ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನರಂಜನೆ ಕಾರ್ಯಕ್ರಮಗಳ ಲೈವ್‌ ನಡೆಸುತ್ತಿದೆ BookMyShow

Last Updated 1 ಜುಲೈ 2020, 7:11 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಕೋವಿಡ್‌–19ನಿಂದಾಗಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ವೀಕ್ಷಣೆ, ರಂಗಮಂದಿರಗಳಲ್ಲಿ ನಾಟಕ, ನೃತ್ಯ, ಸಂಗೀತ ಕಾರ್ಯಗಳನ್ನು ನೇರವಾಗಿ ನೋಡುವ ಅವಕಾಶ ಇಲ್ಲವಾಗಿದೆ. ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ವೇದಿಕೆಯಾಗಿರುವ ಬುಕ್‌ಮೈಶೋ (ಬಿಎಂಎಸ್‌) ಇದೀಗ ಜಾಗತಿಕವಾಗಿ ಆನ್‌ಲೈನ್‌ ಸ್ಟ್ರೀಮಿಂಗ್‌ ಸೌಲಭ್ಯವನ್ನು ಗ್ರಾಹಕರಿಗೆ ನೀಡಿದೆ. ಮನೆಯಲ್ಲಿಯೇ ಕುಳಿತು ಮನರಂಜನೆ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.

ಸಂಗೀತ, ಹಾಸ್ಯ ಹಾಗೂ ಇತರೆ ಪ್ರದರ್ಶನ ಕಲೆಗಳ ಕಾರ್ಯಕ್ರಮಗಳು ಆನ್‌ಲೈನ್‌ ನೇರ ಪ್ರಸಾರವಾಗುತ್ತಿವೆ. 'ಬುಕ್‌ಮೈಶೋ ಆನ್‌ಲೈನ್‌' ಉಚಿತ ಹಾಗೂ ಪಾವತಿಸಿ ವೀಕ್ಷಿಸುವ ಕಾರ್ಯಕ್ರಮಗಳನ್ನು ಲೈವ್ ಮಾಡುತ್ತಿದೆ. ಬುಕ್‌ಮೈಶೋ ಆ್ಯಪ್‌ ಮತ್ತು ವೆಬ್‌ ಎರಡೂ ಕಡೆ ಲೈವ್‌ ಸ್ಟ್ರೀಮಿಂಗ್‌ ನಡೆಯಲಿದ್ದು, ನಿಮಿಷಕ್ಕೆ ಒಂದೇ ಬಾರಿಗೆ 50,000 ಜನರು ವೀಕ್ಷಿಸಿದರೂ ಯಾವುದೇ ಅಡಚಣೆಯಾಗದಂತೆ ವ್ಯವಸ್ಥೆ ರೂಪಿಸಲಾಗಿದೆ. ಏಕಕಾಲಕ್ಕೆ ವೀಕ್ಷಿಸುವ ಸಂಖ್ಯೆಯನ್ನು 1 ಲಕ್ಷಕ್ಕೆ ವಿಸ್ತರಿಸುವ ಪ್ರಯತ್ನವನ್ನು ವೇದಿಕೆ ನಡೆಸುತ್ತಿದೆ.

'ಕೋವಿಡ್‌–19 ಲಾಕ್‌ಡೌನ್‌ನಲ್ಲಿ ಬಳಕೆದಾರರಲ್ಲಿ ಮನರಂಜನೆಯ ಬಗೆಗಿನ ಆಸಕ್ತಿ ಬದಲಾಗಿರುವುದನ್ನು ಗಮನಿಸಿದ್ದೇವೆ. ಇದ್ದಲ್ಲಿಯೇ ದೇಶದ ಹಾಗೂ ಜಾಗತಿಕ ಮಟ್ಟದ ಮನರಂಜನೆ ಕಾರ್ಯಕ್ರಮಗಳನ್ನು ವೀಕ್ಷಿಸಲು ಅನುವಾಗುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದೇವೆ' ಎಂದು ಬುಕ್‌ಮೈಶೋ ಸಹ–ಸಂಸ್ಥಾಪಕ ಹಾಗೂ ನಿರ್ದೇಶಕ ಪರಿಕ್ಷಿತ್‌ ದಾರ್ ಹೇಳಿದ್ದಾರೆ.

ವಿಡಿಯೊ ಸ್ಟ್ರೀಮಿಂಗ್‌ಗಾಗಿ ವಿಡಿಯೊ ತಂತ್ರಜ್ಞಾನ ವೇದಿಕೆಯಾಗಿರುವ ಬ್ರೈಟ್‌ಕೋವ್ (Brightcove) ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಪ್ರಮುಖವಾಗಿ ಸಿನಿಮಾ ಟಿಕೆಟ್‌ಗಳ ಬುಕ್ಕಿಂಗ್‌ನಿಂದ ಹಣ ಗಳಿಸುವ ಬುಕ್‌ಮೈಶೋ ವೇದಿಕೆಗೆ ಕೋವಿಡ್‌–19ನಿಂದಾಗಿ ತೀವ್ರ ಪೆಟ್ಟು ಬಿದ್ದಿದೆ. ಸಿನಿಮಾ ಮಂದಿರಗಳು ತೆರೆಯದಿರುವುದು, ಒಟಿಟಿಗಳಲ್ಲಿಯೇ ಸಿನಿಮಾ ವೀಕ್ಷಣೆ ಹೆಚ್ಚಿರುವುದು ಹಾಗೂ ಹೊಸ ಸಿನಿಮಾಗಳ ತಯಾರಿ ಆಗದಿರುವುದರಿಂದ ಈ ವೇದಿಕೆಗೆ ಹಣದ ಹರಿವು ಕಡಿಮೆಯಾಗಿದೆ.

ಕೋವಿಡ್–19 ಪರಿಸ್ಥಿತಿ ಗಮನಿಸಿ ಆಗಸ್ಟ್‌–ಸೆಪ್ಟೆಂಬರ್‌ನಿಂದ ಸಿನಿಮಾ ಬುಕ್ಕಿಂಗ್‌ ಆರಂಭವಾಗುವ ಸಾಧ್ಯತೆ ಇದೆ. ಕಾರ್ಯಕ್ರಮಗಳ ಲೈವ್‌ ಸ್ಟ್ರೀಮಿಂಗ್‌ಗೆ ಪ್ರಾಮುಖ್ಯತೆ ನೀಡಲಾಗಿದ್ದು, ಅದನ್ನು ಮುಂದುವರಿಸುವುದಾಗಿ ದಾರ್‌ ಹೇಳಿದ್ದಾರೆ.

ಪ್ರಸ್ತುತ ಪ್ರತಿ ಕಾರ್ಯಕ್ರಮಕ್ಕೆ ನಿಗದಿ ಪಡಿಸಿರುವ ಮೊತ್ತ ಪಾವತಿಸಿ ವೀಕ್ಷಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಒಟ್ಟಿಗೆ ಹಣ ನೀಡಿ, ಕಾರ್ಯಕ್ರಮ ವೀಕ್ಷಿಸುವ ಸಬ್‌ಸ್ಕ್ರಿಪ್ಷನ್‌ ವ್ಯವಸ್ಥೆಯನ್ನು ತರುವ ಪ್ರಯತ್ನ ನಡೆಸಿರುವುದಾಗಿ ತಿಳಿಸಿದ್ದಾರೆ. ಬಿಎಂಎಸ್‌ ಆನ್‌ಲೈನ್‌ ಕಾರ್ಯಕ್ರಮಗಳನ್ನು ಡೌನ್‌ಲೋಡ್‌ ಆಗದಿರುವಂತೆ ನಿರ್ಬಂಧಿಸಲಾಗಿದೆ. ವಾಟರ್‌ಮಾರ್ಕ್‌ ಹಾಗೂ ಹಕ್ಕು ಸ್ವಾಮ್ಯದ ಬಗ್ಗೆ ಗಮನ ಹರಿಸಲಾಗಿದೆ ಎಂದಿದ್ದಾರೆ.

ಕಳೆದ ಮೂರು ತಿಂಗಳಲ್ಲಿ ಈ ವೇದಿಕೆ ಮೂಲಕ ಸುಮಾರು 750 ಆನ್‌ಲೈನ್‌ ಕಾರ್ಯಕ್ರಮಗಳ ಸ್ಟ್ರೀಮಿಂಗ್‌ ನಡೆದಿದೆ. ಪ್ರಸ್ತುತ ನಿತ್ಯ 100ರಿಂದ 150 ಕಾರ್ಯಕ್ರಮಗಳನ್ನು ನಡೆಸುವ ಪ್ರಯತ್ನದಲ್ಲಿದೆ. ಮೊದಲ ನಾಲ್ಕು ವಾರಗಳಲ್ಲಿಯೇ ಸುಮಾರು 40 ಲಕ್ಷ ಜನರು ಕಾರ್ಯಕ್ರಮ ವೀಕ್ಷಿಸಿದ್ದು, ಪ್ರತಿ ವಾರ 5 ಲಕ್ಷ ವೀಕ್ಷಕರು ಸೇರ್ಪಡೆಯಾಗುತ್ತಿದ್ದಾರೆ. ಆನ್‌ಲೈನ್‌ ಕಾರ್ಯಕ್ರಮಗಳ ವೀಕ್ಷಣೆ ವಿಡಿಯೊ ಗುಣಮಟ್ಟವನ್ನು ಬದಲಿಸಿಕೊಳ್ಳಬಹುದು. ಭಾಷೆ ಆಯ್ಕೆಗಳು, ಸಬ್‌ಟೈಟಲ್‌ ಸೇರಿದಂತೆ ಇತರೆ ಆಯ್ಕೆಗಳನ್ನು ಲೈವ್‌ ಸ್ಟ್ರೀಮ್‌ ಒಳಗೊಂಡಿರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT