ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ: ಕರೆಯಲ್ಲಿ ಕಾಣಿಸೀತೆ ಕರೆದವನ ಹೆಸರು!

Last Updated 14 ಡಿಸೆಂಬರ್ 2022, 0:15 IST
ಅಕ್ಷರ ಗಾತ್ರ

ಅದು ಲ್ಯಾಂಡ್‌ಲೈನ್‌ ಟೆಲಿಫೋನ್‌ಗಳ ಕಾಲ. ಮನೆಯ ಮೂಲೆಯಲ್ಲಿ ಒಂದು ಉಣ್ಣೆಯ ಬಟ್ಟೆಯನ್ನು ಮುಚ್ಚಿಕೊಂಡು ಕುಳಿತ ರಿಸೀವರ್‌ ಪಕ್ಕದಲ್ಲೇ ಒಂದು ಅಂಗೈ ಅಗಲದ ಪುಸ್ತಕ. ಅದರಲ್ಲಿ ಊರಿನವರ, ಸಂಬಂಧಿಕರ ಫೋನ್‌ ನಂಬರುಗಳು. ಇದು ಆ ಕಾಲದ ಕಾಲರ್ ಐಡಿ. ಆಗ ಲ್ಯಾಂಡ್‌ಲೈನ್‌ನಲ್ಲಿ ಕರೆ ಮಾಡಿದವರ ಫೋನ್ ನಂಬರೂ ಕಾಣಿಸುತ್ತಿರಲಿಲ್ಲವಾದ್ದರಿಂದ ಅವರು ಫೋನ್ ಮಾಡಿದಾಗಲೇ ಹೆಸರೂ, ಫೋನ್‌ ನಂಬರೂ ಬರೆದಿಟ್ಟುಕೊಳ್ಳಬೇಕಿತ್ತು.

ಆಗ ಬಿಎಸ್‌ಎನ್‌ಎಲ್‌ ವರ್ಷಕ್ಕೊಮ್ಮೆ ಪ್ರಕಟಿಸುತ್ತಿದ್ದ ಫೋನ್‌ ನಂಬರ್ ಡೈರೆಕ್ಟರಿಯೇ ಈಗಿನ ಟ್ರ್ಯೂಕಾಲರ್‌ ಅಥವಾ ಭಾರತ್‌ ಕಾಲರ್ ಐಡಿ. ಆ ಬೃಹತ್ ಗಾತ್ರದ ಪುಸ್ತಕವನ್ನು ಹೊತ್ತುಕೊಂಡು ತರುವುದೇ ಒಂದು ಸಾಹಸವೂ ಕುತೂಹಲವೂ ಆಗಿತ್ತು. ಬಹುಶಃ 2007-08ರಲ್ಲೇ ಬಿಎಸ್‌ಎನ್‌ಎಲ್‌ನ ಟೆಲಿಫೋನ್ ಡೈರೆಕ್ಟರಿ ಎಂಬುದು ತನ್ನ ಹಳದಿ ಹೊಳಪನ್ನು ಕಳೆದುಕೊಳ್ಳುತ್ತ ಬಂತು. ಅದಕ್ಕೆ ಮುಖ್ಯ ಕಾರಣವೇ ಆನ್‌ಲೈನ್‌ ಡೈರೆಕ್ಟರಿ.

ಆಮೇಲೆ, ಮೊಬೈಲ್‌ ಫೋನ್‌ ಬಂದ ಮೇಲೆ ಫೋನ್‌ನಲ್ಲೇ ಕಾಂಟ್ಯಾಕ್ಟ್‌ ಲಿಸ್ಟ್‌ಗಳನ್ನು ಸೇವ್ ಮಾಡಿಕೊಳ್ಳುವ ಅನುಕೂಲ ಇದ್ದುದರಿಂದ ಈ ಫೋನ್ ಡೈರೆಕ್ಟರಿ ಎಂಬ ಪರಿಕಲ್ಪನೆಯನ್ನೇ ಹೊಸಕಿ ಹಾಕಿದವು! ಈಗಲೂ ಆನ್‌ಲೈನ್‌ ಟೆಲಿಫೋನ್ ಡೈರೆಕ್ಟರಿಗಳಿದ್ದರೂ ಅವು ವಾಣಿಜ್ಯಿಕ ಮಾಹಿತಿಯನ್ನು ನೀಡುವ ಪರ್ಯಾಯ ವಿಧಾನವನ್ನೇ ಮುಖ್ಯವಾಗಿಸಿಕೊಂಡಿವೆ.

ಇನ್ನು ಫೋನ್ ಮಾಡಲು ಬೇಕಾದ ಹೆಸರುಗಳನ್ನು ಹುಡುಕುವುದು ಟೆಲಿಫೋನ್ ಡೈರೆಕ್ಟರಿಯ ಕೆಲಸವಾದರೆ, ಫೋನ್ ಯಾರಿಂದ ಬಂತು ಅನ್ನುವುದರ ಗುರುತು ಕಂಡುಕೊಳ್ಳುವುದು ಕೂಡ ಅಷ್ಟೇ ಮುಖ್ಯ ಎಂಬಂತಾಯಿತು. ಈಗಂತೂ ರೋಬೋ ಕಾಲ್‌ಗಳು (ಕಂಪ್ಯೂಟರ್‌ ಮೂಲಕ ಕರೆ ಮಾಡಿ ಮೊದಲೇ ಧ್ವನಿ ಮುದ್ರಿಸಿದ ಸಂದೇಶಗಳನ್ನು ಪ್ರಸಾರ ಮಾಡುವುದು) ಬಂದಮೇಲೆ ಈ ಅಗತ್ಯ ಇನ್ನೂ ಹೆಚ್ಚಾಗಿದೆ. ಇದಕ್ಕೆ ಖಾಸಗಿ ಕಂಪನಿಗಳ ಆ್ಯಪ್‌ಗಳು ಅಥವಾ ಸೌಲಭ್ಯಗಳು ಇವೆಯಾದರೂ ಅವುಗಳನ್ನೂ ಮೀರಿಸುವ ತಂತ್ರವನ್ನು ಸ್ಪ್ಯಾಮ್‌ ಮಾಡುವವರು ಕಲಿತುಕೊಂಡಿದ್ದಾರೆ.

ಇಂಥ ಹೊತ್ತಲ್ಲಿ ಭಾರತೀಯ ಟೆಲಿಕಾಂ ನಿಯಂತ್ರಣಾ ಪ್ರಾಧಿಕಾರ (‘ಟ್ರಾಯ್‌’) ಒಂದು ಪ್ರಸ್ತಾವನೆಯನ್ನು ಮಂಡಿಸಿದೆ. ಅದೇನೆಂದರೆ, ಫೋನ್ ಮಾಡಿದವರ ಹೆಸರನ್ನೂ ಟೆಲಿಕಾಂ ಸೇವೆ ಪೂರೈಕೆದಾರರು ತಮ್ಮ ಗ್ರಾಹಕನಿಗೆ ತೋರಿಸಬೇಕು ಎಂಬುದು! ಅಂದರೆ, ಕರೆ ಬಂದಾಗ ಯಾರು ಕರೆ ಮಾಡಿದವರು ಎಂಬ ಹೆಸರೂ, ಫೋನ್‌ ನಂಬರ್‌ ಜೊತೆಗೇ ಕರೆ ಸ್ವೀಕರಿಸುವವನಿಗೆ ಕಾಣಿಸಬೇಕು ಎಂಬುದು ಈ ಪ್ರಸ್ತಾವನೆಯ ತಿರುಳು. ಸದ್ಯಕ್ಕೆ ಇದು ಪ್ರಸ್ತಾವನೆಯ ಹಂತದಲ್ಲಿದೆ. ಡಿಸೆಂಬರ್ 27ರ ವರೆಗೂ ಜನರು ಈ ಬಗ್ಗೆ ತಮ್ಮ ಸಲಹೆ ಸೂಚನೆಗಳನ್ನು ಒದಗಿಸಬಹುದು.

ಇಂಥದ್ದೊಂದು ವ್ಯವಸ್ಥೆ ಜಾರಿಗೆ ತರುವ ತನ್ನ ಮೂಲ ಉದ್ದೇಶ ಸ್ಪ್ಯಾಮ್‌ಗಳನ್ನು ನಿಲ್ಲಿಸುವುದು ಎಂದು ಟ್ರಾಯ್ ಹೇಳಿದೆ. ಆದರೆ, ವಾಸ್ತವವಾಗಿ ಸ್ಪ್ಯಾಮ್‌ ನಿಲ್ಲಿಸುವ ಈ ಉದ್ದೇಶಕ್ಕೆ ಪೂರಕವಾಗಿ ಈ ಹಿಂದೆ ‘ವಾಣಿಜ್ಯಿಕ ಕರೆಗಳನ್ನು ಮಾಡುವವರು ನೋಂದಣಿ ಮಾಡಿಕೊಳ್ಳಬೇಕು’ ಎಂಬ ನಿಯಮವನ್ನು ಟ್ರಾಯ್ ತಂದಿತ್ತು. ಆಗ, ಇದಕ್ಕೆ ಬೇರೆ ದಾರಿ ಕಂಡುಕೊಂಡ ಸ್ಪ್ಯಾಮ್‌ ಕಾಲ್‌ ಮಾಡುವವರು ಗೃಹಿಣಿಯರು, ಫ್ರೀಲ್ಯಾನ್ಸರ್‌ಗಳನ್ನು ನೇಮಕ ಮಾಡಿಕೊಂಡು, ಅವರ ಹೆಸರಿನಲ್ಲೇ ಫೋನ್ ನಂಬರ್‌ ತೆಗೆಸಿಕೊಟ್ಟು ಕರೆ ಮಾಡಿಸುತ್ತಿದ್ದರು. ಅದರ ನಂತರ ರೋಬೋ ಕಾಲ್‌ ಮಾಡುವ ವ್ಯವಸ್ಥೆಯೂ ಬಂತು. ಇವನ್ನೆಲ್ಲ ‘ನೊಂದಣಿ’ ವ್ಯವಸ್ಥೆಯೂ ತಡೆಯಲು ಸಾಧ್ಯವಾಗಲಿಲ್ಲ. ಅದನ್ನು ಮೀರಿಯೂ ಇಂದಿಗೂ ದಿನಕ್ಕೆ 5-6 ಸ್ಪ್ಯಾಮ್‌ ಕರೆಗಳು ಒಬ್ಬ ವ್ಯಕ್ತಿಗೆ ಬರುತ್ತಿವೆ ಎಂದು ಬಳಕೆದಾರರು ಅಲವತ್ತುಕೊಳ್ಳುವುದು ಮುಂದುವರಿದಿದೆ.

ಹೀಗಾಗಿ, ಸ್ಪ್ಯಾಮ್‌ ಕರೆಗಳನ್ನು ತಡೆಯುವ ಉದ್ದೇಶ ಈ ಹೊಸ ವ್ಯವಸ್ಥೆಯಿಂದ ಎಷ್ಟು ಪ್ರಮಾಣದಲ್ಲಿ ನೆರವೇರುತ್ತದೆ ಎಂಬ ಬಗ್ಗೆ ಈಗಲೂ ಅನುಮಾನಗಳಿವೆ. ಆದರೆ, ಒಂದಂತೂ ಸ್ಪಷ್ಟ. ಕರೆ ಸ್ವೀಕರಿಸುವವನಿಗೆ ಈ ಕರೆಯನ್ನು ತಾನು ತೆಗೆದುಕೊಳ್ಳಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲು ಇದು ಇನ್ನಷ್ಟು ಸಹಕಾರಿಯಾಗುವುದರಲ್ಲಿ ಯಾವ ಅನುಮಾನವೂ ಇಲ್ಲ.

ಇನ್ನು ಗೌಪ್ಯತೆ ವಿಷಯದ ಬಗ್ಗೆಯೂ ಈ ಪ್ರಸ್ತಾವನೆ ಚರ್ಚೆಯನ್ನು ಹುಟ್ಟುಹಾಕಿದೆ. ಆದರೆ, ಇದು ಎರಡು ಅಲಗಿನ ಕತ್ತಿ! ಕರೆ ಮಾಡುವವರಿಗೆ ಗೌಪ್ಯತೆ ಉಲ್ಲಂಘನೆಯ ಭೀತಿ ಇದ್ದರೆ, ಕರೆ ಸ್ವೀಕರಿಸುವವರಿಗೆ ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದಕ್ಕೆ ಇದು ಅನುಕೂಲಕರ! ಉದಾಹರಣೆಗೆ, ಕರೆ ಮಾಡುವವರು ತಮ್ಮ ಹೆಸರು ಗೌಪ್ಯವಾಗಿ ಇರಬೇಕು ಎಂದು ಬಯಸಿದರೆ ಅದು ಸಾಧ್ಯವಾಗುವುದಿಲ್ಲ. ಅದೇ ರೀತಿ, ಕರೆ ಸ್ವೀಕರಿಸುವವರಿಗೆ ಹೆಸರು ಕಾಣಿಸುವುದರಿಂದ ಈ ವ್ಯಕ್ತಿಯ ಕರೆಯನ್ನು ಸ್ವೀಕರಿಸಬೇಕೆ ಅಥವಾ ಬೇಡವೇ ಎಂದು ನಿರ್ಧರಿಸಿಕೊಂಡು ಮುಂದುವರಿಯಬಹುದು. ಆಗ ವ್ಯಕ್ತಿಯ ಗೌಪ್ಯತೆ ರಕ್ಷಣೆಯಾಗುತ್ತದೆ. ಕರೆ ಮಾಡಿದವರು ಯಾರು ಎಂದು ಗೊತ್ತಿಲ್ಲದೇ ಬರಿ ಸಂಖ್ಯೆಯನ್ನು ನೋಡಿಕೊಂಡು ಕರೆ ಸ್ವೀಕರಿಸಿ ತೊಂದರೆಗೆ ಒಳಗಾಗುವ ಅಪಾಯ ಕಡಿಮೆಯಗುತ್ತದೆ. ಹೀಗಾಗಿ, ಗೌಪ್ಯತೆ ವಿಷಯದಲ್ಲಿ ನೋಡಿದರೆ ಅನುಕೂಲವೂ ಅನನುಕೂಲವೂ ಸಮಪ್ರಮಾಣದಲ್ಲಿದೆ.

ಈ ಫೋನ್ ನಂಬರ್ ಜೊತೆಗೆ ಹೆಸರನ್ನೂ ತೋರಿಸುವ ಅನುಕೂಲವನ್ನು ಕಲ್ಪಿಸುವುದಕ್ಕಾಗಿ ಟೆಲಿಕಾಂ ಕಂಪನಿಗಳಿಗೆ ನಾಲ್ಕು ಆಯ್ಕೆಗಳನ್ನು ಟ್ರಾಯ್‌ ನೀಡಿದೆ. ಕೇಂದ್ರೀಯ ಟೆಲಿಫೋನ್ ಡೈರೆಕ್ಟರಿಯಂಥದ್ದನ್ನು ನಿರ್ಮಿಸಿ, ಅದನ್ನು ಎಲ್ಲ ಟೆಲಿಕಾಂ ಪೂರೈಕೆದಾರರೂ ಬಳಸುವುದೂ ಸೇರಿದಂತೆ ಹಲವು ವಿಧಾನಗಳು ಪ್ರಸ್ತಾವನೆಯಲ್ಲಿವೆ. ಆದರೆ, ಕೆಲವು ಪ್ರಸ್ತಾವನೆಗಳನ್ನು ಜಾರಿಗೆ ತಂದಲ್ಲಿ ಅದರಿಂದ ಎರಡು ಮೊಬೈಲ್ ಸಂಖ್ಯೆಯ ಮಧ್ಯೆ ಕರೆ ಸಂಪರ್ಕವಾಗುವಲ್ಲಿ ವಿಳಂಬವಾಗುವ ಸಾಧ್ಯತೆಯೂ ಇದೆ. ಅಲ್ಲದೆ, ಈ ವ್ಯವಸ್ಥೆಯನ್ನು ಹಳೆಯ, ಸ್ಮಾರ್ಟ್‌ಫೋನ್‌ ಅಲ್ಲದ ಫೋನ್‌ಗಳಲ್ಲಿ ಜಾರಿಗೆ ಹೇಗೆ ತರಲಾಗುತ್ತದೆ ಎಂಬುದೂ ಸವಾಲಿನ ಸಂಗತಿಯೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT