ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

OTP ಇಲ್ಲದೆಯೇ‌ ಬ್ಯಾಂಕ್‌ನಿಂದ ಹಣ ಹೋಗದಂತೆ ಬಯೋಮೆಟ್ರಿಕ್ ಲಾಕ್ ಮಾಡುವುದು ಹೇಗೆ?

Published 10 ಅಕ್ಟೋಬರ್ 2023, 16:06 IST
Last Updated 10 ಅಕ್ಟೋಬರ್ 2023, 19:30 IST
ಅಕ್ಷರ ಗಾತ್ರ

‘ಯಾರಿಗೂ ಒಟಿಪಿ ಕೊಟ್ಟೇ ಇಲ್ಲ; ಆದರೂ ನನ್ನ ಬ್ಯಾಂಕ್ ಖಾತೆಯಿಂದ 10 ಸಾವಿರ ರೂ. ಕಡಿತವಾಯಿತು!’

ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ನಾವು ತುಸು ಹೆಚ್ಚೇ ಅನ್ನಿಸುವಷ್ಟು ಪೋಸ್ಟ್‌ಗಳನ್ನು ಇತ್ತೀಚೆಗೆ ಕಾಣುತ್ತಿದ್ದೇವೆ.

ಸರ್ಕಾರ, ಬ್ಯಾಂಕುಗಳು, ಆರ್‌ಬಿಐ ಮುಂತಾದವು ‘ಯಾರಿಗೂ ಒಟಿಪಿ ಅಥವಾ ಪಾಸ್‌ವರ್ಡ್ ಹಂಚಿಕೊಳ್ಳಬೇಡಿ’ ಹಾಗೂ ‘ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿ’ ಅಂತ ಪದೇ ಪದೇ ಎಸ್ಎಂಎಸ್ ಮೂಲಕ ಎಚ್ಚರಿಕೆ ನೀಡುತ್ತಲೇ ಇದೆ. ಆದರೆ, ಒಟಿಪಿ ಜೊತೆಗೆ ನಮಗೆ ಅತ್ಯಗತ್ಯವಾದ ‘ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡಿಕೊಳ್ಳಿ’ ಎಂಬ ಸಂದೇಶವಿನ್ನೂ ಯಾರಿಗೂ ತಲುಪಿಲ್ಲ. ಬ್ಯಾಂಕ್ ಖಾತೆಗೆ ಆಧಾರ್, ಮೊಬೈಲ್ ನಂಬರ್ ಲಿಂಕ್ ಮಾಡುವುದರಿಂದ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ನಮಗೆಷ್ಟು ಅನುಕೂಲವೋ, ವಂಚಕರೂ ಅಷ್ಟೇ ಚಾಣಾಕ್ಷರಾಗುತ್ತಿದ್ದಾರೆ.

ಒಟಿಪಿ ಇಲ್ಲದೆಯೂ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಲು ಕಾರಣ, ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಂ - AEPS). ಇತ್ತೀಚೆಗೆ, ಆಧಾರ್ ಕಾರ್ಡ್ ಇದ್ದರಾಯಿತು, ನಾವು ಗ್ರಾಮೀಣ ಪ್ರದೇಶದಲ್ಲಿ ಮನೆಮನೆಗೆ ಬರುವ ಅಂಚೆಯಣ್ಣನ ಮೂಲಕ ಬ್ಯಾಂಕ್ ಖಾತೆಯಲ್ಲಿದ್ದ ಹಣ ಪಡೆಯಬಹುದು ಎಂಬ ಕುರಿತಾದ ವಿಡಿಯೊ ಒಂದು ಹರಿದಾಡಿತ್ತು. ಈ ತಂತ್ರಜ್ಞಾನ ಒಳ್ಳೆಯದೇ. ಆದರೆ ಅದನ್ನೂ ಖೂಳರು ದುರುಪಯೋಗ ಮಾಡಿಕೊಳ್ಳಬಲ್ಲರು. ನಮ್ಮ ಬೆರಳಚ್ಚು ಎಷ್ಟು ಮುಖ್ಯ ಎಂಬುದು ಇಲ್ಲಿ ವೇದ್ಯವಾಗುತ್ತದೆ.

ವಂಚಿತರು ಸೈಬರ್ ಕ್ರೈಂ ಪೊಲೀಸರಲ್ಲಿ ದೂರು ನೀಡಲು ಹೋದಾಗ ಅವರು ಕೇಳುವ ಪ್ರಶ್ನೆ - ‘ನಿಮ್ಮ ಆಧಾರ್ ಬಯೋಮೆಟ್ರಿಕ್ ಇತ್ತೀಚೆಗೆ ಯಾರಿಗಾದರೂ ಕೊಟ್ಟಿದ್ದೀರಾ?’ ಅಂತ. ಹೆಚ್ಚಿನವರು ನೆನಪಿಸಿಕೊಂಡಿದ್ದು, ಇತ್ತೀಚೆಗಷ್ಟೇ ಆಸ್ತಿ ನೋಂದಣಿ ಕಚೇರಿಯಲ್ಲಿ ಅದನ್ನು ಬಳಸಿದ್ದೇವೆ ಎಂಬುದು. ಅಂದರೆ, ನೋಂದಣಿ ಕಚೇರಿಯಲ್ಲಷ್ಟೇ ಅಲ್ಲ, ಬೇರೆ ಬ್ಯಾಂಕ್, ಮೊಬೈಲ್ ಸಂಪರ್ಕ, ವಾಹನ ನೋಂದಣಿ ಮತ್ತಿತರ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ, ನಮ್ಮ ಬಯೋಮೆಟ್ರಿಕ್ (ಮುಖಗುರುತು, ಬೆರಳಚ್ಚುಗುರುತು ಮತ್ತು ಕಣ್ಣುಪಾಪೆಯ ಗುರುತು) ಅಗತ್ಯವಿದ್ದಲ್ಲಿ ಅಲ್ಲಿ ಬೆರಳಚ್ಚು ಸ್ಕ್ಯಾನ್ ಮಾಡಿ ತೆಗೆದುಕೊಂಡಿರುತ್ತಾರೆ. ಇದನ್ನೇ ಅದೆಂತೋ ಎಗರಿಸುವ ವಂಚಕರು ಎಇಪಿಎಸ್ ಬಳಸಿ, ಅದಕ್ಕಿರುವ ದಿನದ ಗರಿಷ್ಠ ಮಿತಿ 10 ಸಾವಿರ ರೂ. ಎಗರಿಸಬಲ್ಲರು. ಆಧಾರ್ ಸಂಖ್ಯೆ ಪಡೆದು, ಅದಕ್ಕೆ ಯಾವುದು ಲಿಂಕ್ ಆಗಿದೆ ಎಂದು ಎಲ್ಲ ಬ್ಯಾಂಕ್ ಖಾತೆಗಳನ್ನೂ ಪ್ರಯತ್ನಿಸಿ ನೋಡುತ್ತಾರೆ. ಈ ರೀತಿ ವಂಚನೆಗೆ ಪ್ರಯತ್ನ ಮಾಡುವಾಗಲೆಲ್ಲ, ನಮ್ಮದೇ ನೋಂದಾಯಿತ ಇಮೇಲ್ ಖಾತೆಗೆ ಸಂದೇಶಗಳು ಬರುತ್ತವೆ. ಆದರೆ, ಅದನ್ನು ಬಹುತೇಕರು ನೋಡುವುದಿಲ್ಲ ಅಥವಾ ನೋಡಿದರೂ ನಿರ್ಲಕ್ಷಿಸುತ್ತಾರೆ.

ಅದರಲ್ಲೊಂದು ಪ್ರಮುಖ ಸಂದೇಶ ಇದೆ. ದಿನ, ಸಮಯ ಸಹಿತ ಬ್ಯಾಂಕ್‌ನಲ್ಲಿರುವ ಸಾಧನದಲ್ಲಿ ನಿಮ್ಮ ಬೆರಳಚ್ಚನ್ನು ಬಳಸಿ ಆಧಾರ್ ಗುರುತಿನ ಪತ್ರ ದೃಢೀಕರಣವಾಗಿದೆ. ಈ ದೃಢೀಕರಣವನ್ನು ನೀವು ಮಾಡಿಲ್ಲದಿದ್ದರೆ, ತಕ್ಷಣ 1947ಕ್ಕೆ ಕರೆ ಮಾಡಿ ಅಥವಾ ಈ ಮೇಲ್ ಅನ್ನು help@uidai.gov.inಗೆ ಫಾರ್ವರ್ಡ್ ಮಾಡಿ ಅಂತ. ಇದನ್ನು ನಾವು ನಿರ್ಲಕ್ಷಿಸಬಾರದು.

ಈ ರೀತಿಯಾಗಿ ಒಟಿಪಿ ಇಲ್ಲದೆಯೇ ಹಣ ಹೋಗುವುದನ್ನು ತಡೆಯಲು ನಮ್ಮ ಆಧಾರ್ ಬಯೋಮೆಟ್ರಿಕ್ ವ್ಯವಸ್ಥೆಗೇ ಬೀಗ ಹಾಕಿಬಿಟ್ಟರೆ ಹೇಗೆ? ಇದು ಸುಲಭ. ಆದರೆ ಈ ವಿಚಾರದ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಆಗಿಲ್ಲ. ಇಲ್ಲಿ, ವಂಚಿತರಲ್ಲಿ ಬಹುತೇಕರು ಹಿರಿಯ ನಾಗರಿಕರೇ ಆಗಿರುತ್ತಾರೆ ಎಂಬುದೂ ಗಮನಿಸಬೇಕಾದ ವಿಚಾರ. ಲಾಕ್ ಮಾಡಿಬಿಟ್ಟರೆ ಬಯೋಮೆಟ್ರಿಕ್ ಆಧಾರದಲ್ಲಿ ಯಾವುದೇ ದಾಖಲೆಗೆ ನಾವು ಆಧಾರ್ ದೃಢೀಕರಣ ಮಾಡುವಂತಿಲ್ಲ.

ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡುವುದು ಹೀಗೆ..


ಸ್ಮಾರ್ಟ್‌ಫೋನ್‌ಗಳಲ್ಲಿ ಎಂ-ಆಧಾರ್ (mAadhaar) ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅಳವಡಿಸಿಕೊಳ್ಳಿ. ಅದರಲ್ಲಿ 12 ಅಂಕಿಗಳ ಆಧಾರ್ ಸಂಖ್ಯೆ, ಅದಕ್ಕೆ ಸಂಬಂಧಿಸಿದ 10 ಅಂಕಿಗಳ ಮೊಬೈಲ್ ಸಂಖ್ಯೆ ಸೇರಿಸಿಕೊಂಡು ನೋಂದಾಯಿಸಿಕೊಳ್ಳಿ. ಲಾಗಿನ್ ಆಗಿ, ಸುರಕ್ಷತೆಗಾಗಿ ಪಿನ್ ನಂಬರ್ ಹೊಂದಿಸಬೇಕಾಗುತ್ತದೆ. ಅಲ್ಲಿ ನಮ್ಮ ಆಧಾರ್ ಕಾರ್ಡ್ ಸೇರಿಸಿದ ಬಳಿಕ, ‘ಮೈ ಆಧಾರ್’ ಎಂದಿರುವಲ್ಲಿ ಕ್ಲಿಕ್ ಮಾಡಿದಾಗ, ಪಿನ್ ನಮೂದಿಸಬೇಕಾಗುತ್ತದೆ. ಕೆಳಗೆ ಕೆಂಪು ಬಣ್ಣದಲ್ಲಿ ‘ಬಯೋಮೆಟ್ರಿಕ್ ಲಾಕ್’ ಎಂದಿರುತ್ತದೆ. ಅದನ್ನು ಒತ್ತಿ. ಅಗತ್ಯವಿದ್ದಾಗ ಇದನ್ನು ಅನ್‌ಲಾಕ್ ಮಾಡಲು ಆಯ್ಕೆ ಇದೆ. ಅದರಲ್ಲಿ ಕ್ಯಾಪ್ಚಾ ಸಂಖ್ಯೆ ನಮೂದಿಸಿ, ಒಟಿಪಿ ರಚನೆಯಾಗುತ್ತದೆ. ಅದನ್ನು ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಎಸ್ಎಂಎಸ್‌ನಿಂದ ಪಡೆದು, ಅಲ್ಲಿ ಒಟಿಪಿ ನಮೂದಿಸಿದಾಗ ತಾತ್ಕಾಲಿಕವಾಗಿ ಅನ್‌ಲಾಕ್ ಆಗುತ್ತದೆ. ಈ ರೀತಿ ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣ ವ್ಯವಸ್ಥೆಯನ್ನು ಲಾಕ್ ಮಾಡಿದರೆ, ವಂಚಕರಿಗೆ ನಿಮ್ಮ ಕಣ್ಣುಪಾಪೆ ಅಥವಾ ಬೆರಳಚ್ಚು ಬಳಸಿ ಯಾವುದೇ ದಾಖಲೆಗೆ ದೃಢೀಕರಣ ನೀಡುವುದು ಸಾಧ್ಯವಾಗುವುದಿಲ್ಲ.

ಮೈ ಆಧಾರ್ ಆ್ಯಪ್ ಮೂಲಕವಲ್ಲದೆ, ಕಂಪ್ಯೂಟರಿನಲ್ಲಿ myaadhaar.uidai.gov.in ತಾಣದಲ್ಲಿಯೂ ಲಾಗಿನ್ ಆಗಿ, ನೋಂದಾಯಿಸಿಕೊಂಡು ಬಯೋಮೆಟ್ರಿಕ್ ಲಾಕ್/ಅನ್‌ಲಾಕ್ ಮಾಡಿಕೊಳ್ಳಬಹುದು. ತಾತ್ಕಾಲಿಕವಾಗಿ ಅನ್‌ಲಾಕ್ ಮಾಡಿಕೊಳ್ಳಲು resident.uidai.gov.in/aadhaar-lockunlock ತಾಣದಲ್ಲೂ ಪ್ರಯತ್ನಿಸಬಹುದು. ಆಧಾರ್ ಸೇವಾ ಕೇಂದ್ರಗಳಲ್ಲಿಯೂ ಈ ಸೌಕರ್ಯ ಲಭ್ಯವಿದೆ. ಆದರೆ, ಆಧಾರ್‌ಗೆ ನಮ್ಮ ಮೊಬೈಲ್ ನಂಬರ್ ಲಿಂಕ್ ಆಗಿರುವುದು ಕಡ್ಡಾಯ. ಜೊತೆಗೆ, ತಾತ್ಕಾಲಿಕವಾಗಿ ಸೃಷ್ಟಿಯಾಗುವ ವರ್ಚುವಲ್ ಐಡಿ ಬಳಸಿಯೂ ಆಧಾರ್ ದೃಢೀಕರಣ ಮಾಡಬಹುದು.

ಹಣ ಹೋದರೆ ಏನು ಮಾಡಬೇಕು?
ಖಾತೆಯಿಂದ ಹಣ ಕಡಿತವಾದ ಕುರಿತು ಎಸ್ಎಂಎಸ್ ಅಥವಾ ಇಮೇಲ್ ಬರುತ್ತದೆ. ಬಂದ ತಕ್ಷಣ ಅದರಲ್ಲಿ ನೀಡಲಾದ ಸಂಖ್ಯೆ ಸಂಪರ್ಕಿಸಿ, ದೂರನ್ನು ದಾಖಲಿಸಬೇಕು. ಜೊತೆಗೆ, ಸೈಬರ್ ಪೊಲೀಸರಿಗೆ ಇಲ್ಲವೇ ಸ್ಥಳೀಯ ಠಾಣೆಗೆ ದೂರು ಸಲ್ಲಿಸಿ, ಅದರ ಪ್ರತಿಯನ್ನು ಬ್ಯಾಂಕ್‌ಗೆ ಸಲ್ಲಿಸಬೇಕು.

ಸರ್ಕಾರದಿಂದ ಆಗಬೇಕಾದುದು
ಆಪತ್ಕಾಲದಲ್ಲಿ ಹಣ ಪಡೆಯಲು ರೂಪಿಸಿರುವ ಎಇಪಿಎಸ್ ಅಡಿಯಲ್ಲಿಯೂ ಎರಡು ಹಂತದ ದೃಢೀಕರಣ (Two Factor Authentication) ವ್ಯವಸ್ಥೆ ಅಳವಡಿಸಿ, ಒಟಿಪಿ ಅಥವಾ ಪಾಸ್‌ವರ್ಡ್ ಒದಗಿಸುವಂತಾಗಬೇಕು. ಇದಕ್ಕೆ ಆರ್‌ಬಿಐ ಕ್ರಮ ಕೈಗೊಳ್ಳಬೇಕಿದೆ. ಮತ್ತು ಈ ಲಾಕಿಂಗ್ ವ್ಯವಸ್ಥೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT