ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಂತ್ರಜ್ಞಾನ: ಗೂಗಲ್ ಸರ್ಚ್‌ಗೆ ಈಗ ಹೆಚ್ಚಿನ 'ಬುದ್ಧಿಮತ್ತೆ'

ಸರ್ಚ್ ಎಂಜಿನ್ ದಿಗ್ಗಜ ಗೂಗಲ್ ಕೂಡ, ಜನರೇಟಿವ್ ಎಐ ತಂತ್ರಜ್ಞಾನವನ್ನು ನಮ್ಮ ಕೈಗೆ ಸುಲಭವಾಗಿ ನೀಡುತ್ತಿದೆ. ಅದು ಹೇಗೆ?
Published : 28 ಆಗಸ್ಟ್ 2024, 0:28 IST
Last Updated : 28 ಆಗಸ್ಟ್ 2024, 0:28 IST
ಫಾಲೋ ಮಾಡಿ
Comments

ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ - ಎಐ)ಯನ್ನು ಈಗಾಗಲೇ ಬಹುತೇಕ ದೈನಂದಿನ ಕೆಲಸ–ಕಾರ್ಯಗಳಲ್ಲಿ ತಿಳಿದೋ ತಿಳಿಯದೆಯೋ ನಾವೆಲ್ಲರೂ ಬಳಸಲಾರಂಭಿಸಿದ್ದೇವೆ. ಫೋಟೊಗಳನ್ನು ತಿದ್ದುಪಡಿ ಮಾಡುವುದರಿಂದ ಹಿಡಿದು, ಮೊಬೈಲ್ ಫೋನ್‌ಗಳಿಗೆ (ಸಿರಿ, ಗೂಗಲ್ ಅಸಿಸ್ಟೆಂಟ್ ಮುಂತಾದ ಸಹಾಯಕ ತಂತ್ರಾಂಶಗಳ ಮೂಲಕ) ಆದೇಶಗಳನ್ನು ನೀಡಿ ನಮ್ಮ ಕೆಲಸ ಸಾಧಿಸಿಕೊಳ್ಳುವವರೆಗೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್ ಸಾಧನಗಳಲ್ಲಿ ‘ಎಐ’ ಬಳಕೆಯಾಗುತ್ತಿದೆ. ಚಾಟ್‌ಜಿಪಿಟಿಯಂತಹ ಜನರೇಟಿವ್ ಎಐ ತಂತ್ರಜ್ಞಾನಗಳು ಕೂಡ ನಿಧಾನವಾಗಿ ನಮ್ಮ ದೈನಂದಿನ ಬದುಕಿನ ಭಾಗವಾಗುತ್ತಿದೆ. ಈ ಬೆಳವಣಿಗೆಗೆ ಪೂರಕವಾಗಿ ಸರ್ಚ್ ಎಂಜಿನ್ ದಿಗ್ಗಜ ಗೂಗಲ್ ಕೂಡ, ಜನರೇಟಿವ್ ಎಐ ತಂತ್ರಜ್ಞಾನವನ್ನು ನಮ್ಮ ಕೈಗೆ ಸುಲಭವಾಗಿ ನೀಡುತ್ತಿದೆ. ಅದು ಹೇಗೆ?

‘ಗೂಗಲ್’ ಎಂಬ ಸರ್ಚ್ ಎಂಜಿನ್ ಮೂಲಕ ಅಂತರ್ಜಾಲದಲ್ಲಿ ಯಾವುದನ್ನೇ ಹುಡುಕಾಡಿದರೂ ನಮಗೆ ದೊರೆಯುವ ಫಲಿತಾಂಶದಲ್ಲಿ ಕೆಲವು ದಿನಗಳಿಂದೀಚೆಗೆ ಸಣ್ಣ ಬದಲಾವಣೆಯಾಗಿರುವುದನ್ನು ಬಹುತೇಕರು ಗಮನಿಸಿದ್ದಿರಬಹುದು. ಅಲ್ಲೊಂದು ಲೇಬಲ್ ಕಾಣಿಸುತ್ತದೆ. ಅದರಲ್ಲಿ ‘Search Labs | AI Overview’ ಎಂದು ಬರೆದಿರುತ್ತದೆ. ಇಲ್ಲಿ ದೊರೆಯುವ ಮಾಹಿತಿಯು ಹೆಚ್ಚು ವ್ಯವಸ್ಥಿತವಾಗಿರುತ್ತದೆ ಎಂಬುದೇ ಈ ಹೊಸ ವೈಶಿಷ್ಟ್ಯದ ಹೆಗ್ಗಳಿಕೆ. ಅಮೆರಿಕದಲ್ಲಷ್ಟೇ ದೊರೆಯುತ್ತಿದ್ದ ಈ ವೈಶಿಷ್ಟ್ಯವನ್ನು ಗೂಗಲ್ ಇತ್ತೀಚೆಗಷ್ಟೇ ಭಾರತ ಸಹಿತ ಆರು ದೇಶಗಳ ಬಳಕೆದಾರರಿಗೂ ಪರಿಚಯಿಸಿದೆ.

ಏನಿದು ಎಐ ಓವರ್‌ವ್ಯೂ?
ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಿ ಹುಡುಕಾಟದ ಫಲಿತಾಂಶಗಳ ಹೆಚ್ಚು ನಿಖರವಾದ ಸಾರಾಂಶವನ್ನು ಒದಗಿಸುವ ವೈಶಿಷ್ಟ್ಯವೇ ‘ಗೂಗಲ್ ಎಐ ಓವರ್‌ವ್ಯೂ’. ಇದು ಗೂಗಲ್ ಸರ್ಚ್ ಲ್ಯಾಬ್ಸ್ ಕೊಡುಗೆ.

ಈ ಸೌಲಭ್ಯವನ್ನು ಪಡೆಯಲು ಇರುವ ಮೊದಲ ಮಾನದಂಡ ಎಂದರೆ, ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿ ನಾವು ನಮ್ಮ ಗೂಗಲ್ ಇಮೇಲ್ (ಜಿಮೇಲ್) ಖಾತೆಯಿಂದ ಲಾಗಿನ್ ಆಗಿರಬೇಕಾಗುತ್ತದೆ. ಬಳಿಕ ನಮಗೆ ಬೇಕಾದ ವಿಷಯದ ಕುರಿತಾದ ಒಂದು ವಾಕ್ಯವನ್ನು ಸರ್ಚ್ ಎಂಜಿನ್ ಬಾಕ್ಸ್‌ನಲ್ಲಿ ಟೈಪ್ ಮಾಡಿ ಎಂಟರ್ ಒತ್ತಿದರೆ, ಯಾವುದೇ ಸಂಕೀರ್ಣ ವಿಚಾರದ ಮಾಹಿತಿಯೂ ವ್ಯವಸ್ಥಿತವಾಗಿ, ಮಾಹಿತಿಪೂರ್ಣವಾಗಿ ಮತ್ತು ಹೆಚ್ಚು ನಿಖರವಾಗಿ ಸಾರಾಂಶ ರೂಪದಲ್ಲಿ ಗೋಚರಿಸುತ್ತದೆ. ಇದು ಹುಡುಕಾಟದ ಫಲಿತಾಂಶ ಪುಟದ ಮೇಲ್ಭಾಗದಲ್ಲೇ ಕಾಣಿಸುತ್ತದೆ. ಹಿಂದಿಭಾಷೆಯಲ್ಲೂ ಲಭ್ಯವಿದ್ದು, ಅಲ್ಲೇ ಈ ಫಲಿತಾಂಶದ ಮಾಹಿತಿಯನ್ನು ಕೇಳಿಸಿಕೊಳ್ಳುವ (ಧ್ವನಿ) ಆಯ್ಕೆಯೂ (ಬಟನ್ ಮೂಲಕ) ದೊರೆಯುತ್ತದೆ.

ಇಲ್ಲಿನ ವಿಶೇಷತೆ ಎಂದರೆ, ಅಲ್ಲಿ ಕಾಣಿಸಲಾದ ಫಲಿತಾಂಶವನ್ನು ಜಗತ್ತಿನ ಯಾವೆಲ್ಲ ಜಾಲತಾಣಗಳಿಂದ ಪಡೆದುಕೊಳ್ಳಲಾಗಿದೆ ಎಂದು ಖಚಿತಪಡಿಸುವ ಲಿಂಕ್‌ಗಳೂ ಇರುತ್ತವೆ. ಹೆಚ್ಚಿನ ಮಾಹಿತಿ ಬೇಕಿದ್ದರೆ ಆಯಾ ಲಿಂಕ್‌ಗೆ ಕ್ಲಿಕ್ ಮಾಡಿ ಓದಬಹುದು. ಅಲ್ಲದೆ, ನಮಗೆ ದೊರೆಯುವ ಹುಡುಕಾಟದ ಫಲಿತಾಂಶದ ಮೂಲವು ವಿಶ್ವಾಸಾರ್ಹವೇ ಎಂಬುದನ್ನು ತಿಳಿದುಕೊಳ್ಳುವುದಕ್ಕೂ ಇದು ಅನುಕೂಲ ಒದಗಿಸುತ್ತದೆ.

ಇದು ಈಗಾಗಲೇ ನಮಗೆ ತಿಳಿದಿರುವ ಜೆಮಿನಿ, ಕೋಪೈಲಟ್, ಚಾಟ್‌ಜಿಪಿಟಿ ಮುಂತಾದ ಬ್ರ್ಯಾಂಡ್ ಹೆಸರಲ್ಲಿ ಬಳಕೆಯಾಗುತ್ತಿರುವ ಜನರೇಟಿವ್ ಎಐ ತಂತ್ರಜ್ಞಾನದ ಫಲ. ಅಲ್ಲಿ ದಾಖಲಿಸುವ ಪಠ್ಯರೂಪದ ಪ್ರಾಂಪ್ಟ್(ಪ್ರಶ್ನೆ)ಗಳನ್ನೇ ಸರ್ಚ್ ಬಾಕ್ಸ್‌ನಲ್ಲಿ ಹಾಕಿದರೆ ದೊರೆಯುವ ಮೊದಲ ಫಲಿತಾಂಶವು ನಮಗೆ ಸಮಗ್ರವಾದ ಮಾಹಿತಿಯನ್ನು ಒದಗಿಸುತ್ತದೆ.

‘ಎಐ ಓವರ್‌ವ್ಯೂ’ ಹೆಸರಿನಲ್ಲಿ ಕಾಣಿಸಿಕೊಳ್ಳುವ ಸಾರಾಂಶದಿಂದ ನಮಗೆ ಒಂದು ಪ್ರಯೋಜನ ಎಂದರೆ, ಒಂದು ವಿಷಯದ ಕುರಿತು ಮಾಹಿತಿ ಪಡೆಯಲು ನಾವು ಹಲವಾರು ಜಾಲತಾಣಗಳನ್ನು ಜಾಲಾಡಬೇಕಾಗಿಲ್ಲ. ಆ ಕೆಲಸವನ್ನು ಗೂಗಲ್ ಸರ್ಚ್ ಎಂಜಿನ್ ತನ್ನ ಎಐ ವೈಶಿಷ್ಟ್ಯಕ್ಕೆ (ಜೆಮಿನಿ ಪ್ರೊ) ಒಪ್ಪಿಸಿಬಿಟ್ಟಿರುತ್ತದೆ. ತತ್ಫಲವಾಗಿ ಸಾರಾಂಶರೂಪದ ಫಲಿತಾಂಶ ನಮ್ಮ ಮುಂದಿರುತ್ತದೆ. ಈ ಮಾಹಿತಿಯು ವೇಗವಾಗಿಯೂ ಸುಲಭವಾಗಿಯೂ ದೊರೆಯುತ್ತಿದೆ. ಇದು ಸಂಶೋಧನೆ ಮಾಡುವವರ ಕೆಲಸವನ್ನು ಇನ್ನಷ್ಟು ಸುಲಭವಾಗಿಸಿದೆ. ಹುಡುಕಾಟದ ಪುಟದಲ್ಲೇ ಸಾರಾಂಶವೂ ದೊರೆಯುವಂತಾಗುವುದರಿಂದ, ಮತ್ತಷ್ಟು ಹುಡುಕಾಟದ ಶ್ರಮ ತಪ್ಪುತ್ತದೆ.

ಇಷ್ಟಲ್ಲದೆ, ಹಲವು ಪ್ರಶ್ನೆಗಳನ್ನು ಸೇರಿಸಲಾದ ಸಂಕೀರ್ಣವಾಕ್ಯದ ಪ್ರಶ್ನೆಗೂ ಇಲ್ಲಿ ಪರಿಹಾರವು ಕ್ಷಿಪ್ರವಾಗಿ ದೊರೆಯುತ್ತದೆ. ವಿಶೇಷವಾಗಿ ಚಾಟ್‌ಜಿಪಿಟಿ ಅಥವಾ ಜೆಮಿನಿ ಮುಂತಾದ ಜನರೇಟಿವ್ ಎಐ ಅಪ್ಲಿಕೇಶನ್‌ಗಳಿಗೆ ಕೇಳುವ ವಾಕ್ಯಗಳನ್ನೇ (ಪ್ರಾಂಪ್ಟ್) ಇಲ್ಲೂ ಕೇಳಿ, ಪರಿಹಾರ ಪಡೆಯಬಹುದು.

ಎಐ ಸೃಜಿಸುವ ಸಾರಾಂಶ ಒದಗಿಸುವ ವೈಶಿಷ್ಟ್ಯದ ಸೇರ್ಪಡೆಯೊಂದಿಗೆ, ಪಾರಸ್ಪರಿಕ ಸಂವಾದಕ್ಕೆ ಅವಕಾಶ ನೀಡಿರುವ ಗೂಗಲ್ ತನ್ನ ಹುಡುಕಾಟ (ಸರ್ಚ್) ವ್ಯವಸ್ಥೆಗೆ ಆಧುನಿಕತೆಯ ಸ್ಪರ್ಶ ನೀಡಿದೆ. ಬಳಸಿ, ಪ್ರಯೋಜನ ಪಡೆದುಕೊಳ್ಳಿ.

ಗೂಗಲ್ ಸರ್ಚ್ ಮಾಡಿದಾಗ ಕಂಡುಬರುವ AI Overview ಲೇಬಲ್
ಗೂಗಲ್ ಸರ್ಚ್ ಮಾಡಿದಾಗ ಕಂಡುಬರುವ AI Overview ಲೇಬಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT