ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾಣಸುದ್ದಿ’ಯಲ್ಲಿ ವಿಜ್ಞಾನ, ಕೌತುಕ!

ಆಡಿಯೊ ಬುಕ್ಸ್ ಹೆಸರಲ್ಲಿ ಮೂಲ ವಿಜ್ಞಾನ ವಿಷಯ ಹಂಚುವ ವಿಶೇಷ ಪ್ರಯತ್ನ
Last Updated 12 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

‘ಹ ನುಮ ನೌಕೆಯ ಯಾನ’, ‘ಮಂಗಳನಲ್ಲಿ ಅಂತರಗಂಗೆ’, ‘ಇನ್ಸುಲಿನ್ನು ಮತ್ತು ಇರುವೆಯ ರಾಣಿ’, ‘ಟೊಮೆಟೊ ಏಕೆ ಕೆಂಪಾಗಿದೆ?’, ‘ಹರಳೆಣ್ಣೆ ಮತ್ತು ತೇಲುವ ಆಯಸ್ಕಾಂತ‘, ‘ಬಣ್ಣಗೆಟ್ಟ ಚಿಟ್ಟೆಗಳು’, ‘ಆಕಾಶದಲ್ಲೊಂದು ಮಂಚ’... ಇಂಥ ಹಲವು ವಿಜ್ಞಾನ, ಕೌತುಕಗಳ ಕುರಿತ ಆಡಿಯೊ ಮಾಹಿತಿಯನ್ನು ಪ್ರತಿ ವಾರ ಸಾವಿರಾರು ಶ್ರೋತೃಗಳಿಗೆ ವಾಟ್ಸ್‌ಆ್ಯಪ್ ಮೂಲಕವೇ ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಕೊಳ್ಳೇಗಾಲ ಶರ್ಮ.

ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಮಾಹಿತಿ ಮತ್ತು ಪ್ರಚಾರ ವಿಭಾಗದಲ್ಲಿ ಸಮನ್ವಯಕರಾಗಿ ಕೆಲಸ ಮಾಡುತ್ತಿರುವ ಶರ್ಮ ಅವರು ಮೂಲ ವಿಜ್ಞಾನ, ಕೌತುಕಗಳಿಗೆ ಸಂಬಂಧಿಸಿದ ಪ್ರಚಲಿತ ವಿದ್ಯಮಾನ, ಸಂಶೋಧನಾ ಪ್ರಬಂಧಗಳ ಸಾರವನ್ನು ಕನ್ನಡಕ್ಕೆ ಅನುವಾದಿಸುತ್ತಾರೆ. ಅದಕ್ಕೊಂದು ಸ್ಕ್ರಿಪ್ಟ್ ಸಿದ್ಧಪಡಿಸಿಕೊಂಡು ಆಡಿಯೊ ಮಾಡಿ ಜಾಣಸುದ್ದಿ ಹೆಸರಿನಲ್ಲಿ ಪ್ರತಿ ವಾರ ಧ್ವನಿ ಪತ್ರಿಕೆ (ಪಾಡ್‌ಕಾಸ್ಟ್) ಪ್ರಸಾರ ಮಾಡುತ್ತಿದ್ದಾರೆ. ಇಂಥ ವಿಶಿಷ್ಟ ಪ್ರಯೋಗ ಆರಂಭವಾಗಿ ಸೆಪ್ಟೆಂಬರ್ 2ಕ್ಕೆ ಒಂದು ವರ್ಷ. ಇಲ್ಲಿವರೆಗೂ 52 ಸಂಚಿಕೆಗಳನ್ನು ಪೂರೈಸಿದೆ. ಹೆಚ್ಚು ಖರ್ಚಿಲ್ಲದೇ ರೆಕಾರ್ಡ್ ಮಾಡಿದ ಆಡಿಯೊವನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಹಾಕುತ್ತಾರೆ. ಅಲ್ಲಿಂದ ಅದು ಸ್ನೇಹಿತರಿಗೂ ಫಾರ್ವರ್ಡ್ ಆಗುತ್ತದೆ. ಈ ಧ್ವನಿಪತ್ರಿಕೆಯು 8000ಕ್ಕೂ ಹೆಚ್ಚು ಜನರನ್ನು ತಲುಪುತ್ತಿದೆ !

‘ಜಾಣಸುದ್ದಿ’ಯನ್ನು ಯೂಟ್ಯೂಬ್, ಟ್ವಿಟರ್ ಹಾಗೂ ಸೌಂಡ್ ಕ್ಲೌಡ್‌ನಲ್ಲೂ ಆಲಿಸುವಂತೆ ಮಾಡಿದ್ದಾರೆ. 20 ರಿಂದ 25 ನಿಮಿಷದ ಆಡಿಯೊದಲ್ಲಿ ನಾಲ್ಕೈದು ವಿಷಯಗಳನ್ನು ತಿಳಿಸುತ್ತಾರೆ. ಆಯಾ ವಾರದ ಪ್ರಚಲಿತ ವಿಜ್ಞಾನ, ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನಾ ಪ್ರಬಂಧ ಹಾಗೂ ವಿಸ್ಮಯಗಳ ಕುರಿತು ಮಾಹಿತಿ ಕೊಡುತ್ತಾರೆ. ಒಂದಿಷ್ಟು ಸಣ್ಣ ಸುದ್ದಿಗಳು, ಆ ದಿನ ಹುಟ್ಟಿದ ವಿಜ್ಞಾನಿಗಳ ಮಾಹಿತಿ, ಕೇಳುಗರ ಪ್ರಶ್ನೆಗೆ ಉತ್ತರ... ಹೀಗೆ ಅನೇಕ ಕುತೂಹಲಕರ ಅಂಶಗಳಿರುತ್ತವೆ.

ಶರ್ಮಾ ಅವರು ಶಿಕ್ಷಕರನ್ನು ಉದ್ದೇಶವಾಗಿಟ್ಟುಕೊಂಡು ಮಾಡಿದ ಧ್ವನಿ ಪತ್ರಿಕೆಯಿದು. ಶಿಕ್ಷಕರ ಮೂಲಕ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಚಾರಗಳು ಸರಳ, ಸುಲಭವಾಗಿ ತಲುಪುವಂತಾಗಲಿ ಎಂಬುದು ಇವರ ಉದ್ದೇಶ. ಆದರೆ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಶಿಕ್ಷಕರಲ್ಲದೇ ವಿಜ್ಞಾನಿಗಳು, ಬರಹಗಾರರು, ಪೊಲೀಸರು, ಎಂಜಿನಿಯರ್‌ಗಳು, ವಿದ್ಯಾರ್ಥಿಗಳು ಹಾಗೂ ಗೃಹಿಣಿಯರೂ ಇದ್ದಾರಂತೆ. ವಾರದ ಜಾಣಸುದ್ದಿಯಲ್ಲಿ ಪ್ರಸಾರವಾದ ವಿಷಯಗಳ ಕುರಿತು ಗ್ರೂಪ್‌ನಲ್ಲಿ ಚರ್ಚೆಯೂ ನಡೆಯುತ್ತದೆ. ಬಹುಮಾಧ್ಯಮಗಳ ಮೂಲಕ ಮೂಲವಿಜ್ಞಾನವನ್ನು ತಲುಪಿಸಲು ಕಂಕಣಬದ್ಧರಾಗಿರುವ ಶರ್ಮ ಅವರ ಪ್ರಯತ್ನ ವಿಭಿನ್ನ ಹಾಗೂ ಅಪರೂಪದ್ದಾಗಿದೆ.

‘ಜಾಣಸುದ್ದಿ ಆರಂಭಿಸಲು ಅನೇಕ ಕಾರಣಗಳಿವೆ. ಪತ್ರಿಕೆ ಮೂಲ ವಿಜ್ಞಾನ ವಿಷಯಕ್ಕೆ ಪ್ರಯತ್ನಿಸಿದ್ದೆ. ಆದರೆ ಅದು ಎಲ್ಲ ಕಡೆ ತಲುಪುವುದು ಕಷ್ಟ ಎನ್ನಿಸಿತು. ಬಹುಮಾಧ್ಯಮಗಳ ಬಳಕೆಯೇ ಹೆಚ್ಚು ಜನರನ್ನು ತಲುಪಲು ಸಾಧ್ಯ ಎನ್ನಿಸಿತು. ಆಗ ನನಗೆ ಕಾಣಿಸಿದ ಮಾರ್ಗ ಧ್ವನಿಪತ್ರಿಕೆ’ ಎಂದು ಹೇಳುತ್ತಾರೆ ಶರ್ಮ.

‘ಇದು ಪ್ರತಿ ಭಾನುವಾರ ಪ್ರಸಾರವಾಗುತ್ತದೆ. ಅದಕ್ಕಾಗಿ ‘ಕರೆಂಟ್ ಸೈನ್ಸ್’, ‘ನೇಚರ್’, ‘ಸೈಂಟಿಫಿಕ್ ರಿಪೋರ್ಟ್’ ಸೇರಿದಂತೆ 100ಕ್ಕೂ ಹೆಚ್ಚು ಪತ್ರಿಕೆಗಳನ್ನು ಅಧ್ಯಯನ ಮಾಡುತ್ತೇನೆ. ಯಾವುದು ಸೂಕ್ತ ಎಂಬುದನ್ನು ಆಯ್ಕೆ ಮಾಡಿಕೊಂಡು ಸ್ಕ್ರಿಪ್ಟ್ ಸಿದ್ಧಪಡಿಸಿಕೊಳ್ಳುತ್ತೇನೆ. ಆ ವಾರದ ಪ್ರಚಲಿತ ವಿಜ್ಞಾನ ವಿಷಯಗಳಿಗೆ ಆದ್ಯತೆ. ವಿಜ್ಞಾನಿಗಳು ಪ್ರಕಟಿಸಿದ ಮೊದಲ ಸಂಶೋಧನಾ ವರದಿಯನ್ನು ಬಳಸುತ್ತೇನೆ’ ಎಂದು ಹೇಳುವ ಶರ್ಮ ಅವರು, ‘ಗ್ರೂಪ್‌ನಲ್ಲಿ ಇರುವವರಿಗೂ ಬರೆಯಲು ಅವಕಾಶವಿದೆ. ಹಾಗೆಯೇ ಧ್ವನಿಯನ್ನೂ ಕೊಡಬಹುದು’ ಎಂದು ವಿಜ್ಞಾನ ಆಸಕ್ತರು ಭಾಗವಹಿಸಲು ಇರುವ ಮಾರ್ಗಗಳನ್ನು ಅವರು ತೆರೆದಿಡುತ್ತಾರೆ.

‘ವಾಟ್ಸ್‌ಆ್ಯಪ್‌ ಗ್ರೂಪ್‌ ಸದಸ್ಯರು 200 ಮಂದಿ ಇದ್ದಾರೆ. ಅವರಿಗೆ ಆಡಿಯೊ ತುಣುಕನ್ನು ಕಳುಹಿಸುತ್ತೇನೆ. ಯೂಟ್ಯೂಬ್‌ನಲ್ಲೂ ಕೇಳಬಹುದು. ಎಚ್.ಡಿ.ಕೋಟೆ ಸಮುದಾಯ ರೇಡಿಯೊದಲ್ಲೂ ಪ್ರತಿ ಭಾನುವಾರ ಈ ಸಂಚಿಕೆ ಪ್ರಸಾರ ಮಾಡುತ್ತಾರೆ. ಡೆವಲಪ್‌ಸ್ಕೂಲ್ಸ್‌ಡಾಟ್ಆರ್ಗ್‌ (developschools.org) ಎಂಬ ವೆಬ್‌ಸೈಟ್‌ನವರೂ ಪ್ರಸಾರ ಮಾಡುತ್ತಾರೆ. ಹೆಚ್ಚು ಬಂಡವಾಳವಿಲ್ಲದೇ ಜನರಿಗೆ ತಲುಪಿಸುವ ಕೆಲಸವಾಗುತ್ತಿದೆ’ ಎಂದು ಶರ್ಮ ಹರ್ಷ ವ್ಯಕ್ತಪಡಿಸುತ್ತಾರೆ.

‘ಜಾಣಸುದ್ದಿಯ’ ಸುಮಾರು 25 ಸಂಚಿಕೆಗಳನ್ನು ಕೇಳಿದ್ದೇನೆ. ಇದರ ಮೂಲಕ ಮಾತೃಭಾಷೆಯಲ್ಲಿ ವಿಜ್ಞಾನ ವಿಷಯವನ್ನು ಸರಳವಾಗಿ ತಿಳಿಯುತ್ತಿದ್ದೇನೆ. ಇದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ. ನನ್ನ ಪದವಿ ವಿದ್ಯಾಭ್ಯಾಸಕ್ಕೂ ನೆರವಾಗಿದೆ’ ಎಂದು ಅಭಿಪ್ರಾಯಪಡುತ್ತಾರೆ ಮೈಸೂರಿನ ಬಿಎಸ್‌ಸಿ ವಿದ್ಯಾರ್ಥಿನಿ ಜೆ. ಧನುಜಾ.

‘ವಿಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ನಿತ್ಯದ ಬೆಳವಣಿಗೆಗಳನ್ನು ಜಾಣಸುದ್ದಿಯ ಮೂಲಕ ಅರಿಯುತ್ತಿದ್ದೇನೆ. ಇದರಿಂದ ನನ್ನೊಳಗಿನ ವಿಜ್ಞಾನದ ಜ್ಞಾನಮಟ್ಟವೂ ಹೆಚ್ಚಾಗಿದೆ. ಅಲ್ಲದೇ ಬಹಳಷ್ಟು ವಿಜ್ಞಾನಿಗಳ ಪರಿಚಯವಾಗಿದೆ’ ಎಂಬುದು ನಂಜನಗೂಡಿನ ಪಿಯು ವಿದ್ಯಾರ್ಥಿನಿ ಶುಭಾಶ್ರೀ ಅಭಿಪ್ರಾಯ.

ವಿದ್ಯಾರ್ಥಿಗಳಿಗಷ್ಟೇ ಅಲ್ಲದೇ, ವಿಜ್ಞಾನ ಸಂಸ್ಥೆಗಳಲ್ಲಿ ಕೆಲಸ ಮಾಡುವವರನ್ನೂ ಈ ಮಾಹಿತಿ ಹಂಚಿಕೆ ಪ್ರಕ್ರಿಯೆ ಆಕರ್ಷಿಸಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನಾಗಭೂಷಣ್, ‘ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾದ ಅಧ್ಯಯನ ವರದಿಗಳನ್ನು ಕನ್ನಡಕ್ಕೆ ತಂದು ಈ ಧ್ವನಿ ಮೂಲಕ ವಿಜ್ಞಾನ ಶ್ರೋತೃಗಳಿಗೆ ಕೇಳಿಸುತ್ತಿರುವುದು ಬಹಳ ಮೌಲ್ಯಯತವಾದ ಕೆಲಸ’ ಎನ್ನುತ್ತಾರೆ.

ಜಾಣಸುದ್ದಿ ಆಲಿಸಿದ ಬಹಳಷ್ಟು ಮಂದಿ ಇದರ ಲಾಭ ಪಡೆಯಲು ಮುಂದೆ ಬಂದಿದ್ದಾರಂತೆ. ಶರ್ಮ ಅವರ ಪ್ರಯೋಗವನ್ನು ಮೆಚ್ಚಿ, ತಮಗೂ ಹೇಳಿಕೊಡಿ ಎಂದು ದುಂಬಾಲು ಬಿದ್ದಿರುವುದಕ್ಕೆ ಖುಷಿ ಪಡುತ್ತಾರೆ. ಪ್ರತಿ ವಾರದ ಸಂಚಿಕೆಯ ವಿಶೇಷದ ಬಗ್ಗೆ ಫೋನ್‌ ಮಾಡಿ ಕೇಳುವವರೂ ಇದ್ದಾರೆ. ವಾಟ್ಸ್‌ಆ್ಯಪ್‌ ಮೂಲಕ ಹಲವು ಮಂದಿ ಪ್ರತಿಕ್ರಿಯಿಸುತ್ತಿದ್ದಾರೆ.

ಇದರಿಂದ ಉತ್ತೇಜನಗೊಂಡಿರುವ ಶರ್ಮ, ಮುಂದಿನ ದಿನಗಳಲ್ಲಿ ಜಾಣಸುದ್ದಿಯನ್ನು ಒಂದಷ್ಟು ಬದಲಾವಣೆಯೊಂದಿಗೆ ಹೊರತರಲು ಯೋಜನೆ ರೂಪಿಸಿಕೊಂಡಿದ್ದಾರೆ. ಕೇಳುಗರಿಗೆ ಏಕತಾನತೆ ಹೋಗಲಾಡಿಸಲು ಪರಿಣತರೊಂದಿಗಿನ ಚರ್ಚೆ, ಚಾರ್ಲ್ಸ್ ಡಾರ್ವಿನ್ ಅವರ ದಿನಚರಿ ಬೀಗಲ್‌ಯಾನ ಪ್ರಸಾರ ಮಾಡುವ ಚಿಂತನೆಯಲ್ಲಿದ್ದಾರೆ.

ಸಮಯವೇ ಬಂಡವಾಳ, ಮನೆಯೇ ಸ್ಟುಡಿಯೊ

ಪ್ರತಿ ವಾರ ಆಡಿಯೊ ಪತ್ರಿಕೆ ಹೊರತರಲು ಸ್ಟುಡಿಯೊ ಅವಲಂಬಿಸಿಲ್ಲ. ಮನೆಯಲ್ಲಿಯೇ ಒಂದು ಲ್ಯಾಪ್‌ಟಾಪ್, ಮೈಕ್ರೊ ಹೆಡ್‌ಸೆಟ್ ಹಾಗೂ ಅಡಾಸಿಟಿ ಸಾಫ್ಟ್‌ವೇರ್ ಬಳಸಿಕೊಂಡು ಪತ್ರಿಕೆಯನ್ನು ಸಿದ್ಧಪಡಿಸುತ್ತಾರೆ.

ಮೊದಲು ಸ್ಕ್ರಿಪ್ಟ್, ನಂತರ ಮನೆಯಲ್ಲೇ ವಾಯ್ಸ್ ರೆಕಾರ್ಡ್ ಮಾಡುತ್ತಾರೆ. ದಾಖಲಾದ ಆಡಿಯೊವನ್ನು 20 ರಿಂದ 25 ನಿಮಿಷಕ್ಕೆ ಎಡಿಟ್ ಮಾಡಿ ಅಂತಿಮ ರೂಪಕ್ಕೆ ತರುತ್ತಾರೆ. ‘ಹೆಚ್ಚು ಖರ್ಚಿಲ್ಲದೇ ಆಡಿಯೊ ಬುಕ್ಸ್‌ಗಳನ್ನು ಮಾಡಿ ಶಾಲೆಗಳಲ್ಲಿ ಪಾಠ ಮಾಡಬಹುದು’ ಎಂಬುದನ್ನು ಈ ಪ್ರಯೋಗದ ಮೂಲಕ ತೋರಿಸಿಕೊಟ್ಟಿದ್ದೇನೆ. ಇದಕ್ಕೆ ನನ್ನ ಸಮಯವಷ್ಟೇ ವ್ಯರ್ಥವಾಗೋದು, ಇದನ್ನು ಸರ್ಕಾರಿ ಶಾಲೆಗಳಲ್ಲೂ ಬಳಕೆ ಮಾಡಿಕೊಂಡರೆ ಪರಿಣಾಮಕಾರಿ ಬೋಧನಾ ವಿಧಾನವನ್ನು ಅಳವಡಿಸಿಕೊಂಡಂತಾಗುತ್ತದೆ ಎನ್ನುತ್ತಾರೆ ಶರ್ಮ. ವಿಜ್ಞಾನ ವಿಷಯವಲ್ಲದೆ ಇಂಗ್ಲಿಷ್, ಸಮಾಜಶಾಸ್ತ್ರವನ್ನೂ ಆಡಿಯೊ ಬುಕ್ಸ್ ಮೂಲಕ ಹೇಳಿಕೊಡಬಹುದು ಎಂದು ಸಲಹೆ ನೀಡುತ್ತಾರೆ ಅವರು. ‘ಜಾಣಸುದ್ದಿ ಆಡಿಯೊ ಬುಕ್’ ಕುರಿತ ಹೆಚ್ಚಿನ ಮಾಹಿತಿಗಾಗಿ ಶರ್ಮ ಅವರ ಸಂಪರ್ಕ ಸಂಖ್ಯೆ : 98866 40328

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT