ಸೋಮವಾರ, ಜುಲೈ 4, 2022
21 °C

ಟೆಲಿಗ್ರಾಮ್‌ ಜನತಂತ್ರವಾದಿ ಸಾಧನ

ಮೈಕೆಲ್‌ ಸ್ವಿರ್ಜ್‌ ಕನ್ನಡಕ್ಕೆ ಡಿ.ಉಮಾಪತಿ Updated:

ಅಕ್ಷರ ಗಾತ್ರ : | |

Prajavani

ವಾಟ್ಸ್‌ಆ್ಯಪ್‌ಗೆ ಬದಲಿಯಾಗಿ ಬಳಸಬಹುದಾದ ಅಂತರ್ಜಾಲ ಸಂದೇಶ ವಿನಿಮಯ ವಾಹಕಗಳು ಹಲವಾರಿವೆ. ಇಂತಹ ಆ್ಯಪ್‌ಗಳ ಪೈಕಿ ಟೆಲಿಗ್ರಾಮ್‌ ಕೂಡ ಒಂದು. ಇದು ಬಹುಕಾಲದಿಂದ ಪ್ರತಿರೋಧದ ಸಾಧನ. ಸರ್ವಾಧಿಕಾರಿಗಳ ಪಾಲಿನ ಕಣ್ಣ ಕಿಸುರು. ರಷ್ಯಾ ಮತ್ತು ಇರಾನಿನ ನಿರಂಕುಶ ನಾಯಕರು ಈ ಸಾಧನವನ್ನು ನಿಷೇಧಿಸಲು ನೋಡಿದ್ದಾರೆ. ರಷ್ಯಾ, ಯುಕ್ರೇನ್, ಪೋಲೆಂಡ್, ಲಿಥುವೇನಿಯಾ, ಲ್ಯಾಟ್ವಿಯಾಗಳಿಂದ ಸುತ್ತುವರಿದ ದೇಶ ಬೆಲಾರಸ್. ಚೀನಾ ದೇಶದ ಭೂಭಾಗ ಹಾಂಕಾಂಗ್. ಹಿಂಸೆಯ ದಮನಕಾರಿ ಕ್ರಮಗಳ ವಿರುದ್ಧ ಈ ಎರಡೂ ಸೀಮೆಗಳಲ್ಲಿ ಜನತಾಂತ್ರಿಕ ಆಂದೋಲನಗಳ ಕೊಂಡಿಯಂತೆ ಕೆಲಸ ಮಾಡಿ ಬೆಸೆದ ಶ್ರೇಯಸ್ಸು ಟೆಲಿಗ್ರಾಮ್‌ನದು.

ಜನಜಂಗುಳಿಯೊಂದು ಇತ್ತೀಚೆಗೆ ವಾಷಿಂಗ್ಟನ್ನಿನ ‘ಕ್ಯಾಪಿಟಲ್’ ಸೌಧಕ್ಕೆ ಮುತ್ತಿಗೆ ಹಾಕಿತ್ತು. ಹಿಂಸಾಚಾರಕ್ಕೆ, ಸುಳ್ಳುಪ್ರಚಾರಕ್ಕೆ ಹಾಗೂ ಪ್ರಚೋದನೆಗೆ ಈ ಗುಂಪು ತಮ್ಮನ್ನು ಬಳಸಿಕೊಂಡಿತೆಂಬುದು ಫೇಸ್‌ಬುಕ್ ಮತ್ತು ಟ್ವಿಟರ್‌ಗಳ ಆರೋಪವಾಗಿತ್ತು. ಹೀಗಾಗಿ ಈ ಅಮೆರಿಕನ್ ಸಾಮಾಜಿಕ ಜಾಲತಾಣಗಳು ಡೊನಾಲ್ಡ್ ಟ್ರಂಪ್ ಬೆಂಬಲಿಗರ ಖಾತೆಗಳನ್ನು ರದ್ದುಪಡಿಸಿ ಹೊರಗಟ್ಟಿದ್ದವು. ಖುದ್ದು ಟ್ರಂಪ್ ಅವರನ್ನೂ ಬಿಡದೆ ಹೊರಹಾಕಿದವು. ಈ ಬೆಳವಣಿಗೆಯ ನಂತರ ಮತ್ತೊಂದು ಬಗೆಯ ಪ್ರತಿಭಟನೆಗೆ ಕ್ಷಿಪ್ರ ಆಶ್ರಯತಾಣ ಆಗತೊಡಗಿದೆ ಟೆಲಿಗ್ರಾಮ್‌. ತೀವ್ರ ಬಲಪಂಥೀಯ ಪಿತೂರಿವಾದಿಗಳು, ಕಪ್ಪುವರ್ಣೀಯರನ್ನು ಕೀಳೆಂದು ಬಗೆವವರು, ಹಿಂಸಾತ್ಮಕ ವಿಪ್ಲವವಾದಿಗಳು ಇತ್ತೀಚಿನ ವಾರಗಳಲ್ಲಿ ಈ ಹೊಸ ಸಂದೇಶವಾಹಕ ಆ್ಯಪ್‌ಗೆ ಮುಗಿಬೀಳತೊಡಗಿದ್ದಾರೆ.

ಜನವರಿ ಆರರ ‘ಕ್ಯಾಪಿಟಲ್’ ದೊಂಬಿ-ಹಿಂಸೆಯ ನಂತರ ಹೀಗೆ ಟೆಲಿಗ್ರಾಮ್‌ಗೆ ಪ್ರವಾಹದಂತೆ ಹರಿದುಬಂದವರ ಸಂಖ್ಯೆ ಎರಡೂವರೆ ಕೋಟಿ! ಟೆಲಿಗ್ರಾಮ್‌ ಸ್ಥಾಪಕ ಪಾವೆಲ್ ಡ್ಯುರೋವ್‌ ಅವರ ಮಾತುಗಳಲ್ಲೇ ಹೇಳುವುದಾದರೆ ‘ಮಾನವ ಇತಿಹಾಸದ ಮಹಾ ಡಿಜಿಟಲ್ ವಲಸೆ’ಯಿದು.  ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು  ಬೀದಿ ಪ್ರತಿಭಟನೆಯ ಮಿತ್ರನೆಂದು ಡ್ಯುರೋವ್ ತನ್ನನ್ನು ಪ್ರತಿಷ್ಠಾಪಿಸಿಕೊಂಡಿದ್ದ. ಟ್ರಂಪ್ ಬೆಂಬಲ ಬಳಗದ ಹೊಸ ಬಳಕೆದಾರರ ಈ ವಲಸೆ ಡ್ಯುರೋವ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಫೇಸ್‌ಬುಕ್ ಮತ್ತು ಟ್ವಿಟರ್ ಎರಡರ ಗುಣಲಕ್ಷಣಗಳು ಮತ್ತು ಅನುಕೂಲಗಳನ್ನು ಬೆಸೆದು ಟೆಲಿಗ್ರಾಮ್‌ಗೆ ಅಳವಡಿಸಿದ್ದ ಆತ. ತುಳಿತಕ್ಕೆ ಗುರಿಯಾದವರ ಆಶ್ರಯತಾಣವೆಂದೂ ಅವರ ಮಾತುಕತೆಗಳು ಈ ತಾಣದಲ್ಲಿ ಪೂರ್ಣ ಸುರಕ್ಷಿತ ಮತ್ತು ಕಡು ಖಾಸಗಿಯೆಂದೂ ಟೆಲಿಗ್ರಾಮ್‌ ಮೂಗು ತೂರಿಸುವುದಿಲ್ಲವೆಂದೂ ಆತ ವಚನ ನೀಡಿದ್ದ.

ಕ್ಯಾಪಿಟಲ್ ಹಿಂಸಾಚಾರದ ನಂತರ ಅಮೆರಿಕ ಮೈಯೆಲ್ಲ ಕಣ್ಣಾಗಿ ಕುಳಿತಿದೆ. ಸರ್ವಾಧಿಕಾರಿ ಆಡಳಿತಗಳ ವಿರುದ್ಧ ಪ್ರತಿರೋಧ ಕಟ್ಟುವವರ ನಡುವೆ ಟೆಲಿಗ್ರಾಮ್‌ ಜನಪ್ರಿಯತೆ ಗಳಿಸಿದೆ. ಅಂತಹ ಜನಾಂದೋಲನ ಸಂಘಟನೆಗೆ ಪೂರಕ ಅನುಕೂಲಗಳನ್ನು ಈ ಸಂದೇಶವಾಹಕವು ಹೊಂದಿದೆ ಎಂಬುದೇ ಅದಕ್ಕೆ ಮುಳುವಾಗಿದೆ. ಮತ್ತೊಂದು ಮಹಾಹಿಂಸೆಯನ್ನು ಹರಿಯಬಿಡಲು ಟ್ರಂಪ್ ಅವರ ಕಟ್ಟರ್‌ವಾದಿ ಬಲಪಂಥೀಯ ಬೆಂಬಲಿಗರು ಈ ಸಂದೇಶವಾಹಕವನ್ನು ಬಳಸಿಕೊಳ್ಳಬಹುದು ಎಂಬ ಆತಂಕ ಅಮೆರಿಕದಲ್ಲಿ ಮೂಡಿದೆ. ವರ್ಣಭೇದ ಉಗ್ರರು ಮತ್ತು ಶಸ್ತ್ರಸಜ್ಜಿತ ಗುಂಪುಗಳು ದೇಶದಾದ್ಯಂತ ದಾಳಿ ನಡೆಸಬಹುದೆಂಬ ಮುನ್ನೆಚ್ಚರಿಕೆಯನ್ನು ಎಫ್.ಬಿ.ಐ. ನೀಡಿದೆ. ಹೊಸ ಬಳಕೆದಾರರು ಜನತಂತ್ರವನ್ನು ಬುಡಮೇಲು ಮಾಡಲು ಟೆಲಿಗ್ರಾಮ್‌ ಅನ್ನು ಬಳಸಿಕೊಳ್ಳುವ ಶಂಕೆಯನ್ನು ಸ್ವತಂತ್ರ ಸಂಶೋಧನಾ ಸಂಸ್ಥೆ ‘ವಿಲ್ಸನ್ ಸೆಂಟರ್’ ಕೂಡ ವ್ಯಕ್ತಪಡಿಸಿದೆ.

ಹೊಸ ಬಳಕೆದಾರರ ಹರಿವನ್ನು ಡ್ಯುರೋವ್ ಶುರುವಿನಲ್ಲಿ ಸ್ವಾಗತಿಸಿದ. ಅಷ್ಟೇ ಅಲ್ಲದೆ ಅವರನ್ನು ಹೊರಹಾಕಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತುಳಿದಿರುವುದಾಗಿ ಟ್ವಿಟರ್ ಮತ್ತು ಫೇಸ್‌ಬುಕ್‌ಗಳನ್ನು ಟೀಕಿಸಿದ. ಆದರೆ, ಹೊಸ ಅಧ್ಯಕ್ಷ ಜೋ ಬೈಡನ್ ಅಧಿಕಾರ ಸ್ವೀಕಾರದ ಹೊಸ್ತಿಲಲ್ಲಿ ಹಿಂಸಾಚಾರಕ್ಕೆ ಕರೆ ನೀಡಿದ ನೂರಾರು ಪೋಸ್ಟ್‌ಗಳನ್ನು ತನ್ನ ತಂಡ 'ಬ್ಲಾಕ್' ಮಾಡಿದ್ದ ಸಂಗತಿಯನ್ನೂ ಇದೇ ಹೊತ್ತಿನಲ್ಲಿ ಹೊರಹಾಕಿದ. ವಾಸ್ತವವಾಗಿ ಟೆಲಿಗ್ರಾಮ್‌ನ ಬಳಕೆದಾರ ನೆಲೆಯಲ್ಲಿ ಅಮೆರಿಕನ್ ಬಳಕೆದಾರರ ಪ್ರಮಾಣ ಶೇ 2ರಷ್ಟು ಮಾತ್ರ. ಎರಡೂವರೆ ಕೋಟಿ ಹೊಸ ಬಳಕೆದಾರರ ಪೈಕಿ ಏಷ್ಯಾ, ಯುರೋಪ್, ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ ಹಾಗೂ ಉತ್ತರ ಆಫ್ರಿಕಾದ ಬಳಕೆದಾರರದೇ ಸಿಂಹಪಾಲು.

ಅವರ ಪ್ರಮಾಣ ಶೇ 94ರಷ್ಟು. ತನ್ನ ಬಳಕೆದಾರರ ಖಾತೆಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ತನ್ನ ಮಾತೃಸಂಸ್ಥೆಯಾದ ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುವುದಾಗಿ ವಾಟ್ಸ್‌ಆ್ಯಪ್‌ ಇತ್ತೀಚೆಗೆ ಸಾರಿತ್ತು.  ಖಾಸಗಿ ಮಾಹಿತಿಗಳು ಬಹಿರಂಗವಾಗುವ ಶಂಕೆಯಿಂದಲೂ ಜನ ಟೆಲಿಗ್ರಾಮ್‌ಗೆ ವಲಸೆ ಹೋಗಿರುವುದುಂಟು. ಆದರೆ ಕಟ್ಟರ್‌ಪಂಥೀಯ ನಿಲುವುಗಳನ್ನು ಹಂಚಿಕೊಂಡ ಕಾರಣ ಇತರೆ ಸಂದೇಶವಾಹಕಗಳಿಂದ ಹೊರದಬ್ಬಿಸಿಕೊಂಡವರದೇ ದೊಡ್ಡ ಸಂಖ್ಯೆ.

‘ದಿ ಪ್ರೌಡ್ ಬಾಯ್ಸ್’ ಎಂಬ  ತೀವ್ರ ಬಲಪಂಥೀಯ ಉಗ್ರವಾದಿ ಗುಂಪೊಂದು ತನ್ನ ಹೊಸ ಅನುಯಾಯಿಗಳನ್ನು ಟೆಲಿಗ್ರಾಮ್‌ನಲ್ಲಿ ಆರಂಭಿಸಲಾದ ‘ಹೇಟ್ ಫ್ಯಾಕ್ಟ್ಸ್’, ‘ಮರ್ಡರ್ ದ ಮೀಡಿಯಾ’ ಎಂಬ ಹೊಸ ‘ಚಾಟ್ ಗ್ರೂಪ್’ಗಳಿಗೆ ತಂದು ಬಿಟ್ಟಿತು. ಹೊಸ ಬಲಪಂಥೀಯ ಖಾತೆಗಳನ್ನೂ ತೆರೆಯಿತು. ಟೆಲಿಗ್ರಾಮ್‌ ಬಳಕೆದಾರರ ಸಂಖ್ಯೆಯಲ್ಲಿ ಹಠಾತ್ ಉಬ್ಬರಕ್ಕೆ ಕಾರಣವಾಯಿತು. ಪ್ರೌಡ್ ಬಾಯ್ಸ್‌ನ ತಲೆಯಾಳು ಎನ್ರಿಕ್ ಟ್ಯಾರಿಯೋ ಟೆಲಿಗ್ರಾಮ್‌ನ ಗುಣಗಾನ ಮಾಡಿದ್ದು ಮತ್ತಷ್ಟು ಬಳಕೆದಾರರನ್ನು ಸೆಳೆಯಿತು. ‘ಅಂತರ್ಜಾಲದ ಕಡುಗತ್ತಲ ಸೀಮೆಗೆ ಸುಸ್ವಾಗತ ಹೊಸಬರೇ, ಅಶ್ಲೀಲ ಚಿತ್ರಗಳು ಮತ್ತು ಬೇಡದಿರುವ ಸಂದೇಶಗಳನ್ನು ತಂದು ಸುರಿಯುವುದರ ವಿನಾ ಉಳಿದೆಲ್ಲಕ್ಕೆ ಇಲ್ಲಿ ಅವಕಾಶ ಉಂಟು’ ಎಂದು ಉದ್ಗರಿಸಿದ್ದ ಎನ್ರಿಕ್.

ಇತರೆ ತಾಣಗಳಿಂದ ಹೊರದಬ್ಬಿಸಿಕೊಂಡಿದ್ದ ತೀವ್ರವಾದಿಗಳು ಟೆಲಿಗ್ರಾಮ್‌ನತ್ತ ಹೊರಳಿದ್ದು ಇದೇ ಮೊದಲಲ್ಲ. ಕೆಲ ವರ್ಷಗಳ ಹಿಂದೆ ಇಸ್ಲಾಮಿಕ್ ತೀವ್ರವಾದಿಗಳ ವಿರುದ್ಧ ಟ್ವಿಟರ್ ಕಠಿಣ ಕ್ರಮ ಕೈಗೊಂಡಾಗ ಐ.ಎಸ್. (ಇಸ್ಲಾಮಿಕ್ ಸ್ಟೇಟ್) ಕೂಡ ಟೆಲಿಗ್ರಾಮ್‌ಗೆ ವಲಸೆ ಬಂದಿತ್ತು. ಹೊಸಬರ ನೇಮಕಾತಿಗೆ, ಪ್ರಚಾರಾಂದೋಲನಕ್ಕೆ ಹಾಗೂ ದಾಳಿಗಳ ಉದ್ದೇಶಕ್ಕೆ ಬಳಸಿಕೊಂಡಿತ್ತು. ಫ್ರಾನ್ಸ್‌ನಲ್ಲಿ ಹಲವಾರು ದಾಳಿಗಳ ಸಂಯೋಜನೆ ಸಮನ್ವಯಕ್ಕೆ ಐ.ಎಸ್. ಉಗ್ರಗಾಮಿಗಳು ಟೆಲಿಗ್ರಾಮ್‌ ಬಳಸಿಕೊಂಡಿದ್ದರು.  ಈ ದಿಸೆಯಲ್ಲಿ ಭಯೋತ್ಪಾದಕರ ನಡುವೆ ವಿನಿಮಯವಾದ ಸಂದೇಶಗಳ ವಿವರಗಳನ್ನು ನೀಡುವಂತೆ ಫ್ರಾನ್ಸ್ ಸರ್ಕಾರ ಟೆಲಿಗ್ರಾಮ್‌ ಅನ್ನು ಕೋರಿತ್ತು. ಆದರೆ ಟೆಲಿಗ್ರಾಮ್‌ ಅನುಸರಿಸುವ ಖಾಸಗಿ ಮತ್ತು ಗೋಪ್ಯ ಶಿಷ್ಟಾಚಾರಗಳು  ಬಳಕೆದಾರರ ವಿವರಗಳನ್ನು ಬಹಿರಂಗಪಡಿಸುವುದನ್ನು ಅಸಾಧ್ಯವಾಗಿಸಿವೆ. ಈ ವಿವರಗಳು ಟೆಲಿಗ್ರಾಮ್‌ ಉದ್ಯೋಗಿಗಳಿಗೆ ಕೂಡ ತಿಳಿಯದಷ್ಟು ಭದ್ರ ಎಂದು ಡ್ಯುರೋವ್ ಉತ್ತರಿಸಿದ್ದ.

ಡ್ಯುರೋವ್ ಅತ್ಯಂತ ಉದಾರ ಜನತಂತ್ರವಾದಿ. ರಷ್ಯಾದ ಮಾರ್ಕ್ ಜುಕರ್‌ಬರ್ಗ್ ಎಂದೇ ಡ್ಯುರೋವ್‌ನನ್ನು ಬಣ್ಣಿಸಲಾಗುತ್ತದೆ. ರಷ್ಯಾದ ಪ್ರಜೆಯಾಗಿದ್ದ ಆತನ ದನಿಯನ್ನು ಅಡಗಿಸಲು ಅಲ್ಲಿನ ಸರ್ಕಾರ ಬಹುಕಾಲ ಪ್ರಯತ್ನಿಸಿತು. ತನ್ನ ಸರ್ಕಾರದೊಂದಿಗೆ ಬಡಿದಾಡಿದ ಆತ ಕಡೆಗೆ ದೇಶವನ್ನೇ ತೊರೆದ. ಫೇಸ್‌ಬುಕ್‌ನ ರಷ್ಯನ್ ಆವೃತ್ತಿ ಎನ್ನಬಹುದಾಗಿದ್ದ ‘ವಿ ಕೊಂಟಕ್ಟೆ’ ಎಂಬ ಸಾಮಾಜಿಕ ಜಾಲತಾಣವನ್ನು ಆತ ತನ್ನ ಸೋದರನ ಜೊತೆಗೂಡಿ ನಿರ್ಮಿಸಿದ್ದ. ಅದರ ಮೇಲಿನ ನಿಯಂತ್ರಣದ ಅಧಿಕಾರವನ್ನು ರಷ್ಯನ್ ಸರ್ಕಾರ ಆತನಿಂದ ಕಿತ್ತುಕೊಂಡ ನಂತರ ಡಿಜಿಟಲ್ ಅಭಿವ್ಯಕ್ತಿ ಸ್ವಾತಂತ್ರ್ಯದ ತಾಣವಾಗಿ 2013ರಲ್ಲಿ ಟೆಲಿಗ್ರಾಮ್‌ ಅನ್ನು ಸ್ಥಾಪಿಸಿದ.

ಬೆಲಾರಸ್‌ನಲ್ಲಿ ಕಳೆದ ಆಗಸ್ಟ್‌ನಲ್ಲಿ ಜರುಗಿದ ಅಧ್ಯಕ್ಷೀಯ ಚುನಾವಣೆಗಳಲ್ಲಿ ತಾನು ಸೋತಿರಬಹುದೆಂಬ ಅನುಮಾನ ಬರುತ್ತದೆ ಅಲ್ಲಿನ ಬಹುಕಾಲದ ಸರ್ವಾಧಿಕಾರಿ ಅಲೆಕ್ಸಾಂಡರ್ ಲುಕಶೆಂಕೋಗೆ. ಕೂಡಲೇ ದೇಶದ ಎಲ್ಲ ಸಂವಹನ ಮೂಲಸೌಲಭ್ಯಗಳನ್ನು ಮುಚ್ಚಿಸಿಬಿಡುತ್ತಾನೆ. ವಾಟ್ಸ್‌ಆ್ಯಪ್, ಟ್ವಿಟರ್, ಫೇಸ್‌ಬುಕ್ ಹಾಗೂ ಟೆಲಿಗ್ರಾಮ್‌ ಕೂಡ ದಮನಕ್ಕೆ ಗುರಿಯಾಗುತ್ತವೆ. ಆದರೆ ಡ್ಯುರೋವ್ ಸೆನ್ಸಾರ್‌ಶಿಪ್ ನಿಗ್ರಹ ಸಾಧನಗಳನ್ನು ಅಳವಡಿಸಿ ಟೆಲಿಗ್ರಾಮ್‌ ಗೋಪ್ಯವಾಗಿ ನಡೆಯುವಂತೆ ನೋಡಿಕೊಳ್ಳುತ್ತಾನೆ.

ಲುಕಶೆಂಕೋ ತಾನು ಗೆದ್ದಿರುವುದಾಗಿ ಘೋಷಿಸುತ್ತಾನೆ. ಪ್ರತಿಭಟನಕಾರರು ಬೀದಿಗಿಳಿಯುತ್ತಾರೆ. ಅವರ ಪಾಲಿಗೆ ಅಡೆತಡೆರಹಿತ ಮಾಹಿತಿಯ ಮೂಲವಾಗಿಯೂ ಮತ್ತು ಪ್ರತಿರೋಧವನ್ನು ಸಂಘಟಿಸುವ ವೇದಿಕೆಯಾಗಿಯೂ ಟೆಲಿಗ್ರಾಮ್‌ ಒದಗಿಬರುತ್ತದೆ.  ಬೆಲಾರಸ್‌ನಿಂದ ಗಡಿಪಾರಿಗೆ ಗುರಿಯಾಗಿ ಪೋಲೆಂಡಿನಲ್ಲಿ ಆಶ್ರಯ ಪಡೆದಿದ್ದ ಬೆಲಾರಸ್ ನಾಗರಿಕರು ನಡೆಸುತ್ತಿದ್ದ ನೆಕ್ಸ್ಟಾ ಎಂಬ ಸುದ್ದಿ ಚಾನೆಲ್ ತನ್ನ 20 ಲಕ್ಷ ಬೆಲಾರಸ್ ಓದುಗರಿಗೆ ಪೊಲೀಸ್ ದಮನದ ವಿಡಿಯೊಗಳನ್ನು ಮೆರವಣಿಗೆಯ ಮಾರ್ಗಗಳು ಮತ್ತು ಇತರೆ ಸೂಚನೆ ಮುಂತಾದ ಪ್ರತಿಭಟನೆಯ ವಿವರಗಳನ್ನು ನೀಡುತ್ತದೆ. ಈ ವಿವರಗಳನ್ನು, ಸೂಚನೆಗಳನ್ನು ಆಧರಿಸಿ ನಿತ್ಯ ಪ್ರತಿಭಟನಾ ಪ್ರದರ್ಶನಗಳು ನಡೆಯುತ್ತವೆ. ಬೆಲಾರಸ್‌ನಲ್ಲಿ ಮೂರು ದಿನಗಳ ಕಾಲ ಅಂತರ್ಜಾಲವನ್ನು ಸ್ಥಗಿತಗೊಳಿಸಲಾಗಿರುತ್ತದೆ. ಅಲ್ಲೇನು ನಡೆಯುತ್ತಿದೆಯೆಂಬುದು ಜಗತ್ತಿಗೆ ಗೊತ್ತಾಗುವುದಿಲ್ಲ. ಮಾಹಿತಿಯ ಏಕೈಕ ಮೂಲ ಟೆಲಿಗ್ರಾಮ್‌ ಆಗಿತ್ತು ಎಂದು ನೆಕ್ಸ್ಟಾ ನಡೆಸುವ ಸ್ಟೆಪಾನ್ ಸ್ವೆಟ್ಲೋವ್ ಹೇಳುತ್ತಾನೆ. ಇರಾನಿನಲ್ಲೂ 2017ರಿಂದ 2019ರ ನಡುವೆ ಸರ್ಕಾರವನ್ನು ವಿರೋಧಿಸುವ ಪ್ರದರ್ಶನಗಳ ಸಂಘಟನೆಯಲ್ಲಿ ಮತ್ತು ಅವುಗಳನ್ನು ಪಸರಿಸುವಲ್ಲಿ ಟೆಲಿಗ್ರಾಮ್‌ ನಿರ್ಣಾಯಕ ಪಾತ್ರ ವಹಿಸಿತು. ಪತ್ರಕರ್ತರು ಮತ್ತು ಕ್ಯಾಮೆರಾಗಳನ್ನು ನಿಷೇಧಿಸಿದ್ದ ಹಿಂಸಾತ್ಮಕ ದಮನಕಾರಿ ಕ್ರಮಗಳ ವಿಡಿಯೊಗಳ ಹಂಚಿಕೆ ಮತ್ತು ಪ್ರಸಾರ ಸಾಧ್ಯವಾಗಿದ್ದು ಟೆಲಿಗ್ರಾಮಿನಿಂದಾಗಿಯೇ. ಅಲ್ಲಿನ ಸರ್ಕಾರ ಟೆಲಿಗ್ರಾಮ್‌ ಅನ್ನು 2018ರಲ್ಲಿ ನಿಷೇಧಿಸಿತು. ಆದರೆ ಪ್ರಯೋಜನವಾಗಲಿಲ್ಲ. ಸರ್ಕಾರದ ಅಡಚಣೆಯ ನಿವಾರಣೆಗೆ ವಿ.ಪಿ.ಎನ್. (ವರ್ಚುವಲ್‌ ಪ್ರೈವೇಟ್ ನೆಟ್‌ವರ್ಕ್) ತಂತ್ರವನ್ನು ಇರಾನ್ ನಾಗರಿಕರು ಬಳಸಿದರು.

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ವಕ್ತಾರ ಡಿಮಿತ್ರಿ ಪೆಸ್ಕೋವ್ ಟೆಲಿಗ್ರಾಮ್‌ ಅನ್ನು ಬಳಸುತ್ತಾರೆ. ರಷ್ಯಾ ಸರ್ಕಾರದ ಅನೇಕ ಪ್ರಚಂಡ ಪ್ರಚಾರಾಂದೋಲನಕಾರರು ಬಳಸುತ್ತಾರೆ. ಟ್ರಂಪ್ ಖಾತೆಯನ್ನು ಟ್ವಿಟರ್ ಬಂದ್ ಮಾಡಿದ ನಂತರ ಟೆಲಿಗ್ರಾಮ್‌ನಲ್ಲಿ ಖಾತೆ ತೆರೆಯುವಂತೆ ಅವರಿಗೆ ಸಲಹೆ ನೀಡುತ್ತಾರೆ ವಿಶ್ವಸಂಸ್ಥೆಯಲ್ಲಿ ರಷ್ಯಾದ ಉಪರಾಯಭಾರಿ ಡಿಮಿತ್ರಿ ಪೊಲ್ಯಾನ್ಸ್ಕಿ.

‘ನಿಮ್ಮ ದೇಶದಲ್ಲೇ ನಿಮಗೆ ವಾಕ್ ಸ್ವಾತಂತ್ರ್ಯ ಇದ್ದಂತೆ ತೋರುತ್ತಿಲ್ಲ’ ಎಂದು ಪೊಲ್ಯಾನ್ಸ್ಕಿ ಟ್ರಂಪ್‌ಗೆ ಬರೆಯುತ್ತಾರೆ. ಆದರೆ ಟ್ರಂಪ್ ಈವರೆಗೆ ಟೆಲಿಗ್ರಾಮ್‌ನಿಂದ ದೂರ ಉಳಿದಿದ್ದಾರೆ. ಆದರೆ ಅವರ ಹೆಸರಿನಲ್ಲಿ ತೆರೆಯಲಾಗಿರುವ ನಕಲಿ ಖಾತೆಯೊಂದಕ್ಕೆ ಎಂಟು ಲಕ್ಷ ಚಂದಾದಾರರನ್ನು ಗಳಿಸಿಕೊಂಡಿರುವುದುಂಟು. ಟ್ರಂಪ್ ಅವರ ಮಗ ತಾವು ಟೆಲಿಗ್ರಾಮ್‌ ಸೇರಿರುವುದಾಗಿಯೂ ಅಲ್ಲಿ ತಮ್ಮನ್ನು ಫಾಲೋ ಮಾಡಬೇಕೆಂದೂ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದಾರೆ.

‘ಅಮೆರಿಕದ ಅಧ್ಯಕ್ಷರಾಗಿದ್ದ ತಮ್ಮ ಅಪ್ಪನನ್ನೇ ಹೊರಹಾಕಿರುವವರು (ಟ್ವಿಟರ್- ಫೇಸ್‌ಬುಕ್) ನನ್ನನ್ನು ಬಿಟ್ಟಾರೆಯೇ? ನಿಮ್ಮೊಂದಿಗೆ ಸಂಪರ್ಕದಲ್ಲಿರಲು ವಾಕ್ ಸ್ವಾತಂತ್ರ್ಯವನ್ನು ಪ್ರತಿನಿಧಿಸುವ ವೇದಿಕೆಯೊಂದರ ಅಗತ್ಯವಿದೆ. ಹೀಗಾಗಿ ಟೆಲಿಗ್ರಾಮ್‌ ಅನ್ನು ಸೇರಿದ್ದೇನೆ’ ಎಂಬುದು ಟ್ರಂಪ್ ಜೂನಿಯರ್‌ ಟ್ವಿಟರ್‌ನಲ್ಲಿ ನೀಡಿರುವ ಸಮಜಾಯಿಷಿ.

_____

-ಮೈಕೆಲ್‌ ಸ್ವಿರ್ಜ್‌
_____
ಕನ್ನಡಕ್ಕೆ ಡಿ.ಉಮಾಪತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು