ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯರ ದೇಹದೊಳಗೆ ಕಾರ್ಯನಿರ್ವಹಿಸಬಲ್ಲ ಶಬ್ದನಿಯಂತ್ರಿತ ಮೈಕ್ರೊ ರೋಬಾಟ್‌

Published 4 ಅಕ್ಟೋಬರ್ 2023, 0:30 IST
Last Updated 4 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

ಇಂದಿನ ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ, ಯಾಂತ್ರಿಕ ಕಲಿಕೆ, ರೋಬಾಟ್‌ – ಇವುಗಳನ್ನು ಅನ್ವಯಿಸಿ ಬಳಸುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಅನಿವಾರ್ಯತೆಯೂ ಇದೆಯೆನ್ನಿ. ಈಗಂತೂ ಮಿಲಿಟರಿ, ದೊಡ್ಡ ದೊಡ್ಡ ಕಾರ್ಖಾನೆಗಳು, ವೈದ್ಯಕೀಯ ಕ್ಷೇತ್ರ ಮುಂತಾದ ಕಡೆಯೆಲ್ಲಾ ರೋಬಾಟ್‌ಗಳು ಪ್ರಧಾನ ಪಾತ್ರ ವಹಿಸುತ್ತಿವೆ. ಎಲ್ಲಾ ಕ್ಷೇತ್ರಗಳನ್ನೂ ಆವರಿಸಿಕೊಂಡು ಸರ್ವವ್ಯಾಪಿಯಾಗುತ್ತಿರುವ ರೋಬಾಟ್‌ಗಳನ್ನು ನಮ್ಮ ದೇಹದೊಳಗೂ ಕಾರ್ಯನಿರ್ವಹಿಸಲು ಬಳಸುವಂತಾದರೆ ಹೇಗೆ? ಇದೋ ಇದರ ಒಂದು ಹಂತವನ್ನು ಸಾಧಿಸಿ ತೋರಿಸಿದ್ದಾರೆ, ಜರ್ಮನಿಯ ‘ಅಕಾಸ್ಟಿಕ್‌ ರೋಬೋಟಿಕ್ಸ್‌ ಸಿಸ್ಟಮ್ಸ್‌ ಲ್ಯಾಬ್‌’ನ ಎಂಜಿನಿಯರು ಹಾಗೂ ಸಂಶೋಧಕರಾದ ಡೇನಿಯಲ್‌ ಅಹಮದ್‌ ಮತ್ತು ಸಂಗಡಿಗರು.

ರೋಬಾಟ್‌ಗಳು ವೈದ್ಯಕೀಯ ಕ್ಷೇತ್ರದಲ್ಲಿ ಈಗಾಗಲೇ ಬಳಕೆಯಾಗುತ್ತಿವೆ. ಆದರೆ ಅವೆಲ್ಲವೂ ಮಾನವನ ದೇಹದೊಳಗೆ ಕಾರ್ಯನಿರ್ವಹಿಸಬಲ್ಲವಂತವಲ್ಲ. ಮನುಷ್ಯನ ದೇಹದೊಳಗೆ ಇದ್ದುಕೊಂಡು ಕಾರ್ಯನಿರ್ವಹಿಸಬೇಕಾದರೆ ಬೇರೆ ರೀತಿಯದ್ದೇ ರಚನೆಯಿರುವ ರೋಬಾಟ್‌ಗಳಾಗಬೇಕು. ಒಂದು ಅವು ಬಲು ಸಣ್ಣ ಗಾತ್ರದ್ದಾಗಿಯೂ ತೆಳುವಾಗಿಯೂ ಇರಬೇಕು. ಮತ್ತು ಸುಲಭವಾಗಿ ದೇಹದ ನಾಳದೊಳಗೆ ಚಲಿಸುತ್ತಾ ಹೋಗುವಂತಿರಬೇಕು. ಹೊರಗಿನಿಂದ ನಿಯಂತ್ರಿಸಲು ಸುಲಭವಾಗಿರಬೇಕು. ಇವನ್ನೇ ‘ಮೈಕ್ರೋರೋಬಾಟ್‌’ಗಳು ಎನ್ನುತ್ತೇವೆ. ಜೊತೆಗೆ ಇವು ಶರೀರದ ಅಂಗಗಳಿಗೆ ಯಾವುದೇ ರೀತಿಯ ಹಾನಿಯನ್ನು ಉಂಟುಮಾಡಬಾರದು. ಇದು ಸಾಧ್ಯವಾಗಿಬಿಟ್ಟರೆ ವೈದ್ಯಕೀಯ ಕ್ಷೇತ್ರದಲ್ಲಿ ರೋಬಾಟ್‌ಗಳ ಕ್ರಾಂತಿಯೇ ಆಗಿಬಿಡುತ್ತದೆ. ಇದಲ್ಲದೇ ಸಣ್ಣ ಉತ್ಪಾದನಾ ಕೈಗಾರಿಕೆಗಳು, ಎಲೆಕ್ಟ್ರಾನಿಕ್ಸ್‌, ಮೈಕ್ರೋಫ್ಲ್ಯುಯಿಡಿಕ್ಸ್‌ ಹಾಗೂ ಟಿಷ್ಯು ಎಂಜಿನಿಯರಿಂಗ್‌ ಕ್ಷೇತ್ರಗಳಲ್ಲಿಯೂ ಬಹಳಷ್ಟು ಸುಧಾರಣೆಗಳಾಗುತ್ತವೆ.

ಈ ಮೈಕ್ರೋರೋಬಾಟ್‌ಗಳಿಗೆ ಪ್ರೇರಕವೇ ಸಿಫಿಲಿಸ್‌ ರೋಗವನ್ನು ತರುವ ‘ಸ್ಪೈರೋಕೀಟ್‌’ ಎನ್ನುವ ಬ್ಯಾಕ್ಟೀರಿಯಾದ ಚಲನೆ. ಇವು ಲೋಳೆಯಂತಹ ದ್ರವ, ರಕ್ತ, ದುಗ್ದರಸ – ಇವೇ ಮೊದಲಾದ ದ್ರವಪರಿಸರದಲ್ಲಿ ಈಜಾಡಬಲ್ಲವು. ಇವುಗಳನ್ನು ಅನುಕರಿಸಿ ರೋಬಾಟ್‌ಗಳನ್ನು ಸೃಷ್ಟಿಸುವುದು ಸುಲಭವೇನಲ್ಲ ಆದರೆ ಮುಂದಿನ ಹಂತದ ರೋಬಾಟ್‌ಗಳ ಅಭಿವೃದ್ದಿಗಾಗಿ ಇದು ಅತಿ ಮುಖ್ಯ. ಇವನ್ನು ದೇಹದೊಳಗೆ ಬಳಸಿಕೊಳ್ಳಬೇಕಾದರೆ ಈಗಾಗಲೇ ಹೇಳಿದಂತೆ ಅವು ಸಣ್ಣ ಹಾಗೂ ತೆಳುವಾಗಿರುವುದಲ್ಲದೇ ಹೊರಗಿನಿಂದ ನಿಯಂತ್ರಿಸಲು ಸುಲಭವಾಗಿರಬೇಕು. ಇವನ್ನು ದೇಹದೊಳಗೆ ತೂರಿಸಿ ಚಲಾಯಿಸಬೇಕಾದರೆ ಕನಿಷ್ಠಬಲವನ್ನು ಪ್ರಯೋಗಿಸುವ ಅವಶ್ಯಕತೆಯಿದೆ. ಬಯೋಹೈಬ್ರಿಡ್‌, ರಾಸಾಯನಿಕ ಕ್ರಿಯೆಗಳು, ಆಪ್ಟಿಕ್ಸ್‌, ಕಿಣ್ವಗಳು, ವಿದ್ಯುತ್‌ ಹಾಗೂ ಅಯಸ್ಕಾಂತೀಯ ಕ್ಷೇತ್ರಗಳನ್ನು ಬಳಸಿಕೊಂಡು ಈಗಾಗಲೇ ಬಲವನ್ನು ನೀಡಲು ಪ್ರಯೋಗಿಸಲಾಗಿದೆ. ಆದರೆ ಇವು ಶರೀರದ ಅಂಗಗಳಿಗೆ ತೊಂದರೆಯನ್ನು ಉಂಟುಮಾಡುಬಹುದಾದ್ದರಿಂದ ಯಾವುವೂ ಯಶಸ್ವಿಯಾಗಲಿಲ್ಲ. ಹಾಗೂ ಇವುಗಳು ಚಲಿಸುವ ವೇಗ, ಬಲ ಹಾಗೂ ದಿಕ್ಕನ್ನು ನಿರ್ವಹಿಸುವುದು ಕಠಿಣವಾದ್ದರಿಂದ ಈ ವಿಧಾನಗಳು ವೈದ್ಯಕೀಯ ಕ್ಷೇತ್ರಕ್ಕೆ ಸೂಕ್ತವಲ್ಲ. ಬೆಳಕಿಗೆ ಸ್ಪಂದಿಸುವಂತಹ ದ್ರವ-ಸ್ಫಟಿಕ ಎಲಾಸ್ಟೋಮರುಗಳನ್ನು ಬಳಸಿಕೊಂಡೂ ಬಲವನ್ನು ಪ್ರಯೋಗಿಸಲು ವಿಜ್ಞಾನಿಗಳು ಪ್ರಯತ್ನಿಸಿದ್ದಾರೆ. ಇದು ಶರೀರದ ಅಂಗಗಳಿಗೆ ಹಾನಿಕಾರಕವಲ್ಲದಿದ್ದರೂ ಯಶಸ್ವಿಯಾಗಲಿಲ್ಲ. ಏಕೆಂದರೆ ಬೆಳಕು ಮಾನವನ ಶರೀರದ ಒಳಗೆಲ್ಲಾ ಪ್ರವೇಶಿಸದೇ ಕೆಲವೇ ಮಿಲಿಮೀಟರುಗಳಷ್ಟೇ ತೂರಬಲ್ಲದು. ಜೊತೆಗೆ ಹಾದು ಹೋದ ಬೆಳಕು ಸುತ್ತಲಿನ ಅಂಗಗಳಿಂದ ಚದುರಿಹೋಗಿಬಿಡಬಹುದು. ಹೀಗಾಗಿ ಬೆಳಕನ್ನು ಬಳಸಿ ಮೈಕ್ರೋರೋಬಾಟುನ್ನು ಚಲಾಯಿಸುವುದು ಸಾಧ್ಯವಾಗುವುದಿಲ್ಲ. ಇದಕ್ಕೆ ಡೇನಿಯಲ್‌ ಮತ್ತು ಸಂಗಡಿಗರು ಬಳಸಿಕೊಂಡದ್ದು ಶಬ್ದವನ್ನು.

ಶಬ್ದವು ದೇಹದ ಆಳಕ್ಕೆ ತೂರಬಲ್ಲದು ಹಾಗೂ ಒಳಗಿರುವ ರೋಬಾಟನ್ನು ಚಲಾಯಿಸಲುಬೇಕಾದ ಶಕ್ತಿಯನ್ನು ಸಮರ್ಥವಾಗಿ ಉತ್ಪಾದಿಸಬಲ್ಲದು. ದೇಹದ ಅಪಾರದರ್ಶಕತೆಯಿಂದಾಗಿ ಅವುಗಳ ಚಲನೆ ಅಥವಾ ಕಾರ್ಯಕ್ಕೆ ಯಾವುದೇ ರೀತಿಯ ತೊಡಕೂ ಆಗುವುದಿಲ್ಲ. ಹಾಗಾಗಿ ಶಬ್ದನಿಯಂತ್ರಿತ ಮೈಕ್ರೋರೋಬಾಟ್‌ಗಳನ್ನು ಸೃಷ್ಟಿಸಿ ವೈದ್ಯಕೀಯ ಕ್ಷೇತ್ರದಲ್ಲಿ ಉಪಯೋಗಿಸಿಕೊಳ್ಳಬಹುದೇ ಎಂದು ನೋಡಿದ್ದಾರೆ. ಇದಕ್ಕೂ ಮೊದಲು ಶಬ್ದ ಹಾಗೂ ರೋಬಾಟನ್ನು ತಯಾರಿಸುವ ಸಾಮಗ್ರಿಗಳ ನಡುವಿನ ಹೊಂದಾಣಿಕೆ ಹಾಗೂ ಅವುಗಳ ರಚನೆಯನ್ನು ಅಧ್ಯಯನ ಮಾಡಬೇಕಾಗುತ್ತದೆ. ಉದಾಹರಣೆಗೆ, ಪಾಲಿಮರಿನ ಕುಳಿಯೊಳಗಿನ ಸಣ್ಣಕಣಗಳ ಮೇಲೆ ಶಬ್ದವನ್ನು ಹಾಯಿಸಿದಾಗ ಅದನ್ನು ತೀವ್ರವಾಗಿ ಚದುರಿಸಿ, ಹೆಚ್ಚಿನ ಶಕ್ತಿ ಉತ್ಪಾದನೆಯಾಗುತ್ತದೆ. ಹೆಚ್ಚಿನ ಶಕ್ತಿಯನ್ನು ನೀಡಿದಾಗ ರೋಬಾಟಿನ ಚಲನೆಯಲ್ಲಿಯೂ ತೀವ್ರ ವ್ಯತ್ಯಾಸವಾಗುತ್ತದೆ. ಇದು ದೇಹದೊಳಗೆ ಬಳಸಿಕೊಳ್ಳಲು ಸೂಕ್ತವಲ್ಲ. ಹಾಗಾಗಿ ಈ ಅಂಶಗಳ ಮೇಲೆ ನಿಗಾ ವಹಿಸಬೇಕಾದ್ದು ಮುಖ್ಯ. ಡೇನಿಯಲ್‌ ಸ್ಪೈರೋಕೀಟ್‌ ಬ್ಯಾಕ್ಟೀರಿಯಾವನ್ನು ಅನುಕರಿಸುವ ಶಬ್ದದ ತರಂಗಗಳಿಂದ ಪ್ರಚೋದನೆಗೊಂಡು ಚಲಿಸಬಲ್ಲಂತಹ ರೆಕ್ಕೆಗಳಿರುವ ದ್ವಿಸುರುಳಿ ರೋಬಾಟನ್ನು ನ್ಯಾನೋಕಣಗಳನ್ನು ಬಳಸಿಕೊಂಡು ರಚಿಸಿ, ಅದರ ಚಲನೆಯನ್ನು ಪರೀಕ್ಷಿಸಿದ್ದಾರೆ. ಅರ್ಥಾತ್‌, ಬ್ಯಾಕ್ಟೀರಿಯಾದಂತಹ ಸೂಕ್ಷ್ಮಜೀವಿಗಳಲ್ಲಿ ಹೇಗೆ ‘ಫ್ಲಾಜೆಲ್ಲಾ’ ಅಥವಾ ‘ಸೀಲಿಯಾ’ ಅಂಗಗಳು ಚಲನೆಗೆ ನೆರವಾಗುತ್ತದೊ ಹಾಗೆ. ದ್ವಿಸುರುಳಿ ಆಕಾರವು ಪ್ರಯೋಗಿಸಲ್ಪಟ್ಟ ಶಬ್ದದೊಡನೆ ವರ್ತಿಸಿ ರೋಬಾಟನ್ನು ಸ್ಪೈರೋಕೇಟ್‌ ಬ್ಯಾಕ್ಟೀರಿಯಾದಂತೆ ಉರುಳುತ್ತಾ ಚಲಿಸುವಂತೆ ಮಾಡಿತ್ತಂತೆ. ಅರ್ಥಾತ್‌, ನ್ಯಾನೋರೋಬಾಟಿನ ಚಲನೆ ದೇಹಕ್ಕೆ ಯಾವುದೇ ತೊಂದರೆ ಮಾಡದೇ ಸಾಗಿತ್ತು. ಅಂತೂ ಇವರ ಸಂಶೋಧನೆ ಯಶಸ್ವಿಯಾಯಿತು.

ಹೀಗೆ ಡೇನಿಯಲ್‌ ಹಾಗೂ ಸಂಗಡಿಗರ ಈ ಸಂಶೋಧನೆಯು ಮುಂದಿನ ಹಂತದ ಸುರಕ್ಷಿತವಾದ ಶಸ್ತ್ರಚಿಕಿತ್ಸೆಯಲ್ಲಿ ಉಪಯೋಗಿಸಬಹುದಾದ ಸಣ್ಣ ರೋಬಾಟ್‌ಗಳ ಅಭಿವೃದ್ದಿಗೆ ಅನುಕೂಲಿಯಾಗಲಿವೆ.

ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರುವ ನಮ್ಮ ಇಂದಿನ ಕಾಲದಲ್ಲಿ, ದೇಹದೊಳಗಿರುವ ಸೂಕ್ಷ್ಮನಾಳಗಳಲ್ಲಿಯೂ ಯಾವ ರೀತಿಯ ಸಮಸ್ಯೆಗಳು ಕಾಣಿಸಿ ಕೊಳ್ಳಬಹುದೋ ತಿಳಿಯದು. ಆಗಿರುವ ತೊಂದರೆಗಳನ್ನು ನಿಖರವಾಗಿ ಗುರುತಿಸಿ ಸರಿಪಡಿಸುವಲ್ಲಿ ಸಣ್ಣ ರೋಬಾಟ್‌ಗಳು ಕೂಡ ತಮ್ಮ ಸೇವೆಯನ್ನು ನೀಡಲಿರುವುದು ಸಂತಸದ ವಿಷಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT