ಭಾನುವಾರ, ಮೇ 31, 2020
27 °C

ಮಕ್ಕಳಿಗೆ ಆಜಾನ್ ಬಗ್ಗೆ ಹೇಳಿಕೊಟ್ಟು ನೆಟ್ಟಿಗರ ಮನಗೆದ್ದ ಬಾಲಿವುಡ್ ನಟ ಕರಣ್‌ವೀರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟ ಕರಣ್‌ವೀರ್‌ ಬೋಹ್ರಾ ಅವರು ತಮ್ಮ ಮಕ್ಕಳೊಂದಿಗೆ ‘ಆಜಾನ್‌’ ಕುರಿತು ಮಾತನಾಡಿರುವ ವಿಡಿಯೊವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರ ಮನಗೆದ್ದಿದ್ದಾರೆ. ಮಸೀದಿಗಳಲ್ಲಿ ಪ್ರತಿದಿನ ಕೂಗುವ ಆಜಾನ್‌ (ಪ್ರಾರ್ಥನೆ) ಬಗ್ಗೆ ಮಕ್ಕಳಿಗೆ ಹೇಳಿಕೊಡುವುದು ಮತ್ತು ಎಲ್ಲರಿಗೂ ರಂಜಾನ್‌ ಶುಭ ಕೋರುವಂತೆ ತಿಳಿಸಿರುವುದು ವಿಡಿಯೊದಲ್ಲಿದೆ.

ದೂರದಲ್ಲಿ ಕೂಗುತ್ತಿರುವ ಆಜಾನ್‌ ಶಬ್ದ ತಮ್ಮ ಮನೆಯವರೆಗೂ ಕೇಳಿಸುತ್ತಿರುವುದನ್ನು ಗಮನಿಸಿದ ಬೋಹ್ರಾ, ಏನದು? ಎಂದು ಮಕ್ಕಳನ್ನು ಕೇಳಿದ್ದಾರೆ. ಅದಕ್ಕೆ ಮುದ್ದಾಗಿ ಉತ್ತರಿಸುವ ದೊಡ್ಡ ಮಗಳು ವಿಯನ್ನಾ, ‘ಅಜಾನ್’‌ ಎನ್ನುತ್ತಾಳೆ. ಚಿಕ್ಕ ಮಗಳು ರಯಾ ಬೆಲ್ಲಾಳಿಗೂ ಅದನ್ನು ಹೇಳಿಕೊಡುವ ಬೋಹ್ರಾ, ಆಜಾನ್‌ ಎಂದರೇನೆಂದು ವಿವರಿಸಿದ್ದಾರೆ. ಮುಸಲ್ಮಾನರು ಪ್ರತಿದಿನ ಐದು ಬಾರಿ ಆಜಾನ್‌ ಕೂಗುತ್ತಾರೆ ಎಂದು ಹೇಳಿಕೊಟ್ಟಿದ್ದಾರೆ. ನಂತರ ಎಲ್ಲರಿಗೂ ರಂಜಾನ್‌ ಶುಭ ಕೋರುವಂತೆ ತಿಳಿಸಿದ್ದಾರೆ.

ಈ ವಿಡಿಯೊ ಜೊತೆಗೆ ಅವರು, ‘ನಾವಿರುವ ಕಟ್ಟಡದಿಂದಲೇ ಪ್ರತಿದಿನ ಆಜಾನ್‌ ಕೇಳಿಸಿಕೊಳ್ಳುತ್ತೇವೆ. ನನ್ನ ಮಕ್ಕಳು ಮೊದಲಸಲ ಅದನ್ನು ಕೇಳಿಸಿಕೊಂಡಾಗ ಏನದು? ಎಂದು ಪ್ರಶ್ನಿಸಿದರು. ಅದನ್ನು ಆಜಾನ್‌ ಎನ್ನುತ್ತಾರೆ ಎಂದು ತಿಳಿಸಿ, ಮಹತ್ವವನ್ನು ವಿವರಿಸಿದ್ದೇವೆ. ಪ್ರಪಂಚದ ಯೋಗಕ್ಷೇಮಕ್ಕಾಗಿ ಎಲ್ಲರೂ ಪ್ರಾರ್ಥಿಸೋಣ’ ಎಂದು ಬರೆದುಕೊಂಡಿದ್ದಾರೆ.

ಶನಿವಾರ ಹಂಚಿಕೆಯಾಗಿರುವ ಈ ವಿಡಿಯೊವನ್ನು 3.8 ಸಾವಿರಕ್ಕೂ ಹೆಚ್ಚು ಜನರು ಮೆಚ್ಚಿಕೊಂಡಿದ್ದಾರೆ. 800ಕ್ಕೂ ಹೆಚ್ಚು ಮಂದಿ ಹಂಚಿಕೊಂಡಿದ್ದಾರೆ.

ಪ್ರಪಂಚದಾದ್ಯಂತ ಇರುವ ಮುಸ್ಲೀಮರು ರಂಜಾನ್‌ ಆಚರಿಸುವ ಪವಿತ್ರ ಮಾಸ ಇದಾಗಿದ್ದು, ಸದ್ಯ ಎಲ್ಲೆಡೆ ಕೋವಿಡ್‌–19 ಭೀತಿಯಿಂದಾಗಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಸಾರ್ವಜನಿಕ ಆಚರಣೆಗೆ ತೊಡಕಾಗಿದೆ. ಎಲ್ಲರೂ ತಮ್ಮತಮ‌್ಮ ಮನೆಗಳಲ್ಲಿಯೇ ರಂಜಾನ್‌ ಆಚರಿಸುವಂತೆ ಸೂಚಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು