ನವದೆಹಲಿ: ಟಿಕ್‌ಟಾಕ್ ಹಾಗೂ ಹೆಲೊ ಆ್ಯಪ್‌ಗಳನ್ನು ಹೊಂದಿರುವ ಚೀನಾ ಮೂಲದ ಸೋಷಿಯಲ್ ಮೀಡಿಯಾ ದೈತ್ಯ ಸಂಸ್ಥೆ ಬೈಟ್‌ಡ್ಯಾನ್ಸ್, ಭಾರತದಲ್ಲಿ ತನ್ನ ಸೇವೆಗಳಿಗೆ ಸರ್ಕಾರವು ನಿರಂತರ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಕೊನೆಗೊಳಿಸುವುದರ ಭಾಗವಾಗಿ ಉದ್ಯೋಗ ಕಡಿತಕ್ಕೆ ನಿರ್ಧರಿಸಿದೆ.
ಟಿಕ್‌ಟಾಕ್ ಗ್ಲೋಬಲ್ ಉಸ್ತುವಾರಿ ನಿರ್ದೇಶಕ ವನೆಸ್ಸಾ ಪಪ್ಪಾಸ್ ಮತ್ತು ಗ್ಲೋಬಲ್ ಬ್ಯುಸಿನೆಸ್ ಅಧ್ಯಕ್ಷ ಬ್ಲೇಕ್ ಚಾಂಡ್ಲಿ, ಸಂಸ್ಥೆಯ ಉದ್ಯೋಗಿಗಳಿಗೆ ಕಳುಹಿಸಿರುವ ಜಂಟಿ ಇ-ಮೇಲ್ ಸಂದೇಶದಲ್ಲಿ ಉದ್ಯೋಗ ಕಡಿತ ಮಾಡುವುದಾಗಿ ತಿಳಿಸಿದ್ದಾರೆ. ಇದು ನೇರವಾಗಿ ಭಾರತದಲ್ಲಿರುವ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ.
ದೇಶದಲ್ಲಿ ಟಿಕ್‌ಟಾಕ್, ಹೆಲೊ ಸೇರಿದಂತೆ ಚೀನಾ ಮೂಲದ 59 ಆ್ಯಪ್‌ಗಳ ಮೇಲಿನ ನಿರ್ಬಂಧವನ್ನು ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ ಭಾರತದಲ್ಲಿ ವ್ಯವಹಾರ ಮುಂದುರಿಸುವ ಸಂಸ್ಥೆಯ ಇರಾದೆಗೆ ಹಿನ್ನೆಡೆಯುಂಟಾಗಿದ್ದು, ಅನಿಶ್ಚಿತತೆ ಮುಂದುವರಿದಿದೆ. ಹಾಗಿದ್ದರೂ ಮುಂದಿನ ದಿನಗಳಲ್ಲಿ ನಿಷೇಧ ಮುಕ್ತವಾಗಿ ಮರಳಿ ಬರುವ ನಂಬಿಕೆಯನ್ನು ವ್ಯಕ್ತಪಡಿಸಿದೆ.
ಭಾರತದಲ್ಲಿ ಕಾರ್ಯಾಚರಣೆ ಯಾವಾಗ ಮಾಡಿಕೊಳ್ಳುತ್ತೇವೆ ಎಂಬುದು ತಿಳಿದಿಲ್ಲವಾದರೂ ಮುಂದಿನ ದಿನಗಳಲ್ಲಿ ವ್ಯವಹಾರ ಪುನರಾರಂಭಿಸುವ ನಂಬಿಕೆಯನ್ನು ಇ-ಮೇಲ್ ಸಂದೇಶದಲ್ಲಿ ತಿಳಿಸಿದೆ.
ಬೈಟ್‌ಡ್ಯಾನ್ಸ್ ಮೂಲಗಳ ಪ್ರಕಾರ ಬುಧವಾರ ನಡೆಸಿದ ಸಭೆಯ ಬಳಿಕ ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲು ಸಂಸ್ಥೆಯು ನಿರ್ಧರಿಸಿದೆ.
ಭಾರತದಲ್ಲಿ ಕಾನೂನು ತೊಡಕುಗಳನ್ನು ನಿವಾರಿಸಲು ಸಾಧ್ಯವಾದಷ್ಟು ಪರಿಶ್ರಮಿಸಿರುವುದಾಗಿ ಟಿಕ್‌ಟಾಕ್ ವಕ್ತಾರರು ತಿಳಿಸಿದ್ದಾರೆ. ಕಳೆದ ಏಳು ತಿಂಗಳಲ್ಲಿ 2,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಬೆಂಬಲಿಸಿದ್ದೇವೆ. ಆದರೆ ಉದ್ಯೋಗ ಕಡಿತ ಮಾತ್ರ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ನಮ್ಮ ಅಪ್ಲಿಕೇಷನ್‌ಗಳು ಕಾರ್ಯಾಚರಿಸದೆಯೇ ಇರುವಾಗ ಉದ್ಯೋಗಿಗಳ ಸಂಪೂರ್ಣ ಜವಾಬ್ದಾರಿ ಹೊರಲು ಸಾಧ್ಯವಿಲ್ಲ. ನಮ್ಮ ನಿರ್ಧಾರವು ಉದ್ಯೋಗಿಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದರ ಸಂಪೂರ್ಣ ಅರಿವಿದೆ. ಉದ್ಯೋಗಿಗಳ ಭಾವನೆಗಳಿಗೆ ನಮ್ಮ ಸಹಾನುಭೂತಿಯಿದೆ ಎಂದು ಹೇಳಿದರು.
ಕಳೆದ ವರ್ಷ ಜೂನ್ 29ರಂದು ದೇಶದ ಸಾರ್ವಭೌಮತೆ ಹಾಗೂ ಭದ್ರತೆಗೆ ಧಕ್ಕೆಯುಂಟಾದ ಹಿನ್ನೆಲೆಯಲ್ಲಿ ಚೀನಾ ಮೂಲದ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಈಗ ಶಾಶ್ವತವಾಗಿ ನಿಷೇಧ ಹೇರುವ ಸಾಧ್ಯತೆಯಿದೆ ಎಂಬ ಬಗ್ಗೆ ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.