ಮಂಗಳವಾರ, ಮೇ 18, 2021
30 °C

ಆ್ಯಪ್‌: ಹೂಡಿಕೆಗಳ ಸೂಪರ್‌ಮಾರ್ಕೆಟ್‌...!

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

Prajavani

ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿರುವ ಸಾರ್ಥಕ್ (ಹೆಸರು ಬದಲಾಯಿಸಲಾಗಿದೆ) ದುಡಿಮೆ ಆರಂಭಿಸಿ ಹತ್ತು ವರ್ಷಗಳು ಸಂದಿವೆ. ಆದರೆ, ಅವರು ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಆರಂಭಿಸಿದ್ದು ಮೂರ್ನಾಲ್ಕು ವರ್ಷಗಳ ಹಿಂದೆ. ‘ನಾನು ದುಡಿಮೆ ಆರಂಭಿಸಿದ ತಕ್ಷಣ ಈಕ್ವಿಟಿ ಹೂಡಿಕೆ ಆರಂಭಿಸಿದ್ದರೆ, ಈ ವೇಳೆಗೆ ಇಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮ್ಯೂಚುವಲ್ ಫಂಡ್‌ ಯೂನಿಟ್‌ಗಳನ್ನು, ಇಂದಿಗಿಂತ ಹೆಚ್ಚು ಷೇರುಗಳನ್ನು ಹೊಂದಿರಬಹುದಿತ್ತು’ ಎಂದು ಅವರು ಆಗಾಗ ಯೋಚಿಸುವುದಿದೆ. ಹೀಗೆ ಯೋಚಿಸುತ್ತ, ತಾವು ಹತ್ತು ವರ್ಷಗಳ ಹಿಂದೆಯೇ ಹೂಡಿಕೆ ಆರಂಭಿಸಲಿಲ್ಲವೇಕೆ ಎಂಬುದಕ್ಕೆ ಅವರು ಉತ್ತರ ಕಂಡುಕೊಂಡಿದ್ದಾರೆ.

‘ನಾನು ಕೆಲಸ ಆರಂಭಿಸಿದ ದಿನಗಳಲ್ಲಿ ಈಗಿನಂತೆ ಹೂಡಿಕೆಗೆ ಸಂಬಂಧಿಸಿದ ಆ್ಯಪ್‌ಗಳು ಇರಲಿಲ್ಲ. ಈಕ್ವಿಟಿ ಹೂಡಿಕೆಗಳು ಈಗಿರುವಂತೆ ಸಂಪೂರ್ಣ ಡಿಜಿಟಲ್‌ ಆಗಿರಲಿಲ್ಲ. ಬಹುಶಃ ಈ ಕಾರಣದಿಂದಾಗಿಯೇ ನಾನು ಹೂಡಿಕೆ ಆರಂಭಿಸುವುದು ತಡವಾಯಿತು’ ಎಂದು ಅವರು ಹೇಳುತ್ತಾರೆ. ಇವೇ ಮಾತುಗಳನ್ನು ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಮನು (ಹೆಸರು ಬದಲಾಯಿಸಲಾಗಿದೆ) ಅವರೂ ಹೇಳುತ್ತಾರೆ.

‘ನಾನು ಈಕ್ವಿಟಿ ಯೋಜನೆಗಳನ್ನು ವ್ಯವಸ್ಥಿತವಾಗಿ ಹೂಡಿಕೆ ಮಾಡಲು ಆರಂಭಿಸಿ ಐದು ವರ್ಷಗಳು ಕಳೆದಿವೆ. ಅದಕ್ಕೂ ಮೊದಲು ನನ್ನ ಹೂಡಿಕೆಗಳು ಬ್ಯಾಂಕ್‌ ಎಫ್‌.ಡಿ., ಅಂಚೆ ಕಚೇರಿ ಆರ್.ಡಿ.ಗೆ ಸೀಮಿತವಾಗಿದ್ದವು. ಈಕ್ವಿಟಿ ಹೂಡಿಕೆ ಬೇಕು ಎಂದು ಅನಿಸುತ್ತಿದ್ದರೂ, ಹೂಡಿಕೆ ಶುರುಮಾಡುವುದು ಈಗಿನಷ್ಟು ಸುಲಭವಾಗಿರಲಿಲ್ಲ. ಬ್ಯಾಂಕ್‌ಗೆ ಅಥವಾ ಬ್ರೋಕರ್‌ ಬಳಿ ಹೋಗಿ ಹಲವು ದಾಖಲೆಗಳನ್ನು ಸಲ್ಲಿಸಿ, ಹತ್ತಾರು ಕಡೆ ಸಹಿ ಮಾಡಿ ಈಕ್ವಿಟಿ ಹೂಡಿಕೆ ಆರಂಭಿಸಬೇಕಿತ್ತು. ಈಗ ಸಂಪೂರ್ಣವಾಗಿ ಕಾಗದರಹಿತವಾಗಿ ಮ್ಯೂಚುವಲ್‌ ಫಂಡ್‌ ಹೂಡಿಕೆ ಮಾಡಬಹುದು, ಡಿ–ಮ್ಯಾಟ್ ಖಾತೆ ತೆರೆಯಬಹುದು’ ಎಂದು ಮನು ಹೇಳುತ್ತಾರೆ. ಐದು ವರ್ಷಗಳಿಂದ ಈಕ್ವಿಟಿ ಮ್ಯೂಚುವಲ್‌ ಫಂಡ್‌ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡಿದ ಮನು ಈಗ ಡಿ–ಮ್ಯಾಟ್ ಖಾತೆ ತೆರೆದು ತಾವೇ ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಸಾರ್ಥಕ್ ಮತ್ತು ಮನು ತಮ್ಮ ಅಷ್ಟೂ ಈಕ್ವಿಟಿ ಹೂಡಿಕೆ ನಿರ್ವಹಿಸುತ್ತಿರುವುದು ಸ್ಮಾರ್ಟ್‌ಫೋನ್‌ ಮೂಲಕ.

ಹೂಡಿಕೆ ಆರಂಭಿಸಬೇಕು ಎಂದಾದರೆ ಕಿಸೆಯಲ್ಲಿ ದೊಡ್ಡ ಮೊತ್ತ ಇರಬೇಕು ಎಂಬ ಕಾಲ ಕಳೆದುಹೋಗಿದೆ. ಹೊಸ ಕಾಲದ ಹಣಕಾಸು ತಂತ್ರಜ್ಞಾನ ಕಂಪನಿಗಳು ತಮ್ಮ ಆ್ಯಪ್‌ಗಳ ಮೂಲಕ ಕನಿಷ್ಠ ₹ 100ರಿಂದ ಈಕ್ವಿಟಿ ಹೂಡಿಕೆ ಆರಂಭಿಸುವ ಅವಕಾಶ ನೀಡುತ್ತಿವೆ. ಹೂಡಿಕೆದಾರ ಅಂದರೆ ಲಕ್ಷಾಂತರ ರೂಪಾಯಿ ಇರುವವ ಮಾತ್ರವೇ ಅಲ್ಲ; ನೂರಿನ್ನೂರು ರೂಪಾಯಿ ಇರುವವನೂ ಸಣ್ಣ ಹೂಡಿಕೆದಾರ ಎಂದು ಈ ಕಂಪನಿಗಳು ಹೇಳುತ್ತಿವೆ. ಇದು ಈಕ್ವಿಟಿ ಹೂಡಿಕೆ ಅವಕಾಶವನ್ನು ಎಲ್ಲರಿಗೂ ವಿಸ್ತರಿಸಿದೆ. ‘ಪೇಟಿಎಂ ಮನಿ’ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವರುಣ್ ಶ್ರೀಧರ್ ಅವರನ್ನು ಹಾಸನದ ಸಮೀಪ ಭೇಟಿಯಾಗಿದ್ದ ಸಾಮಾನ್ಯ ವ್ಯಕ್ತಿಯೊಬ್ಬರು ‘₹ 100ರ ವ್ಯವಸ್ಥಿತ ಹೂಡಿಕೆ ಯೋಜನೆ ಮೂಲಕ ಈಕ್ವಿಟಿಯಲ್ಲಿ ಹಣ ತೊಡಗಿಸಿದ್ದೇನೆ’ ಎಂದು ಹೇಳಿದ್ದರಂತೆ. ಹೂಡಿಕೆ ಅವಕಾಶ ಹೆಚ್ಚೆಚ್ಚು ಜನರಿಗೆ ಸಿಗುತ್ತಿರುವುದಕ್ಕೆ, ಅತ್ಯಂತ ಕಡಿಮೆ ಮೊತ್ತದಿಂದಲೂ ಹೂಡಿಕೆ ಆರಂಭಿಸುವ ಅನುಕೂಲಕರ ಸಂದರ್ಭ ನಿರ್ಮಾಣ ಆಗಿರುವುದಕ್ಕೆ ಕಾರಣ ಪೇಟಿಎಂ ಮನಿ, ಕೈಟ್‌, ಗ್ರೋವ್‌ನಂತಹ ಹೊಸ ಕಾಲದ ಹಣಕಾಸು ತಂತ್ರಜ್ಞಾನ ಕಂಪನಿಗಳು.‌

ಈ ಕಂಪನಿಗಳು ಹೂಡಿಕೆಯನ್ನು ಅತ್ಯಂತ ಸುಲಭವಾಗಿಸಿದ್ದರೂ, ಹೂಡಿಕೆ ಮಾಡುವಾಗ ಎಚ್ಚರಿಕೆ ಬೇಕೇಬೇಕು ಎಂದು ಹೇಳುತ್ತಾರೆ ಹಣಕಾಸು ತಜ್ಞರು. ‘ಹೂಡಿಕೆ ಸೌಲಭ್ಯ ನೀಡುವ ಯಾವ ಆ್ಯಪ್‌ ಎಷ್ಟು ಶುಲ್ಕ ಪಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಬೇರೆ ಬೇರೆ ಆ್ಯಪ್‌ಗಳ ಯೂಸರ್‌ ಇಂಟರ್ಫೇಸ್ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಿಮಗೆ ಸುಲಭವೆನಿಸುವ ಆ್ಯಪ್‌ ಆಯ್ಕೆ ಮಾಡಿಕೊಳ್ಳಿ. ಹಣಕಾಸು ಉತ್ಪನ್ನಗಳನ್ನು ಎಲ್ಲ ಆಯಾಮಗಳಿಂದ ಅರ್ಥ ಮಾಡಿಕೊಂಡು ಹೂಡಿಕೆ ಮಾಡಿ’ ಎಂದು ಹಣಕಾಸು ತಜ್ಞರೊಬ್ಬರು ಸಲಹೆ ನೀಡುತ್ತಾರೆ. ‘ಕಂಪನಿಯೊಂದರ ವಹಿವಾಟಿನ ಸ್ವರೂಪ ನಿಮಗೆ ಅರ್ಥವಾಗದಿದ್ದರೆ ಆ ಕಂಪನಿಯ ಮೇಲೆ ಹೂಡಿಕೆ ಮಾಡಬೇಡಿ’ ಎಂದು ಹೂಡಿಕೆದಾರ ವಾರನ್ ಬಫೆಟ್ ಹೇಳಿದ್ದರು. ಹಣಕಾಸು ತಂತ್ರಜ್ಞಾನ ಕಂಪನಿಗಳು, ಅವುಗಳ ಆ್ಯಪ್‌ಗಳು ಹೂಡಿಕೆಯನ್ನು ಸುಲಭಗೊಳಿಸಿದ್ದರೂ ಬಫೆಟ್ ಅವರ ಕಿವಿಮಾತು ಇಂದಿಗೂ ಅನುಕರಣೀಯ ಎಂಬುದನ್ನು ಮರೆಯುವಂತಿಲ್ಲ.

‘ಈ ಆ್ಯಪ್‌ಗಳು ಹಣಕಾಸು ಉತ್ಪನ್ನಗಳ ಸೂಪರ್‌ ಮಾರ್ಕೆಟ್‌ ಇದ್ದಂತೆ. ಒಂದು ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡರೆ ಬಹುತೇಕ ಆಸ್ತಿ ನಿರ್ವಹಣಾ ಕಂಪನಿಗಳ ಮ್ಯೂಚುವಲ್‌ ಫಂಡ್‌ಗಳು, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌), ಷೇರುಗಳು, ಡಿಜಿಟಲ್ ಚಿನ್ನ... ಹೀಗೆ ಬಗೆಬಗೆಯ ಹೂಡಿಕೆ ಆಯ್ಕೆಗಳು ಕಾಣಿಸುತ್ತವೆ. ಆ್ಯಪ್‌ಗಳು ಹೂಡಿಕೆಯನ್ನು ಡೆಮಾಕ್ರಟೈಸ್ (ಎಲ್ಲರಿಗೂ ಸಿಗುವಂತೆ) ಮಾಡುತ್ತಿವೆ’ ಎಂದು ಹೇಳುತ್ತಾರೆ ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ. ಕಂಪನಿಯ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರಮೋದ್ ಬಿ.ಪಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು