ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್‌ ಹಂಸೆಯೂ ಆಧುನಿಕ ನಳಮಹಾರಾಜನೂ

Last Updated 23 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಪೂರ್ವಕಾಲದಲ್ಲಿ ನಳಮಹಾರಾಜ ತನ್ನ ಪ್ರೇಯಸಿಯಾದ ದಮಯಂತಿಗೆ ಹಂಸದ ಮೂಲಕ ಪ್ರೇಮಸಂದೇಶ ಕಳಿಸಿದ್ದನಂತೆ. ಅದು ಮಾತಾಡುವ ಹಂಸ. ನಳನ ಮನದ ಭಾವನೆಗಳನ್ನು ತಕ್ಕ ರೀತಿಯಲ್ಲಿ (ಅಂದರೆ ಸ್ವಲ್ಪ ಮಸಾಲೆ ಸೇರಿಸಿ) ದಮಯಂತಿಗೆ ಅರಿಕೆ ಮಾಡಿತು. ಮತ್ತೆ ಅಲ್ಲಿಂದಿಲ್ಲಿಗೆ ಸಂದೇಶ ತಂದಿತು, ಪ್ರೇಮ ಮೊಳೆಯಿತು, ಬೆಳೆಯಿತು, ಫಲಿಸಿತು - ಮುಂದಿನದು ಬಿಡಿ ಸದ್ಯಕ್ಕೆ.

ಇರಲಿ, ಈಗಿನ ಟೆಕ್ ಯುಗಕ್ಕೆ ಹಂಸಸಂದೇಶದ ಕಥೆ ಪೂರ್ವಕಾಲದ್ದಲ್ಲ, ಪೂರ್ವಜನ್ಮದ್ದೇ ಆಯಿತು. ಹಂಸೆಯ ಕನ್ನಡರೂಪವೇ ಈಗಿನ ‘ಅಂಚೆ’. ಅಂಚೆ (ಪೋಸ್ಟ್) ಯಾರಿಗೆ ಗೊತ್ತಿಲ್ಲ. ಅಂಚೆಯಣ್ಣ ಈಗಲೂ ಬರುತ್ತಾನೆ, ಆದರೆ ಆತ ಅಂಚೆಯಣ್ಣನಾಗಿ ಉಳಿದಿಲ್ಲ, ಕೇವಲ ಪೋಸ್ಟ್ ಮ್ಯಾನ್ ಆಗಿದ್ದಾನೆ. ಆತ ತರುವ ಪತ್ರಗಳಲ್ಲಿ ಪ್ರೀತಿಪಾತ್ರರ ಪತ್ರಗಳು, ಪ್ರೇಮಪತ್ರಗಳಂತೂ ಇಲ್ಲವೇ ಇಲ್ಲವೆನ್ನಬಹುದೇನೋ - ಬರುವುದೆಲ್ಲ ಬಹುತೇಕ ಸರ್ಕಾರೀ ಸಂದೇಶಗಳು, ಕೋರ್ಟು ತಗಾದೆ ಪತ್ರಗಳು, ಕೆಲವು ಮ್ಯಾಗಜೀನು/ಜರ್ನಲುಗಳು.

ನಾವು ಕಳೆದ ದಶಕಗಳಂತೆ ಈಗ ಅಂಚೆಯಣ್ಣನಿಗಾಗಿ ಕಾಯುವುದಿಲ್ಲ. ಆ ಪತ್ರ ಬರೆಯುವ ಸಂಭ್ರಮ, ಬರೆದ ಮೇಲೆ ಕೊಂಡೊಯ್ದು ‘ಸರಿಯಾದ’ ಅಂಚೆ ಡಬ್ಬದಲ್ಲಿ ಹಾಕುವುದು. ಅಲ್ಲಿಂದ ಬರುವ ಉತ್ತರಕ್ಕಾಗಿ ಕಾಯುವುದು. - ಇವೆಲ್ಲ ಒಂದು ಅನುಭವವೇ. ಪತ್ರದ ಒಂದೊಂದು ಅಂಶವೂ - ಬರೆಯುವುದಕ್ಕೆ ಬಳಸಿದ ಹಾಳೆ, ಅದರ ಬಣ್ಣ, ಇಂಕು, ಹಸ್ತಾಕ್ಷರ, ಲಕೋಟೆ, ಕೆಲವೊಮ್ಮೆ ಅದಕ್ಕೆ ಸವರಿದ ಸುಗಂಧ (ಅಪರೂಪಕ್ಕೆ, ತುಟಿಯ ಮುದ್ರೆ) ಇವೆಲ್ಲ ಪತ್ರ ಬರೆದವರನ್ನೇ ಕಣ್ಣ ಮುಂದೆ ತರುತ್ತಿದ್ದುವು - ಅಯ್ಯೋ ಹೋಯಿತೆ ಆ ನಾಕ ಎಂದು ಉದ್ಗರಿಸುವ ಅಗತ್ಯವಿಲ್ಲ ಬಿಡಿ, ಕೊನೆಯ ಪಕ್ಷ ಆ ಕಾಯುವ ‘ಥ್ರಿಲ್’ ಆದರೂ ಈಗೇನು ಕಡಿಮೆಯಾಗಿಲ್ಲ, ಕಾಯುವ ಅವಧಿ ಮೊಟಕಾಗಿದೆಯಷ್ಟೇ.

ನೀವು ವಾಟ್ಸ್‌ಆ್ಯಪ್‌ ಮೆಸೇಜ್ ಕಳುಹಿಸಿದ್ದೀರಿ (ಕಾಗದಗಳ ಜಾಗೆಯನ್ನು ಈಮೈಲುಗಳು ಆಕ್ರಮಿಸಿಕೊಂಡು, ಅವೂ ಮೂಲೆಗೆ ಸರಿದು, ಎಸ್ಸೆಮ್ಮೆಸ್ ಆಯಿತು, ಹ್ಯಾಂಗೌಟ್ ಆಯಿತು, ಈಗ ವಾಟ್ಸ್‌ಆ್ಯಪ್‌). ನಿಮ್ಮ ಮೆಸೇಜ್ ಎರಡು ಗ್ರೇ ಟಿಕ್ ತೋರಿಸುತ್ತಿದೆ. ಇನ್ನೂ ಓದಿಲ್ಲ. ಈಗ ಓದಬಹುದು, ಇನ್ನೆರಡು ನಿಮಿಷಕ್ಕೆ - ಸರಿ ನಿಮಿಷ ಹತ್ತಾಯಿತು, ಇಪ್ಪತ್ತಾಯಿತು, ಒಂದು ಗಂಟೆಯಾಯಿತು - ಅರೇ! ಆನ್‌ಲೈನ್‌ ಇದ್ದಾಳ/ನಲ್ಲ ಆದರೂ ಏಕೆ ಓದಿಲ್ಲ. ಓದಿದರೆ ಗ್ರೀನ್ ಟಿಕ್ ಬೀಳುತ್ತೆ ಅಂತ ಗೊತ್ತು, ಅದಕ್ಕೇ ಓದಿಲ್ಲ. ಆತಂಕ ಬೇಡ. ನೀವು ಬಹಳ ಪ್ರೀತಿಪಾತ್ರರಿದ್ದು, ನಿಮ್ಮ ಸಂದೇಶವನ್ನು ನಿಧಾನವಾಗಿ ಓದಿ ಸವಿದು ವಿರಾಮದಲ್ಲಿ ಉತ್ತರಿಸುವ ಉದ್ದೇಶ ಅವರಿಗಿರಬಹುದು, ಸುಮ್ಮನೇ ಏಕೆ ಕೆಟ್ಟದ್ದನ್ನೇ ಯೋಚಿಸುತ್ತೀರಿ? ಅಗೋ ಅಗೋ, ಗ್ರೀನ್ ಟಿಕ್ ಬಿತ್ತು. ಓದಿದ್ದಾಳೆ/ನೆ. ಇನ್ನು ಉತ್ತರಕ್ಕಾಗಿ ಕಾಯುವ ಪರ್ವ - ಆಗ ಬಂದೀತು ಈಗ ಬಂದೀತು. ಒಂದು ಯುಗದನಂತರ (ಯುಗ ಎಂದರೆ ಸುಮಾರು ಹತ್ತು ನಿಮಿಷ) ‘ಟೈಪಿಂಗ್...’ ಎಂದು ತೋರಿಸಿತೆನ್ನಿ. ಉದ್ವೇಗ ರುಮ್ಮನೆ ಮೇಲೇರತೊಡಗುತ್ತದೆ. ಈ ‘ಟೈಪಿಂಗ್...’ ನಿಧಾನವಾದಷ್ಟೂ ಉದ್ವೇಗ ಹೆಚ್ಚು. ಸುಮಾರು ‘ಯುಗ’ಗಳ ಕಾಲ ಕಾದ ಮೇಲೆ ಕೊನೆಗೂ ಸಂದೇಶ ಬಂದೇ ಬಿಟ್ಟಿತೆನ್ನಿ. ಅದು ‘Hmm’ ಎಂಬ ಮೂರಕ್ಷರದ ಉತ್ತರವಾಗಿದ್ದರಂತೂ ದೇವರೇ ಗತಿ.

ಅಂದಹಾಗೆ ಇನ್ನೊಂದು ಮಾತು - ಆ ಹಂಸಕ್ಕೆ ನಿಮ್ಮ ಸಂದೇಶದ ಹೂರಣದಲ್ಲಿ ಆಸಕ್ತಿಯಿರಲಿಲ್ಲ. ನಮ್ಮ ಅಂಚೆಯಣ್ಣನೂ ಈ ವಿಷಯದಲ್ಲಿ ಬಹುತೇಕ ನಿರಾಸಕ್ತ. ‘ಓಲೆಯ ಕೊಡುವಧಿಕಾರಿಯು ನಾನು, ಆದರು ಅದರಲಿ ಬರೆದುದು ಏನು ಎಂಬುದನರಿಯೆನು ಬಲು ಸುಖಿ ನಾನು’ ಎಂದು ಹಾಡುವ ಅಂಚೆಯಣ್ಣನ ಪರಿಚಯ ಎಂಬತ್ತರ ದಶಕದಲ್ಲಿ ಶಾಲೆ ಕಲಿತವರಿಗೆ ಇದ್ದೇ ಇರಬೇಕು. ಆದರೆ ಈ ವಾಟ್ಸ್‌ ಆ್ಯಪ್ ಹಂಸೆ ಈ ವಿಷಯದಲ್ಲಿ ಅಷ್ಟು ನಿಸ್ಪೃಹವಲ್ಲ (ಬೆಳ್ಳಗಿರುವುದೆಲ್ಲ ಹಾಲೂ ಅಲ್ಲ ಹಂಸೆಯೂ ಅಲ್ಲ, ನೆನಪಿರಲಿ). ನೀವು ಯಾರ ಹತ್ತಿರ ಏನು ಹರಟುತ್ತಿದ್ದೀರಿ, ನಿಮ್ಮ ಆಸಕ್ತಿಗಳೇನು, ಎಲ್ಲಿ ಏನು ಕೊಳ್ಳಲು ಏನು ತಿನ್ನಲು ಪ್ಲಾನ್ ಮಾಡುತ್ತಿದ್ದೀರಿ ಎಲ್ಲವೂ ಈ ಹಂಸಕ್ಕೆ ಬೇಕು. ಆ ಮಾಹಿತಿಯನ್ನು ಜಾಹೀರಾತುದಾರರು ಬಳಸಿಕೊಳ್ಳುತ್ತಾರೋ ಕಳ್ಳರು ಬಳಸುತ್ತಾರೋ ಹೇಳಬರುವಂತಿಲ್ಲ. ಕೆಲವು ವಿ(ಶೇ)ಷ ಸಂದರ್ಭಗಳಲ್ಲಿ ಹಂಸವೇ ಕಾರ್ಕೋಟಕವಾಗಬಹುದು - ಅಚ್ಚರಿ ಬೇಡ, ಎಚ್ಚರವಿದ್ದರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT