ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಾಟಿಂಗ್ ಬೊಟ್‍’ ಯುಗದೊಳಗೆ

ಚುರುಕು ಕೃತಕ ಬುದ್ಧಿಮತ್ತೆ
Last Updated 21 ಜೂನ್ 2018, 3:45 IST
ಅಕ್ಷರ ಗಾತ್ರ

ಶಬ್ದ ಬರಿಯ ಸದ್ದಲ್ಲ. ಶಬ್ದದಿಂದಲೇ ಹಣ ವರ್ಗಾವಣೆ ನಡೆಯುತ್ತಿದೆ, ಯಂತ್ರಗಳು ಶಬ್ದ ಆಲಿಸಿ ಅರ್ಥೈಸಿಕೊಂಡು ಪ್ರತಿಕ್ರಿಯಿಸುತ್ತಿವೆ. ಉತ್ತಮ ಕೇಳುಗರಾಗುತ್ತಿರುವ ಯಂತ್ರಗಳು ಕೃತಕ ಬುದ್ಧಿಮತ್ತೆ ರೂಪದಲ್ಲಿ ಸಹಾಯಕರಾಗಿ, ಸ್ನೇಹಿತರಾಗಿ, ಮಾರ್ಗದರ್ಶಕರಾಗಿ, ಆಪ್ತ ಸಮಾಲೋಚಕರಾಗಿ ನಮ್ಮೊಂದಿಗೆ ಬೆರೆಯುತ್ತಿವೆ. ಆಪಲ್ ಐಫೋನ್‍ಗಳಲ್ಲಿ ಅಳವಡಿಸಿಕೊಳ್ಳಲಾದ ಕೃತಕ ಬುದ್ಧಿಮತ್ತೆ ತಂತ್ರಾಂಶ ‘ಸಿರಿ’ ನೀಡುತ್ತಿದ್ದ ಉತ್ತರಗಳು ಈ ಹಿಂದೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು.

‘ಸಿರಿ, ನನಗೆ ಸೇತುವೆಯಿಂದ ಬೀಳಬೇಕು ಅನಿಸುತ್ತಿದೆ’ ಎಂದು ಹೇಳಿದರೆ; ತಕ್ಷಣವೇ ಸಮೀಪದಲ್ಲಿರುವ ಸೇತುವೆಗಳ ದೊಡ್ಡ ಪಟ್ಟಿಯನ್ನೇ ಐಫೋನ್ ಪರದೆ ಮೇಲೆ ಮೂಡುತ್ತಿತ್ತು! 2013ರ ಮಧ್ಯಭಾಗದವರೆಗೂ ಇಂಥದ್ದೇ ಪ್ರತಿಕ್ರಿಯೆ ತೋರುತ್ತಿದ್ದ ಸಿರಿ, ಬಳಿಕ ಆತ್ಮಹತ್ಯೆಗೆ ಸಂಬಂಧಿತ ಶಬ್ದಗಳನ್ನು ಗುರುತಿಸಿ ಸಹಾಯವಾಣಿ ಸಂಖ್ಯೆಗಳನ್ನು ನೀಡಲು ಪ್ರಾರಂಭಿಸಿತು.

ಕೃತಕ ಬುದ್ಧಿಮತ್ತೆಯ ಸೀಮಿತ ಪರಿಧಿ, ಅಪಾಯ ಹಾಗೂ ಜನರ ಮನಸ್ಥಿತಿಯನ್ನು ಗ್ರಹಿಸಿ ಎಚ್ಚೆತ್ತುಕೊಂಡ ಸಂಶೋಧಕರು ಮಾನಸಿಕ ಸಮಸ್ಯೆಗಳಿಗೆ ಸ್ಪಂದಿಸುವ ಸಂವಹನ ‘ಚಾಟ್‍ಬೊಟ್’(chatbot) ಅಭಿವೃದ್ಧಿ ಪಡಿಸಲು ಮುಂದಾದರು. ಇದೇ ನಿಟ್ಟಿನಲ್ಲಿ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದ ಮನಶಾಸ್ತ್ರಜ್ಞರು 2017ರಲ್ಲಿ ‘ವೊಬೊಟ್’( Woebot) ಆಪ್ತ ಸಮಾಲೋಚಕನನ್ನು ಸೃಷ್ಟಿಸಿದರು. ದೈಹಿಕ ಮತ್ತು ಮಾನಸಿಕ ಆರೋಗ್ಯದ ಸುಧಾರಣೆಗೆ ಸಹಕಾರಿಯಾಗುವ ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಯಲ್ಲಿ ಬಹಳಷ್ಟು ಪ್ರಯತ್ನ ನಡೆದಿದೆ.

* ಆಪ್ತ ಸಮಾಲೋಚಕ ವೊಬೊಟ್
ವರ್ಷದ ಎಲ್ಲ ದಿನವೂ ಯಾವುದೇ ಸಮಯದಲ್ಲಿ ಆಪ್ತ ಸಮಾಲೋಚನೆ ನೀಡುವ ‘ವೊಬೊಟ್’ನ್ನು 130 ರಾಷ್ಟ್ರಗಳ ಜನರು ಮೆಚ್ಚಿದ್ದಾರೆ. ಇದನ್ನು ಜಗತ್ತಿನ ಬ್ಯುಸಿ ಚಾಟ್‍ಬೊಟ್ ಎನ್ನಬಹುದು. ಸಂಶೋಧನೆಗಳ ಪ್ರಕಾರ, ಅಮೆರಿಕದಲ್ಲಿ ಆರು ಜನರಲ್ಲಿ ಒಬ್ಬ ಯಾವುದಾದರೊಂದು ಮಾನಸಿಕ ಸಮಸ್ಯೆಗೆ ಒಳಗಾಗಿರುತ್ತಾನೆ. ಮನೋವೈದ್ಯರನ್ನು ಭೇಟಿಯಾಗದೆಯೇ ಸಮಸ್ಯೆ ತಿಳಿಯದೆಯೇ ನರಳುವವರು ಅನೇಕ. ಇದರ ಪರಿಹಾರಕ್ಕಾಗಿಯೇ 2017ರ ಜೂನ್ ತಿಂಗಳಲ್ಲಿ ವೊಬೊಟ್ ಮಾರ್ಗದರ್ಶನ ಪ್ರಾರಂಭಿಸಿತು. ಫೇಸ್‍ಬುಕ್ ಪುಟ, ಆ್ಯಪ್‍ನ್ನು ಕೂಡ ಒಳಗೊಂಡಿರುವ ಈ ವ್ಯವಸ್ಥೆಯೊಂದಿಗೆ ಸಾವಿರಾರು ಜನ ಸಂಪರ್ಕ ಸಾಧಿಸಿದ್ದಾರೆ. ವಾರಕ್ಕೆ ಅಂದಾಜು 20 ಲಕ್ಷ ಸಂದೇಶಗಳಿಗೆ ವೊಬೊಟ್ ಪ್ರತಿಕ್ರಿಯಿಸುತ್ತಿದೆ.

ಇದರ ಸಂದೇಶಗಳ ಮೂಲಕ ಆಪ್ತ ಸಮಾಲೋಚನೆ ಪಡೆದ 18-28 ವರ್ಷ ವಯೋಮಾನದ ಕಾಲೇಜು ವಿದ್ಯಾರ್ಥಿಗಳಲ್ಲಿ ಎರಡು ವಾರಗಳ ಅಂತರದಲ್ಲಿ ಖಿನ್ನತೆ ಮಟ್ಟ ಗಮನಾರ್ಹ ಇಳಿಕೆಯಾಗಿರುವುದನ್ನು ಗುರುತಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‍ಒ)ಯ ಪ್ರಕಾರ, ಜಗತ್ತಿನಾದ್ಯಂತ ವರ್ಷಕ್ಕೆ 30 ಕೋಟಿ ಜನರು ಖಿನ್ನತೆಯ ಕಾರಣದಿಂದಾಗಿ ಅನೇಕ ಮಾನಸಿಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ‘ವೊಬೊಟ್’ ಚಿಕಿತ್ಸಕ ಅಲ್ಲವಾದರೂ ವರ್ತನೆ ಅಥವಾ ಯೋಚನೆಗಳ ಆಧಾರದಲ್ಲಿ ಸೂಕ್ತ ಮಾರ್ಗದರ್ಶನವನ್ನು ಕಾಗ್ನಿಟೀವ್-ಬಿಹೇವಿಯರಲ್ ಥೆರಪಿ(ಸಿಬಿಟಿ) ಮೂಲಕ ನೀಡುತ್ತಿದೆ.

ಈ ಚಾಟ್‍ಬೊಟ್, ವ್ಯಕ್ತಿ ಆಡುವ ಮಾತನ್ನು ಇತರರೊಡನೆ ಹಂಚಿಕೊಳ್ಳುವುದಿಲ್ಲ, ಗಾಸಿಪ್ ಮಾಡುವುದಿಲ್ಲ, ಮಾತಿನ ಆಧಾರದ ಮೇಲೆ ವ್ಯಕ್ತಿತ್ವ ನಿರ್ಣಯಿಸುವುದಿಲ್ಲ. ಹೀಗಾಗಿಯೇ, ಮನಸ್ಸಿನ ಎಲ್ಲ ಮಾತುಗಳನ್ನು ಸಂದೇಶಗಳ ಮೂಲಕ ನಿರಾತಂಕವಾಗಿ ಈ ಆಪ್ತ ಸಮಾಲೋಚಕನೊಂದಿಗೆ ಹೇಳಿಕೊಳ್ಳುತ್ತಿದ್ದಾರೆ. ಸಿಬಿಟಿ- ಮಾನಸಿಕ ಸಮಸ್ಯೆಗೆ ಚಿಕಿತ್ಸೆ ನೀಡಲು ಬಳಸುವ ವ್ಯವಸ್ಥಿತ ಮಾರ್ಗವಾಗಿರುವುದರಿಂದ ಫಲಿತಾಂಶ ಉತ್ತಮವಾಗಿದೆ. ತನ್ನೊಂದಿಗೆ ಸಂವಹನ ನಡೆಸುತ್ತಿರುವ ವ್ಯಕ್ತಿಯ ಮಾನಸಿಕ ಮಟ್ಟದಲ್ಲಿನ ಬದಲಾವಣೆಯನ್ನು ಗ್ರಾಫ್ ಮುಖೇನ ಪ್ರತಿ ವಾರವೂ ತೋರುತ್ತದೆ.

* ಆಟಿಸಂ ಪತ್ತೆಗೆ ತಂತ್ರಾಂಶ ಅಭಿವೃದ್ಧಿ
ರಕ್ತದ ಪರೀಕ್ಷೆ ಅಥವಾ ಮಿದುಳಿನ ಸ್ಕ್ಯಾನ್ ಮೂಲಕ ಆಟಿಸಂ ಪತ್ತೆ ಮಾಡಲಾಗುವುದಿಲ್ಲ. ಮಾತು ಮತ್ತು ವರ್ತನೆಯನ್ನು ಎರಡೂವರೆ ಗಂಟೆಗಳ ಪರೀಕ್ಷೆಯ ಮೂಲಕ ತಜ್ಞರು ಗಮನಿಸಿ, ಆ ವರದಿಯನ್ನು ಮಕ್ಕಳ ತಜ್ಞರು ಅಥವಾ ಮನಶಾಸ್ತ್ರಜ್ಞರು ನೋಡಿ ತೀರ್ಮಾನಿಸುವ ಪ್ರಕ್ರಿಯೆಗೆ ಕೆಲವು ದಿನ ಹಿಡಿಯುತ್ತದೆ. ಹಾಗೆಯೂ ಅದಕ್ಕಾಗಿ ಹಣವೂ ಬೇಕಾಗುತ್ತದೆ. ಆಟಿಸಂಗೆ ಒಳಗಾದವರ ಆನ್‍ಲೈನ್ ವಿಡಿಯೊ ಗಮನಿಸಿ ಸಾಮಾನ್ಯ ಜನರೂ ಸಹ ಶೇ 76-86ರಷ್ಟು ನಿಖರವಾಗಿ ಆಟಿಸಂ ಪತ್ತೆ ಮಾಡಬಹುದು ಎಂಬುದನ್ನು ಸಂಶೋಧಕ ಡೆನ್ನಿಸ್ ವಾಲ್ ತೋರಿಸಿಕೊಟ್ಟಿದ್ದಾರೆ.

ಮೂರು ನಿಮಿಷಗಳ ವಿಡಿಯೊ ತೋರಿಸಿ, ಅದಕ್ಕೆ ಸಂಬಂಧಿಸಿದಂತೆ 30 ಪ್ರಶ್ನೆಗಳನ್ನು ಕೇಳುವ ಮೂಲಕ ವಾಲ್ಸ್ ಅವರ ತಂಡ ಅಧ್ಯಯನ ನಡೆಸಿದೆ. ಈಗಾಗಲೇ ಬಾಂಗ್ಲಾದೇಶದಲ್ಲಿ ಮೊದಲ ಅಧ್ಯಯನ ಮುಗಿಸಿದ್ದು, ಆಟಿಸಂ ಇರುವ ಮತ್ತು ಇಲ್ಲದ ಮಕ್ಕಳಿಗೆ ಸಂಬಂಧಿಸಿದ ವಿವರಗಳನ್ನು ಯಂತ್ರಕ್ಕೆ ಅಪ್ ಲೋಡ್ ಮಾಡುವ ಕಾರ್ಯ ನಡೆಸಿದ್ದಾರೆ. ಅಂಥ ಮಕ್ಕಳ ಮಾತು, ಧ್ವನಿ, ವರ್ತನೆ ಹಾಗೂ ಅಧ್ಯಯನಗಳಿಂದ ಪಡೆದ ಮಾಹಿತಿಯನ್ನು ಒಟ್ಟು ಗೂಡಿಸಿ ಯಂತ್ರಕ್ಕೆ ರವಾನಿಸಲಾಗುತ್ತದೆ. ಈ ಮಾಹಿತಿ ಆಧಾರದಲ್ಲಿ ಕೃತಕ ಬುದ್ಧಿಮತ್ತೆ ಬೆಳೆಸಿಕೊಳ್ಳುವ ಯಂತ್ರ ಕೆಲವೇ ನಿಮಿಷಗಳಲ್ಲಿ ಆಟಿಸಂ ಪತ್ತೆ ಮಾಡಲಿದೆ. ಇನ್ನೂ ಇದರ ತಂತ್ರಾಂಶ ಅಭಿವೃದ್ಧಿ ಪೂರ್ಣಗೊಂಡಿಲ್ಲ.

* ಬಳಕೆಯಲ್ಲಿರುವ ಇತರ ಚಾಟ್‍ಬೊಟ್‍ಗಳು
ಯು-ರಿಪೋರ್ಟ್:
ವಿಶ್ವಸಂಸ್ಥೆ ಮಕ್ಕಳ ನಿಧಿ(ಯುನಿಸೆಫ್) ಯು-ರಿಪೋರ್ಟ್ ಬೊಟ್ ಬಳಸುತ್ತಿದೆ. ಪ್ರಸ್ತುತ ಜಗತ್ತಿನ 42 ಲಕ್ಷ ಯುವಜನ ಇದರಲ್ಲಿ ಭಾಗಿಯಾಗಿದ್ದಾರೆ. ಫೇಸ್‍ಬುಕ್ ಮತ್ತು ಟ್ವಿಟರ್ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕೃತಕ ಬುದ್ಧಿಮತ್ತೆ 13 ವರ್ಷ ವಯಸ್ಸಿಗೂ ಮೇಲ್ಪಟ್ಟವರಿಗೆ ಅನೇಕ ಪ್ರಶ್ನೆಗಳನ್ನು ಹಾಕುವ ಮೂಲಕ ಸಾಮಾಜಿಕ ಚಳವಳಿಯಲ್ಲಿ ತೊಡಗಿಸಿಕೊಂಡಿದೆ.
ಶಿಕ್ಷಣ, ಲೈಂಗಿಕ ಮತ್ತು ಸಂತಾನೋತ್ಪತ್ತಿ, ಆರೋಗ್ಯ ಸೇವೆಗಳು, ಕಾನೂನಾತ್ಮಕ ಹಕ್ಕುಗಳ ತಿಳಿವಳಿಕೆ ಕುರಿತಾದ ಪ್ರಶ್ನೆಗಳನ್ನು ಯು-ರಿಪೋರ್ಟ್ ಮುಂದಿಡುತ್ತದೆ. ಉತ್ತರಗಳನ್ನು ಸಂಗ್ರಹಿಸಿ ಯುನಿಸೆಫ್ ಮೂಲಕ ಸಮುದಾಯಗಳ ಮುಂದಿಡುತ್ತದೆ. ಈ ಮಾಹಿತಿಯನ್ನು ಬಳಸಿಕೊಂಡು ಯುವಜನರ ಉನ್ನತಿಗಾಗಿ ನಿರ್ದಿಷ್ಟ ಪ್ರದೇಶ ಅಥವಾ ಸಮುದಾಯಗಳು ಕ್ರಮವಹಿಸಬಹುದಾಗಿದೆ.

‘ರೊಬೊಟ್ ಲಾಯರ್’ ಡುನಾಟ್‍ಪೇ:
ಇದನ್ನು ಜಗತ್ತಿನ ಮೊದಲ ‘ರೊಬೊಟ್ ಲಾಯರ್’ ಎಂದೇ ಕರೆಯಲಾಗುತ್ತದೆ. ಸಾಮಾನ್ಯವಾಗಿ ಬೇಕಾಗುವ ಕಾನೂನು ಸಲಹೆಗಳನ್ನು ಕ್ಷಣದಲ್ಲಿ ನೀಡುವ ‘ಡುನಾಟ್‍ಪೇ’ ಅನೇಕ ಗೊಂದಲಗಳಿಗೆ ಪರಿಹಾರವಾಗಿದೆ. ‘ಕ್ರೆಡಿಟ್ ಕಾರ್ಡ್ ಕಳೆದು ಹೋಗಿದೆ ಏನು ಮಾಡಲಿ?’, ‘ಸಂಸ್ಥೆ ರಜೆ ನೀಡುತ್ತಿಲ್ಲ ಏನು ಮಾಡಲಿ?’...ಇಂಥ ಅನೇಕ ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ. ‘ಡುನಾಟ್‍ಪೇ’ ಅಡಿಯಲ್ಲಿ ಸುಮಾರು 1000 ಬೊಟ್‍ಗಳು ಅಮೆರಿಕ ಮತ್ತು ಇಂಗ್ಲೆಂಡ್‍ನ ಲಕ್ಷಾಂತರ ಜನರ ಕಾನೂನು ಸಲಹೆಗಾರನಾಗಿ ಉಚಿತ ಸೇವೆ ಒದಗಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT