ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ತಿಂಗಳು ಕೆಡೋದಿಲ್ಲ ಟೊಮೆಟೊ!

ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಿಂದ ಸರಳ ತಂತ್ರಜ್ಞಾನ
Last Updated 3 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಮೈಸೂರು: ಬೆಲೆ ಏರಿಳಿತದ ಹೊಡೆತಕ್ಕೆ ಸಿಲುಕಿ ತತ್ತರಿಸುವ ಟೊಮೆಟೊ ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ, ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ (ಸಿಎಫ್‌ಟಿಆರ್‌ಐ) ವಿಜ್ಞಾನಿಗಳು ಸರಳ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಸಿಎಫ್‌ಟಿಆರ್‌ಐನ ಆಹಾರ ಪ್ಯಾಕೇಜಿಂಗ್ ವಿಭಾಗದ ನಾಲ್ವರು ವಿಜ್ಞಾನಿಗಳ ತಂಡವು ಒಂದು ವರ್ಷ ಸತತ ಅಧ್ಯಯನ ನಡೆಸಿ, ನಾಲ್ಕು ತಿಂಗಳವರೆಗೂ ಟೊಮೆಟೊ ಕೆಡದಂತೆ ಇಡುವ ವಿಧಾನವನ್ನು ಕಂಡುಹಿಡಿದಿದೆ.

ಈ ವಿಧಾನದಲ್ಲಿ ಪ್ರಯೋಗಾಲಯದಲ್ಲಿ ಒಂದು ಕೆ.ಜಿ. ಟೊಮೆಟೊ ಸಂರಕ್ಷಿಸಿಡಲು ಖರ್ಚಾಗುವುದು ₹ 3ರಿಂದ ₹ 4. ಆದರೆ ಇದು ರೈತರೇ ಸುಲಭವಾಗಿ ಬಳಸಬಹುದಾದ ತಂತ್ರಜ್ಞಾನವೂ ಆಗಿರುವುದರಿಂದ ಅವರಿಗೆ ಖರ್ಚು ಇನ್ನೂ ಕಡಿಮೆ ಆಗುತ್ತದೆ. ‌ರೈತರು ತಮ್ಮ ಜಮೀನಿನಲ್ಲಿ ಅಗತ್ಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬಹುದು ಎಂದು ಸಿಎಫ್‌ಟಿಆರ್‌ಐನ ಆಹಾರ ಪ್ಯಾಕೇಜಿಂಗ್ ವಿಭಾಗದ ಮುಖ್ಯಸ್ಥ ಎಚ್‌.ಎಸ್.ಸತೀಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸರಳ ವಿಧಾನ: ಇದಕ್ಕೆ ದುಬಾರಿ ಯಂತ್ರೋಪಕರಣ ಬೇಕಿಲ್ಲ. ಶೈತ್ಯಾಗಾರದ ಅಗತ್ಯವಿಲ್ಲ. ಪಿಎಚ್‌ ಮಟ್ಟ ಶೇ 3.9ರಿಂದ 4ರಷ್ಟಿರುವ ಸಿಟ್ರಿಕ್‌ ಆ್ಯಸಿಡ್‌ ಮಿಶ್ರಿತ ನೀರಿನಲ್ಲಿ, ಶೇ 3ರಷ್ಟು ಉಪ್ಪು (ಸೋಡಿಯಂ ಕ್ಲೋರೈಡ್‌) ಮಿಶ್ರಣ ಮಾಡಬೇಕು.
ಈ ದ್ರಾವಣವನ್ನು ಕುದಿಸಿ, ಆರಿಸಿದ ಬಳಿಕ ಟೊಮೆಟೊವನ್ನು ಇಡಿಯಾಗಿ ಅಥವಾ ಹೋಳು ಮಾಡಿ ಹಾಕಿದರೆ, ಅದು ಹಾಳಾಗುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.

‘ದ್ರಾವಣದಲ್ಲಿ ಟೊಮೆಟೊ ಹಾಕಿ, ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಪ್ಯಾಕ್‌ ಮಾಡಿದರೆ ನಾಲ್ಕು ತಿಂಗಳು ಕೆಡುವುದಿಲ್ಲ. ತನ್ನ ಬಣ್ಣವನ್ನು ಕೊಂಚ ಕಳೆದುಕೊಂಡಿರುತ್ತದೆ. ಇದಕ್ಕೆ ಹೆಚ್ಚೇನೂ ಖರ್ಚಾಗದು. ಸ್ವತಃ ರೈತರೇ ಚಿಕ್ಕ ಪ್ರಮಾಣದಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಳ್ಳಬಹುದು’ ಎಂದು ಅವರು ತಿಳಿಸಿದರು.

‘ಈ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಬಂದಾಗ ಟೊಮೆಟೊ ಮಾರಾಟ ಮಾಡಬಹುದು. ದ್ರಾವಣ ತಯಾರಿಕೆಗೆ ಬಳಸಿದ ನೀರನ್ನು ಕೂಡ ಅಡುಗೆಗೆ ಬಳಸಿಕೊಳ್ಳಬಹುದು’ ಎಂದು ಸತೀಶ್‌ ಮಾಹಿತಿ ನೀಡಿದರು.

ಕೋಲಾರದಲ್ಲಿ ಕಾರ್ಯಾಗಾರ

‘ಕೋಲಾರ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಟೊಮೆಟೊ ಬೆಳೆಯುತ್ತಾರೆ. ಈ ತಂತ್ರಜ್ಞಾನವನ್ನು ರೈತರಿಗೆ ಪರಿಚಯಿಸಲು ಕರ್ನಾಟಕ ಫುಡ್ ಲಿಮಿಟೆಡ್ ಮುಂದಾಗಿದೆ. ಈ ಸಂಬಂಧ ನಮ್ಮೊಂದಿಗೆ ಮಾತುಕತೆಯನ್ನೂ ನಡೆಸಿದೆ. ಶೀಘ್ರದಲ್ಲೇ ಕಾರ್ಯಾಗಾರದ ಮೂಲಕ ರೈತರಿಗೆ ಉಚಿತವಾಗಿ ಈ ತಂತ್ರಜ್ಞಾನ ಪರಿಚಯಿಸಲಾಗುವುದು’ ಎಂದು ಎಚ್‌.ಎಸ್. ಸತೀಶ್‌ ಅವರು ತಿಳಿಸಿದರು.

***

ಟೊಮೆಟೊ ಮಾದರಿಯನ್ನೇ ಇನ್ನಿತರ ತರಕಾರಿಗಳಿಗೂ ಅಳವಡಿಸುವ ಸಂಶೋಧನೆ ನಡೆದಿದೆ. ಇದು ಯಶಸ್ವಿಯಾದರೆ ರೈತರು ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆ

ಎಚ್‌.ಎಸ್.ಸತೀಶ್‌, ಪ್ಯಾಕೇಜಿಂಗ್ ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT