ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ನಿಲ್ಲಿಸಿದ ಆಕಾಶದ ಕಿವಿ

Last Updated 6 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಕೆರಿಬಿಯನ್ ದ್ವೀಪ ಪೋರ್ಟೊರಿಕೊದ ದಟ್ಟ ಕಾಡಿನ ನಡುವೆ ನಿರ್ಮಿಸಲಾಗಿದ್ದ ಬೃಹತ್ ರೇಡಿಯೊ ದೂರದರ್ಶಕ ‘ಅರೆಸಿಬೊ’ ಇತ್ತೀಚೆಗೆ ಕುಸಿದು ಬಿದ್ದು ಇತಿಹಾಸದ ಪುಟ ಸೇರಿದೆ. ಆದರೆ, ಅದು ಮಾಡಿರುವ ಸಾಧನೆಗಳ ಪಟ್ಟಿ ಚಿನ್ನದಂತೆ ಹೊಳೆಯುತ್ತಲೇ ಇದೆಯಲ್ಲ!

ಇದು ಆಕಾಶಕಾಯಗಳನ್ನು ನೇರವಾಗಿ ವೀಕ್ಷಿಸುವ ಮಸೂರ – ಕನ್ನಡಿಯ ದೂರದರ್ಶಕವಲ್ಲ. ಮೊದಲು ಕೇಳಿಸಿಕೊಂಡು, ನಂತರ ಕೇಳಿಸಿಕೊಂಡಿದ್ದನ್ನೇ ಚಿತ್ರವನ್ನಾಗಿ ರಚಿಸಿ ತೋರಿಸಬಲ್ಲ ರೇಡಿಯೊ ದೂರದರ್ಶಕ. ಹಲವು ಜ್ಯೋತಿರ್ವರ್ಷಗಳ ದೂರದಿಂದ ಹರಿದು ಬರುವ ರೇಡಿಯೊ ತರಂಗಗಳನ್ನು (ಭೂಮಿ ತಲುಪುವ ವೇಳೆಗೆ ಅತ್ಯಂತ ಕ್ಷೀಣವಾಗುವ ಬೆಳಕಿನ ತರಂಗ) ಗ್ರಹಿಸುವ ಶಕ್ತಿ ಹೊಂದಿದ್ದ ಇದನ್ನು ‘ಬಾಹ್ಯಾಕಾಶದ ಕಿವಿ’ ಎಂದೇ ಕರೆಯುತ್ತಿದ್ದರು. ಅನಂತ ವಿಶ್ವದ ಯಾವುದೋ ಭಾಗದಲ್ಲಿ ಅನ್ಯಗ್ರಹ ಜೀವಿಗಳು ಇವೆ ಎಂಬುದರ ಪ್ರಪ್ರಥಮ ಮಾಹಿತಿ ನೀಡಿದ್ದೇ ಈ ಟೆಲಿಸ್ಕೋಪ್. ಹೆಸರು ಅರೆಸಿಬೊ.

1963ರಲ್ಲಿ ಮಿಲಿಟರಿ ಮತ್ತು ಖಗೋಳ ಅಧ್ಯಯನಕ್ಕಾಗಿ ಕೆರಿಬಿಯನ್ ದ್ವೀಪ ಪೋರ್ಟೊರಿಕೊದ ದಟ್ಟ ಕಾಡಿನ ನಡುವೆ ನಿರ್ಮಿಸಲಾಗಿದ್ದ 305 ಮೀಟರ್‌ನಷ್ಟು ದೊಡ್ಡ ಸ್ಫೆರಿಕಲ್ ರಿಫ್ಲೆಕ್ಟರ್ ಡಿಶ್ ಹೊಂದಿದ್ದ ಬೃಹತ್ ರೇಡಿಯೊ ದೂರದರ್ಶಕ ವ್ಯವಸ್ಥೆ ‘ಅರೆಸಿಬೊ’ ತನ್ನದೇ ತಾಂತ್ರಿಕ ದೋಷಗಳಿಂದ ಇತ್ತೀಚೆಗೆ ಕುಸಿದು ಬಿದ್ದು ಇತಿಹಾಸದ ಪುಟ ಸೇರಿದೆ. ದಶಕಗಳ ಕಾಲ ಅದರೊಟ್ಟಿಗೆ ಕೆಲಸ ಮಾಡಿದ್ದ ಖಗೋಳ ತಜ್ಞರು, ವಿಜ್ಞಾನಿಗಳು ಅದನ್ನು ಸಂದರ್ಶಿಸಿ ಮಾಹಿತಿ ಪಡೆಯುತ್ತಿದ್ದ ಖಗೋಳ ಆಸಕ್ತರು ಮತ್ತು ವಿದ್ಯಾರ್ಥಿಗಳು ತೀವ್ರ ಶಾಕ್‍ಗೆ ಒಳಗಾಗಿದ್ದಾರೆ.

ಅಮೆರಿಕದ ನ್ಯಾಶನಲ್ ಸೈನ್ಸ್ ಫೌಂಡೇಶನ್ ಒಡೆತನದ ನ್ಯಾಶನಲ್ ಆಸ್ಟ್ರಾನಮಿ ಅಂಡ್ ಅಯೊನೊಸ್ಫಿಯರ್ ಸೆಂಟರ್ (NAIC) ಎಂಬ ಅಧಿಕೃತ ಹೆಸರಿನ ಆಕಾಶ ವೀಕ್ಷಣಾಲಯ ಕಳೆದ ಐದು ದಶಕಗಳಿಂದ ಖಗೋಳ ವಿಜ್ಞಾನಿಗಳ, ವಿದ್ಯಾರ್ಥಿಗಳ, ಪ್ರವಾಸಿಗರ ಹಾಗೂ ಸೈ-ಫೈ ಸಿನಿಮಾ ನಿರ್ದೇಶಕರ ಹಾಟ್ ಫೆವರೀಟ್ ಆಗಿತ್ತು. ರಡಾರ್ (ರೇಡಿಯೊ ಡಿಟೆಕ್ಷನ್ ಅಂಡ್ ರೇಂಜಿಂಗ್), ಲಿಡರ್ (ಲೈಟ್ ಡಿಟೆಕ್ಷನ್ ಅಂಡ್ ರೇಂಜಿಂಗ್) ವ್ಯವಸ್ಥೆ, ಹಲವು ದೂರದರ್ಶಕಗಳು ಮತ್ತು ಪ್ರೇಕ್ಷಕ ಅಟ್ಟಣಿಗೆಯ ಅರೆಸಿಬೊ, ನಾಸಾದ ಸಹಯೋಗದಲ್ಲಿ ಖಗೋಳ ವಿದ್ಯಮಾನ ವೀಕ್ಷಣೆ ಹಾಗೂ ಅನ್ಯಗ್ರಹ ಜೀವಿಗಳ ಇರುವಿಕೆಯನ್ನು ಪತ್ತೆ ಹಚ್ಚಲು ಹದ್ದಿನ ಕಣ್ಣಿಟ್ಟು ಕಾಯುತ್ತಿತ್ತು.

ವಿಶಿಷ್ಟ ಕೆಲಸ, ಅಪರೂಪದ ಮಾಹಿತಿ
ಪ್ರಾರಂಭದಲ್ಲಿ ಸೋವಿಯತ್ ಒಕ್ಕೂಟ ಹಾರಿಸುವ ಕ್ಷಿಪಣಿಗಳನ್ನು ಗುರುತಿಸುವ ಮಿಲಿಟರಿ ಉದ್ದೇಶದಿಂದ 300 ದಶಲಕ್ಷ ಡಾಲರ್ ವೆಚ್ಚದಲ್ಲಿ ತಯಾರಾಗಿದ್ದ ಅರೆಸಿಬೊ ನಂತರದ ದಿನಗಳಲ್ಲಿ ವಿಶ್ವದ ಅನೇಕ ರಹಸ್ಯಗಳನ್ನರಿಯಲು ನೆರವಾಯಿತು. ನಾಸಾ ವಿಜ್ಞಾನಿಗಳು ಅರೆಸಿಬೊ ನೀಡಿದ ಚಂದ್ರನ ನಕ್ಷೆಗಳನ್ನಾಧರಿಸಿ ಅಪೋಲೊ 11ರಲ್ಲಿ ಪ್ರಯಾಣಿಸಿ ಚಂದ್ರನ ನೆಲದ ಮೇಲೆ ಕಾಲಿರಿಸಿದ ಜಾಗವನ್ನು ಖಚಿತವಾಗಿ ಪತ್ತೆ ಮಾಡಿದ್ದರು. 1974ರಲ್ಲಿ ಪ್ರಥಮ ಬಾರಿಗೆ ಜೋಡಿ ನ್ಯೂಟ್ರಾನ್ ನಕ್ಷತ್ರಗಳ ನಿರಂತರ ಸ್ಫೋಟವನ್ನು ಪತ್ತೆ ಹಚ್ಚಿ 1991ರಲ್ಲಿ ಬುಧಗ್ರಹದ ಉತ್ತರ ಧ್ರುವದಲ್ಲಿ ಹಿಮದ ರಾಶಿ ಇರುವುದನ್ನು ಪತ್ತೆ ಮಾಡಿತ್ತು. ಇನ್ನೂ ಒಂದು ಹೆಜ್ಜೆ ಮುಂದಿಟ್ಟ ಅರೆಸಿಬೊ 1992ರಲ್ಲಿ ಭೂಮಿಯನ್ನು ಹೊರತುಪಡಿಸಿ ಮಾನವರು ಜೀವಿಸಬಲ್ಲ ಎಕ್ಸೊಪ್ಲಾನೆಟ್‍ನ ಮೊದಲ ಮಾಹಿತಿಯನ್ನು ನೀಡಿತ್ತು.

ಅರೆಸಿಬೊ ಸಹಾಯದಿಂದ ಶುಕ್ರ ಮತ್ತು ಬುಧ ಗ್ರಹಗಳ ಮೇಲ್ಮೈಯ ರಡಾರ್ ನಕ್ಷೆಗಳನ್ನು ರಚಿಸಿದ ವಿಜ್ಞಾನಿಗಳು ಸೂರ್ಯನ ಸುತ್ತ ಸುತ್ತಲು ಬುಧ ಗ್ರಹ 88 ದಿನಗಳ ಬದಲಾಗಿ ಕೇವಲ 59 ದಿನ ತೆಗೆದುಕೊಳ್ಳುತ್ತದೆ ಎಂದು ಪತ್ತೆ ಹಚ್ಚಿದ್ದರು. ಅದರ ಬಲವಾದ ರಡಾರ್‌ಗಳು ಭೂಮಿಯನ್ನು ಅಪ್ಪಳಿಸಬಹುದಾದ ಕ್ಷುದ್ರಗ್ರಹಗಳ ಪಥ ಪತ್ತೆ ಹಚ್ಚಿ ಅವುಗಳ ಮೇಲ್ಮೈ ವಿನ್ಯಾಸದ ಬಗ್ಗೆಯೂ ಸುಳಿವು ನೀಡುತ್ತಿದ್ದವು. ಎಲ್ಲ ದಿಕ್ಕುಗಳಲ್ಲೂ ಆಕಾಶಕಾಯಗಳನ್ನು ಗುರುತಿಸುತ್ತಿದ್ದ ಆಂಟೆನಾಗಳು ತಮ್ಮ ಶಕ್ತಿಯಿಂದ ಭೂಮಿಯ ವಾತಾವರಣದ ಪ್ಲಾಸ್ಮಾವನ್ನು ಬಿಸಿಮಾಡಿ ಕೃತಕ ಪ್ರಭೆಯನ್ನುಂಟು ಮಾಡಿ ಅಧ್ಯಯನಕ್ಕೆ ಅನುವು ನೀಡುತ್ತಿದ್ದವು. ಅರೆಸಿಬೊದ ಭಾಗಗಳು ಎಷ್ಟು ಸೂಕ್ಷ್ಮವಾಗಿದ್ದವೆಂದರೆ ಕೋಟ್ಯಂತರ ಮೈಲಿ ದೂರದ ಪಲ್ಸಾರ್‌ಗಳು ಹೊಮ್ಮಿಸುವ ಅತ್ಯಂತ ಕ್ಷೀಣ ಹೊಮ್ಮುವಿಕೆಯನ್ನೂ ಗುರುತಿಸಿ ಕ್ಷೀರ ಪಥಗಳ ನಡುವಿನ ಅನಿಲಗಳ ಓಡಾಟದ ಸದ್ದನ್ನೂ ಕಿವಿಗೊಟ್ಟು ಕೇಳುತ್ತಿದ್ದವು. ವೀಕ್ಷಣಾಲಯದಲ್ಲಿದ್ದ ಇನ್ನೊಂದು 30 ಮೀಟರ್ ಉದ್ದದ ಟೆಲಿಸ್ಕೋಪ್ ರೇಡಿಯೊ ಇಂಟೆರ್‌ಫೆರೋಮೀಟರ್‌ನಂತೆ ಕೆಲಸ ಮಾಡಿ ಬಲವಾದ ರೇಡಿಯೊ ತರಂಗ ಹೊಮ್ಮಿಸಿ ಭೂಮಿಯ ವಾತಾವರಣವನ್ನು ಅಭ್ಯಸಿಸಲು ನೆರವಾಗುತ್ತಿತ್ತು.

ಖ್ಯಾತಿ - ಪತನದ ಕಥೆ – ವ್ಯಥೆ
2017ರಲ್ಲಿ ಬೀಸಿದ ಚಂಡಮಾರುತ ‘ಮರಿಯಾ’ ಅರೆಸಿಬೊದ ಪ್ರಮುಖ ಆಂಟೆನಾಕ್ಕೆ ಧಕ್ಕೆ ಮಾಡಿತ್ತು. ಅಂದಿನಿಂದ ದೂರದರ್ಶಕದ ಕ್ಷಮತೆ ಕಡಿಮೆಯಾಗುತ್ತ ಬಂತು. ಉಸ್ತುವಾರಿ ವಹಿಸಿದ್ದ ಸೆಂಟ್ರಲ್ ಫ್ಲಾರಿಡಾ ಯೂನಿವರ್ಸಿಟಿ ನಾಸಾದ ಅನುದಾನ ಕೇಳಿತ್ತು. ರಿಪೇರಿಗೆ ಖರ್ಚು ಹೆಚ್ಚು ಎಂದು ತಗಾದೆ ತೆಗೆದ ಆಡಳಿತ ಮಂಡಳಿ, ವೀಕ್ಷಣಾಲಯವೇ ತನ್ನ ಇತರ ಚಟುವಟಿಕೆಗಳಿಂದ ಹಣ ಸಂಗ್ರಹಿಸಲಿ ಎಂಬ ಆದೇಶ ನೀಡಿತು. ಈ ನಡುವೆ ಕಳೆದ ಆಗಸ್ಟ್, ನವೆಂಬರ್ ಮತ್ತು ಡಿಸೆಂಬರ್ ಅವಧಿಯಲ್ಲಿ ಪ್ರಧಾನ ವೇದಿಕೆಯನ್ನು ಬಂಧಿಸಿದ್ದ ಎರಡು ಪ್ರಮುಖ ತಂತಿಗಳು ತುಂಡಾದದ್ದರಿಂದ ಸರಿಮಾಡಲು ಸಾಧ್ಯವಿಲ್ಲವೆಂದು ನಿರ್ಧರಿಸಿದ ನಾಸಾ ಇಡೀ ರೇಡಿಯೊ ಡಿಶ್ ರಚನೆಯನ್ನೇ ಧ್ವಂಸಮಾಡುವ ನಿರ್ಧಾರಕ್ಕೆ ಬಂದು ಯೋಜನೆಯನ್ನು ರೂಪಿಸಿಕೊಂಡಿತ್ತು. ಆದರೆ, 2020ರ ಡಿಸೆಂಬರ್‌ 1 ರಂದು ಮೂರನೆಯ ಮುಖ್ಯ ಮಿಣಿಯೂ ತುಂಡಾಗಿ ಇಡೀ ರಚನೆಯೇ ನೆಲಕಚ್ಚಿತು.

ಸ್ಫಾಪನೆಗೊಂಡ ದಿನದಿಂದ ಪೋರ್ಟೋರಿಕೊದ ಹೆಮ್ಮೆಯ ಸಂಕೇತವೆನಿಸಿತ್ತು. ವಾರ್ಷಿಕ ಎರಡು ಲಕ್ಷ ಜನ ಅದನ್ನು ವೀಕ್ಷಿಸಲು ಸಂದರ್ಶಿಸುತ್ತಿದ್ದರು. ಶಾಲಾ ವಿದ್ಯಾರ್ಥಿಗಳಿಗಾಗಿ ವರ್ಷ ಪೂರ್ತಿ ತೆರೆದಿರುತ್ತಿದ್ದ ಅರೆಸಿಬೊ ವೀಕ್ಷಣಾಲಯ ಖಗೋಳ ವಿಜ್ಞಾನದ ಆಸಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಹಾಲಿವುಡ್ ಸಿನಿಮಾ ನಿರ್ದೇಶಕರ ನೆಚ್ಚಿನ ತಾಣವೆನಿಸಿದ್ದ ಅರೆಸಿಬೊ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದೆ.

ಜೇಮ್ಸ್‌ಬಾಂಡ್ ಭೂಮಿಕೆಯ ‘ಗೋಲ್ಡನ್‌ ಐ’ ಸಿನಿಮಾದ ಕೊನೆಯಲ್ಲಿ ಬರುವ ರೋಚಕ ಹೋರಾಟ ನಡೆಯುವುದು ಅರೆಸಿಬೊದ ಅಟ್ಟಣಿಗೆಯ ಮೇಲೆಯೆ! ಜೂಡಿ ಫಾಸ್ಟರ್ ನಟನೆಯ ‘ಕಾಂಟ್ಯಾಕ್ಟ್’ ಚಿತ್ರದ ಪ್ರಮುಖ ಆಕರ್ಷಣೆಯೇ ಅರೆಸಿಬೊ! ಪೋರ್ಟೊರಿಕೊದ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಗಿದ್ದುಕೊಂಡು ಅನೇಕ ಖಗೋಳ ಕೌತುಕಗಳನ್ನರಿಯಲು ವೇದಿಕೆ ಕಲ್ಪಿಸಿದ್ದ ಅರೆಸಿಬೊ ಇನ್ನು ನೆನಪು ಮಾತ್ರ. ಅರೆಸಿಬೊ ಹೋದರೆ ಏನಾಯಿತು, ಅದಕ್ಕಿಂತ ದೊಡ್ಡದಾದ 1640 ಅಡಿ ವ್ಯಾಸದ ಇಡೀ ವಿಶ್ವದಲ್ಲೇ ದೊಡ್ಡದೆ
ನಿಸಿರುವ FAST (Five Hundred Meter aperture spherical radio Telescope) ಹೆಸರಿನ ಬೃಹತ್ ರೇಡಿಯೊ ದೂರದರ್ಶಕವನ್ನು ಚೀನಾ ತನ್ನ ದಾವೊಡಾಂಗ್ ಪ್ರಾಂತ್ಯದ ದಟ್ಟ ಕಾಡಿನ ಮಧ್ಯ ಸ್ಥಾಪಿಸಿ, ಆಗಲೇ ಕೆಲಸ ಶುರುಮಾಡಿದೆ.

ಬೃಹತ್ ಗಾತ್ರದ ಭಾರೀ ಡಿಶ್
ರೇಡಿಯೊ ತರಂಗಗಳನ್ನು ಗ್ರಹಿಸುವ ಟೆಲಿಸ್ಕೋಪಿನ ತಪ್ಪಲೆ ಆಕಾರದ ಬೃಹತ್ ಡಿಶ್ 1000 ಅಡಿ ವ್ಯಾಸ, 167 ಅಡಿ ಆಳ ಮತ್ತು 869 ಅಡಿ ರೇಡಿಯಸ್ ಆಫ್ ಕರ್ವೇಚರ್‌ನ (ವಕ್ರತಾ ತ್ರಿಜ್ಯ) ಅರೆಸಿಬೊ, 2016ರವರೆಗೆ ವಿಶ್ವದಲ್ಲಿ ನಿರ್ಮಿಸಲಾದ ಅತಿದೊಡ್ಡ ರೇಡಿಯೊ ಟೆಲಿಸ್ಕೋಪ್ ಎನಿಸಿತ್ತು. ಭೂಮಿಯಲ್ಲಿ ನೈಸರ್ಗಿಕವಾಗಿಯೇ ರಚನೆಗೊಂಡಿದ್ದ ಕಾರ್ಸ್ಟ್‌ ಸಿಂಕ್ ಹೋಲ್ ಅಂದರೆ ನೀರು ತಾನೇ ತಾನಾಗಿ ಬಸಿದು ಹೋಗುವ ಸುಣ್ಣದ ಕಲ್ಲು, ಡೋಲೊಮೈಟ್ ಮತ್ತು ಜಿಪ್ಸಮ್‌ಯುಕ್ತ ತಗ್ಗಿನಲ್ಲಿ ಆಕಾಶಕ್ಕೆ ಉಲ್ಟಾ ಛತ್ರಿಯಂತೆ ತೆರೆದುಕೊಂಡು ತೂರಿಬರುವ ಪ್ರತಿ ಸೂಕ್ಷಾತಿಸೂಕ್ಷ್ಮ ರೇಡಿಯೊ ತರಂಗವನ್ನು ಗ್ರಹಿಸುವ ಕ್ಷಮತೆ ಹೊಂದಿತ್ತು.

ತಗ್ಗಿನ ರೂಪದ ಜಾಗವನ್ನು ಸಹಸ್ರಾರು ರಂಧ್ರಗಳುಳ್ಳ 21 ಚದರ ಅಡಿ ವಿಸ್ತೀರ್ಣದ 39 ಸಾವಿರ ಅಲ್ಯುಮಿನಿಯಂ ರಿಫ್ಲೆಕ್ಟರ್ ಪ್ಯಾನೆಲ್‍ಗಳಿಂದ ಮುಚ್ಚಲಾಗಿತ್ತು. ಡಿಶ್‍ನ ಕೇಂದ್ರ ಬಿಂದುವಿಗೆ ಎದುರಾಗಿ 492 ಅಡಿ ಎತ್ತರದಲ್ಲಿ ರೇಡಿಯೊ ತರಂಗಗಳನ್ನು ಹೊಮ್ಮಿಸುವ ಟ್ರಾನ್ಸ್‌ಮೀಟರ್‌ಗಳನ್ನು ಸ್ಥಾಪಿಸಿ ಕಬ್ಬಿಣದ ತಂತಿಗಳಿಂದ ಬಿಗಿದು 265 ಮೀಟರ್ ಎತ್ತರದ ಎರಡು ಮತ್ತು 365 ಮೀಟರ್ ಎತ್ತರದ ಒಂದು ಸಿಮೆಂಟ್ ಕಂಬಕ್ಕೆ ಕಟ್ಟಲಾಗಿತ್ತು. ಈ ಕಂಬಗಳನ್ನು 16 ಅಡಿ ಎತ್ತರದ ಕಾಂಕ್ರೀಟ್ ಕಟ್ಟೆಗಳಿಗೆ ಬಿಗಿಯಲಾಗಿತ್ತು.

ದೂರದಿಂದ ನೋಡಿದರೆ ಲೋಹದ ಸೇತುವೆಯಂತೆ ಕಾಣುತ್ತಿದ್ದ ಅರೆಸಿಬೊದ ಮುಖ್ಯ ಭಾಗ 900 ಟನ್ ತೂಗುತ್ತಿತ್ತು. 7 ಇಂಚು ದಪ್ಪದ 18 ಬಲವಾದ ಲೋಹದ ತಂತಿಗಳ ಬಲದಿಂದ ಗಾಳಿಯಲ್ಲಿ ತೇಲುವಂತೆ ಕಾಣುತ್ತಿದ್ದ ತ್ರಿಭುಜಾಕಾರದ ಲೋಹದ ರಚನೆಯ ಕೆಳಗೆ ವೃತ್ತಾಕಾರದ ಇನ್ನೊಂದು ಟ್ರ್ಯಾಕ್ ಇತ್ತು. ಅದರ ಕೆಳಗೆ ಬಿಲ್ಲಿನಾಕಾರದ 328 ಅಡಿ ಉದ್ದದ ಟ್ರ್ಯಾಕ್ ಮೇಲೆ ಚಲಿಸುವ ಅಜಿಮುಥ್ (ಕ್ಷಿತಿಜಕ್ಕೆ ಸಮಾನಾಂತರವಾದ) ಕೈ ಇತ್ತು. ಇದರ ಒಂದು ತುದಿಯಲ್ಲಿ ವೀಕ್ಷಣಾ ಕೋಣೆ ಮತ್ತೊಂದು ತುದಿಯಲ್ಲಿ ಅತ್ಯಂತ ಕ್ಷೀಣ ತರಂಗಗಳನ್ನೂ ಗ್ರಹಿಸುವ ಗ್ರಿಗೊರಿಯನ್ ಗುಮ್ಮಟ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT