೀಗಡದಲ್ಲಿ ಸಿಲುಕಿದ್ದ ಒರಿಸ್ಸಾ ಮೂಲದ 16 ಮಂದಿ, ನೋಯ್ಡಾದಲ್ಲಿ ಸಿಲುಕಿದ್ದ 25 ಮಂದಿ, ಹರಿಯಾಣದಲ್ಲಿ ಸಿಲುಕಿದ್ದ 80 ಮಂದಿ, ಕಾನ್ಪುರದಲ್ಲಿ ಸಿಲುಕಿದ್ದ ಮೀರತ್ ಮೂಲದ ಒಬ್ಬರು ಹಾಗೂ ಬೆಂಗಳೂರಿನ ಕಸವನಹಳ್ಳಿಯಲ್ಲಿ ಸಿಲುಕಿದ್ದ ಬಿಹಾರ ಮೂಲದ 150  ಮಂದಿಗೆ ಆಹಾರ, ದವಸ ಧಾನ್ಯ ಅಗತ್ಯ ವಸ್ತುಗಳ ಪೂರೈಕೆಯನ್ನು ಈ ತಂಡ ಮಾಡಿದೆ. ಹಲವರಿಗೆ ಸಾಂತ್ವನವನ್ನೂ ಹೇಳಿದೆ.

ಧರ್ಮಸ್ಥಳಕ್ಕೆ ತೆರಳಿದ್ದ ಕೊಲ್ಕತ್ತಾ ಮೂಲದ 8 ಜನರಿಗೆ ಅಲ್ಲೇ ವಸತಿ ವ್ಯವಸ್ಥೆ ಕಲ್ಪಿಸಿದ್ದು, ಕೆ.ಆರ್‌.ಪುರದ ಅನಾಥಾಲಯದ 40 ಮಕ್ಕಳಿಗೆ ದವಸ ಧಾನ್ಯ ಪೂರೈಸಿದ್ದು ನಡೆದಿದೆ. 

ಬೆಂಗಳೂರಿನಲ್ಲಿ ಹಿರಿಯ ನಾಗರಿಕರಿಗೆ ವೈದ್ಯಕೀಯ ನೆರವು ದೊರಕಿಸಿಕೊಟ್ಟ ಪ್ರಕರಣಗಳು ಹಲವಾರು ಇವೆ. 

ಬೆಂಗಳೂರಿನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿದ್ದ ಮಹಿಳೆಗೆ ಸಂಸದ ತೇಜಸ್ವಿ ಸೂರ್ಯ ನೆರವಿನಿಂದ ನೆರವಿನಿಂದ ಹಣದ ಸಹಾಯ ನೀಡಿದ್ದು, ಮೈಸೂರಿನಲ್ಲಿ ಬಾಲಕಿಯೊಬ್ಬಳಿಗೆ ತುರ್ತು ಔಷಧಗಳನ್ನು ಕಳುಹಿಸಿಕೊಟ್ಟಿದ್ದು ಹೀಗೆ ಹಲವಾರು ಉದಾಹರಣೆಗಳಿವೆ. ಲಾಕ್‌ಡೌನ್‌ ಘೋಷಣೆಯಾದಂದಿನಿಂದ ಏಪ್ರಿಲ್‌ 4ರವರೆಗೆ ಈ ತಂಡ ದೇಶದಾದ್ಯಂತ 184 ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಿ ತುರ್ತು ನೆರವು ಕೊಡಿಸಿದೆ.

ಮಾಹಿತಿಗೆ: https://www.facebook.com/bharat.spandan.31 ನೋಡಬಹುದು.

ಕಾರ್ಯತಂತ್ರ ಹೀಗಿದೆ...

ಡೇಟಾ ನಿರ್ವಹಣೆ, ಪ್ರಕರಣ ನಿರ್ವಹಣೆ, ಸ್ವಯಂಸೇವಕ ಡೇಟಾಬೇಸ್ ನಿರ್ವಹಣೆ, ತಂಡದ ನಿರ್ವಹಣೆ & ಸಂವಹನ ಎಂಬ ನಾಲ್ಕು ಆಯಾಮಗಳ ತಂತ್ರ ತಂಡ ರಚಿಸಲಾಯಿತು.

‘ಕೊರೊನಾ ಲಾಕ್ ಡೌನ್ ನಿಂದ ದೇಶಾದ್ಯಂತ ಯಾರಿಗೂ ಸಹಾಯ ಬೇಕಾದರೆ ನಮಗೆ ತಿಳಿಸಿ, ನೀವು ಮಾತ್ರ ಮನೆಯ ಬಾಗಿಲಿನ ಲಕ್ಷ್ಮಣ ರೇಖೆ ದಾಟದಿರಿ. ನಾವು  ಇದ್ದ ಕಡೆಯಿಂದಲೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ ವಿವರ ತಲುಪಿಸಿ ಸಹಾಯ ದೊರಕುವಂತೆ ಮಾಡುತ್ತೇವೆ. ತಂಡದ ಪ್ರತೀ ಕಾರ್ಯಕರ್ತ ತನ್ನ ಕುಟುಂಬ, ನಿಜಜೀವನದ ಮಿತ್ರರು, ಸಾಮಾಜಿಕ ಜಾಲತಾಣದ ಮಿತ್ರರಿಗೆ ‘ಈ ಕಷ್ಟಕಾಲದಲ್ಲಿ ನಾನಿದ್ದೇನೆ’ ಎಂಬ ಸಂದೇಶ ಮುಟ್ಟಿಸಲು ತಿಳಿಸಲಾಯಿತು. ದೇಶದಾದ್ಯಂತ ಯಾರಿಗೆ ಸಮಸ್ಯೆಗಳಿದ್ದರೆ ಒಂದೋ ತಂಡದ ಸದಸ್ಯರಿಗೆ ತಿಳಿಸಿ, ಇಲ್ಲವೇ #SOSCorona ಹ್ಯಾಶ್‌ ಟ್ಯಾಗ್ ಬಳಸಿ ಫೇಸ್ಬುಕ್/ ಟ್ವಿಟರ್ ಗಳಲ್ಲಿ ಮೆಸೇಜ್ ಮಾಡಿದರೆ ತಂಡದವರಿಗೆ ತಲುಪುತ್ತದೆ. ಬಹುತೇಕ ಎಲ್ಲ ಭಾಷೆಗಳಲ್ಲೂ ಸ್ಪಂದಿಸುವ ವ್ಯವಸ್ಥೆ ಇಲ್ಲಿದೆ. 

ಲಾಕ್‌ಡೌನ್‌ನ ಆಚೆ...

ಪಂಚಗವ್ಯಗಳ ಬಗ್ಗೆ ದೇಶದಲ್ಲಿ ಜಾಗೃತಿ, ಬರಗಾಲದಲ್ಲಿ ಜಾನುವಾರುಗಳ ಆರೈಕೆ, ರೈತರಿಗೆ ಸಹಾಯ, ಕ್ರೀಡಾಪ್ರತಿಭೆಗಳಿಗೆ ಉತ್ತೇಜನ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಸಹಾಯ, ರಾಜ್ಯಗಳು ನೆರೆಯಿಂದ ತತ್ತರಿಸುತ್ತಿದ್ದಾಗ ವಾರ್ ರೂಮ್ ಮೂಲಕ ಹಗಲಿರುಳೆನ್ನದೆ ದುಡಿದು ಜೀವಗಳನ್ನು ಉಳಿಸಿದೆ ಎನ್ನುತ್ತಾರೆ ಗಿರೀಶ್‌.

ಸಾರ್ಸ್‌ ನೆರವಿನ ಅನುಭವವೇ ಪ್ರೇರಣೆ

2003ರ ಅವಧಿಯಲ್ಲಿ ಸಾರ್ಸ್‌ ಹಾವಳಿ ಇದ್ದಾಗ ಗಿರೀಶ್‌ ಸಿಂಗಪುರದಲ್ಲಿದ್ದರು. ಅಲ್ಲಿ ಈ ಕಾಯಿಲೆ ನಿಯಂತ್ರಣಕ್ಕೆ ಸಂಬಂಧಿಸಿ ಸ್ವಯಂ ಸೇವಕರಾಗಿ ದುಡಿದಿದ್ದರು. ಮಾಹಿತಿ ವಿನಿಮಯದ ಮಹತ್ವ ಕಂಡುಕೊಂಡ ಅವರು ಅಂದಿನ ಅನುಭವವನ್ನು ಇಲ್ಲಿ ಕೋವಿಡ್‌ ಹೋರಾಟದಲ್ಲಿ ಬಳಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು