ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ಯಕ್ಷ-ಯಕ್ಷಿಣಿಯರು, ಗಾನ ಗಂಧರ್ವರು!

Last Updated 21 ಮೇ 2020, 6:04 IST
ಅಕ್ಷರ ಗಾತ್ರ

ಕೊರೊನಾ ವೈರಸ್ ಸೃಷ್ಟಿಸಿದ ಲಾಕ್‌ಡೌನ್ ಎಂಬ 'ಮನೆಯೊಳಗಿರಬೇಕಾದ ಅನಿವಾರ್ಯತೆಯ' ಈ ಸಂದರ್ಭದಲ್ಲಿ ಏನು ಮಾಡುವುದು ಎಂಬುದಕ್ಕೆ ಉತ್ತರ ದೊರಕಿಸಿದ್ದು ತಂತ್ರಜ್ಞಾನ. ಕನ್ನಡ ಕರಾವಳಿಯ ರಮ್ಯಾದ್ಭುತ ಕಲೆಯಾದ ಯಕ್ಷಗಾನವು ಅಭಿಮಾನಿಗಳಿಂದಾಗಿ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು.

ಕೊರೊನಾ ವೈರಸ್ ಪ್ರಸರಣೆ ನಿಯಂತ್ರಣಕ್ಕೆ ಎಲ್ಲರೂ 'ಮನೆಯೊಳಗಿರಿ - ಸುರಕ್ಷಿತವಾಗಿರಿ' ಅಂತ ಲಾಕ್‌ಡೌನ್ ಘೋಷಣೆ ಮಾಡಿದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆಯೊಂದನ್ನು ನೀಡಿದ್ದರು. 'ನಿಮ್ಮ ನಿಮ್ಮ ಮನೆಯೊಳಗಿರುವ ವೀಣೆ, ವಾದ್ಯ, ತಾಳ, ತಂಬೂರಿಗಳನ್ನು ಕೈಗೆತ್ತಿಕೊಳ್ಳಿ; ನಿಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ'! ಆದರೆ, ನಮ್ಮವರೋ... ಮನೆಯೊಳಗಿರಲು, ಇದ್ದು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಲು ಮೋದಿ ಹೇಳುವ ಮೊದಲೇ ಸಜ್ಜಾಗಿದ್ದರು.

ಜನತಾ ಕರ್ಫ್ಯೂ ಘೋಷಣೆಯಾದಾಗ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಅವರು ಕೊರೊನಾ ಕುರಿತ ಜಾಗೃತಿ ಹಾಡನ್ನು ರಚಿಸಿ, ಭಾಗವತರಿಂದ (ಹಾಡುಗಾರರಿಂದ) ಹಾಡಿಸಲು ಯತ್ನಿಸಿದ ಬೆನ್ನಿಗೇ, ಗಡಿನಾಡು ಕಾಸರಗೋಡಿನಲ್ಲಿ ಸಮಾನ ಮನಸ್ಕರೊಂದಿಗೆ ಸೇರಿಕೊಂಡ ಭಾಗವತ ರಾಮಕೃಷ್ಣ ಮಯ್ಯರು ಒಂದು ಗಂಟೆಯ 'ಕೊರೊನಾಸುರ ಕಾಳಗ' ಯಕ್ಷಗಾನ ಪ್ರಸಂಗ ತಯಾರಿಸಿ, ಯೂಟ್ಯೂಬ್‌ನಲ್ಲಿ ಹವಾ ಎಬ್ಬಿಸಿದರು.

ಶರಸೇತು ಬಂಧನ ತಾಳಮದ್ದಳೆ ವಿಡಿಯೊ​


ಬಳಿಕ ಕೋವಿಡ್ ಸೋಂಕು ಹೆಚ್ಚಾಗುತ್ತಿರುವಂತೆಯೇ, ಮನೆಯೊಳಗಿರಬೇಕಾದ ದಿನವೂ ಹೆಚ್ಚಾಗತೊಡಗಿತು. ಸದಾ ಕಾಲ ಕಲಾ ಪ್ರಸಾರ, ಮನರಂಜನೆಯನ್ನು ಉಣಿಸುತ್ತಿದ್ದ ಕಲಾವಿದರ ತುಡಿಯುವ ಮನಸ್ಸು, ಕೈ-ಕಾಲುಗಳು ಸುಮ್ಮನಿರಬೇಕಲ್ಲ! ಒಂದೆಡೆಯಿಂದ ಸೀರೆ ಉಡುವುದು, ಹಳೆಯ ಫೋಟೋ ಶೇರ್ ಮಾಡುವುದು, ಕನ್ನಡದಲ್ಲಿ ಬರೆಯುವುದು, ಅಡುಗೆ, ಗಡ್ಡ-ಮೀಸೆಯ ಶೈಲಿ - ಇಂತಹಾ ಚಾಲೆಂಜ್‌ಗಳೆಲ್ಲಾ ಫೇಸ್‌ಬುಕ್ಕನ್ನು ಆವರಿಸಿಕೊಂಡಿದ್ದರೆ, ಮತ್ತೊಂದೆಡೆಯಿಂದ ಸುಮ್ಮನಿರಲಾರದ ಈ ಕಲಾಯೋಗಿಗಳು, ತಂತ್ರಜ್ಞಾನವನ್ನು ಹೀಗೂ ಸದುಪಯೋಗಪಡಿಸಿಕೊಳ್ಳಬಹುದು ಅಂತ ತೋರಿಸಿಕೊಡತೊಡಗಿದರು, ಸದ್ಬಳಕೆ ಮಾಡತೊಡಗಿದರು.

ಆನ್‌ಲೈನ್ ತುಂಬೆಲ್ಲ ಕುಣಿಯುವ ಯಕ್ಷರು, ಹಾಡುವ ಗಂಧರ್ವರು, ಹಾಡಿ ಕುಣಿವ ಕಿನ್ನರ-ಕಿಂಪುರುಷರು ಹರಿದಾಡಿದರು. ಭ್ರಮಾವಾಸ್ತವ (ವರ್ಚುವಲ್) ಜಗತ್ತು, ಗಂಧರ್ವ ಲೋಕವಾಗಿ, ಯಕ್ಷಲೋಕವಾಗಿ ಬದಲಾಯಿತು. ಸದಭಿರುಚಿಯುಳ್ಳ ಪ್ರೇಕ್ಷಕರು ಸಿಕ್ಕಿದ್ದನ್ನು ಬಾಚಿಕೊಂಡು ಸಂಭ್ರಮಿಸಿದರು.

ಒಬ್ಬೊಬ್ಬ ಕಲಾವಿದರು ಒಂದೊಂದೆಡೆ ಲಾಕ್‌ಡೌನ್ ಆಗಿದ್ದೂ, ಯಕ್ಷಗಾನದ ತಾಳಮದ್ದಳೆ ಎಂಬ ಕಲಾ ಪ್ರಕಾರವೊಂದು ಈ ವರ್ಚುವಲ್ ಜಗತ್ತಿನಲ್ಲಿ ಸಂಪನ್ನಗೊಂಡಿತು. ಶರಸೇತು ಬಂಧನ ಆಖ್ಯಾನವನ್ನು ಖ್ಯಾತನಾಮರಾದ ಪ್ರಭಾಕರ ಜೋಷಿ (ಮಂಗಳೂರು), ವಾಸುದೇವ ರಂಗಾಭಟ್ (ಮಧೂರು), ರಾಧಾಕೃಷ್ಣ ಕಲ್ಚಾರ್ (ವಿಟ್ಲ) ಅರ್ಥಧಾರಿಗಳಾಗಿ ತಮ್ಮ ತಮ್ಮ ಮನೆಗಳಿಂದಲೂ, ಕೆ.ಜೆ. ಗಣೇಶ್, ಕೆ.ಜೆ.ಕೃಷ್ಣ, ಕೆ.ಜೆ.ಸುಧೀಂದ್ರ (ಹೆಬ್ರಿ) ಮನೆಯಿಂದಲೇ ಹಿಮ್ಮೇಳದೊಂದಿಗೆ ಜಗತ್ತಿಗೇ ತೋರಿಸಿಕೊಟ್ಟರು. ಅಮೆರಿಕದ ಯಕ್ಷಗಾನ ಕಲಾವೃಂದವು ಯೂಟ್ಯೂಬ್‌ನಲ್ಲೇ ತಾಳಮದ್ದಳೆಯನ್ನು ನೇರ ಪ್ರಸಾರ ಮಾಡಿ, ದೇಶ-ವಿದೇಶದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತಲ್ಲದೆ, ಈ ಸಾಧ್ಯತೆಯ ಅವಕಾಶದ ಹೆಬ್ಬಾಗಿಲನ್ನೂ ತೆರೆದುಕೊಟ್ಟಿತು.

ಕನ್ನಡ ಕುಲತಿಲಕ, ಎಚ್ಚಮನಾಯಕ ಹಾಡಿಗೆ ಕುಣಿದ ಪ್ರಮೀಳೆಯರು​

ಯಕ್ಷಗಾನೀಯ ಮನಸ್ಸುಗಳಂತೂ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳತೊಡಗಿದವು. ಒಂದು ರೆಕಾರ್ಡೆಡ್ ಹಾಡಿಗೆ ತಮ್ಮ ತಮ್ಮ ಮನೆಗಳಿಂದಲೇ ಕುಣಿದು, ವಿಡಿಯೊದ ತುಣುಕುಗಳನ್ನು ಬೆಸೆಯತೊಡಗಿದರು. ಮಹಿಳಾ ಯಕ್ಷಗಾನ ಲೋಕದ ಈ ಪೀಳಿಗೆಯ ಪ್ರಸಿದ್ಧರಾದ ನಾಗಶ್ರೀ ಗೀಜಗಾರ್, ಅರ್ಪಿತಾ ಹೆಗಡೆ, ನಿಹಾರಿಕಾ ಭಟ್, ಮಾನಸ ಉಪಾಧ್ಯ ಅವರ ಯಕ್ಷ ಮನಸ್ಸುಗಳು ಆನ್‌ಲೈನ್‌ನಲ್ಲಿ ಒಂದಾದವು. 20 ವರ್ಷಗಳ ಹಿಂದಿನ ಸಾಲಿಗ್ರಾಮ ಮೇಳದ 'ರಂಗನಾಯಕಿ' ಪ್ರಸಂಗದಲ್ಲಿ ಹೇರಂಜಾಲು ಗೋಪಾಲ ಗಾಣಿಗರು ಹಾಡಿದ್ದ 'ಕನ್ನಡ ಕುಲತಿಲಕ ಎಚ್ಚಮನಾಯಕ' ಹಾಡು ತುಂಬಾ ಹಿಟ್ ಆಗಿತ್ತು. ಅದನ್ನು ಅವರ ಪುತ್ರ ಪಲ್ಲವ ಗಾಣಿಗರು ಹಾಡಿದರು. ಇದನ್ನೇ ಮುಂದಿಟ್ಟುಕೊಂಡು ಈ ನಾರಿಯರು ಸೀರೆಯುಟ್ಟು ತಮ್ಮ ಮನೆಗಳಿಂದಲೇ ಯಕ್ಷಗಾನದ ಹೆಜ್ಜೆಗಳನ್ನು ಹಾಕಿ, ವಿಡಿಯೊ ಮಾಡಿ ಜಾಲತಾಣಗಳಲ್ಲಿ ಹರಿಯಬಿಟ್ಟರು. ಅದೀಗ ವೈರಲ್ ಆಗಿಬಿಟ್ಟಿದೆ.

ಈಗ ಸುಷ್ಮಾ ಮೈರ್ಪಾಡಿ, ಪ್ರತಿಷ್ಠಾ ರೈ, ಬಿಂದಿಯಾ ಶೆಟ್ಟಿ, ಮೈತ್ರಿ ಭಟ್, ಅಶ್ವಿನಿ ಆಚಾರ್, ಚೈತ್ರಾ ಹೆಚ್. - ಈ ಯಕ್ಷಪ್ರಮೀಳೆಯರ ತಂಡವೊಂದು, ಇದೇ ರೀತಿಯ ಯಕ್ಷಗಾನಾರಾಧನೆಗೆ ಮುಂದಡಿಯಿಟ್ಟಿದೆ. ಕನಕಾಂಗಿ ಕಲ್ಯಾಣ ಪ್ರಸಂಗದ 'ಗೆಳತಿಯರೇ ಬನ್ನಿರೀಗ ವನಕೆ ಪೋಗುವ' ಪದಕ್ಕೆ ವಿಶಿಷ್ಟವಾಗಿ ಯಕ್ಷಗಾನೀಯ ಹೆಜ್ಜೆಗಳನ್ನು ಅಳವಡಿಸಿ, ವಿಡಿಯೊ ಮಾಡಿದ್ದಾರೆ.

ಗಮನ ಸೆಳೆದ ಮತ್ತೊಂದು ಪ್ರಯೋಗವೆಂದರೆ, ಕಟೀಲು ಮೇಳದ ಖ್ಯಾತ ಕಲಾವಿದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ 'ಅಂಬುರುಹ' ಮನೆಯಲ್ಲಿ ನಡೆಯುತ್ತಿರುವ ಕಲಾರಾಧನೆ. ಮಕ್ಕಳು ಶಿಷ್ಯರನ್ನು ಸೇರಿಸಿ ಈ ಪ್ರಯೋಗ ಮಾಡಿದ್ದಾರೆ. ಇಲ್ಲಿ, ತಾಳ, ಮದ್ದಳೆ, ತಬಲಾ, ಕೀಬೋರ್ಡ್, ಶ್ರುತಿವಾದ್ಯ ಪ್ರಯೋಗವಾಗಿದೆ. ಪರೀಕ್ಷಿತ್ ಪೂಂಜ, ಮಯೂರ ನಾಯ್ಗ, ಕೌಶಿಕ್ ಮಂಜನಾಡಿ, ಕೀರ್ತನ್ ನಾಯ್ಗ, ದೀವಿತ್ ಎಸ್.ಕೆ.ಪೆರಾಡಿ, ಜೀವಿತೇಶ್ ಪೂಂಜ ಅವರನ್ನೊಳಗೊಂಡ ಈ ಕಲಾ ಪ್ರಕಾರ ವಿಶೇಷ ಶ್ಲಾಘನೆಗೆ ಕಾರಣವಾಗಿದೆ. ಹಲವು ವಿಡಿಯೊಗಳು ಸಿದ್ಧಗೊಂಡು ಮನಸ್ಸು ಮುದಗೊಳಿಸುತ್ತಿವೆ. ಒಂದು ಸ್ಯಾಂಪಲ್ ಇಲ್ಲಿದೆ.

ಈ ಮಧ್ಯೆ, ಯಕ್ಷಗಾನದಲ್ಲಿ ಶ್ರೀಕೃಷ್ಣನ ಪಾರಂಪರಿಕ ಒಡ್ಡೋಲಗವನ್ನು ಮನೆಯಿಂದಲೇ ಪ್ರಸ್ತುತಪಡಿಸಿದ ತನ್ವಿ ಗಿರೀಶ್ ರಾವ್ ಗಮನ ಸೆಳೆದರು. ಮಧ್ಯೆಯೇ, ಶಾಲೆಗೆ ರಜೆಯಿಂದ ಜಿಡ್ಡು ಹಿಡಿದಿದ್ದ ಮಕ್ಕಳ ಮನಸ್ಸುಗಳು ಕೂಡ ಯಕ್ಷಗಾನದ ಸೆಳೆತ ತಡೆಯಲಾರದೆ, ಮನೆಯಲ್ಲಿದ್ದ ಸೀರೆಗಳನ್ನೇ ತಂದು, ಚೌಕಿ (ಬಣ್ಣದ ಮನೆ) ಹಾಗೂ ರಂಗಸ್ಥಳವನ್ನು ಕಟ್ಟಿ, ಯಕ್ಷಗಾನ ಪ್ರದರ್ಶಿಸಲು ಹೊರಟ ವಿಡಿಯೊವಂತೂ ಜನಮೆಚ್ಚುಗೆ ಗಳಿಸಿತು.

ಯಕ್ಷಗಾನ ಮುಖವರ್ಣಿಕೆ ಮಾಡುವ ವಿಡಿಯೊ​...


ಉಜಿರೆಯ ಯಕ್ಷ ಬಿಂದು ತಂಡವು 3 ನಿಮಿಷದ ಯಕ್ಷ ನಾಟ್ಯದ ವಿಡಿಯೊ ಸ್ಫರ್ಧೆಯನ್ನು ಆಯೋಜಿಸಿ, ಬಹುಮಾನ ಹಂಚಿದರೆ, ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನವು ಲಾಕ್‌ಡೌನ್‌ನಲ್ಲಿ ಏನು ಮಾಡಿದಿರಿ ಅಂತ ಕಲಾವಿದರಿಗೆ ಕೇಳಿ, ಅವರಿಂದ ಬರೆಸಿ, ಬಹುಮಾನವನ್ನೂ ನೀಡಿತು. ಸುಷ್ಮಾ ಮೈರ್ಪಾಡಿ ಹಾಗೂ ಆರತಿ ಪಟ್ರಮೆ ಅವರು ಫೇಸ್‌ಬುಕ್ ಮೂಲಕವೇ ಯಕ್ಷಗಾನ ನಾಟ್ಯ ಕಲಿಸಿದ ವಿಡಿಯೊಗಳನ್ನು ಹರಿಯಬಿಟ್ಟರು. ಬೆಂಗಳೂರಿನಲ್ಲಿ ಸತೀಶ್ ಅಗ್ಪಲ ನೇತೃತ್ವದಲ್ಲಿ ನಡೆಯುತ್ತಿದ್ದ ಯಕ್ಷಗಾನ ತರಬೇತಿಯನ್ನು ಆನ್‌ಲೈನ್‌ಗೂ ಎಳೆತಂದರು. ಸುಮ್ಮನಿರಲಾರದ ಅವರು, ಕಲಾವಿದರಾದ ಮಂಟಪ ಪ್ರಭಾಕರ ಉಪಾಧ್ಯ, ಎ.ಪಿ.ಪಾಠಕ್, ಪ್ರಜ್ವಲ್ ಗುರುವಾಯನಕೆರೆ ಅವರನ್ನು ಸೇರಿಸಿಕೊಂಡು, ಯಕ್ಷಗಾನದ ಕುರಿತು ಚರ್ಚಾಗೋಷ್ಠಿಯನ್ನೂ ಅವರವರ ಸ್ಥಳಗಳಿಂದಲೇ ಏರ್ಪಡಿಸಿದರು. ನಾಗರಾಜ ಶೆಟ್ಟಿ ನೈಕಂಬ್ಳಿ, ರಾಘು ಶೆಟ್ಟಿ ಮಾರಣಕಟ್ಟೆ ಮುಂದಾಳುತ್ವದ ಯಕ್ಷಸಂಕ್ರಾಂತಿ ಮಿತ್ರಕೂಟವು ಕಾಲ್ ಕಾನ್ಫರೆನ್ಸ್ ಮೂಲಕ ಆಡಿಯೋ ತಾಳಮದ್ದಳೆಯ ರಸದೌಟಣವನ್ನು ಉಣಬಡಿಸಿತು. ಈ ನಡುವೆ, ಲಾಕ್‌ಡೌನ್ ಅವಧಿಯಲ್ಲಿ ಶೇಷಕೃಷ್ಣ ಭಟ್ ಪುತ್ತೂರು, ಸುಧಾಕರ ಜೈನ್ ಹೊಸಬೆಟ್ಟುಗುತ್ತು 'ಬೀಗದ ಭಾಗವತರು' ಎಂಬ, ಯಕ್ಷಗಾನ ಹಾಡುಗಳನ್ನು ಹಾಡಿ ವಿಡಿಯೊ ಮಾಡುವ ಚಾಲೆಂಜ್‌ಗೆ ನಾಂದಿ ಹಾಡಿದರು.

ಸಭಾಕ್ಲಾಸು, ಪ್ರವೇಶ ನೃತ್ಯಕ್ಕೆ ಕುಣಿದ ಯುವ ಕಲಾವಿದರು​...


ಸಭಾಕ್ಲಾಸು, ಪ್ರವೇಶದ ವಾದನಕ್ಕೆ ಮನೆಯಿಂದಲೇ ಕುಣಿದು, ವಿಡಿಯೊ ಜೋಡಿಸಿ ಹಂಚಿಕೊಂಡವರು, ನಿತಿನ್ ಆಚಾರ್ಯ, ಸುದರ್ಶನ್ ಆಚಾರ್ಯ, ಶರಣ್ಯ ರಾವ್ ಶರವೂರು, ಸಾಯಿಸುಮಾ ನಾವಡ, ವಿಂಧ್ಯಾ ಆಚಾರ್ಯ, ವೈಷ್ಣವಿ ರಾವ್, ನವ್ಯಾ ಹೊಳ್ಳ, ದಿವ್ಯಾ ಹೊಳ್ಳ, ಶಿಖಿನ್ ರಾವ್ ಮೊದಲಾದವರು. ಇದೇ ತಂಡವು ಯಕ್ಷಗಾನದ ವಿಭಿನ್ನ ಪಾತ್ರಗಳ ಮುಖವರ್ಣಿಕೆಯನ್ನೂ ತಾವಿದ್ದಲ್ಲಿಂದಲೇ ಮಾಡಿ, ಸಮಯ ಕಳೆದಿದ್ದಾರೆ, ಉಳಿದವರಿಗೂ ಟೈಂ ಪಾಸ್ ಮಾಡಿಸಿದ್ದಾರೆ. ಈ ನಡುವೆ, ಪ್ರಜಾವಾಣಿಯೇ ಯಕ್ಷಗಾನ ಕಲಾವಿದರ ನೆರವಿನೊಂದಿಗೆ ಫೇಸ್‌ಬುಕ್ ಲೈವ್ ಮೂಲಕ ಕಲೆಯ ಪ್ರಸಾರಕ್ಕೂ ಅವಕಾಶ ನೀಡಿತು.

ಈ ಎಲ್ಲ ಯಕ್ಷ-ಯಕ್ಷಿಣಿಯರ, ಗಾಯನ ಗಂಧರ್ವರ ವಿಡಿಯೊಗಳನ್ನು ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ, ಮನಸಿನ ಬೇಗುದಿ ಕಳೆದಿದ್ದಾರೆ. ಈ ವಿಡಿಯೊಗಳಲ್ಲಿ ಕಲಾ ಪ್ರದರ್ಶನ ತೋರಿಸಿದವರು ಹೆಚ್ಚಿನವರು ಟೆಕ್ನಾಲಜಿ ಕಂಪನಿಗಳಲ್ಲಿ ಉದ್ಯೋಗಗಳಲ್ಲಿರುವವರು, ವಿದ್ಯಾರ್ಥಿಗಳು ಎಂಬುದು ಗಮನಿಸಬೇಕಾದ ವಿಚಾರ.

ಮಕ್ಕಳು ಮೇಳ ಕಟ್ಟಿದ ವಿಡಿಯೊ ಇಲ್ಲಿದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT