ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಯಲ್ಲಿದೆ ಅರಿವಿನ ಮೂಲ: ಅಮೃತೇಶ್ವರಿಯವರ ಲೇಖನ

Last Updated 9 ನವೆಂಬರ್ 2022, 8:57 IST
ಅಕ್ಷರ ಗಾತ್ರ

ಯಾವುದೇ ಅರಿವು ಪೀಳಿಗೆಯಿಂದ ಪೀಳಿಗೆಗೆ, ಜನಾಂಗದಿಂದ ಜನಾಂಗಕ್ಕೆ ರವಾನೆಯಾಗಬೇಕಾದರೆ ಮಾಧ್ಯಮ ಅತ್ಯವಶ್ಯಕ. ಆ ಮಾಧ್ಯಮವೇ ಭಾಷೆ.

*****

ಭಾಷೆಗಳು ಜ್ಞಾನವನ್ನು ಹಂಚುವ ಬಹು ದೊಡ್ಡ ಸಂಪರ್ಕ ಸಾಧನಗಳು. ಭಾಷೆ ಮತ್ತು ವಿಜ್ಞಾನಗಳೆರೆಡೂ ಒಂದಕ್ಕೊಂದು ಪೂರಕ. ಭಾಷೆಗಳು ಉಳಿಯದಿದ್ದರೆ ಎಲ್ಲ ಕ್ಷೇತ್ರಗಳ ಜ್ಞಾನವೂ ನಷ್ಟವಾಗುತ್ತದೆ.

ವೈದ್ಯಕೀಯ ವಿಜ್ಞಾನದ ಬೆಳೆವಣಿಗೆಗೂ ಭಾಷೆ ಬೇಕು. ಸ್ವಿಟ್ಜರ್ಲೆಂಡಿನ ಜ್ಯೂರಿಚ್‌ ವಿಶ್ವವಿದ್ಯಾಲಯದಲ್ಲಿ ಎವೆಲ್ಯುಷನರಿ ಬಯಾಲಜಿ ಮತ್ತು ಎನ್ವಿರಾನ್ಮೆಂಟಲ್‌ ಸ್ಟಡೀಸ್‌ ವಿಭಾಗದ ರೊಡ್ರಿಗೊ ಕೆಮೆರ ಲೆರೆಟ್‌ ಮತ್ತು ಜೊರ್ಡಿ ಬಸ್ಕಾಮ್ಟೆ ಅವರು ಔಷಧೀಯ ಸಸ್ಯಗಳ ಬಗ್ಗೆ ಸ್ಥಳೀಯ ಜನಕ್ಕಿರುವ ಜ್ಞಾನವು ಆ ಭಾಷೆಗಳು ಮತ್ತು ಸಸ್ಯಗಳು ಅಳಿದು ಹೋದಲ್ಲಿ ಎಷ್ಟು ಕುಸಿದುಹೋಗಬಲ್ಲದು ಎಂದು ಪ್ರಮಾಣೀಕರಿಸಿದ್ದಾರೆ.

ಯಾವುದೇ ಅರಿವು ಪೀಳಿಗೆಯಿಂದ ಪೀಳಿಗೆಗೆ, ಜನಾಂಗದಿಂದ ಜನಾಂಗಕ್ಕೆ ರವಾನೆಯಾಗಬೇಕಾದರೆ ಮಾಧ್ಯಮ ಅತ್ಯವಶ್ಯಕ. ಆ ಮಾಧ್ಯಮವೇ ಭಾಷೆ. ಭಾಷೆ ಎಂದರೆ ಒಂದು ಸಮುದಾಯವು ಪರಸ್ಪರ ವ್ಯವಹಾರಕ್ಕಾಗಿ ಬಳಸಬಹುದಾದ ಹಾಗೂ ಮಾನವ ಪರಿಸರದಲ್ಲಿನ ವಸ್ತು, ಘಟನೆ, ಕ್ರಿಯೆಗಳನ್ನು ವಿಸ್ತಾರವಾಗಿ ದಾಖಲುಗೊಳಿಸುವ ಧ್ವನಿವ್ಯವಸ್ಥೆ. ಜಗತ್ತಿನಲ್ಲಿ ಇಂತಹ ಸುಮಾರು 7400 ಭಾಷೆಗಳಿವೆಯಂತೆ. ಆದರೆ ಇವುಗಳಲ್ಲಿ ಶೇ 30ರಷ್ಟು ಭಾಷೆಗಳು ಈ ಶತಮಾನದ ಅಂತ್ಯದ ವೇಳೆಗೆ ಹೇಳಹೆಸರಿಲ್ಲದಂತೆ ಆಗಿಬಿಟ್ಟಿರುತ್ತವೆ ಎಂಬುದು ವಿಜ್ಞಾನಿಗಳ ಅಂದಾಜು. ಅವುಗಳಲ್ಲಿ ಸ್ಥಳೀಯ ಅರ್ಥಾತ್‌ ಆಯಾ ಪ್ರದೇಶದಲ್ಲಿಯಷ್ಟೆ ಕೇಳಿಸುವ ಭಾಷೆಗಳೇ ಹೆಚ್ಚು ಅಪಾಯದಲ್ಲಿ ಸಿಲುಕಿರುವವು. ಈ ಭಾಷೆಗಳು ಅಳಿದರೆ ಕೇವಲ ಭಾಷೆ ಹಾಗೂ ಸಂಸ್ಕೃತಿಗಷ್ಟೆ ನಷ್ಟವಲ್ಲ, ವಿಜ್ಞಾನಕ್ಕೂ ನಷ್ಟವಾಗಿಬಿಡಬಹುದು ಎಂದು ನಾವು ಅರ್ಥಮಾಡಿಕೊಂಡಿರಲಿಲ್ಲ. ಲೆರೆಟ್‌ ಮತ್ತು ಬಸ್ಕಾಮೈ ಹೀಗೂ ಆಗುತ್ತದೆ ಎಂದು ನಿರೂಪಿಸಿದ್ದಾರೆ.

ಇವರು ಶ್ರೀಮಂತ ಜೀವವೈವಿಧ್ಯ, ವಿಶಿಷ್ಟ ಭಾಷೆ ಮತ್ತು ಸಂಸ್ಕೃತಿಗಳು ಇರುವ ಮೂರು ಪ್ರದೇಶಗಳನ್ನು ಆರಿಸಿಕೊಂಡು, ಅಲ್ಲಿರುವ 3597 ಔಷಧೀಯ ಸಸ್ಯಗಳ ಬಗ್ಗೆ ಯಾವ್ಯಾವ ಭಾಷೆಯಲ್ಲಿ ಮಾಹಿತಿ ಇತ್ತು ಎಂದು ಗಮನಿಸಿದ್ದಾರೆ. ಅದರಲ್ಲಿ
ಶೇ 75ರಷ್ಟು ವೈದ್ಯಸಂಗತಿಗಳು ಕೇವಲ ಒಂದು ಭಾಷೆಗೆ ಮಾತ್ರವೇ ಸೀಮಿತವಾಗಿದ್ದುವು. ಇತರೆ ಭಾಷೆಗಳಲ್ಲಿ ಅವುಗಳ ಉಲ್ಲೇಖವೇ ಇರಲಿಲ್ಲ. ಹೀಗೆ ಒಂದು ಭಾಷೆಗಷ್ಟೇ ತಿಳಿದಿರುವ ಸಸ್ಯಪ್ರಭೇದಗಳು ವಾಸ್ತವವಾಗಿ ಅಳಿವಿನ ಅಂಚಿನಲ್ಲಿಲ್ಲ, ಆದರೆ ಆ ವಿಶಿಷ್ಟ ಜ್ಞಾನವನ್ನು ಪಡೆದಿರುವ ಹೆಚ್ಚಿನ ಭಾಷೆಗಳು ಅಳಿವಿನ ಅಂಚಿನಲ್ಲಿವೆ! ಅರ್ಥಾತ್‌, ಜೀವವೈವಿಧ್ಯದ ನಷ್ಟದಿಂದ ವೈದ್ಯಕೀಯ ಜ್ಞಾನಕ್ಕೆ ಆಗುವ ಹಾನಿಗಿಂತಲೂ, ಭಾಷೆಯ ಅಳಿವಿನಿಂದಲೇ ನಷ್ಟ ಹೆಚ್ಚು.

ಮೂಲನಿವಾಸಿಗಳಿಗೆ ಸ್ಥಳೀಯ ಸಸ್ಯಗಳು, ಅವು ಒದಗಿಸುತ್ತಿರುವ ಪ್ರಯೋಜನಗಳು ಹಾಗೂ ಅವುಗಳಿಂದ ದೊರೆಯುತ್ತಿರುವ ಆರೋಗ್ಯದ ಲಾಭಗಳಿಗೆ ಸಂಬಂಧಿಸಿದ ಉತ್ತಮ ಜ್ಞಾನವಿರುತ್ತದಷ್ಟೆ. ಆದರೆ ಅವೆಲ್ಲವೂ ಅವರದೇ ಭಾಷೆಯಲ್ಲಿ ಸಂಗ್ರಹವಾಗಿರುತ್ತವೆ. ಇದನ್ನೇ ನಾವು ‘ಪಾರಂಪರಿಕ ಜ್ಞಾನ’ ಎನ್ನುತ್ತೇವೆ. ಒಂದೆಡೆ, ಭಾಷೆಯನ್ನು ಬಳಸದಿರುವುದು ಔಷಧೀಯ ಸಸ್ಯಗಳ ಬಗೆಗಿರುವ ಜ್ಞಾನದ ನಷ್ಟಕ್ಕೆ ಕಾರಣವಾದರೆ, ಇನ್ನೊಂದೆಡೆ, ಜಾಗತಿಕವಾಗಿ ಆಗುತ್ತಿರುವ ಪರಿಸರದಲ್ಲಿನ ಬದಲಾವಣೆಗಳು ಮನುಕುಲಕ್ಕೆ ಬೇಕಿರುವ ಸಸ್ಯಗಳು ಮತ್ತು ಬೆಳೆಗಳ ವ್ಯಾಪ್ತಿಯನ್ನೂ ಕುಗ್ಗಿಸುತ್ತಿವೆ. ಒಟ್ಟಾರೆ, ಭಾಷೆಯ ಅಳಿವು ಇಂತಹ ಉಪಯುಕ್ತ ಸಸ್ಯಗಳ ಬಳಕೆಯನ್ನು ಕಡಿಮೆ ಮಾಡುವುದರಿಂದ, ಪೃಕೃತಿಯು ಮಾನವನಿಗೆ ನೀಡಿರುವ ಅಮೂಲ್ಯ ಔಷಧಿಗಳ ಬಳಕೆಗೂ, ಹೊಸ ಔಷಧಿಗಳ ಆವಿಷ್ಕಾರಗಳಿಗೂ ಚ್ಯುತಿ ತರುವುದಂತೂ ಖಾತರಿ.

ಲೆರೆಟ್‌ ಮತ್ತು ಬಸ್ಕಾಮೈ ಅವರು ಉತ್ತರ ಅಮೇರಿಕ, ವಾಯವ್ಯ ಅಮೇಜಾನಿಯಾ ಮತ್ತು ನ್ಯೂಗಿನಿಯಾ ಪ್ರದೇಶಗಳಲ್ಲಿನ ಮೂಲನಿವಾಸಿಗಳಿಗೆ ಅವರ ಸುತ್ತಲಿನ ಸಸ್ಯಪ್ರಭೇದಗಳ ಬಗೆಗಿರುವ ಸಾಂಪ್ರದಾಯಿಕ ಜ್ಞಾನವನ್ನು ಪರೀಕ್ಷಿಸಿದ್ದಾರೆ. ಅವರ ಅಂಕಿ–ಅಂಶಗಳ ಪ್ರಕಾರ 3597 ಸಸ್ಯಗಳು ಮತ್ತು ಅವು ದೊರೆಯುತ್ತಿರುವ ವೈದ್ಯಕೀಯ ಲಾಭಗಳು 236 ಸ್ಥಳೀಯ ಭಾಷೆಗಳಿಗೆ ತಿಳಿದಿತ್ತು. ಹಾಗೂ ಮೂರೂ ಪ್ರದೇಶಗಳಲ್ಲಿ ಔಷಧೀಯ ಸಸ್ಯಗಳ ಬಗ್ಗೆ ಅವರಿಗಿದ್ದ ಜ್ಞಾನವು ಕ್ರಮವಾಗಿ ಶೇ 73, 91, 84ರಷ್ಟು ಕೇವಲ ಒಂದೇ ಭಾಷೆಯ ಜನರಿಗೆ ತಿಳಿದಿತ್ತು. ಹಾಗಾದರೆ ವಿಶಿಷ್ಟ ಜ್ಞಾನವು ಹೆಚ್ಚಾಗಿ ಅಪಾಯದ ಅಂಚಿನಲ್ಲಿರುವ ಭಾಷೆಗಳಲ್ಲಿಯೇ ಅಡಗಿರುವುದೇ ಎಂಬುದು ಪ್ರಶ್ನೆ. ಇವರ ಫಲಿತಾಂಶದ ಪ್ರಕಾರ, ವೈದ್ಯಕೀಯ ಜ್ಞಾನವನ್ನು ಸಂರಕ್ಷಿಸುವುದಾದರೆ ಯಾವುದೋ ಒಂದು ಭಾಷೆಯನ್ನಷ್ಟೇ ಉಳಿಸಿದರೆ ಸಾಲದು; ಅಂತಹ ಎಲ್ಲ ಭಾಷೆಗಳನ್ನೂ ಉಳಿಸಬೇಕು. ಅದಕ್ಕಾಗಿ ವಿಶ್ವಸಂಸ್ಥೆಯು 2022-2032 ಅನ್ನು ‘ಅಂತರರಾಷ್ಟ್ರೀಯ ಸ್ಥಳೀಯ ಭಾಷೆಗಳ ದಶಕ’ ಎಂದು ಘೋಷಿಸಿದೆ. ಸ್ಥಳೀಯ ಭಾಷೆಗಳಿಗಿರುವ ಆಪತ್ತು ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಅವುಗಳ ಮಹತ್ವದ ಬಗ್ಗೆ ಜಾಗತಿಕವಾಗಿ ಅರಿವನ್ನು ಮೂಡಿಸುವುದು ಇದರ ಉದ್ದೇಶ.

ಈ ಮೂಲನಿವಾಸಿಗಳ ಪಾರಂಪರಿಕ ಜ್ಞಾನ ಅವರ ಭಾಷೆಯಲ್ಲಿಯೇ ಇರುತ್ತದೆ. ಆಯಾ ಸಮುದಾಯದ ಜನರಿಗೆ ತಮ್ಮ ಸುತ್ತಲಿನ ಸಸ್ಯಗಳು ಮತ್ತು ಅವು ನೀಡುವ ಜೈವಿಕ-ಔಷಧೀಯ ಪ್ರಯೋಜನಗಳ ಬಗ್ಗೆ ಅರಿವಿದೆ. ಬೇರೆ ಭಾಷೆ ಮಾತನಾಡುವ ಮೂಲನಿವಾಸಿಗಳೊಂದಿಗೆ ಅವರ ಜ್ಞಾನವನ್ನು ಹಂಚಿಕೊಂಡರೆ, ಸಂರಕ್ಷಣಾ ಕಾರ್ಯ ಸುಲಭ. ಆಗ ಆ ಭಾಷೆ ಅಳಿದು ಹೋದರೂ, ಜನರಲ್ಲಿ ವೈದ್ಯಕೀಯ ಜ್ಞಾನ ಭದ್ರವಾಗಿರಬಲ್ಲುದು. ಜಾಗತೀಕರಣದ ಪ್ರಭಾವದಿಂದಾಗಿ ಹೆಚ್ಚೆಚ್ಚು ಜನರು ಇಂಗ್ಲಿಷನ್ನು ಮಾತನಾಡುತ್ತಿರುವುದರಿಂದ ಅವರ ಮಾತೃಭಾಷೆಯ ಬಳಕೆ ಕಡಿಮೆಯಾಗಿಬಿಟ್ಟಿದೆ; ಭಾಷೆ-ಉಪಭಾಷೆಗಳು ನಶಿಸುತ್ತಿವೆ. ಹೀಗೇ ಮುಂದುವರಿದರೆ ಪ್ರಪಂಚದ ಕೆಲವು ಭಾಷೆಗಳನ್ನು ಹೊರತುಪಡಿಸಿ ಉಳಿದವುಮಾತನಾಡುವವರಿಲ್ಲದೆ ನಶಿಸಿ ಹೋಗುತ್ತವೆ. ಮೂಲನಿವಾಸಿಗಳ ಭಾಷೆಯಂತೂ ಕೇಳುವಂತಿಲ್ಲ. ಜನಸಂಖ್ಯೆಯೂ ಕಡಿಮೆಯಿರುವುದರಿಂದ ಅವರ ಸಂತತಿಯೊಂದಿಗೇ ಅವರ ಭಾಷೆ ಮತ್ತು ಜ್ಞಾನವೂ ಮುಗಿದುಹೋಗುತ್ತದೆ. ಯಾವುದೇ ಭಾಷೆಯೂ ಜೀವಂತವಾಗಿರಬೇಕಾದರೆ ಜನರು ಅದನ್ನು ಬಳಸಬೇಕು. ಇಲ್ಲವಾದಲ್ಲಿ ಅದು ದಾಖಲೆಗಳ ಗುಂಪಿಗೆ ಸೇರಿಕೊಳ್ಳುತ್ತದಷ್ಟೇ. ಇದಕ್ಕೆ ಉದಾಹರಣೆ ದಕ್ಷಿಣ ಭಾರತದ ಕೊಚಿನ್‌ ಇಂಡೋ ಪೋರ್ಚುಗೀಸ್‌ ಕ್ರಿಯೊಲಿ ಭಾಷೆ ಮತ್ತು ಅಂಡಮಾನ್‌ ದ್ವೀಪದ ಅಕಾ-ಬೋ ಎಂಬ ಮೂಲನಿವಾಸಿ ಭಾಷೆಯನ್ನು ಮಾತನಾಡುವವರೇ ಉಳಿದಿಲ್ಲ. ಈ ಭಾಷೆಗಳನ್ನು ಮಾತನಾಡುತ್ತಿದ್ದ ಇಬ್ಬರೇ ಇಬ್ಬರು ಈಗ ಇಲ್ಲ. ಅವರೊಟ್ಟಿಗೆ ಅದೆಷ್ಟು ಮಾಹಿತಿಗಳು ಮಣ್ಣಾದವೋ ಗೊತ್ತಿಲ್ಲ.

3000 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೂ ಈ ಅಪಾಯ ತಪ್ಪಿದ್ದಲ್ಲ. ಎಲ್ಲ ಭಾಷೆಗಳಿಗೂ ಅವುಗಳಿಗೇ ಸ್ವಂತವಾಗಿಬಿಟ್ಟಿರುವ ಜ್ಞಾನ-ವಿಜ್ಞಾನವಿರುತ್ತದೆ. ಅದನ್ನು ಆವಿಷ್ಕರಿಸಿ ಜಗತ್ತಿಗೆ ಹಂಚಬೇಕು. ಭಾಷೆ, ಜ್ಞಾನ ಮತ್ತು ವಿಜ್ಞಾನಗಳ ನಡುವಿನ ಸಂಬಂಧ ನಿಕಟವಾದುದು. ಹಾಗಾಗಿ ವಿಜ್ಞಾನ ಬೆಳೆಯಬೇಕಾದರೆ ಜ್ಞಾನ ಮುಖ್ಯ. ಜ್ಞಾನ ಬೆಳೆಯಬೇಕಾದರೆ ಭಾಷೆ ಉಳಿಯುವುದೂ ಅಷ್ಟೇ ಮುಖ್ಯ.

v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT